ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಹುಡುಗಿಯ ಫಿಟ್‌ನೆಸ್ ಮಂತ್ರ

ಶ್ರದ್ಧಾ ಬೆಣಗಿ
Last Updated 24 ಮಾರ್ಚ್ 2019, 14:53 IST
ಅಕ್ಷರ ಗಾತ್ರ

ಹೆಸರು ಶ್ರದ್ಧಾ. ಊರು ಹುಬ್ಬಳ್ಳಿ. ಬೆಳೆದಿದ್ದೆಲ್ಲಾ ಬೆಂಗ್ಳೂರಲ್ಲಿ. ಎಂಜಿನಿಯರಿಂಗ್ ಓದಿದ್ದು ರಾಮಯ್ಯ ಕಾಲೇಜು. ಅಪ್ಪ ವಿಜಯಕುಮಾರ ಎಂಜಿನಿಯರ್, ಅಮ್ಮ ಗೀತಾ ಭರತನಾಟ್ಯ ಕಲಾವಿದೆ. ಅಪ್ಪನ ಖುಷಿಗೆ ಎಂಜಿನಿಯರಿಂಗ್ ಓದಿ, ಅಮ್ಮನ ಖುಷಿಗೆ ಭರತನಾಟ್ಯವನ್ನೂ ಕಲಿತ ಶ್ರದ್ಧಾ ಬೆಣಗಿ ಇದೀಗ ನಟನೆಯಲ್ಲಿ ಕಾಲೂರುವ ಉತ್ಸಾಹದಲ್ಲಿದ್ದಾರೆ.

ಅಮರ್ ಸಾಳ್ವ ಹಾಗೂ ಚಲ ನಿರ್ದೇಶನದ ‘ನಾನು ನಮ್ಮುಡ್ಗಿ ಖರ್ಚ್‌ಗೊಂದ್ ಮಾಫಿಯಾ’ ಮೊದಲ ಚಿತ್ರ. ಸಾದಾ ಸೀದಾ ಪಾತ್ರದಲ್ಲಿ ನಮ್ಮನೆ ಪಕ್ಕದ ಹುಡುಗಿಯಂತೆ ಕಾಣಿಸಿಕೊಂಡಿದ್ದ ಶ್ರದ್ಧಾ, ನಿಜಜೀವನದಲ್ಲೂ ಅಷ್ಟೇ ಸರಳಜೀವಿ.

ಓದಿನಲ್ಲಿ ಮುಂದು, ತರಗತಿಯಲ್ಲಿ ಮೊದಲ ಬೆಂಚಿನ ವಿದ್ಯಾರ್ಥಿನಿ, ಕಾಲೇಜು ವೇದಿಕೆ ಮೇಲೆ ತನ್ನ ಪ್ರತಿಭೆಯನ್ನು ಒರೆಗೆ ಹಚ್ಚುತ್ತಲೇ ಆಕಸ್ಮಿಕವಾಗಿ ನಟನೆಗೆ ಧುಮುಕಿದವರು ಶ್ರದ್ಧಾ. ಓದು ಮುಗಿಯುತ್ತಿದ್ದಂತೆ ಚಿತ್ರದಲ್ಲಿ ನಟಿಸುವ ಅವಕಾಶ ಬಂದರೂ ಕೈಯಲ್ಲೊಂದು ಕೆಲಸವೂ ಇರಲಿ ಎಂದು ‘ಬಾಷ್’ನ ಉದ್ಯೋಗಿಯಾದವರು. ವೃತ್ತಿ–ಪ್ರವೃತ್ತಿ–ನಟನೆಯ ಪ್ರೀತಿಯಲ್ಲಿ ಬ್ಯುಸಿಯಾಗಿರುವ ಶ್ರದ್ಧಾ ಫಿಟ್‌ನೆಸ್‌ಗೆ ಕಂಡುಕೊಂಡ ಮಾರ್ಗವನ್ನು, ಸರಳ ಜೀವನದ ಸೂತ್ರವನ್ನು ವಿವರಿಸುವುದು ಹೀಗೆ–

ನಡಿಗೆಯಿಂದಲೇ ದಿನದಾರಂಭ

ನನ್ನ ದಿನ ಆರಂಭವಾಗುವುದೇ ನಡಿಗೆಯ ಮೂಲಕ. ಬೆಳಿಗ್ಗೆ ಐದೂವರೆಗೆ ಎದ್ದು ಒಂದರ್ಧ ಗಂಟೆ ಜಾಗಿಂಗ್‌ ಹೋಗಿ ಬರುತ್ತೇನೆ. ಏಳೂವರೆಗೆಲ್ಲ ಆಫೀಸಿಗೆ ತಯಾರಾಗುತ್ತೇನೆ. ಸಂಜೆಯವರೆಗೆ ನಾನು ಎಂಜಿನಿಯರ್‌. ಸಂಜೆಯಾಗುತ್ತಲೇ ಮತ್ತೆ ಕಲಾವಿದೆಯಾಗುತ್ತೇನೆ. ಸಂಜೆ ಏಳರಿಂದ ಒಂಬತ್ತರವರೆಗೆ ಬಾಕ್ಸಿಂಗ್‌ ತರಬೇತಿ ಇರುತ್ತದೆ. (ಮುಂದಿರುವ ಹೊಸ ಚಿತ್ರದ ತಯಾರಿಗೆ ಬಾಕ್ಸಿಂಗ್‌ ಕಲಿಯುತ್ತಿದ್ದೇನೆ) ಮನೆಗೆ ಬಂದು, ಅಮ್ಮ ಕೊಡುವ ಊಟ ಮುಗಿಸಿ ಮೈಚೆಲ್ಲಿದಾಗ ರಾತ್ರಿ ಹತ್ತೂವರೆಯಾದರೂ ಆಗಿರುತ್ತದೆ.ಬೌದ್ಧಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ನಾವು ಯಾವಾಗಲೂ ಮುಂದೆ ನಡೆಯುತ್ತಲೇ ಇರಬೇಕು. ಇದೇ ಫಿಟ್‌ನೆಸ್‌ ಸೀಕ್ರೆಟ್‌. ಕಚೇರಿಗೆ ಹೋಗುವಾಗ ಬಸ್‌ ಬರುತ್ತದೆ ಎನ್ನುವುದನ್ನು ಬಿಟ್ಟರೆ ಬಹುತೇಕ ಎಲ್ಲಾ ಕಡೆ ನಡೆದುಕೊಂಡೇ ಓಡಾಡುತ್ತೇನೆ. ಬಾಕ್ಸಿಂಗ್‌ ತರಬೇತಿಗೆ ಒಂದು ಕಿ.ಮೀ ನಡೆದುಕೊಂಡೇ ಹೋಗುತ್ತೇನೆ. ಮನೆಗೆ ಬರುವಾಗಹಿಂದಿನ ನಿಲ್ದಾಣದಲ್ಲಿ ಇಳಿದು ಮನೆವರೆಗೂ ನಡೆಯುತ್ತೇನೆ. ಐದಾರು ಮಹಡಿಗಳವರೆಗೂ ಮೆಟ್ಟಿಲೇರಿಕೊಂಡೇ ಹೋಗುತ್ತೇನೆ. ತೀರಾ ದಣಿದಾಗ, ಆಯಾಸಗೊಂಡಾಗ ಮಾತ್ರ ಲಿಫ್ಟ್‌ ಮತ್ತು ಆಟೊ ತೆಗೆದುಕೊಳ್ಳುತ್ತೇನೆ.

ಬಿರಿಯಾನಿ ಮುಂದಿದ್ದರೆ ಬಿಡೋಕಾಲ್ಲ

ಅಮ್ಮ ನನಗಾಗಿ ಡಯಟ್‌ ಚಾರ್ಟನ್ನೇ ಸಿದ್ಧಪಡಿಸಿದ್ದಾರೆ. ಹೀಗಾಗಿ ಬೆಳಗಿನ ತಿಂಡಿಯಲ್ಲಿ ಏನಿರಬೇಕು, ಮಧ್ಯಾಹ್ನ ಊಟಕ್ಕೆ ಏನಾಗಬೇಕು, ಸಂಜೆಯ ಸ್ನ್ಯಾಕ್ಸ್‌, ರಾತ್ರಿಯ ಊಟಕ್ಕೇನು ಎನ್ನುವುದೆಲ್ಲ ಮೊದಲೇ ನಿರ್ಧಾರವಾಗಿರುತ್ತದೆ. ಆದರೆ ಬಿರಿಯಾನಿ ಕಂಡ್ರೆ ಮಾತ್ರ ನಾನು ಡಯಟ್‌ ಪ್ಲಾನ್‌ ಮರೆಯುತ್ತೇನೆ. ಅದು ಎದುರಿಗಿದ್ದರೆ ಬಿಡೋಕಾಗೊಲ್ಲ.

***

ಈ ಮೊದಲು ಶ್ರದ್ಧಾ ಒಂದೆರಡು ಕಿರುಚಿತ್ರ ಹಾಗೂ ಆಲ್ಬಂಗಳಲ್ಲಿ ನಟಿಸಿದ್ದಾರೆ. ಆಟಿಸಂ ಸಮಸ್ಯೆ ಹೊಂದಿರುವ ಮಕ್ಕಳಿಗೆ ಸಂಬಂಧಿಸಿದ ‘ಸ್ಪೇಶಲ್‌’ ಎನ್ನುವ ಕಿರುಚಿತ್ರಕ್ಕೆ ಎಎಬಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಲಭಿಸಿದೆ. ಇದರಲ್ಲಿನ ಅಭಿನಯಕ್ಕಾಗಿ ಶ್ರದ್ಧಾ ಕೂಡ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ನಂತರ ಕನ್ನಡದಲ್ಲಿ ಸನಿಹ ಮತ್ತು ಹಿಂದಿಯಲ್ಲಿ ದರ್ಮಿಯಾನ್ ಹೆಸರಿನ ಸಿಂಗಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ಬಳಸುವ ತಂತ್ರಜ್ಞಾನ ಬಳಸಿ ಚಿತ್ರೀಕರಿಸಿದ ಕನ್ನಡದ ಮೊದಲ ಸಿಂಗಲ್ಸ್ ಎಂಬ ಹೆಗ್ಗಳಿಕೆಯ ಈ ಆಲ್ಬಂಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT