‘ಹಿಲ್ಸಾ’ ಸವಿದು‘ಜಲ್ಸಾ’ ಮಾಡಿ

7

‘ಹಿಲ್ಸಾ’ ಸವಿದು‘ಜಲ್ಸಾ’ ಮಾಡಿ

Published:
Updated:
ಓಹ್ ಕಲ್ಕತ್ತಾ

ಹಿಲ್ಸಾ, ಪಶ್ಚಿಮಬಂಗಾಳದ ನದಿಗಳಲ್ಲಿ ಸಿಗುವ ವಿಶಿಷ್ಟವಾದ ಹಾಗೂ ಅತ್ಯಂತ ಹೆಚ್ಚು ರುಚಿಕರವಾದ ಮೀನು. ಮಳೆಗಾಲದಲ್ಲಿ ಮಾತ್ರ ಸಿಗುವ ಈ ಮೀನು ದುಬಾರಿಯೂ ಹೌದು. ಅದ್ಭುತ ರುಚಿ ನೀಡುವ ಈ ಮೀನಿನ ಖಾದ್ಯಗಳ ‘ನದಿ ನೀರಿನ ಹಿಲ್ಸಾ ಉತ್ಸವ’ವು ನಗರದ ಚರ್ಚ್‌ ಸ್ಟ್ರೀಟ್‌ನಲ್ಲಿರುವ ‘ಓಹ್ ಕಲ್ಕತ್ತ’ ಹೋಟೆಲ್‌ನಲ್ಲಿ ನಡೆಯುತ್ತಿದೆ.

ಹೋಟೆಲ್‌ಗೆ ಪ್ರವೇಶಿಸುತ್ತಿದ್ದಂತೆ ಕಿವಿಗೆ ಇಂಪಾದ ಸಂಗೀತವು ಸೋನೆ ಮಳೆಯ ಸದ್ದಿನಂತೆ ಬೀಳುತ್ತಿತ್ತು. ಚೆಂದದ ಮಾತುಗಳಿಂದ ಸ್ವಾಗತಿಸಿದ ಸಿಬ್ಬಂದಿ ಉತ್ಸವದ ಬಗ್ಗೆ ಹಾಗೂ ಹಿಲ್ಸಾ ಬಗ್ಗೆ ಸ್ವಾರಸ್ಯಕರ ಸಂಗತಿಯನ್ನು ರುಚಿಕರವಾಗಿ ಕಟ್ಟಿಕೊಟ್ಟರು. ಹಿಲ್ಸಾ ಖಾದ್ಯ ಸವಿಯುವ ಮುನ್ನ ಟೇಬಲ್ ಮುಂದಕ್ಕೆ ಬಂದದ್ದು ಆಮ್ ಪರೊರ್ ಶೋರ್ಬರ್. ಹುಳಿ ಮಾವಿನಕಾಯಿಯ ರಸಕ್ಕೆ ಜೀರಿಗೆ ಪುಡಿ, ಚಕ್ಕೆ ಪುಡಿ, ನಿಂಬೆ ರಸ, ಮೆಣಸಿನ ಪುಡಿ ಹಾಗೂ ಉಪ್ಪನ್ನು ಚೆನ್ನಾಗಿ ಮಿಶ್ರಣ ಮಾಡಿದ ಈ ಜ್ಯೂಸ್‌ ಚೆನ್ನಾಗಿತ್ತು.

ಲಾಲ್ ಲೊಂಕರ್ ಇಲಿಶ್: ಹಿಲ್ಸಾದ ಬಗ್ಗೆ ಹೇಳುತ್ತಿದ್ದಂತೆ ಹೋಟೆಲ್‌ನ ಸಿಬ್ಬಂದಿ ಟೇಬಲ್ ಮೇಲೆ ತಂದಿಟ್ಟ ಖಾದ್ಯ ಲಾಲ್ ಲೊಂಕರ್ ಇಲಿಶ್. ತಟ್ಟೆಯ ಮಧ್ಯ ಭಾಗದಲ್ಲಿ ಹಿಲ್ಸಾ ತುಂಡು, ಅದರ ಸುತ್ತಲೂ ಕೆಂಪು ಬಣ್ಣದ ಗ್ರೇವಿ. ತುಂಡಿನ ಮಧ್ಯ ಹಾಗೂ ಅಕ್ಕಪಕ್ಕ ಅಚ್ಚ ಕೆಂಪಿನ ಪುಟಾಣಿ ನಾಟಿ ಟೊಮೊಟೊ ಕೊಂಚವೇ ಬಾಯಿ ತೆರೆದಿತ್ತು. ಆ ದೃಶ್ಯ ನೋಡುತ್ತಿದ್ದಂತೆ ಬಾಯಲ್ಲಿ ತಾನಾಗಿಯೇ ನೀರೂರುತ್ತಿತ್ತು.

ಗ್ರೇವಿಯ ಮೇಲೆ ತೇಲಾಡುತ್ತಿದ್ದ ಮೀನಿನ ಎಣ್ಣೆ ಸೂರ್ಯನ ಕಿರಣಗಳಿಂದ ನೀರು ಹೊಳೆದಂತೆ ಚೆಂದದ ದೀಪಗಳಿಂದಾಗಿ ಹೊಳೆಯುತ್ತಿತ್ತು. ಬೇಕಿದ್ದಷ್ಟೇ ಮಿಶ್ರಣ ಮಾಡಿದ್ದ ಮಸಾಲೆ, ಗ್ರೇವಿಯ ರುಚಿ ಹೆಚ್ಚಿಸಿತ್ತು. ರುಚಿಗೆ ಬೇಕಿದ್ದಷ್ಟೇ ಉಪ್ಪು ಹಾಗೂ ಖಾರ ಮೀನಿನ ತುಂಡನ್ನು ಸೇರಿತ್ತು. ಮುಟ್ಟಿದರೇನೇ ಕರಗುವಂತೆ ಬೆಂದಿದ್ದ ಮಾಂಸವನ್ನು ಬಾಯಿಗಿಟ್ಟಿದ್ದೇ ತಡ ನೀಟಾಗಿ ಹೊಟ್ಟೆ ಸೇರಿತ್ತು. ಮೀನಿನ ತುಂಡು ಹಾಗೂ ಅದರ ಗ್ರೇವಿಯು ಒಂದು ರೀತಿಯ ರುಚಿ ನೀಡಿದರೆ, ಅವೆರಡನ್ನು ಮಿಶ್ರಣ ಮಾಡಿ ಸವಿದ ರುಚಿಯು ವಾಹ್‌ ಎಂಬ ಉದ್ಗಾರ ಗಂಟಲಿನಿಂದ ತಾನಾಗಿಯೇ ಹೊರಳಿಸುತ್ತದೆ.

ಹಿಲ್ಸಾ ಮೀನಿನಲ್ಲಿ ಮುಳ್ಳುಗಳು ಹೆಚ್ಚು. ಖಾದ್ಯವನ್ನು ನಿರಾಳವಾಗಿ ಸವಿಯಲು ಮುಳ್ಳುಗಳು ಪದೇ ಪದೇ ಅಡ್ಡಿಪಡಿಸುತ್ತಲೇ ಇದ್ದವು. ಅವುಗಳನ್ನು ಬೇರ್ಪಡಿಸಿ ಎಚ್ಚರಿಕೆಯಿಂದಲೇ ಖಾದ್ಯವನ್ನು ಸವಿದು ಅದನ್ನು ಖಾಲಿ ಮಾಡಿದೆ. ಆ ರುಚಿಯನ್ನು ಅಕ್ಷರಗಳಲ್ಲಿ ಕಟ್ಟಿಕೊಡಲು ಪದಗಳೇ ಸಿಗವು ಎನ್ನುವಷ್ಟು ರುಚಿಕರವಾಗಿತ್ತು ಆ ಖಾದ್ಯ.

ಬಳಿಕ ಮುಳ್ಳು ತೆಗೆದ ಹಿಲ್ಸಾವನ್ನು ಚೆನ್ನಾಗಿ ಅರೆದು ಅದಕ್ಕೆ ಬ್ರೇಡ್ ಕ್ರಮ್ಸ್, ಉಪ್ಪು ಖಾರ ಹಾಗೂ ಕೆಲ ಮಸಾಲೆ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ ಎಣ್ಣೆಯಲ್ಲಿ ಕರೆದಿದ್ದ ಇಲ್ಶಾರ್ ಫಿಶ್ ಫಿಂಗರ್ ಹೆಚ್ಚು ರುಚಿಕರವಾಗಿತ್ತು. ಅದನ್ನು ಲಾಲ್ ಲೊಂಕರ್ ಇಲಿಶ್‌ನ ಗ್ರೇವಿಯೊಂದಿಗೆ ಮಿಕ್ಸ್ ಮಾಡಿಕೊಂಡು ತಿಂದರೆ ನಾಲಿಗೆಗೆ ಇನ್ನಷ್ಟು ಖುಷಿ ಕೊಡುತ್ತದೆ.

ಆಮ್ ಟೆಲ್ ಇಲಿಶ್: ಹೋಟೆಲ್‌ನ ಮತ್ತೊಂದು ವಿಶೇಷ ಖಾದ್ಯವೆಂದರೆ ಅದು ಆಮ್ ಟೆಲ್ ಇಲಿಶ್. ಅದನ್ನು ಹಿಲ್ಸಾ ಬಿರಿಯಾನಿ ಎನ್ನಲೂಬಹುದು. ಮಾವಿನಕಾಯಿಯ ರಸ, ಕೊಂಚ ನಿಂಬೆ ರಸ, ಮಸಾಲೆ, ಉಪ್ಪು ಹಾಗೂ ಖಾರವನ್ನು ಹಿಲ್ಸಾದ ತುಂಡಿನೊಂದಿಗೆ ಮಿಶ್ರಣ ಮಾಡಿ ಕುಂಬಳಕಾಯಿ ಎಲೆಯಿಂದ ಸುತ್ತಿ ಪ್ರತ್ಯೇಕವಾಗಿ ಬೇಯಿಸುವುದು ಅದರ ವಿಶೇಷ.

ಹದವಾಗಿ ಬೆಂದ ಅದನ್ನು ಬಾಸುಮತಿ ಅಕ್ಕಿಯ ಅನ್ನದೊಂದಿಗೆ ಕಪ್ಪು ಮಡಿಕೆಯಲ್ಲಿ ಹಾಕಿ ಕೊಟ್ಟರು ಅಲ್ಲಿನ ಸಿಬ್ಬಂದಿ. ಮಲ್ಲಿಗೆಯಷ್ಟೇ ಮೃದುವಾಗಿದ್ದ ಅನ್ನ ಹಾಗೂ ಮೀನು ರುಚಿಕರವಾಗಿತ್ತು. ಮಾವಿನಕಾಯಿ ರಸ ಹಾಗೂ ನಿಂಬೆ ರಸ ಮಿಶ್ರಣ ಮಾಡಿದ್ದರಿಂದ ಖಾದ್ಯ ನಾಲಿಗೆಗೆ ಹೆಚ್ಚು ಹುಳಿ ಎನಿಸುತ್ತದೆ. ಆದರೆ, ಅದನ್ನು ಅನ್ನದೊಂದಿಗೆ ಮಿಶ್ರಣ ಮಾಡಿಕೊಂಡು ಸವಿದರೆ ಅಷ್ಟೊಂದು ಹುಳಿ ಎನಿಸದು.

ಆಮ್ ಟೆಲ್ ಇಲಿಶ್‌ನ ಹುಳಿ ನಾಲಿಗೆಯ ಮೇಲೆ ಇನ್ನೂ ಹಾಗೇ ಇರುವಾಗಲೇ ಟೇಬಲ್‌ಗೆ ಬಂದ ಅತಿಥಿ ತಾಳೆ ಬೆಲ್ಲದಿಂದ ಮಾಡಿದ ಐಸ್‌ಕ್ರೀಂ. ಸಾಮಾನ್ಯ ಐಸ್‌ಕ್ರೀಂ‌ಗಳಿಗಿಂತ ಭಿನ್ನವೆನಿಸಿತು ಅದರ ರುಚಿ.

ಬಂಗಾಳಿ ಶೈಲಿಯ ಮೀನಿನ ಖಾದ್ಯಗಳು ಇಲ್ಲಿ ಲಭ್ಯ. ಸಸ್ಯಾಹಾರಿಗಳು ಬೇಜಾರು ಮಾಡಿಕೊಳ್ಳುವ ಅಗತ್ಯವಿಲ್ಲ. ಅವರಿಗೆ ಬಂಗಾಳಿ ಶೈಲಿಯ ಸಸ್ಯಾಹಾರಿ ಖಾದ್ಯಗಳು ಲಭ್ಯ ಇವೆ. ಆಗಸ್ಟ್ 31ರ ವರೆಗೆ ಉತ್ಸವ ಇರಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !