ಮಂಗಳವಾರ, ನವೆಂಬರ್ 29, 2022
21 °C

ನಳಪಾಕ | ನೈವೇದ್ಯಕ್ಕೆ ನಾನಾ ರೆಸಿಪಿ

ಜಯಲಕ್ಷ್ಮಿ ಹೆಗಡೆ Updated:

ಅಕ್ಷರ ಗಾತ್ರ : | |

ಶಿಷ್ಟರ ರಕ್ಷಣೆಗಾಗಿ ಬಂದ ಆದಿಶಕ್ತಿಯ ಹಲವು ಅವತಾರಗಳನ್ನು ನವರಾತ್ರಿ ಸಮಯದಲ್ಲಿ ಭಕ್ತಿಯಿಂದ ಪೂಜಿಸಲಾಗುತ್ತದೆ.ಪೂಜೆಯೆಂದ ಮೇಲೆ ನೈವೇದ್ಯ ಇರಲೇಬೇಕಲ್ಲ. ಆಯಾ ಸ್ಥಳಗಳ ಆಹಾರಪದ್ಧತಿಯನ್ನು ಅವಲಂಬಿಸಿ ಒಂದೊಂದು ದಿನವೂ ಒಂದೊಂದು ಭಕ್ಷ್ಯ ಮಾಡಿ ಪೂಜಿಸುವುದು ವಾಡಿಕೆ.

ಕೆಲವರು ಒಂಬತ್ತು ದಿನವೂ ದೇವಿ ಪಾರಾಯಣವನ್ನು ಓದಿ ಪಾಯಸ ಚಿತ್ರಾನ್ನ, ಮೊಸರನ್ನ, ಕೋಸಂಬರಿ ಇನ್ನೇನಾದರೂ ವಿಶೇಷ ಭಕ್ಷ್ಯ ಮಾಡುತ್ತಾರೆ.  ಕೆಲವರು ಸಪ್ತಮಿಯ ಮೂಲಾನಕ್ಷತ್ರದಿಂದ ಮೊದಲುಗೊಂಡು ಕೊನೆಯ ಮೂರು ದಿನವನ್ನು ಮಾತ್ರ ವಿಶೇಷವಾಗಿ ಆಚರಿಸುತ್ತಾರೆ. ನೈವೇದ್ಯಕ್ಕೆ ‘ಅಮ್ಮ’ನವರಿಗೆ ಪ್ರಿಯವೆನಿಸಿದ ಹಯಗ್ರೀವ ಹಾಗೂ ಲಡ್ಡಿಗೆ ಉಂಡೆ ಬಡಿಸಲಾಗುತ್ತದೆ.  10ನೇ ದಿನವಾದ ವಿಜಯ ದಶಮಿಯಂದು ಅಕ್ಕಿ ಬೆಲ್ಲ ತೆಂಗಿನಕಾಯಿಯನ್ನು ಬಳಸಿ ತಯಾರಿಸುವ ಎರೆಯಪ್ಪ ಬಡಿಸುವ ಪದ್ಧತಿ ಇದೆ.( ಉತ್ತರ ಕನ್ನಡ ದಕ್ಷಿಣ ಕನ್ನಡ ಉಡುಪಿ) ಇದೆ.

ಎರೆಯಪ್ಪ ಅಥವಾ ಎರೆಯವು, ಲಡ್ಡಿಗೆ, ಹಯಗ್ರೀವ ಹಾಗೂ ಮಿಶ್ರಕಾಳುಗಳ ಉಸಳಿ ಮಾಡುವ ವಿಧಾನ ಇಲ್ಲಿದೆ...

ಎರೆಯಪ್ಪ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- 1ಕಪ್, ತೆಂಗಿನ ತುರಿ- ಕಾಲು ಕಪ್, ಮೆಂತ್ಯ ಕಾಲು ಚಮಚ , ಅವಲಕ್ಕಿ ಅಥವಾ ಅರಳು -ಕಾಲು ಕಪ್, ಬೆಲ್ಲ ,-ಮುಕ್ಕಾಲು ಕಪ್, ಏಲಕ್ಕಿ-ನಾಲ್ಕು, ಕರಿಯಲು ಎಣ್ಣೆ, ಚಿಟಿಕೆ ಉಪ್ಪು.

ವಿಧಾನ: ಅಕ್ಕಿ ಹಾಗೂ ಮೆಂತ್ಯವನ್ನು ಚೆನ್ನಾಗಿ ತೊಳೆದು ನಾಲ್ಕು ತಾಸು ನೆನೆಹಾಕಬೇಕು. ಅವಲಕ್ಕಿ ಅರ್ಧಗಂಟೆ ನೆನೆದರೆ ಸಾಕು. ಬೆಲ್ಲ, (ಜೋನಿ ಅಥವಾ ಗಟ್ಟಿಬೆಲ್ಲ ಯಾವುದಾದರೂ ಓಕೆ, ಕಸವಿದ್ದರೆ ಕರಗಿಸಿ ಸೋಸಿಕೊಳ್ಳಬೇಕು) ಚೆನ್ನಾಗಿ ನೆನೆದ ಅಕ್ಕಿ ಅವಲಕ್ಕಿ ಮೆಂತ್ಯ, ಕಾಯಿತುರಿ ಹಾಗೂ ಏಲಕ್ಕಿ ಸೇರಿಸಿ, ಜಾಸ್ತಿ ನೀರು ಹಾಕದೇ ನುಣ್ಣಗೆ ರುಬ್ಬಬೇಕು. ಇಡ್ಲಿಹಿಟ್ಟಿನ ಹದದಲ್ಲಿದ್ದರೆ ಸಾಕು. ಚಿಟಿಕೆ ಉಪ್ಪು ಸೇರಿಸಿ ಹದಮಾಡಿಕೊಂಡ ಹಿಟ್ಟನ್ನು ಕಾದ ಎಣ್ಣೆಯಲ್ಲಿ ಕರಿಯಬೇಕು. ಸಣ್ಣ ಸೌಟು ಹಿಟ್ಟನ್ನು ಒಮ್ಮೆಲೆ ಎಣ್ಣೆಗೆ ಬಿಟ್ಟು, ಒಂದು ಸೌಟು ಹಿಟ್ಟಿಂದ ಒಂದು ಎರೆಯಪ್ಪ ಆಗುವಂತೆ ಹಿಟ್ಟು ಸುರಿಯಬೇಕು. ಮಧ್ಯಮ ಉರಿಯಲ್ಲಿ ಎರಡೂ ಕಡೆ ಚೆನ್ನಾಗಿ (ಗೋಲ್ಡನ್ ಬ್ರೌನ್ ಬಣ್ಣ ಬರುವಂತೆ) ಕರಿಯಬೇಕು. ಒಂದು ಬಾರಿ ಕೇವಲ ಒಂದೇ ಎರೆಯಪ್ಪವನ್ನು ಕರಿಯಲು ಸಾಧ್ಯವಾದ್ದರಿಂದ ಗುಂಡಿತಳವಿರುವ ಸಣ್ಣ ಬಾಣಲೆಯಾದರೆ ಉತ್ತಮ.

ಲಡ್ಡಿಗೆ
ಬೇಕಾಗುವ ಸಾಮಗ್ರಿ:
ಕಡಲೆ ಹಿಟ್ಟು- 2 ಕಪ್, ಬೆಲ್ಲ ಒಂದು ಕಪ್, ಕೊಬ್ಬರಿ ತುರಿ- ಅರ್ಧ ಕಪ್ ಕರಿಯಲು ಎಣ್ಣೆ ನಾಲ್ಕು ಏಲಕ್ಕಿ, ಚಿಟಿಕೆ ಉಪ್ಪು

ಮಾಡುವ ವಿಧಾನ: ಗಂಟಿಲ್ಲದಂತೆ ಜರಡಿ ಹಿಡಿದ ಕಡಲೆಹಿಟ್ಟನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕರಡಿಕೊಳ್ಳಿ . ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಬೂಂದಿಕಾಳು ಕರೆಯುವ ಸೌಟಿನಲ್ಲಿ ಹಿಟ್ಟನ್ನು ಬಿಟ್ಟು ಗರಿಗರಿಯಾಗಿ ಕಾಳನ್ನು ಕರಿಯಬೇಕು. ಇನ್ನೊಂದು ಪಾತ್ರೆಯಲ್ಲಿ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಪಾಕಕ್ಕಿಡಬೇಕು. ಒಂದೆಳೆ ಪಾಕ ಬಂದ ಮೇಲೆ ಸಣ್ಣಗೆ ತುರಿದುಕೊಂಡ ಕೊಬ್ಬರಿಯನ್ನು ಸೇರಿಸಬೇಕು . ಈಗ ಈ ಪಾಕಕ್ಕೆ ಮೊದಲೇ  ಕರಿದಿಟ್ಟುಕೊಂಡ ಕಾಳು ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ, ಪಾಕ ಹಾಗೂ ಕಾಳು ಚೆನ್ನಾಗಿ ಹೊಂದಿಕೊಳ್ಳುವಂತೆ ಸರಿಯಾಗಿ ಕಲಸಬೇಕು. ತಣ್ಣಗಾಗಲು ಬಿಟ್ಟರೆ ಹುಡಿ ಹುಡಿಯಾದ ಲಡ್ಡಿಗೆ ರೆಡಿಯಾಗುತ್ತದೆ. ಬದಲಾಗಿ ಬಿಸಿಯಾಗಿರುವಾಗಲೇ ಉಂಡೆ ಕಟ್ಟಿದರೆ ಲಡ್ಡಿಗೆ ಉಂಡೆ ರೆಡಿಯಾಗುತ್ತದೆ.

ಹಯಗ್ರೀವ ಅಥವಾ ಕಡಲೆಮಡ್ಡಿ
ಬೇಕಾಗುವ ಸಾಮಗ್ರಿ: ಕಡಲೆ ಬೇಳೆ 2 ಕಪ್, ತೆಂಗಿನ ತುರಿ ಒಂದು ಕಪ್, ಬೆಲ್ಲ ಒಂದೂವರೆ ಕಪ್ ಒಂದು ಚಮಚ ಏಲಕ್ಕಿ ಪುಡಿ 2 ಚಮಚ ಗಸಗಸೆ, ಅರ್ಧ ಕಪ್ ತುಪ್ಪ, ಹತ್ತು-ಹದಿನೈದು ಗೋಡಂಬಿ ಸ್ವಲ್ಪ ಒಣದ್ರಾಕ್ಷಿ.

ಮಾಡುವ ವಿಧಾನ: ಸುಮಾರು ಎರಡು ತಾಸು ನೆನೆಸಿದ ಕಡಲೇಬೇಳೆಯನ್ನು ಮೆತ್ತಗೆ ಬೇಯಿಸಿ,ನೀರನ್ನು ಬಸಿದಿಟ್ಟುಕೊಳ್ಳಬೇಕು. ದಪ್ಪ ತಳದ ಪಾತ್ರೆಗೆ ಎರಡು ಚಮಚ ತುಪ್ಪದೊಂದಿಗೆ ಬೆಂದಿರುವ ಕಡಲೆ ಬೇಳೆ,ಬೆಲ್ಲ, ಕಾಯಿತುರಿ ಹಾಕಿ ಕಾಯಿಸಬೇಕು. ಬೆಲ್ಲ ಕರಗಿದಾಗ ಕಾಯಿತುರಿಯೊಡನೆ ಸೇರಿ ಈ ಮಿಶ್ರಣ ಸ್ವಲ್ಪ ತೆಳುವಾಗುವುದು. ತಳ ಹಿಡಿಯದಂತೆ ಸಣ್ಣ ಉರಿಯಲ್ಲಿ ಹತ್ತು ನಿಮಿಷದ ಕಾಲ ಮೇಲೆ ಕೆಳಗೆ ಮಗುಚುತ್ತಾ ಕಾಯಿಸಬೇಕು. ಉಳಿದಿರುವ ತುಪ್ಪವನ್ನು ಕಾಯಿಸುವಾಗ ಆಗಾಗ ಸೇರಿಸಿ. ಕೊನೆಯಲ್ಲಿ ಏಲಕ್ಕಿ, ತುಪ್ಪದಲ್ಲಿ ಹುರಿದ ಗಸಗಸೆ, ದ್ರಾಕ್ಷಿ, ಗೋಡಂಬಿಯನ್ನು ಸೇರಿಸಿದರೆ ಘಮಘಮಿಸುವ ಹಯಗ್ರೀವ ದೇವಿಯ ಪೂಜೆಗೆ ಸಿದ್ಧ.ಬೆಲ್ಲದ ಬದಲಾಗಿ ಸಕ್ಕರೆಯನ್ನೂ ಬಳಸಬಹುದು. ಹಾಲಿನಲ್ಲಿ ಕರಡಿದ ಕೇಸರೀ ದಳ ಸೇರಿಸಿದರೆ ಇನ್ನೂ ಪರಿಮಳ ಹಾಗೂ ರುಚಿ ಹೆಚ್ಚು. 

ಕಾಳುಗಳ ಉಸಲಿ
ಬೇಕಾಗುವ ಸಾಮಗ್ರಿ: 
ಕಡಲೆಕಾಳು ಒಂದು ಕಪ್, ಅಲಸಂದೆಕಾಳು ಒಂದು ಕಪ್ ಬಟಾಣಿ ಕಾಳು 1ಕಪ್ , ಕಾಯಿತುರಿ ಒಂದು ಕಪ್, ಒಂದು ಚಮಚ ಜೀರಿಗೆ, ಒಂದು ಇಂಚಿನಷ್ಟು ಶುಂಠಿ, ನಾಲ್ಕು ಹಸಿಮೆಣಸಿನಕಾಯಿ, ಒಂದು ಚಮಚ ಹುಣಸೆ ರಸ ಅಥವಾ ಒಂದು ನಿಂಬೆಹಣ್ಣು. ಒಗ್ಗರಣೆಗೆ ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ಬೇಕಾದಷ್ಟು, ಕರಿಬೇವು, ಕಾಲು ಚಮಚ ಅರಿಶಿಣ ಪುಡಿ, ಒಂದು ಒಣಮೆಣಸು, ಇಂಗು , ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಒಂದು ಹಿಡಿಯಷ್ಟು.

ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲ ಕಾಳುಗಳನ್ನು ಐದರಿಂದ ಆರು ತಾಸು ನೆನೆಸಿಟ್ಟುಕೊಳ್ಳಬೇಕು . ರುಚಿಗೆ ಬೇಕಾದಷ್ಟು ಉಪ್ಪು, ಒಂದು ಚಮಚ ಎಣ್ಣೆ ಹಾಗೂ ಬೇಯಲು ಬೇಕಾದಷ್ಟು ನೀರನ್ನು ಹಾಕಿ ಈ ಕಾಳುಗಳನ್ನು ಮೆತ್ತಗೆ ಬೇಯಿಸಿಕೊಳ್ಳಬೇಕು. ಕಾಯಿತುರಿ ಹಸಿಮೆಣಸು ಹಾಗೂ ಶುಂಠಿ ಇವುಗಳನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಬೇಕು . ಈಗ ಒಂದು ಬಾಣಲೆಗೆ ಒಗ್ಗರಣೆಗೆ ಬೇಕಾದಷ್ಟು ಎಣ್ಣೆಯನ್ನು ಹಾಕಿ ಅದಕ್ಕೆ ಸಾಸಿವೆ ಕರಿಬೇವು ಒಣಮೆಣಸು, ಕಾಲು ಚಮಚ ಅರಿಶಿನ ಪುಡಿ ಹಾಗೂ ಚಿಟಿಕೆ ಇಂಗನ್ನು ಹಾಕಿ, ಅದಕ್ಕೆ ಬೇಯಿಸಿ ನೀರು ಬಸಿದಿಟ್ಟ ಕಾಳುಗಳನ್ನು ಮತ್ತು ರುಬ್ಬಿಟ್ಟುಕೊಂಡ ಮಸಾಲೆಯನ್ನು ಸೇರಿಸಿ ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿಟ್ಟು ಕಲಕಬೇಕು. ಕೊನೆಯಲ್ಲಿ ನಿಂಬೆರಸ ಹಾಗೂ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ಪ್ರಸಾದ ಸಿದ್ಧ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು