ಚಟ್ನಿಯಾಗಬಲ್ಲದು ಟೊಮೆಟೊ ಮೂಲಂಗಿಗಳು...

7

ಚಟ್ನಿಯಾಗಬಲ್ಲದು ಟೊಮೆಟೊ ಮೂಲಂಗಿಗಳು...

Published:
Updated:
Deccan Herald

‘ಚಟ್ನಿ’ ಎಂದಾಕ್ಷಣ ಇಡ್ಲಿ, ದೋಸೆ, ಪೂರಿ... ಹೀಗೆ ತಿಂಡಿಗಳ ಸಾಲು ಸಾಲು ಕಣ್ಮುಂದೆ ಸುಳಿದು ನಾಲಗೆಯಲ್ಲಿ ರಸವನ್ನುಕ್ಕಿಸುತ್ತದೆ. ಊಟ, ತಿಂಡಿಗಳಿಗೆ ಸಾಥ್‌ ನೀಡುವುದಷ್ಟೆ ಚಟ್ನಿಯ ಗುರಿಯಾದರೂ, ಅದಿಲ್ಲದಿದ್ದರೆ ಈ ಎಲ್ಲ ತಿಂಡಿಗಳಿಗೆ ಪೂರ್ಣತೆಯೇ ಸಿಗದು. ಸಾಮಾನ್ಯವಾಗಿ ಚಟ್ನಿ ಎಂದರೆ ತೆಂಗಿನ ತುರಿಯ ಚಟ್ನಿ, ಬೇಳೆಯ ಚಟ್ನಿಯಷ್ಟೆ ಎಂದುಕೊಳ್ಳಬೇಕಿಲ್ಲ; ನಾನಾ ಬಗೆಯ ಚಟ್ನಿಯನ್ನು ಮಾಡುವ ವಿಧಾನವನ್ನು ತಿಳಿಸಿದ್ದಾರೆ, ವೇದಾವತಿ. ಎಚ್. ಎಸ್.

ಟೊಮೆಟೊ–ಈರುಳ್ಳಿ ಚಟ್ನಿ
ಬೇಕಾಗುವ ಸಾಮಗ್ರಿಗಳು:
ಟೊಮೆಟೊ – 2ದೊಡ್ಡದು, ಈರುಳ್ಳಿ – 1, ಒಣಮೆಣಸಿನಕಾಯಿ – 3, ಜೀರಿಗೆ – 1ಚಮಚ, ಬೆಲ್ಲ – ಸ್ವಲ್ಪ, ಎಣ್ಣೆ – ಸ್ವಲ್ಪ, ಕರಿಬೇವು – ಸ್ವಲ್ಪ, ಸಾಸಿವೆ – 1 ಚಮಚ, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಟೊಮೆಟೊ ಮತ್ತು ಈರುಳ್ಳಿಯನ್ನು ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಕಾದ ಎಣ್ಣೆಗೆ ಜೀರಿಗೆ ಹಾಗೂ ಒಣಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಈರುಳ್ಳಿ ಹಾಕಿ ಕೆಂಬಣ್ಣ ಬರುವರೆಗೆ ಹುರಿಯಿರಿ, ಟೊಮೆಟೊ ಸೇರಿಸಿ ಒಲೆಯಿಂದ ಇಳಿಸಿ. ಆರಿದ ನಂತರ ಮಿಕ್ಸಿಯಲ್ಲಿ ಹಾಕಿ. ಬೆಲ್ಲ ಮತ್ತು ಉಪ್ಪನ್ನು ಸೇರಿಸಿ. ನುಣ್ಣಗೆ ರುಬ್ಬಿಕೊಳ್ಳಿ. ಕೈಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಸಾಸಿವೆ ಮತ್ತು ಕರಿಬೇವು ಹಾಕಿ. ಸಾಸಿವೆ ಸಿಡಿದ ನಂತರ ತಯಾರಿಸಿದ ಚಟ್ನಿಗೆ ಒಗ್ಗರಣೆ ಹಾಕಿ. ರುಚಿಯಾದ ಚಟ್ನಿಯನ್ನು ಅನ್ನ, ರೊಟ್ಟಿ, ಚಪಾತಿ, ದೋಸೆ ಮತ್ತು ಇಡ್ಲಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

*

ಶೇಂಗಾ ಚಟ್ನಿ
ಬೇಕಾಗುವ ಸಾಮಗ್ರಿಗಳು:
ಶೇಂಗಾಬೀಜ – 1/2ಕಪ್, ತೆಂಗಿನ ತುರಿ – 1/2ಕಪ್, ಹುಣಸೆಹಣ್ಣು – ಸ್ವಲ್ಪ, ಬೆಲ್ಲ – ಸ್ವಲ್ಪ, ಉಪ್ಪು – ರುಚಿಗೆ ತಕ್ಕಷ್ಟು, ಒಣಮೆಣಸಿನಕಾಯಿ – 3, ಈರುಳ್ಳಿ – 2

ತಯಾರಿಸುವ ವಿಧಾನ: ಬಾಣಲೆಯಲ್ಲಿ ಶೇಂಗಾಬೀಜವನ್ನು ಹಾಕಿ ಹುರಿದು ಮೇಲಿನ ಸಿಪ್ಪೆಯನ್ನು ತೆಗೆದುಕೊಳ್ಳಿ. ಒಂದು ಚಮಚ ಎಣ್ಣೆ ಹಾಕಿ ಒಣಮೆಣಸಿನಕಾಯಿ ಹುರಿದುಕೊಳ್ಳಿ. ಒಂದು ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ. ಹೆಚ್ಚಿಕೊಂಡ ಈರುಳ್ಳಿಯನ್ನು ಉಳಿದ ಎಣ್ಣೆಯಲ್ಲಿ ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಿರಿ. ಮಿಕ್ಸಿಯಲ್ಲಿ ತೆಂಗಿನ ತುರಿ, ಒಣಮೆಣಸಿನ ಕಾಯಿ, ಹುರಿದ ಶೇಂಗಾ, ಬೆಲ್ಲ, ಉಪ್ಪು, ಹುಣಸೆಹಣ್ಣು, ಉಳಿದ ಇನ್ನೊಂದು ಈರುಳ್ಳಿಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿಕೊಂಡು ಕೆಂಬಣ್ಣಕ್ಕೆ ಹುರಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಯಾದ ಶೇಂಗಾ ಚಟ್ನಿಯನ್ನು ಚಪಾತಿ, ದೋಸೆ, ಇಡ್ಲಿ, ಅನ್ನದೊಂದಿಗೆ ಸವಿಯಲು ರುಚಿಯಾಗಿರುತ್ತದೆ.

*

ಮೂಲಂಗಿ ಚಟ್ನಿ
ಬೇಕಾಗುವ ಸಾಮಗ್ರಿಗಳು:
ಮೂಲಂಗಿ – 1/4ಕೆ.ಜಿ. (ಸಿಪ್ಪೆ ತೆಗೆದು, ಹೆಚ್ಚಿಟ್ಟುಕೊಳ್ಳಿ), ಬೆಳ್ಳುಳ್ಳಿ – 10ಎಸಳುಗಳು, ಹಸಿಮೆಣಸಿನಕಾಯಿ – 3, ಹುಣಸೆಹಣ್ಣು – ಸ್ವಲ್ಪ, ಸಾಸಿವೆ – 1ಟೀಚಮಚ, ಜೀರಿಗೆ – 1ಟೀ ಚಮಚ, ಕಡಲೆಬೇಳೆ – 1ಟೀ ಚಮಚ, ಉದ್ದಿನಬೇಳೆ – 1ಟೀ ಚಮಚ, ಒಣಮೆಣಸಿನಕಾಯಿ – 1, ಎಣ್ಣೆ – 5–6ಟೀ ಚಮಚ

ತಯಾರಿಸುವ ವಿಧಾನ: ಒಂದು ಬಾಣಲೆಯಲ್ಲಿ ಮೇಲೆ ಹೇಳಿರುವಷ್ಟು ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಸಾಸಿವೆಯನ್ನು ಹಾಕಿ. ಸಾಸಿವೆ ಸಿಡಿದ ನಂತರ ಮೂಲಂಗಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿಯನ್ನು ಹಾಕಿ ಕೈಯಾಡಿಸಿ, ಅರಸಿನಪುಡಿಯನ್ನು ಹಾಕಿ ಹತ್ತು ನಿಮಿಷಗಳ ಕಾಲ ಮುಚ್ಚಿ ಬೇಯಿಸಿ. ಮಿಕ್ಸಿಯ ಜಾರಿಗೆ ಹುರಿದ ಪದಾರ್ಥಗಳನ್ನು, ಉಪ್ಪು, ಹುಣಸೆಹಣ್ಣನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಕೈಬಾಣಲೆಯಲ್ಲಿ ಒಂದು ಟೀ ಚಮಚ ಎಣ್ಣೆಯನ್ನು ಹಾಕಿ. ಬಿಸಿಯಾದ ನಂತರ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಒಣಮೆಣಸಿನಕಾಯಿ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಈ ಒಗ್ಗರಣೆಯನ್ನು ರುಬ್ಬಿದ ಮಿಶ್ರಣಕ್ಕೆ ಹಾಕಿ.

*

ಕಾಯಿಟೊಮೆಟೊ ಚಟ್ನಿ
ಬೇಕಾಗುವ ಸಾಮಗ್ರಿಗಳು:
ಕಾಯಿ ಟೊಮೆಟೊ– 1/4ಕೆ.ಜಿ., ತೆಂಗಿನ ಕಾಯಿತುರಿ – 1ಕಪ್, ಬೆಲ್ಲ – ಸ್ವಲ್ಪ, ಹಸಿಮೆಣಸಿನಕಾಯಿ – 5ರಿಂದ6, ಎಣ್ಣೆ – 1/4ಕಪ್, ಜೀರಿಗೆ – 2ಟೀ ಚಮಚ, ಇಂಗು – 1/2ಟೀ ಚಮಚ

ತಯಾರಿಸುವ ವಿಧಾನ: ಟೊಮೆಟೊಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಜೀರಿಗೆ, ಇಂಗು, ಹಸಿಮೆಣಸಿನಕಾಯಿ ಹಾಕಿ. ಟೊಮೆಟೊಕಾಯಿಯನ್ನು ಹಾಕಿ ಮಿಶ್ರಣ ಮಾಡಿ, ಚೆನ್ನಾಗಿ ಹುರಿಯಿರಿ.  ನಂತರ ಮುಚ್ಚಳ ಮುಚ್ಚಿ, ಏಳರಿಂದ ಎಂಟು ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಆರಿದ ನಂತರ ಮಿಕ್ಸಿಯಲ್ಲಿ ತೆಂಗಿನಕಾಯಿ ತುರಿ, ಬೆಲ್ಲ, ಬೇಯಿಸಿಕೊಂಡ ಪದಾರ್ಥಗಳನ್ನು ಸೇರಿಸಿ ನುಣ್ಣಗೆ ರುಬ್ಬಿ. ರುಚಿಯಾದ ಕಾಯಿ ಟೊಮೆಟೊ ಚಟ್ನಿಯನ್ನು ಮಾಡಿ ಸವಿಯಿರಿ. ಈ ಚಟ್ನಿ ನೀರು ಮುಟ್ಟಿಸದೆ ಇಟ್ಟರೆ ಮೂರರಿಂದ ನಾಲ್ಕು ದಿನ ಇಡಬಹುದು. ಈ ಚಟ್ನಿಯನ್ನು ಅನ್ನ, ರೊಟ್ಟಿ, ರಾಗಿಮುದ್ದೆ, ಚಪಾತಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !