ವಸಂತ ಋತು ಕ್ಷೀಣವಾಗುವ ಜೀರ್ಣಶಕ್ತಿ

ಶುಕ್ರವಾರ, ಏಪ್ರಿಲ್ 26, 2019
35 °C

ವಸಂತ ಋತು ಕ್ಷೀಣವಾಗುವ ಜೀರ್ಣಶಕ್ತಿ

Published:
Updated:
Prajavani

ಎಲ್ಲ ರೀತಿಯ ಜೀವಗಳಿಗೆ ವಸಂತ ಋತು ಜೀವನೋತ್ಸಾಹ ತರುವ ಕಾಲ. ಇದನ್ನು ‘ವಸನ್ ತನೋತಿ ಇತಿ ವಸಂತ’ ಎಂದು ಉಲ್ಲೇಖಿಸಿದ್ದಾರೆ. ಚಳಿಗಾಲದ ತಂಪಿನಿಂದ ಉದುರಿದ ಎಲೆಗಳಿಂದ ಬೋಳಾದ ಮರ ಗಿಡಗಳು, ವಸಂತ ಋತುವಿನ ಆಗಮನದಿಂದ ಹೊಸದಾಗಿ ಚಿಗುರುವವು. ಚಳಿ ಕಳೆದು, ಸೂರ‍್ಯನ ಕಿರಣಗಳು ತೀಕ್ಷ್ಣವಾಗುತ್ತವೆ. 

ಈ ಋತುವಿನಲ್ಲಿ ದೇಹದ ಸ್ಥಿತಿ

ಈ ಋತುವಿನಲ್ಲಿ ಸೂರ್ಯನ ತೀಕ್ಷ್ಣ ಬಿಸಿಲಿನಿಂದ ಚಳಿಗಾಲದ ಶೀತದಿಂದ ಹೆಪ್ಪುಗಟ್ಟಿದ ಕಫ ಕರಗಿ ದೇಹದಲ್ಲಿ ಅದರ ಪ್ರಮಾಣ ಹೆಚ್ಚಾಗುವುದು. ಜೀರ್ಣಶಕ್ತಿ ಕ್ಷೀಣವಾಗುವುದು. ಇದರಿಂದ ಜ್ವರ, ಅಜೀರ್ಣ, ವಾಂತಿ, ಕೆಮ್ಮು, ಉಬ್ಬಸದಂತಹ ತೊಂದರೆಗಳು ಹೆಚ್ಚಾಗಿ ಕಂಡು ಬರುವವು. ಈ ಋತುವಿನಲ್ಲಿ ಮಧ್ಯಮ ಪ್ರಮಾಣದ ಬಲವಿರುತ್ತದೆ.

ವಸಂತ ಋತುವಿನಲ್ಲಿ ಅನುಸರಿಸಬೇಕಾದ ನಿಯಮಗಳು

*ಆಹಾರ : ತರಕಾರಿಗಳಲ್ಲಿ ಹಾಗಲಕಾಯಿ, ಪಡುವಲ, ಹೀರೆಕಾಯಿ, ನುಗ್ಗೆಕಾಯಿ, ಮೂಲಂಗಿ, ಸುವರ್ಣ ಗೆಡ್ಡೆ ಸೇವನೆಗೆ ಒಳ್ಳೆಯದು. ಅಡುಗೆಯಲ್ಲಿ ಬೆಳ್ಳುಳ್ಳಿ, ಸಾಸಿವೆ, ಶುಂಠಿ, ಕಾಳು ಮೆಣಸು, ಹಿಂಗು, ಜೀರಿಗೆ, ಅರಿಸಿನದ ಬಳಕೆ ಹೆಚ್ಚಿಸಿದರೆ ಹಿತ.

*ಮಾಂಸಾಹಾರಿಗಳು ಆಡು, ಪಾರಿವಾಳ, ಮೊಲದ ಮಾಂಸವನ್ನು ಕೆಂಡದ ಮೇಲೆ ಸುಟ್ಟು ಸೇವಿಸುವುದು ಹಿತಕರ. ಕಬ್ಬಿನ ಹಾಲನ್ನು ಸೇವಿಸುವುದಾದರೆ ಶುಂಠಿ ಹಾಕಿ ಬಳಸಬೇಕು.

*ಶುಂಠಿ, ಜೀರಿಗೆ ಹಾಕಿ ಕುದಿಸಿದ ನೀರನ್ನು ಕುಡಿಯುವುದು ಹಿತಕರ.

*ವಿಹಾರ : ವ್ಯಾಯಾಮವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕು. ರಾತ್ರಿ ಕಾಲದ ನಿದ್ರೆಯ ಪ್ರಮಾಣ ಕಡಿಮೆ ಆಗಬಾರದು.

*ಮಧ್ಯಾಹ್ನ ಅಥವಾ ಹಗಲು ನಿದ್ರೆ ಮಾಡುವುದು ಒಳ್ಳೆಯದಲ್ಲ. ಈ ಋತುವಿನಲ್ಲಿ ಹುಳಿ, ಉಪ್ಪು, ಸಿಹಿ ರುಚಿ ಪ್ರಧಾನ ಆಹಾರ ಸೇವನೆ ಒಳ್ಳೆಯದಲ್ಲ. ಜಿಡ್ಡಿನಿಂದ (ಎಣ್ಣೆ , ತುಪ್ಪ, ಕೊಬ್ಬು) ಕೂಡಿದ ಆಹಾರ ಜೀರ್ಣಕ್ಕೆ ಜಡವಾಗಿದ್ದು, ಇದರ ಸೇವನೆ ಬೇಡ. ಕುದಿಸದೇ ಇರುವ ನೀರು, ಫ್ರಿಜ್‌ನಲ್ಲಿಟ್ಟ ನೀರು, ಮಜ್ಜಿಗೆ, ಸೇವನೆಗೆ ಒಳ್ಳೆಯದಲ್ಲ. ಮೊಸರಿನ ಸೇವನೆ ಸಂಪೂರ್ಣ ನಿಷಿದ್ಧ. ಹುಳಿಯಾಗಿರುವ ಹಣ್ಣುಗಳ ರಸ ಸೇವನೆ ಹಿತಕರವಲ್ಲ.

ಜೀರ್ಣಕ್ಕೆ ಹಗುರವಾದ, ಒಂದು ವರ್ಷ ಹಳೆಯದಾದ ಅಕ್ಕಿ, ಗೋಧಿ, ಹೆಸರುಬೇಳೆ, ಹುರುಳಿ ಸೇವಿಸಿದರೆ ಹಿತ. ಖಾರ, ಒಗರು, ಕಹಿ ರುಚಿಯುಳ್ಳ ಆಹಾರ ಹಿತಕರ. ಅನ್ನ, ಕೆಂಡದ ಮೇಲೆ ಸುಟ್ಟ ರೊಟ್ಟಿಯಂತಹ ನಿತ್ಯ ಆಹಾರದೊಂದಿಗೆ ಕುದಿಸಿ ಆರಿಸಿದ ನೀರಿಗೆ ಜೇನುತುಪ್ಪ ಹಾಕಿ ಸೇವಿಸಿದರೆ ಒಳ್ಳೆಯದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !