ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾ ವಡೆ! ಕಾಳು ಸಾರು

Last Updated 7 ಜೂನ್ 2019, 19:30 IST
ಅಕ್ಷರ ಗಾತ್ರ

ಹೆಸರು, ಹುರುಳಿ ಹಾಗೂ ಬಟಾಣಿಯಂತಹ ಕಾಳುಗಳಲ್ಲಿ ಕಾರ್ಬೊಹೈಡ್ರೇಟ್ ಅಂಶ ಅಧಿಕವಿದೆ. ಇದು ಆರೋಗ್ಯಕ್ಕೂ ಉತ್ತಮ, ಬಾಯಿಗೂ ರುಚಿ. ಹೆಸರುಕಾಳುಗಳನ್ನು ನೆನೆಸಿ ಮೊಳಕೆ ಬರಿಸಿ ತಿನ್ನುವುದು ಹಲವರ ರೂಢಿ. ಇದರಿಂದ ತಯಾರಿಸಿದ ಸಾಂಬಾರು ಹಾಗೂ ಪಲ್ಯ ಸವಿದೇ ನೋಡಬೇಕು. ಹುರುಳಿಕಾಯಿಯಲ್ಲಿ ವಡೆ, ಹುರುಳಿಕಾಳಿನ ಮಸಾಲೆ ಸಾರು, ಬಟಾಣಿ ಬಾತ್ ಹೀಗೆ ಕಾಳುಗಳಿಂದ ಬಾಯಲ್ಲಿ ನೀರೂರಿಸುವ ರುಚಿಕರ ದಿನಬಳಕೆ ಖಾದ್ಯಗಳನ್ನು ತಯಾರಿಸಬಹುದು ಎನ್ನುತ್ತಾರೆ ರಮ್ಯಾ ಪರಮೇಶ್‌.

ಹುರುಳಿ ವಡೆ
ಬೇಕಾಗುವ ಸಾಮಗ್ರಿಗಳು:

ನೆನೆಸಿದ ಹುರುಳಿ ಕಾಳು – 2 ಬಟ್ಟಲು, ಅಕ್ಕಿ ಹಿಟ್ಟು– 1 ಬಟ್ಟಲು, ಕಡಲೆ ಹಿಟ್ಟು – 2 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – 1 ಚಮಚ, ಮೆಣಸಿನ ಪುಡಿ – 1 ಚಮಚ, ಕೊತ್ತಂಬರಿ ಪುಡಿ – 1/2 ಚಮಚ, ಗರಂ ಮಸಾಲ – 1/4 ಚಮಚ, ಪುದಿನ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಚಕ್ಕೆ ಹಾಗೂ ಲವಂಗ ಪುಡಿ – 2 ಚಿಟಿಕೆ, ಉಪ್ಪು – ರುಚಿಗೆ‌, ಎಣ್ಣೆ – ಕರಿಯಲು

ತಯಾರಿಸುವ ವಿಧಾನ:ಮೊದಲು ಒಂದು ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಹುರುಳಿಕಾಳನ್ನು ಹುರಿದು ಪಕ್ಕಕ್ಕೆ ಇಡಿ. ಅದು ತಣ್ಣಗಾದ ನಂತರ ತರಿಯಾಗಿ ರುಬ್ಬಿ ಅದಕ್ಕೆ ಹೆಚ್ಚಿದ ಕೊತ್ತಂಬರಿಸೊಪ್ಪು, ಪುದಿನ ಮತ್ತು ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ವಡೆ ಹಿಟ್ಟು ಹದಕ್ಕೆ ಕಲೆಡwಸಿ ಸಣ್ಣಸಣ್ಣ ಉಂಡೆ ತಯಾರಿಸಿ. ಮಧ್ಯೆ ತೂತು ಮಾಡಿ ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕರಿದು ತೆಗೆಯಿರಿ.
ಹುರುಳಿ ವಡೆ ಕಾಯಿಚಟ್ನಿ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.

***


ಬಟಾಣಿ ಬಾತ್

ಬೇಕಾಗುವ ಸಾಮಗ್ರಿಗಳು:ಅಕ್ಕಿ – 2 ಕಪ್, ನೆನೆಸಿದ ಬಟಾಣಿ– 1 ಕಪ್, ಆಲೂಗಡ್ಡೆ – 1, ಕ್ಯಾರೆಟ್ – 1, ಹಸಿಮೆಣಸು – 6 ರಿಂದ 8, ಕೊತ್ತಂಬರಿ, ಪುದಿನ – ಸ್ವಲ್ಪ, ಚಕ್ರ ಮೊಗ್ಗು, ಮರಾಠಿ ಮೊಗ್ಗು – 4, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಚಕ್ಕೆ ಹಾಗೂ ಲವಂಗ ಪುಡಿ – 2 ಚಿಟಿಕೆ, ಕೊತ್ತಂಬರಿ ಪುಡಿ – 1/2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – ಸ್ವಲ್ಪ, ಈರುಳ್ಳಿ – 1, ಟೊಮೆಟೊ – 2

ತಯಾರಿಸುವ ವಿಧಾನ
ಮೊದಲು ಒಲೆಯ ಮೇಲೆ ಒಂದು ಕುಕ್ಕರ್ ಇಡಿ. ಕಾದ ನಂತರ ಸ್ವಲ್ಪ ಎಣ್ಣೆ ಹಾಕಿ ಮರಾಠಿ ಮೊಗ್ಗು, ಚಕ್ರ ಮೊಗ್ಗು ಹಾಕಿ ನಂತರ ಒಂದು ಈರುಳ್ಳಿ ಸಣ್ಣದಾಗಿ ಕತ್ತರಿಸಿ ಹಾಕಿ. ಹುರಿದ ನಂತರ ಅದಕ್ಕೆ ಹೆಚ್ಚಿದ ಟೊಮೆಟೊ, ಆಲೂಗಡ್ಡೆ, ಕ್ಯಾರೆಟ್ ಮತ್ತು ಬಟಾಣಿ ಸೇರಿಸಿ ಐದು ನಿಮಿಷ ಬಾಡಿಸಿ.

ನಂತರ ಒಂದು ಮಿಕ್ಸಿ ಜಾರ್‌ನಲ್ಲಿ ಮೆಣಸಿನಕಾಯಿ, ಕೊತ್ತಂಬರಿ ಪುಡಿ, ಚಕ್ಕೆ, ಲವಂಗ, ಶುಂಠಿ– ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರುಬ್ಬಿ. ಅದನ್ನು ಕುಕ್ಕರ್‌ಗೆ ಸೇರಿಸಿ. ನಂತರ ಅದಕ್ಕೆ ಅಕ್ಕಿ, ಉಪ್ಪು, ಕೊತ್ತಂಬರಿ, ಪುದಿನ ಸೇರಿಸಿ ಕುಕ್ಕರ್ ಮುಚ್ಚಿ 2 ವಿಷಲ್ ಕೂಗಿಸಿದರೆ ಬಟಾಣಿ ಬಾತ್ ತಯಾರಾಗುತ್ತದೆ. ಮೊಸರು ಜೊತೆ ತಿನ್ನಲು ರುಚಿಯಾಗಿರುತ್ತದೆ.

***


ಮೊಳಕೆ ಹುರುಳಿಕಾಳಿನ ಮಸಾಲೆ ಸಾರು
ಬೇಕಾಗುವ ಸಾಮಗ್ರಿಗಳು:
ಮೊಳಕೆ ಕಟ್ಟಿದ ಹುರುಳಿಕಾಳು – 1, ಕಪ್, ಆಲೂಗಡ್ಡೆ – 1, ಈರುಳ್ಳಿ – 2, ಟೊಮೆಟೊ – 2, ಬೆಳ್ಳುಳ್ಳಿ – 1, ಶುಂಠಿ – ಸ್ವಲ್ಪ, ಚಕ್ಕೆ, ಲವಂಗ – 3, ಅಚ್ಚ, ಮೆಣಸಿನಕಾಯಿ ಪುಡಿ – 1 ಚಮಚ, ಕೊತ್ತಂಬರಿ ಪುಡಿ – 1/2 ಚಮಚ, ತೆಂಗಿನಕಾಯಿ ತುರಿ – 1 ಬಟ್ಟಲು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಎಣ್ಣೆ – 3 ಚಮಚ, ಉಪ್ಪು – ರುಚಿಗೆ

ತಯಾರಿಸುವ ವಿಧಾನ
ಮೊದಲು ಮಸಾಲೆಯನ್ನು ತಯಾರಿಸಬೇಕು. ಮಿಕ್ಸಿ ಜಾರ್‌ನಲ್ಲಿ ತೆಂಗಿನಕಾಯಿ ತುರಿ, ಮೆಣಸಿನಕಾಯಿ ಪುಡಿ, ಕೊತ್ತಂಬರಿ ಪುಡಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಹಾಕಿ. ನಂತರ ಒಂದು ಬಾಣಲೆಯಲ್ಲಿ ಒಂದು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಶುಂಠಿ ಮತ್ತು ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದು ತಣ್ಣಗಾದ ನಂತರ ಎಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿ ಪಕ್ಕದಲ್ಲಿ ಇಡಿ.

ನಂತರ ಒಲೆಯ ಮೇಲೆ ಒಂದು ಕುಕ್ಕರ್ ಇಡಿ. ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾದ ಮೇಲೆ ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕೆಂಪಗೆ ಹುರಿಯಿರಿ. ಅದಕ್ಕೆ ಮೊಳಕೆ ಕಟ್ಟಿದ ಹುರುಳಿಕಾಳು ಮತ್ತು ಆಲೂಗಡ್ಡೆ ಹಾಕಿ 5 ನಿಮಿಷ ಕೈ ಆಡಿಸಿ. ನಂತರ ರುಬ್ಬಿದ ಮಸಾಲೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಕಾದರೆ ಸಣ್ಣದಾಗಿ ಕತ್ತರಿಸಿ ಹುರಿದ ತೆಂಗಿನಕಾಯಿಯನ್ನು ಸೇರಿಸಿ. 3 ರಿಂದ 4 ವಿಷಲ್ ಕೂಗಿಸಿದರೆ ರುಚಿಯಾದ ಮೊಳಕೆ ಕಟ್ಟಿದ ಮಸಾಲೆ ಸಾರು ರೆಡಿ. ಇದು ಮುದ್ದೆ ಜೊತೆ ತಿನ್ನಲು ಚೆನ್ನಾಗಿರುತ್ತದೆ.

***


ಹೆಸರುಕಾಳು ಹಸಿ ಕೋಸಂಬರಿ‌

ಬೇಕಾಗುವ ಸಾಮಗ್ರಿಗಳು:ಮೊಳಕೆ ಕಟ್ಟಿದ ಹೆಸರುಕಾಳು – 1 ಕಪ್, ಮಾವಿನಕಾಯಿ ತುರಿ – 4 ಚಮಚ, ತೆಂಗಿನಕಾಯಿ ತುರಿ – 1/2 ಕಪ್, ಕಾಳುಮೆಣಸು ಪುಡಿ – 1/2 ಚಮಚ, ನಿಂಬೆರಸ – 1 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಕರಿಬೇವಿನ ಸೊಪ್ಪು – ಸ್ವಲ್ಪ, ಸಾಸಿವೆ – ಸ್ವಲ್ಪ, ಎಣ್ಣೆ – 2 ಚಮಚ, ಉಪ್ಪು – ರುಚಿಗೆ

ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ಹೆಸರುಕಾಳು, ಮಾವಿನತುರಿ, ತೆಂಗಿನಕಾಯಿ ತುರಿ, ಕಾಳುಮೆಣಸು ಪುಡಿ, ಉಪ್ಪು, ನಿಂಬೆರಸ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಮಿಕ್ಸ್ ಮಾಡಿ ನಂತರ ಒಗ್ಗರಣೆ ಸೇರಿಸಿದರೆ ರುಚಿಯಾದ ಕೋಸಂಬರಿ ತಿನ್ನಲು ಸಿದ್ಧ. ಬಿಸಿಲಿನಲ್ಲಿ ತುಂಬಾ ತಂಪಾಗಿರುತ್ತದೆ.

***


ಹೆಸರುಕಾಳು– ಕುಂಬಳಕಾಯಿ ಪಲ್ಯ

ಬೇಕಾಗುವ ಸಾಮಗ್ರಿಗಳು:ನೆನೆಸಿದ ಹೆಸರುಕಾಳು – 1 ಕಪ್, ಹೆಚ್ಚಿದ ಕುಂಬಳಕಾಯಿ – 1 ಕಪ್, ಹಸಿ ಮೆಣಸಿನಕಾಯಿ – 4, ಕಡಲೆಬೇಳೆ – 1 ಚಮಚ, ತೆಂಗಿನಕಾಯಿ ತುರಿ – ಸ್ವಲ್ಪ, ಸಾಸಿವೆ – ಸ್ವಲ್ಪ, ಈರುಳ್ಳಿ – 1, ಕರಿಬೇವಿನ ಎಲೆಗಳು – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಎಣ್ಣೆ – 3 ಚಮಚ,ಉಪ್ಪು – ರುಚಿಗೆ ತಕ್ಕಷ್ಟು ತಯಾರಿಸುವ ವಿಧಾನ

ಒಲೆಯ ಮೇಲೆ ಒಂದು ಕುಕ್ಕರ್ ಇರಿಸಿ ಅದಕ್ಕೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ನಂತರ ಕಡಲೆಬೇಳೆ, ಕರಿಬೇವಿನ ಸೊಪ್ಪು, ಹಸಿಮೆಣಸು, ಈರುಳ್ಳಿ ಹಾಕಿ ಹೊಂಬಣ್ಣ ಬರುವ ಹಾಗೆ ಹುರಿದು ಅದಕ್ಕೆ ನೆನೆಸಿದ ಹೆಸರು ಕಾಳು ಮತ್ತು ಕುಂಬಳಕಾಯಿ ಹಾಕಿ ಎರಡು ನಿಮಿಷ ಕೈ ಆಡಿಸಿ ತದ ನಂತರ ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ನೀರು ಚಿಮುಕಿಸಿ ಕುಕ್ಕರ್ ಮುಚ್ಚಳ ಮುಚ್ಚಿ ಒಂದು ವಿಷಲ್ ಕೂಗಿಸಿ. ಅದು ತಣ್ಣಗಾದ ನಂತರ ತೆಂಗಿನಕಾಯಿ ತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿದರೆ ಹೆಸರುಕಾಳು ಕುಂಬಳಕಾಯಿ ಪಲ್ಯ ರೆಡಿ. ಇದನ್ನು ಬಿಸಿ ಚಪಾತಿ ಅಥವಾ ಅಕ್ಕಿ ರೊಟ್ಟಿ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT