ಮಂಗಳವಾರ, ಸೆಪ್ಟೆಂಬರ್ 21, 2021
27 °C

ನಳಪಾಕ: ರಿಬ್ಬನ್ ಪಕೋಡ, ದಾಲ್‌ ವಡಾ ಮಾಡುವ ವಿಧಾನ

ರಶ್ಮಿ ಭಟ್‌ Updated:

ಅಕ್ಷರ ಗಾತ್ರ : | |

Prajavani

ಅನ್ನದ ಪಕೋಡ

ಬೇಕಾಗುವ ಸಾಮಗ್ರಿಗಳು: ಅನ್ನ – 3 ಕಪ್‌, ಕಡಲೆಹಿಟ್ಟು – 4 ಚಮಚ, ಈರುಳ್ಳಿ – 2 (ಸಣ್ಣಗೆ ಹೆಚ್ಚಿದ್ದು), ಹಸಿಮೆಣಸು – 1 (ಸಣ್ಣಗೆ ಹೆಚ್ಚಿದ್ದು), ಕೊತ್ತಂಬರಿ ಸೊಪ್ಪು, ಚಾಟ್ ಮಸಾಲ – ಒಂದೂವರೆ ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಶುಂಠಿ – 1 ಇಂಚು

ತಯಾರಿಸುವ ವಿಧಾನ: ಪಾತ್ರೆಯೊಂದಕ್ಕೆ ಬೇಯಿಸಿದ ಅನ್ನ, ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಜಜ್ಜಿದ ಶುಂಠಿ, ಚಾಟ್‌ ಮಸಾಲ, ಉಪ್ಪು ಹಾಗೂ ಕಡಲೆಹಿಟ್ಟು ಹಾಕಿ. ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಪಕೋಡ ಹದಕ್ಕೆ ಕಲೆಸಿಕೊಳ್ಳಿ. ಕಾಯಿಸಿದ ಎಣ್ಣೆಗೆ ಹಿಟ್ಟನ್ನು ಉಂಡೆ ಮಾಡಿ ಒಂದೊಂದಾಗಿ ಬಿಡಿ. ಅದನ್ನು ಎರಡೂ ಕಡೆ ಚೆನ್ನಾಗಿ ಕರಿಯಿರಿ. ಅದನ್ನು ಪಡ್ಡು ಪಾತ್ರೆಯಲ್ಲಿ ಪಡ್ಡುವಿನಂತೆ ಕೂಡ ತಯಾರಿಸಬಹುದು. ಮಳೆಗಾಲದಲ್ಲಿ ಸಂಜೆ ಹೊತ್ತಿಗೆ ತಿನ್ನಲು ಇದು ಚೆನ್ನಾಗಿರುತ್ತದೆ.

ದಾಲ್‌ ವಡಾ

ಬೇಕಾಗುವ ಸಾಮಗ್ರಿಗಳು: ಕಡಲೆಬೇಳೆ – 1 ಕಪ್‌, ಉದ್ದಿನಬೇಳೆ – 1ಕಪ್‌, ತೊಗರಿಬೇಳೆ – 1 ಕಪ್‌, ಹಸಿಮೆಣಸು – 2, ಕೊತ್ತಂಬರಿ ಸೊಪ್ಪು – 3 ಚಮಚ (ಸಣ್ಣಗೆ ಹೆಚ್ಚಿದ್ದು), ಕರಿಬೇವು – 2 ಚಮಚ (ಸಣ್ಣಗೆ ಹೆಚ್ಚಿದ್ದು), ಶುಂಠಿ – 1 ಇಂಚು, ತೆಂಗಿನತುರಿ – 1 ಕಪ್‌, ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಕಡಲೆಬೇಳೆ, ಉದ್ದಿನಬೇಳೆ ಹಾಗೂ ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಸಿಡಿ. ನಂತರ ಚೆನ್ನಾಗಿ ನೀರನ್ನು ಬಸಿದು ನೀರು ಸೇರಿಸಿಕೊಳ್ಳದೇ ಸ್ವಲ್ಪ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಪಾತ್ರೆಯೊಂದಕ್ಕೆ ಹಾಕಿ ಅದಕ್ಕೆ ತೆಂಗಿನತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿ, ಕರಿಬೇವು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಮತ್ತೆ ಒಂದು ಕಪ್‌ ತೆಂಗಿನತುರಿ ಸೇರಿಸಿ ಮಿಶ್ರಣ ಮಾಡಿ. ಎಣ್ಣೆ ಕಾದ ನಂತರ ಹಿಟ್ಟನ್ನು ವಡಾ ಆಕಾರಕ್ಕೆ ತಟ್ಟಿ ಎಣ್ಣೆಯಲ್ಲಿ ಕರಿಯಿರಿ. ಈಗ ನಿಮ್ಮ ಮುಂದೆ ರುಚಿಯಾದ ದಾಲ್ ವಡಾ ಅಥವಾ ಚಟ್ಟಂಬಡೆ ತಿನ್ನಲು ಸಿದ್ಧ. 

ರಿಬ್ಬನ್ ಪಕೋಡ

ಬೇಕಾಗುವ ಸಾಮಗ್ರಿಗಳು: ಅಕ್ಕಿಹಿಟ್ಟು – 2 ಕಪ್‌, ಕಡಲೆಹಿಟ್ಟು – 1 ಕಪ್‌, ಖಾರದಪುಡಿ – 1 ಚಮಚ, ಅಜ್ವಾನ – ಅರ್ಧ ಚಮಚ, ಜೀರಿಗೆ – ಅರ್ಧ ಚಮಚ, ಎಳ್ಳು – ಅರ್ಧ ಚಮಚ, ಉಪ್ಪು – ರುಚಿಗೆ, ಇಂಗು – ಸ್ವಲ್ಪ (ನೀರಿನಲ್ಲಿ ಕರಗಿಸಿದ್ದು), ಬಿಸಿ ಎಣ್ಣೆ – 2 ಚಮಚ, ನೀರು – ಅಗತ್ಯ ಇರುವಷ್ಟು, ಉಪ್ಪು – ರುಚಿಗೆ

ತಯಾರಿಸುವ ವಿಧಾನ: ಒಂದು ಬೌಲ್‌ಗೆ ಅಕ್ಕಿಹಿಟ್ಟು ಹಾಗೂ ಕಡಲೆಹಿಟ್ಟು ಹಾಕಿ. ಅದಕ್ಕೆ ಖಾರದಪುಡಿ, ಅಜ್ವಾನಾ, ಜೀರಿಗೆ, ಎಳ್ಳು, ಉಪ್ಪು, ಇಂಗಿನ ನೀರು, ಕಾಯಿಸಿದ ಎಣ್ಣೆ ಹಾಕಿ ಚಮಚದಲ್ಲಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಆ ಮಿಶ್ರಣಕ್ಕೆ ಸ್ವಲ್ಪ, ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಆ ಹಿಟ್ಟನ್ನು ಅಚ್ಚಿನ ಪಾತ್ರೆಗೆ ಹಾಕಿ ಕಾದ ಎಣ್ಣೆಗೆ ಬಿಡಿ. ಅದನ್ನು ಎಣ್ಣೆಯಲ್ಲಿ ಚೆನ್ನಾಗಿ ಕರಿಯಿರಿ.

(ಲೇಖಕಿ: ರಶ್ಮೀಸ್‌ ಗೋರ್ಮೆ ಯೂಟ್ಯೂಬ್‌ ಚಾನೆಲ್ ನಿರ್ವಾಹಕಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು