6

‘ಅಡುಗೆ ನಂಗೆ ಸ್ಟ್ರೆಸ್‌ ಬಸ್ಟರ್‌’

Published:
Updated:

ಇತ್ತೀಚೆಗೆ   ನಾನು ಯೂಟ್ಯೂಬ್‌ ನೋಡಿಕೊಂಡು ಅಡುಗೆ ಕಲಿಯುತ್ತಿದ್ದೇನೆ. ಈಗ ಕ್ಯುಸಿನ್‌ ಪಾಸ್ತಾ ಮಾಡೋದನ್ನ ಕಲಿತಿದ್ದೇನೆ. ಇದನ್ನು ನಾನು ತುಂಬಾ ಚೆನ್ನಾಗಿ ಮಾಡುತ್ತೇನೆ. ನಮ್ಮ ಮನೆಯವರೆಲ್ಲ ಇಷ್ಟಪಟ್ಟು ತಿಂತಾರೆ. ನಮ್ಮದು ಅವಿಭಕ್ತ ಕುಟುಂಬ. ಮನೆಯಲ್ಲಿ ಅಪ್ಪ– ಅಮ್ಮ, ಅಜ್ಜಿ– ತಾತ, ಅತ್ತೆ– ಮಾವ ಅವರ ಮಕ್ಕಳು ಹೀಗೆ ಏಳೆಂಟು ಜನ ಇದ್ದೀವಿ. ಚಿತ್ರೀಕರಣದಿಂದ ಬಿಡುವು ಸಿಕ್ಕಾಗ ಅವರಿಗೆಲ್ಲಾ ಪಾಸ್ತಾ ಮಾಡಿ ಕೊಡುತ್ತೇನೆ. ಅಡುಗೆ ನಂಗೆ ಸ್ಟ್ರೆಸ್‌ ಬಸ್ಟರ್‌ ಇದ್ದ ಹಾಗೇ. 

ನನಗೆ ಅಡುಗೆ ಮಾಡುವುದಿಷ್ಟ. ಆದರೆ ನಾನು ಅಡುಗೆ ಮಾಡೋದನ್ನ ಕಲಿತಿದ್ದು ಕಳೆದ ಐದಾರು ತಿಂಗಳಿನಿಂದ. ಯೂಟ್ಯೂಬ್‌ ನೋಡಿಕೊಂಡು ಆಗಾಗ ಹೊಸ ರುಚಿ ಪ್ರಯೋಗ ಮಾಡುತ್ತೇನೆ. ಆದರೆ ಇದಕ್ಕೆಲ್ಲಾ ನನಗೆ ತುಂಬಾ ಸಮಯ ಸಿಗಬೇಕು. ಇದಲ್ಲದಿದ್ದರೆ ನಾನು ಅಡುಗೆ ಮನೆಗೆ ಹೋಗುವುದೇ ಇಲ್ಲ. ನನ್ನ ತಿಂಡಿ– ಊಟದ ಜವಾಬ್ದಾರಿ ಎಲ್ಲಾ ಅಮ್ಮನದೇ. ನನಗೆ ಚಿತ್ರಾನ್ನ ಅಂದ್ರೆ ತುಂಬಾ ಇಷ್ಟ. ಅಮ್ಮ ಏಳೆಂಟು ರೀತಿ ಚಿತ್ರಾನ್ನ ಮಾಡ್ತಾರೆ. ಅವೆಲ್ಲಾ ನನ್ನ ಫೇವರಿಟ್‌. 

ನಮ್ಮ ಮನೆಯಲ್ಲಿ ಅಮ್ಮ– ಅಜ್ಜಿಯ ಕೈರುಚಿ ತಿಂದವರು ಅದನ್ನು ಮರೆಯಲು ಸಾಧ್ಯವೇ ಇಲ್ಲ. ನಮ್ಮ ಮನೆ ಅಡುಗೆಯಲ್ಲಿ ಉಪ್ಪು– ಹುಳಿ– ಖಾರ ಕಡಿಮೆ. ಆದರೆ ರುಚಿ ಮಾತ್ರ ಅದ್ಭುತ. ನಮ್ಮನೆಯಲ್ಲಿ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟುನಂತಹ ಕುರುಕುಲು ತಿಂಡಿಗಳನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ. ಹಾಗಾಗಿ ನಾವು ಹೊರಗಡೆಯಿಂದ ಯಾವುದೇ ತಿಂಡಿಗಳನ್ನು ತೆಗದುಕೊಂಡು ಹೋಗುವುದೇ ಕಮ್ಮಿ. 

ನಾನು ಓದು ಮುಗಿದ ಬಳಿಕ ನನ್ನದೇ ಆದ ಕಂಪೆನಿಯೊಂದನ್ನು ಆರಂಭಿಸಿದೆ. ಆಗ ನನಗೆ ತುಂಬಾ ಸಮಯ ಸಿಗುತ್ತಿತ್ತು. ಆಗ ಒಂದಿನ ಆಲೂ ಪರೋಟ, ಪಾಲಾಕ್‌ ಪನ್ನೀರ್‌ ಮಾಡಿದ್ದೆ. ತುಂಬಾ ಚೆನ್ನಾಗಿ ಬಂದಿತ್ತು. ಎಲ್ಲರೂ ಇಷ್ಟಪಟ್ಟು ತಿಂದು ಹೊಗಳಿದ್ದರು. ಅದೇ ನನ್ನ ಮೊದಲ ಅಡುಗೆ.

ಈಗ ಕಿರುತೆರೆಯಲ್ಲಿ ಬ್ಯುಸಿ ಆಗಿರೋದ್ರಿಂದ ಅಡುಗೆ ಮನೆಗೆ ಹೋಗೋಕೆ ಸಮಯ ಸಿಗುವುದೇ ಇಲ್ಲ. ಆದ್ರೆ ಮನೆಯಲ್ಲಿದ್ದಾಗ ಎಲ್ಲರೂ ಸೇರಿಕೊಂಡು, ಏನಾದರೂ ವಿಶೇಷ ಅಡುಗೆ ಮಾಡುವ ಎಂದು ಒಟ್ಟಿಗೆ ಅಡುಗೆ ಮಾಡುತ್ತೇವೆ. ಅದರಲ್ಲಿರುವ ಖುಷಿನೇ ಬೇರೆ. ಹಬ್ಬ– ಹರಿದಿನಗಳಲ್ಲಿ ನಮ್ಮ ಖುಷಿ ಕೇಳುವುದೇ ಬೇಡ. ಮನೆಯಲ್ಲಿ ಗಂಡಸರಿಗೆ ಮನೆ ಅಲಂಕಾರದ ಜವಾಬ್ದಾರಿ ಇದ್ದರೆ, ಹೆಂಗಸರಿಗೆ ಅಡುಗೆ ಮನೆ ಜವಾಬ್ದಾರಿ. ನಮ್ಮ ಅಕ್ಕ– ಪಕ್ಕದ ಮನೆಯವರೂ ನಮ್ಮ ಸಂಬಂಧಿಕರೇ ಆಗಿರುವುದರಿಂದ ಅವರೂ ಈ ಖುಷಿಯಲ್ಲಿ ಪಾಲ್ಗೊಳ್ಳುತ್ತಾರೆ. 

ಇಟಾಲಿಯನ್‌ ಪಾಸ್ತಾ

ಸಾಮಗ್ರಿಗಳು: ಪಾಸ್ತಾ 1 ಪ್ಯಾಕೆಟ್, ಬೆಳ್ಳುಳ್ಳಿ 7 ಎಸಳು, ಈರುಳ್ಳಿ 1, ಮೆಣಸಿನ ಕಾಯಿ 1, ಟೊಮೆಟೊ 2, ಹಸಿಮೆಣಸಿನ ಕಾಯಿ 2, ಟೊಮೆಟೊ ಪೇಸ್ಟ್ ಅರ್ಧ ಕಪ್, ಪುದೀನಾ ಪೇಸ್ಟ್ 1 ಚಮಚ, ಕೆಂಪು ಮೆಣಸಿನ ಪುಡಿ ಅರ್ಧ ಚಮಚ, ಕರಿಮೆಣಸಿನ ಪುಡಿ 1 ಚಮಚ, ಸಕ್ಕರೆ 1 ಚಮಚ, ಉಪ್ಪು, ಎಣ್ಣೆ, ಕ್ಯಾರೆಟ್‌, ತರಕಾರಿಗಳು

ಮಾಡುವ ವಿಧಾನ: ಪಾಸ್ತಾವನ್ನು ತೊಳೆದು ನೀರು, ಉಪ್ಪು ಹಾಕಿ ಬೇಯಿಸಿ. ಬೇಯಿಸುವಾಗ 2 ಹನಿ ಎಣ್ಣೆ ಹಾಕಿ ಆಗ ಪಾಸ್ತಾ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಬೆಂದ ಪಾಸ್ತಾದ ನೀರು ಬಸಿದು ಒಂದು ಪಾತ್ರೆಯಲ್ಲಿ ಹಾಕಿಡಿ. ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಕಾದ ನಂತರ ಅದಕ್ಕೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣದವರೆಗೆ ಹುರಿಯಿರಿ. ನಂತರ ದುಂಡು ಮೆಣಸಿನಕಾಯಿ ಹಾಕಿ ಅದು ಬೇಯುವವರೆಗೆ ಹುರಿಯಿರಿ. ಈಗ ಹಸಿಮೆಣಸಿನಕಾಯಿ, ರುಚಿಗೆ ತಕ್ಕ ಉಪ್ಪು, ಸಕ್ಕರೆ, ಕರಿಮೆಣಸಿನ ಪುಡಿ ಹಾಗೂ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಬೇಕು. ನಂತರ ಟೊಮೆಟೊ ಪೇಸ್ಟ್ ಹಾಕಿ 2 ನಿಮಿಷ ಕುದಿಸಿ ನಂತರ ಅದಕ್ಕೆ ಸಕ್ಕರೆ ಹಾಗೂ ಪುದೀನಾ ಪೇಸ್ಟ್ ಒಂದು ಚಮಚ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಬೇಕು. ಮತ್ತೊಂದು ಪಾತ್ರೆಯಲ್ಲಿ ತುಪ್ಪ ಹಾಕಿ, ಒಂದು ಚಮಚ ಕಡ್ಲೆಹಿಟ್ಟುಅಥವಾ ಕಾರ್ನ್‌ಫ್ಲೋರ್‌ ಹಾಕಿ ಗಂಟು ಆಗದಂತೆ ಮಿಶ್ರ ಮಾಡಬೇಕು. ಈ ಕಡ್ಲೆಹಿಟ್ಟು ಮಿಶ್ರಣಕ್ಕೆ ಕುದಿಸಿದ ಹಾಲು ಹಾಕಿದಾಗ ಅದು ಕ್ರೀಂನಂತೆ ಆಗುತ್ತದೆ. ಈಗ ಎರಡೂ ಮಿಶ್ರಣವನ್ನು ಬೆರೆಸಬೇಕು. ಈ ಮಿಶ್ರಣ ಗಟ್ಟಿಯಾದ  ಮೇಲೆ ಅದಕ್ಕೆ ಬೇಯಿಸಿದ ಪಾಸ್ತಾವನ್ನು ಹಾಕಿ 2 ನಿಮಿಷ ಬೇಯಿಸಿ.ಇದಕ್ಕೆ ಬೇಕಾದ ತರಕಾರಿಗಳನ್ನು ಹಾಕಿಕೊಳ್ಳಬಹುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !