ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ತಯಾರಿಸಬಹುದು ರುಚಿಕರ ಸಾಸ್‌

Last Updated 24 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಸಾಸ್‌ ಯಾರಿಗೆ ತಾನೇ ಪ್ರಿಯವಲ್ಲ ಹೇಳಿ! ಆದರೆ ಅಂಗಡಿ, ಸೂಪರ್‌ ಬಾಝಾರ್‌ನಲ್ಲಿ ಶೆಲ್ಫ್‌ನಲ್ಲಿ ಜೋಡಿಸಿಟ್ಟಿರುವ ಸಾಸ್‌ ಬಾಟಲ್‌, ಜಾರ್‌ಗಳನ್ನು ಖರೀದಿಸುವಾಗ ಹಲವರು ಅದರಲ್ಲಿ ಬಳಸಿರುವ ಪದಾರ್ಥಗಳ ಮೇಲೆ ಗಮನವಿಟ್ಟು ನೋಡುವ ದೃಶ್ಯ ಸಾಮಾನ್ಯ. ಇದಕ್ಕೆ ಕಾರಣ ಅದಕ್ಕೆ ಸೇರಿಸಿರುವ ಸಕ್ಕರೆ ಪ್ರಮಾಣ. ಜೊತೆಗೆ ಕೆಲವೊಮ್ಮೆ ಕೊಬ್ಬಿರುವ ಎಣ್ಣೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ನಿಮ್ಮ ದೇಹಕ್ಕೆ ಹೆಚ್ಚುವರಿ ಕೊಬ್ಬನ್ನು ಸೇರಿಸುವುದಲ್ಲದೇ, ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ, ಈ ಸಕ್ಕರೆರಹಿತ, ಕೊಬ್ಬುರಹಿತ ಸಾಸ್‌ ಅನ್ನು ನೀವೇ ಮನೆಯಲ್ಲಿ ತಯಾರಿಸಿಕೊಂಡು ಆಸ್ವಾದಿಸಬಹುದು. ಅದು ಹೇಗೆ ಎನ್ನುತ್ತೀರಾ? ಕೇವಲ ಮೂರೇ ಮೂರು ಪದಾರ್ಥಗಳು– ಟೊಮೆಟೊ, ಈರುಳ್ಳಿ ಮತ್ತು ಬೆಳ್ಳುಳ್ಳಿ. ಇವನ್ನೇ ಬಳಸಿ ಪರಿಮಳ ಬೀರುವ, ಆರೋಗ್ಯಕರ ಸಾಸ್‌ ಅನ್ನು ತಯಾರಿಸಬಹುದು.

ಮನೆಯಲ್ಲಿ ತಯಾರಿಸಿದ ಸಾಸ್‌ ಅಪ್ಪಟ ವೇಗಾನ್‌, ಜೊತೆಗೆ ರುಚಿಕರ ಕೂಡ. ತಾಜಾ ಆಗಿರುವುದರಿಂದ ನೀವು ಖಂಡಿತ ಇದನ್ನು ಆಸ್ವಾದಿಸುತ್ತೀರಾ.

ಮೊದಲು ಪ್ಯಾನ್‌ ಅನ್ನು ಸ್ಟವ್‌ ಮೇಲಿಡಿ. ಉರಿ ಕಡಿಮೆ ಇರಲಿ. ಬಿಸಿಯಾದಾಗ ಹೆಚ್ಚಿದ ಎರಡು ಈರುಳ್ಳಿ ಹಾಕಿ ಕೈಯಾಡಿಸಿ. ಬೇಕಿದ್ದರೆ ನಿಮಗಿಷ್ಟವಾದ ಅಡುಗೆ ಎಣ್ಣೆಯನ್ನು ಸ್ವಲ್ಪ ಸೇರಿಸಿ. ನಂತರ ಒಂದು ಗೆಡ್ಡೆ ಸುಲಿದ ಬೆಳ್ಳುಳ್ಳಿ ಸೇರಿಸಿ, ಕಂದು ಬಣ್ಣ ಬರುವವರೆಗೆ ಹುರಿಯಿರಿ. ಸುಮಾರು ಐದು ನಿಮಿಷಗಳ ಕಾಲ ಹುರಿದ ನಂತರ ಸಣ್ಣಗೆ ಹೆಚ್ಚಿದ ನಾಲ್ಕು ಟೊಮೆಟೊ ಸೇರಿಸಿ. 15– 20 ನಿಮಿಷಗಳ ಕಾಲ ಬೇಯಿಸಿ. ಆಗಾಗ ತಿರುವಿ ಹಾಕಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಪುಡಿ ಒಂದು ಚಮಚ ಸೇರಿಸಿ.

ಈಗ ಸುಮಾರು ಎರಡು ಕಪ್‌ ಟೊಮೆಟೊ ಸಾಸ್‌ ಸಿದ್ಧ.

ನಿಮಗೆ ಬೇಕಾದಂತೆ ಸಾಸ್‌ ತಯಾರಿಸುವ ಕೆಲವು ವಿಧಾನಗಳು ಅತ್ಯಂತ ಸುಲಭ ಕೂಡ. ತಾಜಾ ಟೊಮೆಟೊವನ್ನು ಜಜ್ಜಿದ ನಂತರ ಸೇರಿಸಿದರೆ ಚೆನ್ನಾಗಿ ಮಿಶ್ರಣವಾಗುತ್ತದೆ. ಇದಕ್ಕೆ ಕಾಳು ಮೆಣಸಿನ ಪುಡಿ, ಒಣಮೆಣಸಿನಕಾಯಿ ಫ್ಲೇಕ್ಸ್‌ ಕೂಡ ಸೇರಿಸಬಹುದು. ತಾಜಾ ಅಥವಾ ಒಣಗಿದ ಬೇಸಿಲ್‌ ಎಲೆ, ಒರೆಗಾನೊ ಕೂಡ ಸೇರಿಸಬಹುದು. ಎಣ್ಣೆಯ ಬದಲು ಬೆಣ್ಣೆ ಹಾಕಬಹುದು. ಹಾಗೆಯೇ ತುರಿದ ಚೀಸ್‌, ಕ್ರೀಮ್‌, ತುರಿದ ಕ್ಯಾರೆಟ್‌, ಅಣಬೆ ಹಾಕಿ ಹೊಸ ರುಚಿ ನೋಡಬಹುದು.

ಸಣ್ಣ ಉರಿಯಲ್ಲಿ ನಿಧಾನವಾಗಿ ಬೇಯಿಸಿದರೆ ಮಂದವಾದ ಸಾಸ್‌ ತಯಾರಿಸಬಹುದು.

ಇನ್ನು ಈ ಸಾಸ್‌ ಅನ್ನು 4–5 ದಿನಗಳ ಕಾಲ ಹೊರಗಡೆ ಇಟ್ಟರೂ ಕೆಡುವುದಿಲ್ಲ. ಫ್ರಿಜ್‌ನಲ್ಲಿಟ್ಟರೆ ಆರು ತಿಂಗಳ ಕಾಲ ರುಚಿ ಕೆಡದೆ ಹಾಗೇ ಇರುತ್ತದೆ. ಸಾಸ್‌ ಪೂರ್ತಿ ತಣ್ಣಗಾದ ನಂತರ ಬಾಟಲ್‌ಗೆ ಸೇರಿಸುವುದನ್ನು ಮರೆಯಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT