ನಾಲಿಗೆ ಮೊಗ್ಗು ಅರಳಿಸುವಮೊಟ್ಟೆ ಖಾದ್ಯಗಳು

ಗುರುವಾರ , ಏಪ್ರಿಲ್ 25, 2019
26 °C

ನಾಲಿಗೆ ಮೊಗ್ಗು ಅರಳಿಸುವಮೊಟ್ಟೆ ಖಾದ್ಯಗಳು

Published:
Updated:
Prajavani

ನಾಟಿಕೋಳಿ ಮೊಟ್ಟೆ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 3, ರಾಜಮುಡಿ ಅಕ್ಕಿ – 1/2 ಕೆ.ಜಿ., ಶುಂಠಿ – 1 ಇಂಚು ಉದ್ದ, ಬೆಳ್ಳುಳ್ಳಿ – 2 ಉಂಡೆ, ಕೊತ್ತಂಬರಿ – ಸ್ವಲ್ಪ, ಪುದೀನ ಸೊಪ್ಪು – ಸ್ವಲ್ಪ, ಖಾರದ ಪುಡಿ – 1 ಚಮಚ, ಗರಂ ಮಸಾಲೆ – 1 ಚಮಚ, ಈರುಳ್ಳಿ – 4, ಟೊಮೆಟೊ – 5, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಈರುಳ್ಳಿ, ಟೊಮೆಟೊ, ಕೊತ್ತಂಬರಿ, ಪುದೀನ ಕತ್ತರಿಸಿಟ್ಟುಕೊಳ್ಳಿ.  ಮೊಟ್ಟೆಯನ್ನು ನೀರಿನಲ್ಲಿ ಬೇಯಿಸಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕರಿಬೇವು, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಆಮೇಲೆ ಜಜ್ಜಿದ ಶುಂಠಿ-ಬೆಳ್ಳುಳ್ಳಿ, ಟೊಮೆಟೊ, ಕೊತ್ತಂಬರಿ ಮತ್ತು ಪುದೀನ ಸೊಪ್ಪು, ಗರಂ ಮಸಾಲೆ, ಖಾರದಪುಡಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಬೇಯಿಸಿ. ಬೆಂದ ಮಸಾಲೆಯಲ್ಲಿ ಸ್ವಲ್ಪ ಮಸಾಲೆಯನ್ನು ತೆಗೆದಿಟ್ಟು, ಅದರೊಳಗೆ ಬೇಯಿಸಿದ ಮೊಟ್ಟೆಯನ್ನು ಭಾಗ ಮಾಡಿ ಹಾಕಿ ಮುಚ್ಚಿಡಿ. ಉಳಿದ ಮಸಾಲೆಗೆ ತೊಳೆದ ಅಕ್ಕಿ ಹಾಗೂ ಬೇಕಾದಷ್ಟು ನೀರು ಹಾಕಿ. ಈ ಮಿಶ್ರಣವನ್ನು ಸೇರಿಸಿ ರುಚಿ ನೋಡಿ ಕಡಿಮೆಯಿದ್ದನ್ನು ಸೇರಿಸಿ ಅಕ್ಕಿ ಬೇಯಲು ಬಿಡಿ. ಅಕ್ಕಿ ಮುಕ್ಕಾಲು ಭಾಗ ಬೆಂದ ನಂತರ ಅರ್ಧದಷ್ಟು ಅನ್ನವನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಿ, ಮೊದಲೇ ತೆಗೆದಿಟ್ಟುಕೊಂಡಿರುವ ಮೊಟ್ಟೆ ಮತ್ತು ಮಸಾಲೆಯನ್ನು ಅನ್ನದ ಮೇಲೆ ಹಾಕಿ ಒಂದು ಪದರ ಚೆನ್ನಾಗಿ ಬರುವಂತೆ ಕುಲುಕಿ. ನಂತರ ಪಾತ್ರೆಯಲ್ಲಿ ತೆಗೆದುಕೊಂಡಿರುವ ಅರ್ಧದಷ್ಟು ಅನ್ನವನ್ನು ಇದರ ಮೇಲೆ ಹಾಕಿ ಪಾತ್ರೆ ಮುಚ್ಚಳ ಮುಚ್ಚಿ. ಪಾತ್ರೆಯನ್ನು ತವಾದ ಮೇಲೆ ಬೇಯಲು ಇಟ್ಟು ಚೆನ್ನಾಗಿ ಬೇಯಿಸಿ.

ಎಗ್ ಬುರ್ಜಿ

ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 3, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಈರುಳ್ಳಿ – 2, ಹಸಿ ಮೆಣಸಿನಕಾಯಿ – 2, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಕೊತ್ತಂಬರಿ ಸೊಪ್ಪು, ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ನಂತರ ಮೊಟ್ಟೆಯನ್ನು ಹಾಕಿ ಚೆನ್ನಾಗಿ ಗೊಟಾಯಿಸಿ. ಬೇಯುವ ತನಕ ತಿರುಗಿಸಿ.

ಎಗ್ ರೈಸ್

ಬೇಕಾಗುವ ಸಾಮಗ್ರಿಗಳು: ಸೋನಾ ಮಸೂರಿ ಅಕ್ಕಿ – 1/4 ಕೆ.ಜಿ, ಮೊಟ್ಟೆ – 4, ಈರುಳ್ಳಿ – 1, ಎಲೆಕೋಸು – 1 ಕಪ್, ಹಸಿ ಮೆಣಸಿನಕಾಯಿ – 2, ಖಾರದಪುಡಿ – ರುಚಿಗೆ ತಕ್ಕಷ್ಟು, ಪೆಪ್ಪರ್ ಪುಡಿ – ಸ್ವಲ್ಪ, ಚಾಟ್ ಮಸಾಲೆ – ಸ್ವಲ್ಪ, ಗರಂ ಮಸಾಲೆ, ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಸ್ವಲ್ಪ ಉಪ್ಪು ಹಾಕಿ ಅನ್ನವನ್ನು ಬಿಡಿ ಬಿಡಿಯಾಗಿ ಮಾಡಿಟ್ಟುಕೊಳ್ಳಿ. ಹಸಿಮೆಣಸಿನಕಾಯಿ, ಈರುಳ್ಳಿ ಮತ್ತು ಎಲೆಕೋಸನ್ನು ಉದ್ದುದ್ದವಾಗಿ ಕತ್ತರಿಸಿಟ್ಟುಕೊಳ್ಳಿ.
ಫ್ರೈ ಪ್ಯಾನ್‍ಗೆ ಎಣ್ಣೆ ಹಾಕಿ ಕಾದ ನಂತರ ಮೊಟ್ಟೆ ಹಾಕಿ ಚೆನ್ನಾಗಿ ಗೊಟಾಯಿಸಿ. ನಂತರ ಕತ್ತರಿಸಿದ ಎಲೆಕೋಸು, ಹಸಿಮೆಣಸಿನಕಾಯಿ, ಈರುಳ್ಳಿ ಸ್ವಲ್ಪ ಉಪ್ಪು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಅನ್ನವನ್ನು ಹಾಕಿದ ಮೇಲೆ ಉಪ್ಪು, ಖಾರದಪುಡಿ, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ ಸ್ವಲ್ಪ, ಗರಂ ಮಸಾಲೆ, ಚಾಟ್ ಮಸಾಲೆ ಹಾಕಿ ಚೆನ್ನಾಗಿ ಬೇಯಿಸಿ.

ಮೊಟ್ಟೆ ಸಾರು

ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 3, ಶುಂಠಿ -ಬೆಳ್ಳುಳ್ಳಿ ಪೇಸ್ಟ್ – ಒಂದು ಚಮಚ, ಕರಿಬೇವು, ಕೊತ್ತಂಬರಿ – ಸ್ವಲ್ಪ, ಪುದೀನ ಸೊಪ್ಪು – ಸ್ವಲ್ಪ, ಧನಿಯಾ ಪುಡಿ – 3 ಚಮಚ, ಖಾರದ ಪುಡಿ – 2 ಚಮಚ, ಅರಿಶಿನ ಪುಡಿ – ಸ್ವಲ್ಪ, ಗರಂ ಮಸಾಲೆ – 1/2 ಚಮಚ, ಈರುಳ್ಳಿ – 2, ಟೊಮೆಟೊ – 1, ಕಾಯಿ – 1/2 ಹೋಳು, ಎಣ್ಣೆ , ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಮೇಲೆ ಹೇಳಿರುವ ಎಲ್ಲಾ ಸಾಮಗ್ರಿಗಳನ್ನು ರುಬ್ಬಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕರಿಬೇವು ಹಾಕಿದ ನಂತರ ರುಬ್ಬಿದ ಮಿಶ್ರಣ, ಉಪ್ಪು ಮತ್ತು ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಸಾರನ್ನು ಸ್ವಲ್ಪ ಸಮಯ ಬೇಯಿಸಿ ಸಾರು ಚೆನ್ನಾಗಿ ಕುದಿಯುವಾಗ ಪಾತ್ರೆಯನ್ನು ಕೆಳಗಿಳಿಸಿ ಮೊಟ್ಟೆಯನ್ನು ಒಡೆದು ಹಾಕಿ. ನಂತರ ಸಾರನ್ನು ತಿರುಗಿಸದೆ ಗ್ಯಾಸ್ ಮೇಲಿಟ್ಟು ಮೊಟ್ಟೆ ಬೇಯುವ ತನಕ ಚೆನ್ನಾಗಿ ಬೇಯಿಸಿ.

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !