ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಹುಚ್ಚೀರೇಶ್ವರ ಜಾತ್ರೆ

Last Updated 29 ಜನವರಿ 2018, 9:59 IST
ಅಕ್ಷರ ಗಾತ್ರ

ನರೇಗಲ್ಲ: ‘ಯಾವುದು ಹೌದು, ಅದು ಅಲ್ಲ . ಯಾವುದು ಅಲ್ಲ, ಅದು ಹೌದು’ ಎಂದು ನೇರವಾಗಿ, ಸರಳವಾಗಿ ಆತ್ಮಾನುಭಾವದ ಅಮೃತವಾಣಿ ನೀಡಿದ ಕೋಡಿಕೊಪ್ಪಮಠದ ಬ್ರಹ್ಮಜ್ಞಾನಿ ಹುಚ್ಚೀರೇಶ್ವರ ಜಾತ್ರೆಯ ರಥೋತ್ಸವವು ಶನಿವಾರ ಸಾವಿರಾರು ಭಕ್ತರ ನಡುವೆ ವೈಭವದಿಂದ ಜರುಗಿತು.

ಬೆಳಿಗ್ಗೆ 6 ಗಂಟೆಯಿಂದ ಜಾತ್ರೆಯ ಅಂಗವಾಗಿ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು. ಪಟ್ಟಣದ ಸಂಕನಗೌಡ್ರ ಮನೆಯಿಂದ ತೇರಿನ ಕಳಸವನ್ನು ಹಾಗೂ ರಥಕ್ಕೆ ಹಗ್ಗವನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಸಿದ್ನೇಕೊಪ್ಪ ಗ್ರಾಮದಿಂದ ಭಕ್ತಿ ಪೂರ್ವಕವಾಗಿ ಮೆರವಣಿಗೆ ಮೂಲಕ ತರಲಾಯಿತು. ಸಾಯಂಕಾಲ 6 ಗಂಟೆಗೆ ಮಹಾರಥವನ್ನು ಭಕ್ತ ಮಹಾಸಾಗರದಲ್ಲಿ ವಿಜೃಂಭಣೆಯಿಂದ ವೀರಪ್ಪಜ್ಜನ ಮಠದಿಂದ ಪಾದಗಟ್ಟಿಯವರೆಗೆ ಎಳೆಯಲಾಯಿತು.

ಮೆರವಣಿಗೆ ಉದ್ದಕ್ಕೂ ಭಕ್ತರು ‘ಹಠಯೋಗಿ ವೀರಪ್ಪಜ್ಜನವರಿಗೆ ಜೈ’, ‘ತ್ರಿಲೋಕಜ್ಞಾನಿ ಹುಚ್ಚೀರಪ್ಪಜ್ಜಗೆ ಜೈ’, ‘ಯಾವುದು ಹೌದು, ಅದು ಅಲ್ಲ. ಯಾವುದು ಅಲ್ಲ ಅದು ಹೌದು ಎಂದು ನುಡಿದ ಮಹಾ ಪುರುಷನಿಗೆ ಜೈ’, ‘ಹರಹರ ಮಹಾದೇವ’ ಎಂದು ಘೋಷಣೆಗಳನ್ನು ಕೂಗುತ್ತಿದ್ದರು.

ಮೆರವಣಿಗೆಯಲ್ಲಿ ಭಜನೆ, ಜಾಂಝ್‌ ಪಥಕ್, ಡೊಳ್ಳು, ಕರಡಿ ಮಜಲು, ಸಂಗೀತ ವಾದ್ಯಗಳ ತಂಡಗಳು ಭಾಗವಹಿಸಿದ್ದವು. ಭಕ್ತರು ಭಕ್ತಿ ಭಾವದಿಂದ ರಥದತ್ತ ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ನಮನ ಸಲ್ಲಿಸಿದರು.

ಜಾತ್ರೆಯ ಪ್ರಯುಕ್ತ ನರೇಗಲ್ ಹಾಗೂ ಕೋಡಿಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಟ್ರ್ಯಾಕ್ಟರ್, ಎತ್ತಿನ ಬಂಡಿ ಮತ್ತು ಪಾದನಡಿಗೆಯ ಮೂಲಕ ಬಂದು ವೀರಪ್ಪಜ್ಜನ ದರ್ಶನವನ್ನು ಪಡೆದು ತಮ್ಮ ಹರಕೆಯನ್ನು ತೀರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT