ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ತಿ ಅಂಚಿನಲ್ಲಿ ನಾಗರಾಳ ಜಲಾಶಯ

ಚಿಂಚೋಳಿ: ಉತ್ತಮ ಮಳೆ,1742 ಕ್ಯುಸೆಕ್‌ಗೆ ಹೆಚ್ಚಿದ ಒಳ ಹರಿವು
Last Updated 9 ಜೂನ್ 2018, 6:21 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಉತ್ತಮ ಮುಂಗಾರಿನಿಂದ ರೈತರು ಖುಷಿಯಲ್ಲಿದ್ದಾರೆ. ತಾಲ್ಲೂಕಿನ ರೈತರ ಜೀವ ಎನಿಸಿದ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯ ಭರ್ತಿಯತ್ತ ಸಾಗಿದೆ.

ತಾಲ್ಲೂಕಿನ ಐನಾಪುರ ಮತ್ತು ಹುಮ್ನಾಬಾದ್‌ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ನದಿಗೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಗುರುವಾರ 362 ಕ್ಯುಸೆಕ್‌ ಒಳ ಹರಿವು ಇತ್ತು. ಶುಕ್ರವಾರ 1742 ಕ್ಯುಸೆಕ್‌ಗೆ ಹೆಚ್ಚಿದೆ ಎಂದು ಯೋಜನೆಯ ಸಹಾಯಕ ಎಂಜಿನಿಯರ್‌ ಹಣಮಂತ ತಿಳಿಸಿದ್ದಾರೆ.

ಜಲಾಶಯದ ಗರಿಷ್ಠ ಮಟ್ಟ 491 ಮೀಟರ್‌ ಆಗಿದ್ದು, ಈಗ ನೀರಿನ ಮಟ್ಟ 489.4 ಮೀಟರ್‌ ಇದೆ. ಭರ್ತಿಗೆ 1.6 ಮೀಟರ್‌ ಬಾಕಿಯಿದೆ ಎಂದರು.

ತಾಲ್ಲೂಕಿನ ಐನಾಪುರದಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಶುಕ್ರವಾರ ಬೆಳಿಗ್ಗೆ 8 ಗಂಟೆವರೆಗೆ 53 ಮಿ.ಮೀ ಮಳೆ ಸುರಿದಿದೆ. ಜತೆಗೆ ಸಲಗರ ಬಸಂತಪುರದಲ್ಲಿ 25.5 ಮಿ.ಮೀ, ಚೇಂಗಟಾ 16.5 ಮಿ.ಮೀ, ಕುಂಚಾವರಂ 14.5 ಮಿ.ಮೀ, ಚಂದನಕೇರಾ ಮತ್ತು ಗಡಿಲಿಂಗದಳ್ಳಿಯಲ್ಲಿ ತಲಾ 10 ಮಿ.ಮೀ ಮಳೆ ಸುರಿದಿದೆ ಎಂದು ರಾಜ್ಯ ನೈಸರ್ಗಿ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಗೆ ಕೊಚ್ಚಿ ಹೋದ ರಸ್ತೆ

ಚಿಂಚೋಳಿ: ತಾಲ್ಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮುಂಗಾರು ಮಳೆಯಿಂದ ರೈತರ ಹೊಲಗಳಲ್ಲಿ ಬದುಗಳು ಒಡೆದರೆ, ರಸ್ತೆ ಮತ್ತು ಸೇತುವೆಗಳಿಗೂ ಹಾನಿಯಾಗಿದೆ.

ತಾಲ್ಲೂಕಿನ ಸಲಗರ ಕಾಲೊನಿ ಬೆನಕೆಪಳ್ಳಿ ಮಧ್ಯೆ ಬರುವ ಸೇತುವೆಯ ರಕ್ಷಣಾ ಗೋಡೆ ಮತ್ತು ಸೇತುವೆ ಭಾಗ ಮಳೆಯ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ.

ಚಿಮ್ಮನ ಚೋಡ್‌ದಿಂದ ಐನಾಪುರಕ್ಕೆ ತೆರಳುವ ಮಾರ್ಗ ಇದಾಗಿದ್ದು ದುರಸ್ತಿಗೊಳಿಸಬೇಕೆಂದು ಶಿವರಾಮ ನಾಯಕ ತಾಂಡಾದ ಪ್ರಹ್ಲಾದ್‌ ರಾಠೋಡ್‌ ಮನವಿ ಮಾಡಿದ್ದಾರೆ.

ತಾಲ್ಲೂಕಿನ ಚಿಮ್ಮನಚೋಡ್‌ ಹಸರಗುಂಡಗಿ ಸೇತುವೆಯೂ ಪ್ರವಾಹಕ್ಕೆ ಕುಸಿದಿದೆ. ಚಿಮ್ಮನಚೋಡ್‌ ಗ್ರಾಮಕ್ಕೆ ಹಸರಗುಂಡಗಿ ಸುತ್ತಲಿನ ಗ್ರಾಮ ಮತ್ತು ತಾಂಡಾಗಳ ರೈತರು ಬಂದು ಹೋಗಲು ಒಂದೇ ರಸ್ತೆಯಿದೆ. ಈಗ ಭಾರಿ ಮಳೆಯ ಪ್ರವಾಹದಿಂದ ಹಾಳಾದ ಸೇತುವೆಯ ಮೇಲಿನಿಂದ ವಾಹನಗಳು ತೆರಳಬೇಕಾಗಿದೆ.

ವಿವಿಧೆಡೆ ಮಳೆ: ರೈತರಿಗೆ ಹರ್ಷ

ಆಳಂದ: ತಾಲ್ಲೂಕಿನ ವಿವಿಧೆಡೆ ಗುರುವಾರ ರಾತ್ರಿ ಮೃಗಶಿರ ಮಳೆ ಸುರಿದ ಪರಿಣಾಮ ವಿವಿಧ ಗ್ರಾಮದಲ್ಲಿ ಹಳ್ಳ, ಬಾವಿಗಳಿಗೆ ಮಳೆ ನೀರು ಸಂಗ್ರಹವಾಗಿದೆ.

ತಾಲ್ಲೂಕಿನ ಖಜೂರಿ ವಲಯದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಸಾಲೇಗಾಂವ, ತೆಲಕುಣಿ, ಚಿತಲಿ, ಬಂಗರಗಾ, ತಡೋಳಾ, ಖಜೂರಿ ವ್ಯಾಪ್ತಿಯಲ್ಲಿ ಹೊಲದ ಬದು ಒಡೆದು ಹಾಳಾಗಿದೆ. ಮಟಕಿ, ಹೆಬಳಿ, ತೀರ್ಥ, ಶಕಾಪುರ, ಪಡಸಾವಳಿ ಗ್ರಾಮದ ವ್ಯಾಪ್ತಿಯ ಹಳ್ಳ ಕೊಳ್ಳ, ನಾಲಾಗಳಿಂದ ಮಳೆ ಹರಿದು ಅಮರ್ಜಾ ಅಣೆಕಟ್ಟೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ.

ಶುಕ್ರವಾರ ಮಧ್ಯಾಹ್ನ ಮಾದನ ಹಿಪ್ಪರಗಾ ವ್ಯಾಪ್ತಿಯಲ್ಲಿ ಮಳೆ ಸುರಿದ ಪರಿಣಾಮ ನಿಂಗದಳ್ಳಿ ಹಳ್ಳಕ್ಕೆ ನೀರು ತುಂಬಿ ಕೆಲ ಸಮಯ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.ಮೂರು ದಿನಗಳಿಂದ ಮಳೆ ಬರುತ್ತಿರುವದರಿಂದ ಸಹಜವಾಗಿ ರೈತರಲ್ಲಿ ಹರ್ಷ ಮೂಡಿದೆ. ಮುಂಗಾರು ಬಿತ್ತನೆಗೆ ಸಜ್ಜುಗೊಂಡಿದ್ದಾರೆ. ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ ಖರೀದಿಯಲ್ಲಿ ರೈತರು ನಿರತರಾಗಿದ್ದಾರೆ ಎಂದು ಕವಲಗಾದ ರೈತರ ಮಹಾಂತಪ್ಪ ಕಾರಬಾರಿ ತಿಳಿಸಿದರು.

ಮಳೆ ವಿವರ:‌ ಖಜೂರಿ– 140 ಮಿ.ಮೀ. ಆಳಂದ–96 ಮಿಮೀ, ನರೋಣಾ–40 ಮಿಮೀ, ಮಾದನ ಹಿಪ್ಪರಗಾ– 43 ಮಿಮೀ, ಸರಸಂಬಾ– 40 ಮಿಮೀ, ಕೊರಳ್ಳಿ–25 ಮಿಮೀ, ನಿಂಬರ್ಗಾ–31 ಮಿ.ಮೀ ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT