7

ಬೆರಳು ಚೀಪುವಂಥ ರುಚಿಯ ದೇಸಿಡೆಕ್

Published:
Updated:

ಆಕರ್ಷಿಸುವ ಅಂದದ ದೀಪಾಲಂಕಾರ. ಗೋಡೆಗಳ ಮೇಲೆ ಗ್ರಾಮೀಣ ಸೊಗಡಿನ ಚಿತ್ತಾರ. ಮನೆ ರುಚಿ ನೆನಪಿಸುವ ದೇಸಿ ಶೈಲಿಯ ಆಹಾರ...

ನಗರದಲ್ಲಿ ಇತ್ತೀಚೆಗೆ ಪ್ರಾರಂಭವಾದ ಡಾಬಾ ಮಾದರಿಯ ‘ದೇಸಿ ಡೆಕ್‌’ ಹೋಟೆಲ್‌ನ ಶೈಲಿಯಿದು. ‘ಖಾವೊ, ಪಿಯೊ, ರಿಪೀಟ್‌ ಕರೊ (ತಿನ್ನಿ, ಕುಡಿಯಿರಿ, ಮತ್ತದೇ ಪುನರಾವರ್ತಿಸಿ) ಎಂಬುದು ಹೋಟೆಲ್‌ನ ಘೋಷವಾಕ್ಯ. ವಿನ್ಯಾಸ, ರುಚಿಗಾಗಿಯೇ ಮತ್ತೆ ಮತ್ತೆ ಇಲ್ಲಿಗೆ ಬರಬೇಕು ಎನಿಸದಿರದು.

ಹೊಸ ಮಾದರಿಯ ಹೋಟೆಲ್‌ಗೆ ಇನ್ನೂ ಹೊಸತನ ಕಟ್ಟಿಕೊಟ್ಟದ್ದು, ಮರದಿಂದ ತಯಾರಿಸಿದ್ದ ಬ್ಯಾಟ್ ಆಕಾರದ ಟ್ರೇಗಳು (ಸರ್ವಿಂಗ್ ಪ್ಲೇಟ್‌ಗಳು), ಅಲ್ಯೂಮಿನಿಯಂನ ಚೌಕಾಕಾರದ ಊಟದ ತಟ್ಟೆಗಳು.

ಪಹಾಡಿ ಮುರ್ಗ್ ಕಬಾಬ್: ‘ಹದವಾದ ಖಾರ, ಮಸಾಲೆ ಮಿಶ್ರಣದ ಖಾದ್ಯ ಮಾಂಸಾಹಾರ ಪ್ರಿಯರಿಗೆ ವಿಶೇಷ ಪ್ರೀತಿ. ಹೀಗಾಗಿ, ತರಹೇವಾರಿ ಖಾದ್ಯಗಳನ್ನು ಪರಿಚಯಿಸಿದ್ದೇವೆ’ ಎಂದ ಮಂಡ್ಯದ ರಂಗಣ್ಣ (ಹೋಟೆಲ್‌ನ ಸಿಬ್ಬಂದಿ) ಹೋಟೆಲ್‌ನ ಸ್ಪೆಷಲ್ ಖಾದ್ಯ ಎಂದು ಹೇಳಿ ಪಹಾಡಿ ಮುರ್ಗ್‌ ಕಬಾಬ್ ತಂದು ‘ಸರ್ ಟೇಸ್ಟ್‌ ಮಾಡಿ’ ಎಂದು ಹೇಳುತ್ತಲೇ ಚೌಕಾಕಾರದ ಅಲ್ಯೂಮಿನಿಯಂ ತಟ್ಟೆಗೆ ಬಡಿಸಿದರು.ಅದನ್ನು ನೋಡುತ್ತಿದ್ದಂತೆ  ಹಸಿವು ಹೆಚ್ಚಿತು. ಬೇಕಿದ್ದಷ್ಟೇ ಮಸಾಲೆಯಲ್ಲಿ ಉರುಳಾಡಿ, ಬೆಂಕಿಯಲ್ಲಿ ಸುಟ್ಟು ಹದವಾಗಿ ಬೆಂದಿದ್ದ ಕೋಳಿ ಮಾಂಸದ ತುಂಡನ್ನು ಬಾಯಿಯೊಳಗೆ ಇಡುತ್ತಿದ್ದಂತೆ ವಾವ್! ಎನ್ನುವ ಉದ್ಗಾರ ತಾನಾಗೇ ಹೊರಳಿತು. ಮಸಾಲೆ, ಪುದಿನಾ, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿಯ ಮಿಶ್ರಣ ಮಿತಿ ಮೀರದಿದ್ದರಿಂದ ಸ್ವಾದಿಷ್ಟಕರ ರುಚಿಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಮುರ್ಗ್‌ ಕಬಾಬ್‌ಗೆ ಉಪ್ಪು ಕಡಿಮೆಯೆನಿಸಿತು. ಕೂಡಲೇ ರಂಗಣ್ಣನಿಂದ ಬಂದ ಉತ್ತರ, ಸರ್ ಪುದಿನಾ ಚಟ್ನಿಯೊಂದಿಗೆ ಅದನ್ನು ಸೇವಿಸಿ, ಆಗ ನಿಮಗೆ ಆ ಕೊರತೆ ಕಾಣದು.

ಕೋಳಿ ಮಾಂಸವನ್ನು ಮಸಾಲೆಯೊಂದಿಗೆ ಬೆರೆಸಿ, ಗಂಟೆಗಟ್ಟಲೆ ನೆನೆಸಿಟ್ಟು, ಬೆಂಕಿಯಿಂದ ಸುಟ್ಟು ತಯಾರಿಸಿದ್ದರಿಂದ ಕಬಾಬ್ ಸ್ವಾದ ಹೆಚ್ಚಿತ್ತು. ಗರಿಗರಿಯಾಗಿದ್ದ ಕಬಾಬ್ ಒಳಗಿನ ಕೋಳಿ ಮಾಂಸ ತನ್ನ ಮೃದುತ್ವವನ್ನು ಉಳಿಸಿಕೊಂಡಿತ್ತು. ಇನ್ನೊಂದಿಷ್ಟು ರುಚಿ ನೋಡಿ ಎನ್ನುತ್ತಲೆ ಚಿಕನ್ ಟಿಕ್ಕಾ ನೀಡಿದರು. ಖಾರ ಕಡಿಮೆ ಎನಿಸಿತು.

ಹೋಟೆಲ್‌ನ ನಿರ್ದೇಶಕಿ ಕೃಪಾಲಿನಿ, ‘ಇಲ್ಲಿಗೆ ಬರುವವರು ಆಹಾರ ಹಾಗೂ ಸರ್ವಿಸ್‌ನಲ್ಲಿ ರಿಚ್‌ನೆಸ್ ಬಯಸುತ್ತಾರೆ. ಅದಕ್ಕಾಗಿಯೇ ನಮ್ಮಲ್ಲಿ ಬಾಸುಮತಿ ಅಕ್ಕಿಯನ್ನೇ ಬಳಸುತ್ತೇವೆ’ ಎಂದ ಕೂಡಲೇ ಜೀರಾ ರೈಸ್ ತೆಗೆದುಕೊಂಡ ಬಂದು ನಿಂತರು ರಂಗಣ್ಣ.

ಬಟರ್ ಚಿಕನ್ ಮಸಾಲೆ ತಿನ್ನಲು ರುಚಿಕರವಾಗಿತ್ತು. ತುಂಬಿದ ಹೊಟ್ಟೆ ಹೊತ್ತು ಭಾರವಾದ ಹೆಜ್ಜೆಗಳನ್ನಿಟ್ಟು ಹೊರನಡೆದೆ. ಹೊರಬಂದ ಬಳಿಕವೂ ಮನದಲ್ಲಿ ಉಳಿದದ್ದು, ರಂಗಣ್ಣನ ಆತ್ಮೀಯತೆ, ಅದ್ಭುತವಾದ ರುಚಿ ಹಾಗೂ ದೇಸಿ ಸೊಗಡಿನ ದೇಸಿ ಡೆಕ್‌ನ ಒಳ ವಿನ್ಯಾಸ.

ಮನೆ ರುಚಿ ಪ್ರೆಸೆಂಟೇಷನ್‌
‘ಮನೆಯ ರುಚಿಯನ್ನೇ ಹೆಚ್ಚು ಪ್ರಸೆಂಟೇಷನ್‌ ಜೊತೆ ಕೊಡುತ್ತೇವೆ. ದೇಶದ ವಿವಿಧೆಡೆಯ ವಿಶೇಷ ಖಾದ್ಯ ಲಭ್ಯ. ಟೇಸ್ಟ್‌ ಮೇಕರ್ಸ್‌ ಆಗಲೀ, ಬಣ್ಣಗಳಾಗಲೀ ಬಳಸುವುದಿಲ್ಲ. ಸೋಡಾ ಸಹ ವರ್ಜ್ಯ’ ಎಂದರು ಹೋಟೆಲ್‌ನ ಕೃಪಾಲಿನಿ.

‘ಲಖನೌ ಡಿಶ್ ಆದ ಗಲೌತಿ ಕಬಾಬ್ ನಮ್ಮ ವಿಶೇಷ. ಲಖನೌ ಹೊರತುಪಡಿಸಿ ಅದೇ ರುಚಿ ಸಿಗುವುದು ನಮ್ಮಲ್ಲಿ ಮಾತ್ರ’ ಎಂದರು.

‘ಗುಲಾಬ್ ಜಾಮೂನ್ ಚೀಸ್‌ ಕೇಕ್ ನಮ್ಮದೇ ವಿಶೇಷ. ಬಟರ್ ಚಿಕನ್ ಮಸಾಲ ಎಲ್ಲ ಕಡೆ ಸಿಕ್ಕರೂ ಇಲ್ಲಿಯ ರುಚಿ ಬೇರೆಡೆ ಸಿಗಲ್ಲ. 20 ವರ್ಷದ ಹಿಂದೆ ಮಿಸ್ಟರ್ ಕಪೂರ್ ಎಂಬುವರ ಧಾಬಾದಲ್ಲಿ ದಾಲ್‌ ಮಖ್ನಿ ಫೇಮಸ್ ಆಗಿತ್ತು. ಅದನ್ನೇ ಮತ್ತೆ ಪರಿಚಯಿಸಿದ್ದು, ಅದಕ್ಕೆ ಕಪೂರ್ ದಿ ದಾಲ್‌ ಮಖಾನಿ ಎಂದು ಹೆಸರಿಟ್ಟಿದ್ದೇವೆ.’

ಈ ಹೋಟೆಲ್‌ನ ಬಾಣಸಿಗರೇ ಅಡುಗೆಗೆ ಬೇಕಾದ ಮಸಾಲೆ ಪುಡಿಗಳನ್ನು ತಯಾರಿಸುತ್ತಾರೆ. ಮುಂದಿನ ದಿನಗಳಲ್ಲಿ ಹೋಟೆಲ್‌ ಬೆಳೆದಂತೆಲ್ಲ ಹೊಸದೆನಿಸುವ ಖಾದ್ಯಗಳನ್ನು ಪರಿಚಯಿಸುವ ಇರಾದೆಯನ್ನು ಹೋಟೆಲ್‌ನ ಸಿಬ್ಬಂದಿ ಹೊಂದಿದ್ದಾರೆ. ಖಾರ ಇಷ್ಟವಾಗುವವರಿಗೆ ಪ್ರತ್ಯೇಕ ಖಾದ್ಯಗಳು ಲಭ್ಯ.

ಸಸ್ಯಾಹಾರಿ ಖಾದ್ಯಗಳು
ಈ ಹೋಟೆಲ್‌ನಲ್ಲಿ ಮಾತ್ರ ಸಿಗುವಂತಹ ವಿಶೇಷ ಸಸ್ಯಾಹಾರಿ ಖಾದ್ಯಗಳು ಹಲವು ಇವೆ. ಅದರಲ್ಲಿ ಪನೀರ್‌ ಬುರ್ಜಿ ಖಾದ್ಯ ಕೂಡ ಒಂದು. ಹೋಟೆಲ್‌ನಲ್ಲೇ ತಯಾರಿಸುವಂತಹ ಬ್ರೂಯಿಸ್‌ ಬ್ರೆಡ್‌ ಮತ್ತು ಪನೀರ್‌ ಬಳಸಿ ತಯಾರಿಸುವ ಈ ಖಾದ್ಯ ರುಚಿಕರವಾಗಿರುತ್ತದೆ. ಪನೀರ್‌ ಪುಟ್ಟ ಚೂರುಗಳನ್ನಾಗಿ ಮಾಡಿ ಬ್ರೆಡ್‌ಗೆ ಬೆಣ್ಣೆ ಬಳಿದು ಒಟ್ಟಿಗೆ ನೀಡಲಾಗುತ್ತದೆ. ಮೃದುವಾದ ಬ್ರೆಡ್‌ ಜತೆ ಪನೀರ್ ಸವಿಯಲು ಚೆನ್ನಾಗಿರುತ್ತದೆ. 

 ಕಾರ್ನ್ ಪಟ್ಟೀಸ್‌. ಅಮೆರಿಕ ಮೂಲದ ಈ ಖಾದ್ಯವನ್ನು ಸಿಹಿ ಜೋಳ, ಆಲೂಗಡ್ಡೆ ಬಳಸಿ ಭಾರತೀಯ ಶೈಲಿಯ ಸ್ಪರ್ಶ ನೀಡಲಾಗಿದ. ಹಸಿ ಮೆಣಸು ಖಾರದ ಜತೆಗೆ ಇದನ್ನು ಸವಿಯಬಹುದು. 

ಮುಖ್ಯ ಖಾದ್ಯವಾಗಿ ಮಲೈಕೋಫ್ತಾ ಲಭಿಸುತ್ತದೆ. ಇತರೆ ಹೋಟೆಲ್‌ಗಳಲ್ಲಿ ದೊರೆಯುವ ಮಲೈಕೋಫ್ತಾಗೂ ಇದಕ್ಕೂ ತಂಬಾ ವ್ಯತ್ಯಾಸವಿದೆ. ಮೋದಕದ ರೀತಿ ಇರುವ ಇದನ್ನು, ಬ್ರೆಡ್‌, ಪನೀರ್‌ ಮತ್ತು ಗೋಡಂಬಿ ಬಳಸಿ ತಯಾರಿಸಲಾಗುತ್ತದೆ. ಬೆಣ್ಣೆ ಹಚ್ಚಿರುವ ರೋಟಿ ಅಥವಾ  ಜೀರಾ ರೈಸ್‌, ಪ್ಲೈನ್ ರೈಸ್‌ ಜತೆ ಸವಿಯಬಹುದು.

ಮೊಸರನ್ನವನ್ನೂ ಬಾಸುಮತಿ ಅಕ್ಕಿಯಿಂದ ತಯಾರಿಸುವುದು ವಿಶೇಷ. ಒಟ್ಟು ಒಂಬತ್ತು ರೀತಿಯ ರೈಸ್ ಐಟಂಗಳು ಲಭಿಸುತ್ತವೆ.

ವಿಶೇಷ ಪೇಯಗಳು?
ಫ್ಯಾಷನ್ ಫ್ರೂಟ್ ಸಿರಪ್‌ಬಳಸಿ ಫ್ಯಾಷನ್ ಫಿಜ್‌ ಎಂಬ ವಿಶೇಷ ಪೇಯವನ್ನು ಇಲ್ಲಿ ತಯಾರಿಸಲಾಗುತ್ತದೆ. ಉಪ್ಪು, ಸಕ್ಕರೆ, ನಿಂಬೆಹುಳಿ ಮತ್ತು ಕೊತ್ತಂಬರಿ ಸೊಪ್ಪು ಬಳಸಿ ತಯಾರಿಸುವ ಈ ಪೇಯ ಸವಿಯಲು ರುಚಿಕರವಾಗಿರುತ್ತದೆ. ಕೊತ್ತಂಬರಿ ಸ್ವಾದವೇ ಈ ಪೇಯದ ಆಕರ್ಷಣೆ. ಇದಲ್ಲದೇ ಲಂಚ್‌ ಬ್ರೇಕ್‌ ಎಂಬ ಮತ್ತೊಂದು ಪೇಯವನ್ನು ಸೀಬೆಹಣ್ಣಿನ ಸಿರಪ್‌ನಿಂದ ತಯಾರಿಸಲಾಗುತ್ತದೆ. ಇದಕ್ಕೆ ಉಪ್ಪು, ನಿಂಬೆಹುಳಿ, ಕಾರದಪುಡಿ ಮತ್ತು ಮೆಣಸು ಪುಡಿ ಬಳಸಿ ತಯಾರಿಸಲಾಗುತ್ತದೆ. ಸೀಬೆಹಣ್ಣಿನ ಸ್ವಾದ ನೀಡುವ ಈ ಪೇಯ ಬಾಯೊಳಗೆ ನೀರೂರಿಸುತ್ತದೆ. 

**

ದೇಸಿ ಡೆಕ್‌ ಅಂದ್ರೆ ರಿಸೆಂಟ್ ಫುಡ್ ಲೋಕಲ್ ಟಚ್. ಹೊಸ ಆಹಾರ, ಹೊಸ ಸೇವೆಯ ತಾಣ. ತಿನ್ನಿರಿ, ಕುಡಿಯಿರಿ ಮತ್ತೆ ಬನ್ನಿರಿ
– ಕೃಪಾಲಿನಿ, ದೇಸಿ ಡೆಕ್ ನಿರ್ದೇಶಕಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !