ಎಕರೆ ಇಡ್ಲಿ ಆಯ್ತು ತಟ್ಟೆ ಇಡ್ಲಿ

7

ಎಕರೆ ಇಡ್ಲಿ ಆಯ್ತು ತಟ್ಟೆ ಇಡ್ಲಿ

Published:
Updated:
ತಟ್ಟೆ ಇಡ್ಲಿ ಬಡಿಸುವಲ್ಲಿ ನಿರತರಾದ ಶಶಿಕುಮಾರ್‌

ಡದಿ ಎಂದ ಕೂಡಲೇ ತಟ್ಟನೆ ನೆನಪಾಗುವುದು ತಟ್ಟೆ ಇಡ್ಲಿ. ಬಿಸಿನೀರಿನ ಹಬೆಯಲ್ಲಿ ಹದವಾಗಿ ಬೆಂದ ಅಂಗೈ ಅಗಲದ, ವೃತ್ತಾಕಾರದ ಇಡ್ಲಿಯ ಮೇಲೆ ರುಚಿಗೊಂದಿಷ್ಟು ಬೆಣ್ಣೆ ಹಾಕಿ ಬಿಸಿಯಾಗಿರುವಾಗಲೇ ಸವಿದಾಗ ಸಿಗುವ ಮಜವೇ ಬೇರೆ!

ಇಂತಹದ್ದೊಂದು ರುಚಿಯನ್ನು ದಶಕಗಳಿಂದಲೂ ಗ್ರಾಹಕರಿಗೆ ಉಣಬಡಿಸುತ್ತಾ ಬಂದಿರುವ ಹೋಟೆಲ್‌ವೊಂದು ಬಿಡದಿಯಲ್ಲಿ ಇದೆ. ಅದುವೇ ಶಿವದರ್ಶನ ಶಶಿ ತಟ್ಟೆ ಇಡ್ಲಿ ಹೋಟೆಲ್‌. ಸ್ಥಳೀಯವಾಗಿ ಶಶಿ ತಟ್ಲೆ ಇಡ್ಲಿ ಹೋಟೆಲ್‌ ಎಂದೇ ಪ್ರಸಿದ್ಧಿಯಾಗಿರುವ ಇಲ್ಲಿನ ತಿನಿಸು ಗ್ರಾಹಕರಿಗೆ ಪ್ರಿಯವಾಗಿದೆ.

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವವರು ಸಾಮಾನ್ಯವಾಗಿ ಬಿಡದಿಯಲ್ಲಿ ಉಪಾಹಾರದ ಮೊರೆ ಹೋಗುತ್ತಾರೆ. ಅದಕ್ಕೆ ಕಾರಣ ಇಲ್ಲಿನ ತಟ್ಟೆ ಇಡ್ಲಿಯ ರುಚಿ. ಮನೆಯಲ್ಲಿ ಮಾಡುವ ಇಡ್ಲಿಗಿಂತ ಹೆಚ್ಚು ಮೃದುವಾಗಿದ್ದು, ಬೆಣ್ಣೆ ಸೇರಿಸಿ ಕೊಡುವುದು ಇಲ್ಲಿನ ವಿಶೇಷ. ಈಗಂತೂ ಇದನ್ನು ಮಾರುವ ಹತ್ತಾರು ಹೋಟೆಲ್‌ಗಳು ಹೆದ್ದಾರಿಯ ಅಕ್ಕಪಕ್ಕ ತಲೆಎತ್ತಿವೆ. ಅದರಲ್ಲೂ ಶಶಿ ಹೋಟೆಲ್‌ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.

ಬೆಂಗಳೂರಿನ ಕಡೆಯಿಂದ ಹೋಗುವವರು ಬಿಡದಿ ಬಸ್ ನಿಲ್ದಾಣದ ವೃತ್ತ ದಾಟಿ ಕೊಂಚ ಮುಂದೆ ಹೋದರೆ ಅಲ್ಲೇ ಎಡಕ್ಕೆ ಈ ಹೋಟೆಲ್ ಸಿಗುತ್ತದೆ. ಅದರಲ್ಲೂ ಬೆಳಿಗ್ಗೆ ಹೊತ್ತಿನಲ್ಲಿ, ವಾರಾಂತ್ಯದಲ್ಲಿ ಇಲ್ಲಿ ಗ್ರಾಹಕರು ಕಿಕ್ಕಿರಿದು ಸೇರಿರುತ್ತಾರೆ.

ತಲೆಮಾರುಗಳ ಉದ್ಯಮ: ಬಿಡದಿಯ ತಟ್ಲೆ ಇಡ್ಲಿ ವ್ಯಾಪಾರಕ್ಕೂ ತನ್ನದೇ ಆದ ಕುತೂಹಲಕಾರಿ ಇತಿಹಾಸವಿದೆ.

ರಾಮನಗರದ ರೇಷ್ಮೆಗೂಡು ಮಾರುಕಟ್ಟೆಗೆ ಗೂಡು ಕೊಂಡೊಯ್ಯುವ ರೈತರು, ಇಲ್ಲಿನ ರೈಲು ನಿಲ್ದಾಣದ ಪ್ರಯಾಣಿಕರ ಹಸಿವು ನೀಗಿಸುವ ಸಲುವಾಗಿ ಇಡ್ಲಿ ವ್ಯಾಪಾರ ಆರಂಭಗೊಂಡಿತು. ಹಿಂದೆ ದೊಡ್ಡ ವೃತ್ತಾಕಾರದ ಇಡ್ಲಿ ತಯಾರಿಸಿ, ಅದಕ್ಕೆ ಬೆಣ್ಣೆ ಸವರಿ ನಾಲ್ಕು ಭಾಗಗಳನ್ನಾಗಿ ಕತ್ತರಿಸಿ ಚಟ್ನಿಯೊಂದಿಗೆ ಬಡಿಸಲಾಗುತಿತ್ತು. ಇದನ್ನು ‘ಎಕರೆ ಇಡ್ಲಿ’ ಎಂದೇ ಕರೆಯಲಾಗುತಿತ್ತು. ಅದರೊಟ್ಟಿಗೆ ಚಿಬ್ಬಲು ಗಾತ್ರದ ಇಡ್ಲಿಯೂ ಇತ್ತು. ಕಾಲ ಬದಲಾದಂತೆ ‘ಎಕರೆ’ಯ ಗಾತ್ರವು ತಟ್ಟೆಯಾಕಾರಕ್ಕೆ ತಗ್ಗಿತು. ಈಗೇನಿದ್ದರೂ ಅಂಗೈ ಅಗಲದ ತಟ್ಟೆ ಇಡ್ಲಿ ಮಾತ್ರ ಇಲ್ಲಿ ಲಭ್ಯ ಎನ್ನುತ್ತಾರೆ ಹೋಟೆಲ್‌ ಉದ್ಯಮಿ ಶಶಿಕುಮಾರ್.

‘ಇಡ್ಲಿ ಉದ್ಯಮ ನಮಗೆ ನಾಲ್ಕು ತಲೆಮಾರಿನ ಕೊಡುಗೆ. ನಮ್ಮ ತಾತ ಇದೇ ಉದ್ಯಮದಲ್ಲಿ ತೊಡಗಿಸಿಕೊಂಡವರು. ಅದು ತಂದೆಗೆ ಬಳುವಳಿಯಾಗಿ ಬಂತು. ನಾನೂ ಚಿಕ್ಕಂದಿನಿಂದಲೂ ಇದೇ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಮಗನೂ ಈಗ ಹೋಟೆಲ್‌ ನೋಡಿಕೊಳ್ಳುತ್ತಿದ್ದಾನೆ. ತಟ್ಟೆ ಇಡ್ಲಿ ನಮ್ಮ ಬದುಕು ರೂಪಿಸಿಕೊಟ್ಟಿದೆ’ ಎನ್ನುತ್ತಾರೆ ಅವರು.

ಶಶಿ ಹೋಟೆಲ್‌ನಲ್ಲಿ ಚಿತ್ರಾನ್ನ, ಪೂರಿ, ದೋಸೆ, ಪುಳಿವೊಗರೆ ಸಹ ಸಿಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !