6
ಸವಿರುಚಿ

ಮಕ್ಕಳು ಮೆಚ್ಚುವ ಸಿಹಿರುಚಿ ತಿನಿಸು...

Published:
Updated:
ರೆಸಿಪಿ

ಶಾಲೆ ಆರಂಭವಾಗಿ ತಿಂಗಳು ಕಳೆದಿದೆ. ಮಕ್ಕಳು ಖುಷಿಯಿಂದ ಶಾಲೆ ಹೋಗುತ್ತಿದ್ದಾರೆ. ಮಕ್ಕಳ ಸಂತಸವನ್ನು ಹೆಚ್ಚಿಸಲು ತಾಯಂದಿರು ಹಲವು ಬಗೆಯ ತಿನಿಸುಗಳನ್ನೇನೋ ಮಾಡುತ್ತಿರುತ್ತಾರೆ.

ಆದರೆ ಅವು ಮಕ್ಕಳ ಬಾಯಿಗೆ ರುಚಿಸಬೇಕಲ್ಲ! ಅವರಿಗೆ ರುಚಿ ಎನಿಸುವಂಥ ಹಲವು ತಿಂಡಿಗಳನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು. ಅವಲಕ್ಕಿ ಮಿಕ್ಸ್ಚರ್‌, ಪುರಿಯುಂಡೆ, ಆಲೂಗಡ್ಡೆ ಚಿಪ್ಸ್ ಮುಂತಾದವುಗಳನ್ನು ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದನ್ನು ವಿವರಿಸಿದ್ದಾರೆ ಎಂ. ಎಸ್. ಧರ್ಮೇಂದ್ರ.

**‌

ಅವಲಕ್ಕಿ ಮಿಕ್ಸ್ಚರ್

ಬೇಕಾಗುವ ಸಾಮಗ್ರಿಗಳು: ಪೇಪರ್ ಅವಲಕ್ಕಿ – 1/2ಕೆ.ಜಿ., ಹುರಿಕಡಲೆ – 100ಗ್ರಾಂ, ಕಡಲೆಬೀಜ – 100ಗ್ರಾಂ, ಕೊಬ್ಬರಿ – 1, ಒಣಮೆಣಸಿನಕಾಯಿ – 4, ಕರಿಬೇವು – 1ಕಡ್ಡಿ, ಅರಿಸಿನಪುಡಿ – ಸ್ವಲ್ಪ, ಸಕ್ಕರೆ – ಸ್ವಲ್ಪ.

ತಯಾರಿಸುವ ವಿಧಾನ:  ಬಾಣಲೆಗೆ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕಡಲೆಬೀಜ, ಒಣಮೆಣಸಿನಕಾಯಿ, ಉದ್ದುದ್ದವಾಗಿ ಕತ್ತರಿಸಿದ ಕೊಬ್ಬರಿಯನ್ನು ಕಂದುಬಣ್ಣ ಬರುವವರೆಗೂ ಫ್ರೈ ಮಾಡಿ ನಂತರ ಕರಿಬೇವು, ಹುರಿಕಡಲೆ, ಅರಿಸಿನಪುಡಿ , ಉಪ್ಪು, ಅವಲಕ್ಕಿ ಹಾಕಿ ಚೆನ್ನಾಗಿ ಗರಿ ಗರಿ ಬರುವ ತನಕ ಫ್ರೈ ಮಾಡಿ ಇಳಿಸುವಾಗ ಸ್ವಲ್ಪ ಸಕ್ಕರೆ ಹಾಕಿ.

**

ಕಾರಬೂಂದಿ

ಬೇಕಾಗುವ ಸಾಮಗ್ರಿಗಳು: ಕಡಲೆಹಿಟ್ಟು – 1/2ಕೆ.ಜಿ., ಗಟ್ಟಿ ಅವಲಕ್ಕಿ – 100ಗ್ರಾಂ, ಕಡಲೆಬೀಜ – 100ಗ್ರಾಂ, ಹುರಿಗಡಲೆ – 1/4ಕೆ.ಜಿ. (ಪುಡಿಮಾಡಿಕೊಳ್ಳಲು), ಹುರಿಗಡಲೆ – 100ಗ್ರಾಂ, ಕರಿಬೇವು – 2ಕಡ್ಡಿ, ಒಣಮೆಣಸಿನ ಕಾಯಿ – 8, ಕೊಬ್ಬರಿ – 1, ಖಾರದಪುಡಿ, ಹಳದಿಬಣ್ಣ ಮತ್ತು ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಕಡಲೆಹಿಟ್ಟು, ಪುಡಿಮಾಡಿದ ಹುರಿಗಡಲೆಹಿಟ್ಟು, ಕಾಯಿಸಿದ ಎಣ್ಣೆ ಸ್ವಲ್ಪ, ನೀರು, ಹಳದಿ ಬಣ್ಣ, ಕಾರದಪುಡಿ ಮತ್ತು ಉಪ್ಪನ್ನು ಹಾಕಿ ತೆಳುವಾಗಿ ದೋಸೆ ಹಿಟ್ಟಿನಂತೆ ಕಲಸಿಟ್ಟುಕೊಳ್ಳಿ.

ಕಡಲೆಬೀಜ, ಉದ್ದುದ್ದವಾಗಿ ಕತ್ತರಿಸಿದ ಕೊಬ್ಬರಿ, ಹುರಿಗಡಲೆ, ಗಟ್ಟಿ ಅವಲಕ್ಕಿ, ಒಣಮೆಣಸಿನಕಾಯಿಯನ್ನು ರಂಧ್ರವಿರುವ ಡೀಪ್ ಫ್ರೈಯರ್ ಜಾಲರಿಯಲ್ಲಿ ಹಾಕಿಕೊಂಡು ಕಾದ ಎಣ್ಣೆಯಲ್ಲಿ ಮುಳುಗಿಸಿ ಕರಿದು ತೆಗೆಯಿರಿ ಮತ್ತು ಕಾದ ಎಣ್ಣೆಗೆ ಬೂಂದಿಕಾಳಿನ ರೀತಿ ಎಣ್ಣೆಗೆ ಬೀಳುವಂತೆ ರಂಧ್ರವಿರುವ ಯಾವುದಾದರು ಪಾತ್ರೆಗೆ ಕಲಸಿದ ಹಿಟ್ಟನ್ನು ಹಾಕಿ ಅಲ್ಲಾಡಿಸಿ ಹದವಾದ ಉರಿಯಲ್ಲಿ ಕರಿದು, ಬೆಂದ ಕಾರಬೂಂದಿಗಳನ್ನು ಎಣ್ಣೆ ಸೋರುವಂತೆ ರಂಧ್ರವಿರುವ ಪಾತ್ರೆಗೆ ತೆಗೆದುಹಾಕಿ. ಹುರಿದ ಕಡಲೆಬೀಜ, ಹುರಿಗಡಲೆ, ಕೊಬ್ಬರಿ, ಗಟ್ಟಿ ಅವಲಕ್ಕಿ, ಒಣಮೆಣಸಿನಕಾಯಿ, ಕರಿಬೇವಿನ ಎಲೆ ಮತ್ತು ಕಾರಬೂಂದಿಯನ್ನು ಒಂದು ಪಾತ್ರೆಗೆ ಹಾಕಿ ಬಿಸಿಯಿರುವಾಗಲೇ ಖಾರದಪುಡಿಯನ್ನು ಉದುರಿಸಿ ಚೆನ್ನಾಗಿ ಬೆರೆಸಿ.

**

ಆಲೂಗಡ್ಡೆ ಚಿಪ್ಸ್

ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ 2, ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಸಿಪ್ಪೆ ತೆಗೆದು ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಬಾಣಲಿಗೆ ಎಣ್ಣೆ ಹಾಕಿ ಕಾದ ನಂತರ ಸ್ಲೈಸರ್‌ನಿಂದ ಬೇಕಾದ ಆಕಾರಕ್ಕೆ ಆಲೂಗಡ್ಡೆಯನ್ನು ಕಾದ ಎಣ್ಣೆಗೆ ಬೀಳುವಂತೆ ಸ್ಲೈಸ್ ಮಾಡಿ. ನಂತರ ಹದ ಉರಿಯಲ್ಲಿ ಕರಿದು ತೆಗೆದು ಎಣ್ಣೆ ಸೋರುವಂತೆ ರಂಧ್ರವಿರುವ ಪಾತ್ರೆಗೆ ಹಾಕಿ ಬಿಸಿಯಿರುವಾಗಲೇ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ.

**

ಪುರಿ ಚುರುಮುರಿ

ಬೇಕಾಗುವ ಸಾಮಗ್ರಿಗಳು: ಉಪ್ಪುಪುರಿ 1ಲೀ., ಹುರಿಗಡಲೆ – 50ಗ್ರಾಂ, ಕಡಲೆಬೀಜ – 50 ಗ್ರಾಂ, ಒಣಮೆಣಸಿನಕಾಯಿ – 2, ಬೆಳ್ಳುಳ್ಳಿ – 1ಉಂಡೆ, ಕರಿಬೇವು – 1ಕಡ್ಡಿ, ಅರಿಸಿನಪುಡಿ – ಸ್ವಲ್ಪ.

ತಯಾರಿಸುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕಡಲೆಬೀಜ, ಒಣಮೆಣಸಿನಕಾಯಿ, ಹುರಿಗಡಲೆ, ಜಜ್ಜಿದ ಬೆಳ್ಳುಳ್ಳಿಯನ್ನು ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿ ನಂತರ ಕರಿಬೇವು, ಅರಿಸಿನಪುಡಿ , ಪುರಿ ಹಾಕಿ ಚೆನ್ನಾಗಿ ಗರಿ ಗರಿ ಬರುವ ತನಕ ಫ್ರೈ ಮಾಡಿ.

**

ಪುರಿಯುಂಡೆ

ಬೇಕಾಗುವ ಸಾಮಗ್ರಿಗಳು: ಸಪ್ಪೆ ಪುರಿ, ಬೆಲ್ಲ, ಏಲಕ್ಕಿ ಪುಡಿ ಸ್ವಲ್ಪ, ಹುರಿಗಡಲೆ, ಕೊಬ್ಬರಿತುರಿ ಸ್ವಲ್ಪ.

ತಯಾರಿಸುವ ವಿಧಾನ: ನೀರಿಗೆ ಬೆಲ್ಲ ಹಾಕಿ ಕರಗಿದ ಮೇಲೆ ಸೋಸಿ ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಎರಡು ಎಳೆ ಪಾಕ ಬರುವವರೆಗೂ ಏಲಕ್ಕಿ ಪುಡಿಯನ್ನು ಹಾಕಿ ತಳ ಹಿಡಿಯದ ರೀತಿ ತಿರುಗುತ್ತಿರಿ. ಪಾಕ ಬಂದ ನಂತರ ಕರುಂಕರುಂ ಅನ್ನುವ ಪುರಿ, ಹುರಿಗಡಲೆ ಮತ್ತು ಕೊಬ್ಬರಿತುರಿಯನ್ನು ಹಾಕಿ ಪಾಕದೊಡನೆ ಮಿಕ್ಸ್ ಆಗುವಂತೆ ಚೆನ್ನಾಗಿ ತಿರುಗಿಸಿ ಕೈ ನೀರು ಮಾಡಿಕೊಂಡು ಬಿಸಿಬಿಸಿ ಇರುವಾಗಲೇ ಉಂಡೆ ಕಟ್ಟಿ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !