7

ಸಿರಿವಂತ ಧಾನ್ಯದ ಧ್ಯಾನದಲ್ಲಿ

Published:
Updated:
ಸಿರಿಧಾನ್ಯ

ಅನ್ನ, ರಾಗಿ, ಗೋಧಿ ಅಷ್ಟೇ ತಿಂದು ಗೊತ್ತಿದ್ದ ಜನಕ್ಕೆ ಈಗ ಸಿರಿ ಧಾನ್ಯಗಳನ್ನು ಸವಿಯುವ ಸಂಕ್ರಮಣ ಕಾಲ. ನವಣೆ, ಆರ್ಕ, ಸಾಮೆ, ಊದಲು, ಬರಗು, ಸಜ್ಜೆ, ಕೊರಲು ಹೆಸರೇ ಗೊತ್ತಿಲ್ಲದ ಜನ ಈಗ ಸಿರಿಧಾನ್ಯಗಳನ್ನು ಮುಗಿಬಿದ್ದು ಖರೀದಿಗೆ ತೊಡಗಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಸಿರಿಧಾನ್ಯ ಮೇಳಗಳಲ್ಲಿ ಜನವೋ ಜನ.

ಸಿರಿಧಾನ್ಯ ಅಡುಗೆ ರೆಸಿಪಿ ಪುಸ್ತಕಗಳಿಗೆ ಎಲ್ಲಿಲ್ಲದ ಬೇಡಿಕೆ. ಸಿರಿಧಾನ್ಯಗಳು ಮಾಲ್‌ಗಳಿಗೂ ಲಗ್ಗೆ ಇಟ್ಟಿವೆ. ಧಾನ್ಯ ಮಾತ್ರವಲ್ಲ, ಹಿಟ್ಟು, ರವೆಗಳೂ ಸಿಗುತ್ತಿವೆ. ಇನ್ನು ಚಕ್ಕುಲಿ, ಹಪ್ಪಳ, ಕೋಡುಬಳೆ, ನಿಪ್ಪಟ್ಟು, ಉಂಡೆ, ಕಜ್ಜಾಯ, ಹೋಳಿಗೆ, ಬರ್ಫಿ ಎಲ್ಲಾ ಬಗೆಯ ಸಿಹಿ ಮತ್ತು ಕುರುಕುರು ತಿಂಡಿಗಳೂ ನವಧಾನ್ಯಗಳಲ್ಲಿ ಲಭ್ಯವಿದೆ.

ವರ್ಷಗಳಿಂದ ಬಳಸುತ್ತಿದ್ದ, ಗೋಧಿ, ಬಿಳಿ ಅಕ್ಕಿಗೆ ಗೇಟ್‌ಪಾಸ್‌ ನೀಡಲು ಎಲ್ಲ ವಯಸಿನವರೂ ಸಿದ್ಧರಾಗಿದ್ದಾರೆ. ಕೆಲವು ಹೋಟೆಲುಗಳೂ ಸಿರಿಧಾನ್ಯಗಳ ಖಾದ್ಯಗಳನ್ನು ತಯಾರಿಸುತ್ತಿವೆ. ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚಾಗಿ ನಗರವಾಸಿಗಳು ಸಿರಿಧಾನ್ಯಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ.

(ಶ್ರೀಧರಮೂರ್ತಿ)

3 ವರ್ಷಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಸುವುದಕ್ಕೆ ಕೃಷಿ ಇಲಾಖೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಆದರೂ ರೈತರು ಧೈರ್ಯವಾಗಿ ಸಿರಿಧಾನ್ಯಗಳನ್ನು ಬೆಳೆಸಲು ಮುಂದಾಗುತ್ತಿಲ್ಲ ಎಂದು ಹಿಂದಿನ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿಕೊಂಡಿದ್ದರು.

ಸಿರಿಧಾನ್ಯಗಳಿಗೆ ಮಾರುಕಟ್ಟೆ ಇಲ್ಲ ಎಂಬ ರೈತರ ಆತಂಕ ಗಮನಿಸಿದ ಅವರು ಬೆಂಗಳೂರಿಗಿಂತ ದೊಡ್ಡ ಮಾರುಕಟ್ಟೆಯೇ ಇಲ್ಲ ಎಂಬ ಗಟ್ಟಿ ನಿರ್ಧಾರ ಮಾಡಿ ಎರಡು ವರ್ಷ ಅರಮನೆ ಮೈದಾನದಲ್ಲಿ ಸಿರಿಧಾನ್ಯಗಳ ಮೇಳಗಳನ್ನು ಆಯೋಜಿಸಿದ್ದರು.ಆಹಾರ ತಜ್ಞರಿಂದ ರೆಸಿಪಿಗಳನ್ನು ತಯಾರಿಸಿ ಮೇಳದಲ್ಲಿ ಬಿಡುಗಡೆ ಮಾಡಿದ್ದರು. ಸಿರಿಧಾನ್ಯಗಳ ಖಾದ್ಯಗಳನ್ನು ತಯಾರಿಸಿ ರುಚಿ ನೋಡುವ ವ್ಯವಸ್ಥೆಯನ್ನೂ ಮಾಡಿದ್ದರು.

ಈಗ ನಗರದಲ್ಲಿ ಅನೇಕ ಸಿರಿಧಾನ್ಯ ಮಾರಾಟ ಮಾಡುವ, ಪ್ರಚುರಪಡಿಸುವ, ಖಾದ್ಯ ತಯಾರಿಯ ಬಗ್ಗೆ ತರಬೇತಿ ನೀಡುವ, ಸಿರಿಧಾನ್ಯಗಳ ಸೇವನೆಯಿಂದ ಸಿಗುವ ಆರೋಗ್ಯ ಭಾಗ್ಯದ ಬಗ್ಗೆ ಮಾಹಿತಿ ನೀಡುವ ಅನೇಕ ಸಂಸ್ಥೆಗಳಿವೆ. ಸಿರಿಧಾನ್ಯ ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ಸಿರಿಧಾನ್ಯಗಳ ವ್ಯಾಪಾರ ಈಗ ಆಶಾದಾಯಕವೆನಿಸಿದೆ. 

***

ಈಚೆಗೆ ಲಾಲ್‌ಬಾಗ್‌ನಲ್ಲಿ ಮೂರು ದಿನಗಳ ಕಾಲ ‘ಗ್ರಾಮೀಣ ಕುಟುಂಬ’ ಆಯೋಜಿಸಿದ್ದ ಸಿರಿಧಾನ್ಯ ಮೇಳ ಇದಕ್ಕೆ ತಾಜಾ ಉದಾಹರಣೆ. ಅದೊಂದು ಫುಲ್‌ ಪ್ಯಾಕೇಜ್‌ ತರಹ ಇತ್ತು. ಒಂದು ಕಡೆ ನವಧಾನ್ಯ, ಅವುಗಳಿಂದ ತಯಾರಿಸಿದ ಖಾದ್ಯಗಳ ಮಾರಾಟ, ಮತ್ತೊಂದು ಕಡೆ ಸಿರಿಧಾನ್ಯಗಳ ಬಳಕೆ, ಅವುಗಳಿಂದ ಸಿಗುವ ಲಾಭ ಕುರಿತು ಮಾಹಿತಿ ನೀಡಲಾಯಿತು.

(ಪ್ರಿಯಾಂಕ)

‘ಭೂಮಿಕಾ ಮಿಲ್ಲೆಟ್ಸ್‌’ ನ ಭಟ್ರು ಸಿರಿಧಾನ್ಯದಿಂದ ಬಿಸಿಬೇಳೆ ಬಾತ್‌ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ನೀಡುತ್ತಿದ್ದರು. ಸಿರಿಧಾನ್ಯ ಅಡುಗೆ ಸ್ಪರ್ಧೆಗೆ ಬಂದಿದ್ದ ಮಹಿಳೆಯರು ಮನೆಯಿಂದಲೇ ವಿವಿಧ ಬಗೆಯ ಅಡುಗೆ ತಯಾರಿಸಿ ತಂದು ಸ್ಪರ್ಧಿಸಿ ಬಹುಮಾನ ಪಡೆದರು. ತಾವು ಹೇಗೆ ಅಡುಗೆ ಸಿದ್ಧಪಡಿಸಿದೆವು ಎಂಬುದನ್ನು ಪ್ರತಿಯೊಬ್ಬರೂ ವಿವರಿಸಿದರು. ಹೀಗೆ ಅಲ್ಲಿ ನೆರೆದಿದ್ದ ಜನರಿಗೆ ಭರಪೂರ ಸಲಹೆಗಳೂ ಸಿಕ್ಕಿದವು. 

ಯಲಹಂಕದಿಂದ ಬಂದಿದ್ದ ಗೃಹಿಣಿ ಸಂಗೀತ, ನವಣೆಯಿಂದ ಬಿಸಿಬೇಳೆ ಬಾತ್‌, ರಾಗಿ ಉಂಡೆ ತಯಾರಿಸಿ ತಂದಿದ್ದರು. ಅವರು ರಾಗಿಹಿಟ್ಟು, ಮೆಂತೆಸೊಪ್ಪು ಬಳಸಿ ರಾಗಿ–ಮೆಂತೆ ಕಡುಬು ತಯಾರಿಸುವ ರೀತಿಯನ್ನು ವಿವರಿಸಿದರು. ಅವರ ಸಹೋದರಿ ಶಾರದಾ ನವಣೆಯಿಂದ ಉಪ್ಪಿಟ್ಟು, ಸಂಜೀರಾ ತಯಾರಿಸಿದ್ದರು.

ಜಯನಗರದ ದಂತವೈದ್ಯೆ ಪ್ರಿಯಾಂಕಾ ಹಾಲು, ಮಿಲ್ಕ್ ಮೇಡ್‌ ಜೊತೆ ಸಿರಿಧಾನ್ಯ ಬಳಸಿ ಸ್ವಾದಿಷ್ಟವಾದ ಸಿಹಿ ತಯಾರಿಸಿ ಮೊದಲ ಬಹುಮಾನ ಪಡೆದರು. ಒಬ್ಬಾಕೆ ನವಣೆಯಿಂದ ಕಜ್ಜಾಯ ಮಾಡಿದ್ದರು. ಅಕ್ಕಿ ಕಜ್ಜಾಯಕ್ಕಿಂತ ರುಚಿಕರವಾಗಿತ್ತು. ಮಾಡಿದ ವಿಧಾನವನ್ನೂ ಅವರು ವಿವರಿಸಿದರು. ಅಕ್ಕಿಯಿಂದ ಏನೆಲ್ಲ ಮಾಡಲು ಸಾಧ್ಯವೋ ಅವೆಲ್ಲವನ್ನೂ ನವಧಾನ್ಯಗಳಿಂದ ಮಾಡಲು ಸಾಧ್ಯ ಎಂದು ಅನೇಕ ಮಹಿಳೆಯರು ತೋರಿಸಿಕೊಟ್ಟಿದ್ದಾರೆ.

ನವಧಾನ್ಯಗಳನ್ನು ಬಳಸುತ್ತಿರುವ ಅನೇಕರು ತಮ್ಮ ಅನುಭವ ಹಂಚಿಕೊಂಡರು. ಅಕ್ಕಿ, ಗೋಧಿ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ ಸಿರಿಧಾನ್ಯ ಬಳಕೆ ಶುರು ಮಾಡಿದ ನಂತರ ಎರಡು ವರ್ಷದಲ್ಲಿ ಯಾವುದೇ ಪಥ್ಯ ಮಾಡದೇ ಹತ್ತು ಕೇಜಿ ತೂಕ ಇಳಿದಿರುವ ಬಗ್ಗೆ 70 ವರ್ಷದ ಮಹಿಳೆಯೊಬ್ಬರು ಹೇಳಿಕೊಂಡರು.

(ರಜನಿ)

ಬರಹ ಇಷ್ಟವಾಯಿತೆ?

  • 3

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !