ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಹಾ... ರುಚಿ, ಮಂಡಕ್ಕಿ, ಮಿರ್ಚಿ

Published : 20 ಸೆಪ್ಟೆಂಬರ್ 2024, 23:30 IST
Last Updated : 20 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments
ತಣ್ಣನೆಯ ಮಳೆ, ಗಾಳಿಯ ಸುಖ ಅನುಭವಿಸಲು ತಟ್ಟೆಯಲ್ಲಿ ಬಿಸಿಬಿಸಿ ಮಂಡಕ್ಕಿ, ಮಿರ್ಚಿ, ಜೊತೆಗೊಂದಿಷ್ಟು ಚಹಾ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆನ್ನುವಂಥ ಜೀವನ ನಮ್ಮದಾಗುತ್ತದೆ. ಎಂದೂ ಮರೆಯಲಾಗದ ಸಂಜೆಯ ಕುರಿತು ಇಲ್ಲೊಂದಿಷ್ಟು...

ಒಂದ್ಕಡೆ ನುಣ್ಣನೆಯ ಹೊಂಬಣ್ಣದ ಕಡಲೆ ಹಿಟ್ಟು ಜರಡಿಯಿಂದ ಸೋಸಿ ಪಾತ್ರೆಗೆ ಬೀಳುತ್ತಿರುತ್ತದೆ. ಥೇಟ್‌ ಇದಕ್ಕೆ ಜುಗಲ್ಬಂದಿಯಂತೆ ಆಕಾಶಕ್ಕೆ ತೂತು ಬಿದ್ದಂತೆ ಹಿಟ್ಟು ಸೋಸಿದಂಥ ಸೋನೆಮಳೆ ಹೊರಗೆ ಸುಳಿಯುತ್ತಿರುತ್ತದೆ.

ಇದ್ದಕ್ಕಿದ್ದಂತೆ ಮೈಮನಗಳಿಗೆ ಬಿಸುಪು ಬೇಕೆನಿಸುವಾಗ ಹಸಿಮೆಣಸಿನಕಾಯಿಯನ್ನು ಸವರುತ್ತೇವೆ. ಉದ್ದುದ್ದ ಸೀಳಿ, ಉಪ್ಪು, ಜೀರಿಗೆಪುಡಿಯುಣಿಸಿ, ಪಕ್ಕದಲ್ಲಿಟ್ಟು ಕಡಲೆ ಹಿಟ್ಟಿಗೆ ನೀರು, ಓಂಕಾಳು, ಜೀರಿಗೆ ಹಾಕಿ, ಗರಗರಗರ ತಿರುಗಣಿಯಂತೆ ತಿರುಗಿಸಿ, ನುಣ್ಣಗಾಗಿ ಕಾಯುತ್ತದೆ. ಅಗತ್ಯವಿದ್ದವರು ಸೋಡಾ ಹಾಕಿದರೆ, ಬೇಡವಾದವರು ನಿಂಬೆರಸ ಹಿಂಡಿ, ಸಕ್ಕರೆ ಹಾಕಿ ಕಲಿಸಿಡುತ್ತಾರೆ. 

ಇಷ್ಟಾಗುವಾಗ ಸಿಮೆಂಟು ಚೀಲದಂಥ ಚೀಲದಿಂದ ಮಂಡಕ್ಕಿ ಒಂದು ಮೊರಕ್ಕೆ ಸುರಿದಾಗ ಸ್ವರ್ಗಲೋಕದ ಅಕ್ಕಿಕಾಳಂತೆ ಕಾಣುತ್ತವೆ. ಅವನ್ನು ಗಾಳಿಗೆ ಬೀರಿ, ನೀರಿಗೆ ಹಾಕಿದಾಗ ಅವೆಲ್ಲವೂ ಏಕ್ದಮ್‌ ಮಾತಿಗಿಳಿದಂತೆ ವರವರ, ಚೊರಚೊರ ಸದ್ದು.  

ನೆನಪುಗಳಲ್ಲೆ ನೆನೆದು ತಣಿದು ಬದುಕು ನಮಗೆ ಹಿಂಡಿ ಹಿಪ್ಪೆ ಮಾಡುವಂತೆಯೇ ಇಡೀ ಚುರುಮುರಿಯನ್ನು ಅಂಗೈಯಲ್ಲಿ ಒತ್ತಿ, ನೆನೆಸಿ, ಹಿಂಡಿ ಹಿಪ್ಪೆ ಮಾಡಿ, ಫರಾತಕ್ಕೆ ಹಾಕಬೇಕು. ಹಂಗೆ ಪ್ರತಿ ಸಲ ಚುರುಮುರಿ ತೆಗೆದಾಗಲೂ, ಕಂಡೂ ಕಾಣದಂತಿದ್ದ ದೂಳು ನೀರಿನ ಬಣ್ಣವನ್ನು ರಾಡಿಯಾಗಿಸಿರುತ್ತದೆ. ಶುಭ್ರ ಶ್ವೇತ ಬಣ್ಣದ ಚುರುಮುರಿಯಲ್ಲಿ ಎಲ್ಲಡಗಿತ್ತು ಈ ರಾಡಿ ಎಂದು ದ್ವೈತಾದ್ವೈತಗಳ ತರ್ಕದಲ್ಲಿರುವಾಗಲೇ.. ಚುರುಮರಿ ಮಾಡುವ ಜಬಾಬ್ದಾರಿ ಹೊತ್ತವರು ಕಣ್ಣೀರಾಗಿರುತ್ತಾರೆ. ಈರುಳ್ಳಿ ಹೆಚ್ಚುವ ಕೆಲಸವಿದೆಯಲ್ಲ, ಎಲ್ಲ ಗೊತ್ತಿದ್ದೂ ಬಯಲಾಗುವ ಪ್ರಕ್ರಿಯೆ ಅದು.

ಚಕಚನೆ ಕಟ್‌ ಮಾಡಿ, ಮಳೆಯಲ್ಲಿ ನೆನೆಯುವುದೆಂದರೆ ಇಷ್ಟ ನನಗೆ. ಕಣ್ಣೀರು ಹರಿಸಿದ್ದೂ ಗೊತ್ತಾಗದು ಎಂದು ಹೇಳಿದ ಚಾರ್ಲಿಚಾಪ್ಲಿನ್‌ ಮಾತನ್ನು ನೆನಪಿಸಿಕೊಳ್ಳುತ್ತ ಮತ್ತೆ ಕಣ್ಣೀರಾಗುತ್ತೇವೆ. ಆದರೆ ಈ ಕಣ್ಣೀರಿನ ನಂತರ ಸುಖದಾನುಭವ ಕಾಯುತ್ತಿರುತ್ತದೆ. ಅದೇ ಹೊತ್ತಿಗೆ ಒಲೆಯ ಮೇಲಿನ ಬಾಣಲೆಯೂ ಕಾದಿರುತ್ತದೆ. ಚುರುಮುರಿಯಿದ್ದಷ್ಟು, ಎಣ್ಣೆ ಹಾಕಿ, ಮೊದಲು ಕಡಲೆಬೀಜ ಹಾಕಿ, ಅವು ಮೈ ಕೆಂಪಗಾಗಿಸುವಾಗಲೇ ಹಸಿಮೆಣಸು ಹಾಕಿ, ಹಸಿರೆಲ್ಲ ಬೆಂದು ಬಿಳಿಯಾಗುವಾಗ, ಈರುಳ್ಳಿ ಹಾಕಿ ಚೊರ್‌ ಅನಿಸಬೇಕು. ಈರುಳ್ಳಿ ತನ್ನ ಹಟ ಬಿಟ್ಟು ಮಿದುವಾಗುವಾಗ ಹುಣಸೆಹಣ್ಣಿನ ರಸ ಬೆರೆಸಿದರೆ ರಾಯಚೂರು, ಕೊಪ್ಪಳ, ಕರ್ನೂಲು ಜಿಲ್ಲೆಗಳ ಒಗ್ಗರಣಿ ಅಥವಾ ಒಗ್ಗಾಣಿಯ ಒಬಗ್ಗರಣೆ ಅದು.

ಒಗ್ಗರಣೆಗೆ ಖಾರದ ಪುಡಿಹಾಕಿದರೆ ಯಾದಗಿರಿಯ ಸುಸುಲಾ. ಕಲಬುರ್ಗಿಯಲ್ಲಿ ಹಳದಿಬಣ್ಣದ ಈ ಒಗ್ಗರಣೆಗೆ ಸುಶಲಾ, ಶುಸ್ಲಾ, ಸುಶಲಾ ಅಂತಲೂ ಕರೆಯುತ್ತಾರೆ. ಇದರಲ್ಲಿ ಹಸಿಮೆಣಸು, ಕರಿಬೇವು ಕೊತ್ತಂಬರಿಯದ್ದೇ ಕಾರುಬಾರು ಜೋರು. ಇಲ್ಲಿ ಒಗ್ಗರಣೆ ಹುಳಿಯೊಂದಿಗೆ ಬೇಯುವಾಗ, ಹಿಂಡಿಹಿಪ್ಪೆ ಮಾಡಿ ಗುಡ್ಡೆ ಹಾಕಿದ ಚುರುಮುರಿಯ ಮೇಲೆ ಹುರಿಗಡಲೆ ಪುಡಿ, ಸಕ್ಕರೆ ಹುಡಿ ಉದುರಿಸಿ ಆಮೇಲೆ ಅದನ್ನು ಒಗ್ಗರಣೆಯೊಂದಿಗೆ ಕಲಿಸಲಾಗುತ್ತದೆ.

ಹೀಗೆ ಕಲಿಸುವಾಗ ಮಂದವಾದ ರುಚಿಬೇಕೆನೆಸಿದರೆ ಚೂರು ಹಾಲನ್ನೂ ಹಾಕುತ್ತಾರೆ. ರಾಯಚೂರು, ಮಾನವಿ, ಮಸ್ಕಿಗಳಲ್ಲಿಯಂತೂ ಹೀರೆಕಾಯಿ, ತುಪ್ಪದ ಹೀರೆಕಾಯಿಯನ್ನು ಒಗ್ಗರಣೆಗೆ ಬೆರೆಸುತ್ತಾರೆ.  ಪ್ರತಿಸಲವೂ ವಿಶಿಷ್ಟ ರುಚಿಯೊಂದಿಗೆ ಈ ಒಗ್ಗರಣೆ ತಯಾರು ಆಗುತ್ತದೆ. ಬಿಸಿ ಬಿಸಿ ಕಲಿಸುವಾಗಲೇ ಇನ್ನೊಂದೆಡೆ ಎಣ್ಣೆ ಕಾಯುತ್ತಿರುತ್ತದೆ. ಕಾದಿರುವ ಎಣ್ಣೆಗೆ ಹೊಂಬಣ್ಣದ ಹಿಟ್ಟಿನಲ್ಲಿ ಹಸಿರು ಮೆಣಸಿನಕಾಯಿಯನ್ನು ಒಂದು ಮೈ ತಿರುಗಿಸಿ, ಹಿಟ್ಟೆಲ್ಲ ಸವರಿದಂತಾದ ಮೇಲೆ ಅದನ್ನು ಎಣ್ಣೆಗೆ ಬಿಡಲಾಗುತ್ತದೆ. ಎಳೆ ಯುವಕರ ಕೆನ್ನೆಯ ಮೇಲಿನ ಮೊಡವೆಗಳಂತೆ ಎಣ್ಣೆಯೊಳು ಬಿಟ್ಟ ಬಜ್ಜಿ ಸುತ್ತ ಎಣ್ಣೆಗುಳ್ಳೆಗಳೇಳುತ್ತವೆ. ಇವು ಶಾಂತವಾಗುವಾಗ, ಸುಂದರ ಯುವತಿಯ ಕೆನ್ನೆಯಂತೆ ನುಣುಪಿನ, ಹೊಳಪಿನ ಭಜಿಗಳು ಸಕಲಸುದಲ್ಲಿ ತೇಲುವಾಗ ಎಣ್ಣೆಯಿಂದಿತ್ತಿ, ಬಿಸಿ ಒಗ್ಗರಣೆಯ ಬದಿಗೆ ಅಲಂಕರಿಸಲಾಗುತ್ತದೆ.

ಆಹಾ... ಇಷ್ಟೆಲ್ಲ ಆದಮೇಲೆ ಮಳೆಗಾಲದ ಮಜಾ ಸವಿಯಬಹುದು. ಬಾಯ್ತುಂಬ ಉಪ್ಪು, ಖಾರ, ಹುಳಿಯ ರುಚಿಯ ಈ ಒಗ್ಗರಣೆ ಹಲ್ಲುಗಳ ಸಾಲಿನಲ್ಲಿ ಸವಿಯುವಾಗಲೇ ಮಿರ್ಚಿಯನ್ನು ಕಡಿಯಬೇಕು. ಆ ಖಾರ, ಈ ಬಿಸುಪು ಎರಡೂ ಸೇರಿ, ಮನದೊಳಗೆ ರಿಮ್‌ಝಿಮ್‌ ಗಿರೆ ಸಾವನ್‌.. ಹಾಡು ಗುನುಗು ವಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT