ಬೆಲ್ಲದ ಕಾಫಿ, ಮುದ್ದೆ ಉಪ್ಸಾರು...

7
ರಸಾಸ್ವಾದ

ಬೆಲ್ಲದ ಕಾಫಿ, ಮುದ್ದೆ ಉಪ್ಸಾರು...

Published:
Updated:

ಬದಲಾದ ಆಹಾರ ಸಂಸ್ಕೃತಿಯಲ್ಲಿ ಸಿರಿಧಾನ್ಯಗಳು ಜನರ ಮನೆ–ಮನ ಆವರಿಸಿವೆ. ಅನ್ನದ ಜಾಗವನ್ನು ಆರ್ಕಾ ಆವರಿಸಿದೆ, ಉಪ್ಪಿಟ್ಟಿನ ಸ್ಥಳವನ್ನು ಊದಲು, ಪಲಾವ್‌ ಜಾಗದಲ್ಲಿ ಸಾಮೆ ಬಂದಿದೆ. ಆರೋಗ್ಯ ಭಾಗ್ಯ ಕರುಣಿಸುತ್ತಿರುವ ಈ ಸಾವಯವ ತಿನಿಸುಗಳು ಬಾಯಿರುಚಿಯನ್ನು ಬದಲಾಯಿಸಿವೆ. ಈಚೆಗೆ ಹೋಟೆಲ್‌ಗಳೂ ಸಾವಯವ ಭಕ್ಷ್ಯಗಳಿಂದ ಗ್ರಾಹಕರಿಗೆ ಇಷ್ಟವಾಗಿವೆ. ಅಂತಹ ಹೋಟೆಲೊಂದು ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿದೆ.

ಮದ್ದೂರು ಪಟ್ಟಣ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ‘ಹೋಟೆಲ್‌ ಶಿವದಾಸ್‌’ ಸಾವಯವ ತಿನಿಸುಗಳಿಗೆ ಪ್ರಸಿದ್ಧಿ ಪಡೆದಿದೆ. ಸಿರಿಧಾನ್ಯಗಳಿಂದ ತಯಾರಿಸಿದ ಹಲವು ಭಕ್ಷ್ಯಗಳು ಹೆದ್ದಾರಿಯಲ್ಲಿ ಓಡಾಡುವ ಜನರ ಮನಸ್ಸಿಗೊಪ್ಪಿವೆ. ಸಾವಯವ ಪೊಂಗಲ್‌, ಉಪ್ಪಿಟ್ಟು, ಬಿಸಿಬೇಳೆ ಬಾತ್‌, ದೋಸೆ, ಪಲಾವ್‌ ಜನರ ಮನಸೂರೆಗೊಂಡಿವೆ. ಕೆಲವು ಗ್ರಾಹಕರು ಬೆಂಗಳೂರು ಅಥವಾ ಮೈಸೂರು ಬಿಡುವುದಕ್ಕೆ ಮೊದಲು ಹೋಟೆಲ್‌ ಶಿವದಾಸ್‌ಗೆ ಕರೆ ಮಾಡಿ ಸಾವಯವ ತಿನಿಸು ಕಾಯ್ದಿರಿಸಿ ಬಿಡುತ್ತಾರೆ. ಈ ತಿನಿಸುಗಳಿಗೆ ಕಾಯಂ ಗ್ರಾಹಕರಿದ್ದಾರೆ.

ಸಾವಯವ ಕೃಷಿ ಪದ್ಧತಿಯಿಂದ ಬೆಳೆದ ಸಾವೆ, ನವಣೆ, ಆರ್ಕಾ, ಕೊರಲು, ಊದಲು ಮುಂತಾದ ಸಿರಿಧಾನ್ಯಗಳ ತಿನಿಸು ಇಲ್ಲಿ ಸಿಗುತ್ತವೆ. ಮದ್ದೂರು ತಾಲ್ಲೂಕು ಗೂಳೂರದೊಡ್ಡಿ ಗ್ರಾಮದ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ರೈತ ಕೃಷ್ಣೇಗೌಡರು ತಮ್ಮ ಜಮೀನಿನಲ್ಲಿ ಬೆಳೆದ ಸಾವಯವ ಸಿರಿಧಾನ್ಯಗಳು ಈ ಹೋಟೆಲ್‌ ಬಾಣಸಿಗರ ಕೈಯಿಂದ ತಿನಿಸುಗಳ ರೂಪ ಪಡೆಯುತ್ತಿವೆ. ಆರ್ಕಾದಿಂದ ತಯಾರಿಸಿದ ಬಿಸಿಬೇಳೆ ಬಾತ್‌ಗೆ ಅತೀ ಹೆಚ್ಚು ಬೇಡಿಕೆ ಇದೆ. ಕೊರಲು, ಸಾಮೆ, ಊದಲಿನಿಂದ ತಯಾರಾದ ಉಪ್ಪಿಟ್ಟು ಜನರಿಗೆ ಇಷ್ಟವಾಗಿವೆ.

ಬೆಲ್ಲದ ಕಾಫಿ, ಟಿ, ಪಾಯಸ: ಹೋಟೆಲ್‌ ಶಿವದಾಸ್‌ನಲ್ಲಿ ತಯಾರಾಗುವ ಸಾವಯವ ಬೆಲ್ಲದ ಕಾಫಿ, ಟೀ ಹಾಗೂ ಪಾಯಸ ಬಹಳ ಪ್ರಸಿದ್ಧಿ ಪಡೆದಿವೆ. ರಾಸಾಯನಿಕ ಬೆಲ್ಲ ನೋಡಿದರೆ ಜನರು ಮೂಗು ಮುರಿಯುತ್ತಿದ್ದಾರೆ. ಹೀಗಾಗಿ ಸಾವಯವ ಬೆಲ್ಲ ಪ್ರಸಿದ್ಧಿ ಪಡೆಯುತ್ತಿದೆ. ವಾರಾಂತ್ಯಗಳಲ್ಲಿ ಇಲ್ಲಿ ಸಾವಿರಕ್ಕೂ ಹೆಚ್ಚು ಕಾಫಿ–ಟೀ ಖರ್ಚಾಗುತ್ತಿವೆ. ಹೆದ್ದಾರಿ ಪ್ರಯಾಣಿಕರು ಮಾತ್ರವಲ್ಲದೇ ಸ್ಥಳೀಯ ಜನರು, ಮುಂಜಾನೆ– ಸಂಜೆ ವಾಕಿಂಗ್‌ ಬರುವ ವಿಹಾರಿಗಳೂ ಇಲ್ಲಿ ಬಂದು ಬೆಲ್ಲದ ಕಾಫಿ–ಟೀ ಕುಡಿದು ಹೋಗುತ್ತಾರೆ. ಹೋಟೆಲ್‌ ಸಿಬ್ಬಂದಿ, ಗ್ರಾಹಕರಿಗೆ ಬೆಲ್ಲದ ಕಾಫಿ, ಟೀ ಬಗ್ಗೆ ವಿವರಣೆ ನೀಡಿ ವಿತರಣೆ ಮಾಡುತ್ತಾರೆ. ಬೆಲ್ಲದ ಪಾಯಸ ಮಕ್ಕಳು ಹಾಗೂ ಮಹಿಳೆಯರ ಗಮನ ಸೆಳೆದಿದೆ.

ಮುದ್ದೆ, ಉಪ್ಸಾರು, ಸೊಪ್ಪು: ರಾಗಿ ಮುದ್ದೆ, ಉಪ್ಸಾರು, ಸೊಪ್ಪು ಶಿವದಾಸ್‌ ಹೋಟೆಲ್‌ನ ವಿಶೇಷ. ಮಂಗಳವಾರ ತಯಾರಾಗುವ ಮಸ್ಸೊಪ್ಪು ಊಟದ ನಾಲಿಗೆಯ ರುಚಿ ಬಲುದಿನ ಉಳಿಯುವಂತಿದೆ. ಶನಿವಾರ ಮುದ್ದೆ, ಮೊಳಕೆಕಾಳಿನ ಊಟವನ್ನು ಜನ ಹುಡುಕಿಕೊಂಡು ಬರುತ್ತಾರೆ. ಉಳಿದಂತೆ ಪ್ರತಿದಿನ ಉಪ್ಸಾರು, ಮುದ್ದೆ ಕಾಯಂ ಆಗಿ ಇರುತ್ತದೆ. ಮುದ್ದೆ ಊಟದೊಂದಿಗೆ ಸಿಗುವ ಸೊಪ್ಪಿನ ಬೋಂಡ ಜನರ ಅಚ್ಚುಮೆಚ್ಚಿನ ತಿನಿಸು. ಸೊಪ್ಪುಗಳಿಂದ ತಯಾರಾಗುವ ಇದಕ್ಕೆ ಜನರು ‘ಆಯುರ್ವೇದಿಕ್‌ ಬೋಂಡ’ ಎಂದೇ ನಾಮಕರಣ ಮಾಡಿದ್ದಾರೆ.

‘ತಿಳಿತಿಳಿಯಾಗಿರುವ ಉಪ್ಸಾರಿನ ರುಚಿ ಜನರಿಗೆ ಇಷ್ಟ. ಸಾಂಬಾರ್‌ಗೆ ನಾವು ಸಿದ್ಧ ಸಾಂಬಾರ್‌ ಪುಡಿ ಬಳಸುವುದಿಲ್ಲ. ಮಾಲೀಕರು ಪುಡಿಯ ಸಾಮಗ್ರಿಗಳನ್ನು ಮನೆಯಲ್ಲೇ ತಯಾರಿಸಿ, ಕುಟ್ಟಿಸಿ ತರುತ್ತಾರೆ. ಹೀಗಾಗಿ ಸಾಂಬಾರ್‌ ರುಚಿ ವಿಶೇಷವಾಗಿದೆ’ ಎಂದು ಹೋಟೆಲ್‌ನ ಬಾಣಸಿಗ ಶ್ರೀನಿವಾಸ್‌ ಹೇಳುತ್ತಾರೆ.

ಅಣಬೆ ತಿನಿಸು:  ಮಶ್ರೂಮ್‌ ಡ್ರೈ, ಪೆಪ್ಪರ್‌ ಡ್ರೈ, ಗೋಬಿ, ಮಂಚೂರಿ, ಚಿಲ್ಲಿ ಮುಂತಾದ ತಿನಿಸು ಇಲ್ಲಿ ತಯಾರಾಗುತ್ತವೆ. ಉತ್ತಮ ಪರಿಸರದಲ್ಲಿ ಬೆಳೆದ ಅಣಬೆಯನ್ನು ತರಿಸುತ್ತಾರೆ.

ಮಂತ್ರಿಗಳಿಗೆ ಮುದ್ದೆ ಊಟ: ಶಿವದಾಸ್‌ ಹೋಟೆಲ್‌ನ ಮುದ್ದೆ ಊಟ ಸ್ಥಳೀಯ ಶಾಸಕರು ಹಾಗೂ ಸಚಿವರಿಗೆ ಬಲು ಇಷ್ಟ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮದ್ದೂರಿಗೆ ಬಂದಾಗ ಇದೇ ಹೋಟೆಲ್‌ನಿಂದ ಮುದ್ದೆ ಊಟ ರವಾನೆಯಾಗುತ್ತದೆ. ಸಚಿವ ಸಿ.ಎಸ್‌.ಪುಟ್ಟರಾಜು, ಶಾಸಕ ಎಂ.ಶ್ರೀನಿವಾಸ್‌ ಸೇರಿ ಸ್ಥಳೀಯ ಜನಪ್ರತಿನಿಧಿಗಳು ಇಲ್ಲಿಯ ರುಚಿ ಕಂಡಿದ್ದಾರೆ.

ಮಾಲೀಕ, ಮಾಜಿ ಯೋಧ!
ಹೋಟೆಲ್‌ ಶಿವದಾಸ್‌ ಮಾಲೀಕರಾದ ಸಿ.ಕೆ.ಸತೀಶ್‌ ಮಾಜಿ ಯೋಧರು. ಭಾರತೀಯ ಸೇನೆದಲ್ಲಿ 17 ವರ್ಷ ಸೇವೆ ಮಾಡಿದ್ದಾರೆ. ಯೋಧನಾಗಿ ದೇಶದ ನಾನಾ ಭಾಗದಲ್ಲಿ ಕೆಲಸ ಮಾಡಿರುವ ಅವರು ಎಲ್ಲಾ ಭಾಗದ ರುಚಿ ಅರಿತವರು. ಎಲ್ಲಾ ರುಚಿಯನ್ನು ಸೇರಿಸಿ ಶಿವದಾಸ್‌ ಹೋಟೆಲ್‌ನಲ್ಲಿ ಹೊಸ ರುಚಿಯೊಂದನ್ನು ಕಂಡುಕೊಂಡಿದ್ದಾರೆ. ಹೋಟೆಲ್‌ ಗೋಡೆಯ ಮೇಲೆ ಸತೀಶ್‌ ಸಮವಸ್ತ್ರಧಾರಿಯಾಗಿರುವ ಭಾವಚಿತ್ರ ಹಾಕಲಾಗಿದೆ. ಗ್ರಾಹಕರು ಕುತೂಹಲಕ್ಕೆ ಯೋಧನ ಅನುಭವಗಳನ್ನು ಕೇಳುತ್ತಾರೆ. ತಿನಿಸುಗಳ ಸವಿಯೊಂದಿಗೆ ಅನುಭವಗಳ ಕಥನ ಹೋಟೆಲ್‌ನಲ್ಲಿ ಬಿಚ್ಚಿಕೊಳ್ಳುತ್ತದೆ.

ಶಿವದಾಸ್‌ ಹೋಟೆಲ್‌ ಆರಂಭವಾಗಿ ಎರಡು ವರ್ಷಗಳಾಗಿವೆ.  ಸತೀಶ್‌ ಅವರ ಮಾವ ತಿಮ್ಮದಾಸೇಗೌಡ ಮದ್ದೂರಿನಲ್ಲಿ ಕಳೆದ 35 ವರ್ಷಗಳಿಂದ ಹೋಟೆಲ್‌ ಉದ್ಯಮದಲ್ಲಿದ್ದಾರೆ. ಅವರು‘ಹೋಟೆಲ್‌ ತಿಮ್ಮದಾಸ್‌’ ಮಾಲೀಕರು. ಹೋಟೆಲ್‌ಗಳಲ್ಲಿ ರಾಗಿ ಮುದ್ದೆ ಪರಿಚಯ ಮಾಡಿದ್ದೇ ತಿಮ್ಮದಾಸೇಗೌಡರು‌. ಶಿಂಷಾ ನದಿ ದಡದಲ್ಲಿ ಶೆಡ್‌ ನಿರ್ಮಿಸಿಕೊಂಡು ಅವರು ಮುದ್ದೆ ಹೋಟೆಲ್‌ ನಡೆಸುತ್ತಿದ್ದರು. 

ಸೇನೆಯಲ್ಲಿ ಸೇವೆ ಮುಗಿಸಿ ಬಂದ ಸತೀಶ್‌, ಮಾವನ ಮಾರ್ಗದರ್ಶನದಲ್ಲಿ ಹೋಟೆಲ್‌ನಲ್ಲಿ ತೊಡಗಿದರು. ಕೇವಲ ಎರಡು ವರ್ಷಗಳಲ್ಲಿ ಅಪಾರ ಸಂಖ್ಯೆಯ ಗ್ರಾಹಕರನ್ನು ಗಳಿಸುವಲ್ಲಿ ಯಶಸ್ವಿಯಾದರು. ಶುಚಿ ಹಾಗೂ ರುಚಿಗೆ ಮಹತ್ವ ಕೊಟ್ಟಿರುವ ಸತೀಶ್‌, ಹೋಟೆಲ್‌ ಹೆಸರಿನ ಮುಂದೆ ‘ಕೈಶುಚಿ ಬಾಯ್‌ ರುಚಿ’ ಸಾಲು ಸೇರಿಸಿದ್ದಾರೆ.

*
ಭಾರತೀಯ ಸೇನೆಯಲ್ಲಿ ಆರೋಗ್ಯಯುತ ಊಟಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಅದೇ ಮಾದರಿಯನ್ನು ನಮ್ಮ ಹೋಟೆಲ್‌ನಲ್ಲಿ ಅನುಷ್ಠಾನಗೊಳಿಸಿದ್ದೇನೆ. ಜನರ ಆರೋಗ್ಯದ ಬಗ್ಗೆ ಸಣ್ಣ ಕಾಳಜಿ ನಮ್ಮದು. ಹೀಗಾಗಿ ಸಿರಿಧಾನ್ಯ, ಸಾವಯವ ಬೆಲ್ಲ ಬಳಸುತ್ತಿದ್ದೇವೆ. ಸಿರಿಧಾನ್ಯಗಳಿಂದ ಇನ್ನೂ ಹೆಚ್ಚಿನ ತಿನಿಸು ಮಾಡುವ ಉದ್ದೇಶವಿದೆ.
–ಸಿ.ಕೆ.ಸತೀಶ್‌, ಶಿವದಾಸ್‌ ಹೋಟೆಲ್‌ ಮಾಲೀಕ

*
ಬೆಲೆಗಳು: ಸಾವಯವ ತಿನಿಸುಗಳು ಪ್ಲೇಟ್‌ಗೆ ₹ 45
ರಾಗಿ ಮುದ್ದೆ ಊಟ ₹ 60
ಸಂಪರ್ಕ ಸಂಖ್ಯೆ: 7899499959

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !