ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಡಿಯಲ್ಲಿ ಮನೆ ಕಟ್ಟಿಕೊಂಡರೆ ತಪ್ಪೇ

ನಗರಸಭೆ ವಿಶೇಷ ಸಾಧಾರಣ ಸಭೆಯಲ್ಲಿ ಸದಸ್ಯ ಬಿ.ಕಾಂತರಾಜ್ ಪ್ರಶ್ನೆ
Last Updated 16 ಮಾರ್ಚ್ 2018, 6:52 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜೀವ್ ಆವಾಸ್ ಯೋಜನೆಯಡಿ ಆಯ್ಕೆಯಾದ ಫಲಾನುಭವಿಯ ಅಣ್ಣನೋ ಅಥವಾ ತಮ್ಮನೋ ಸೂರಿಲ್ಲದೆ, ಈಗಾಗಲೇ ಕಟ್ಟಿದ ಮನೆಯ ಮೇಲೆ ಮತ್ತೊಂದು ಮನೆ ನಿರ್ಮಿಸಿಕೊಂಡರೆ ತಪ್ಪೇ? ಅವರು ಫಲಾನುಭವಿಗಳಲ್ಲವೇ ಎಂದು ನಗರಸಭೆ ಸದಸ್ಯ ಬಿ.ಕಾಂತರಾಜ್ ಪ್ರಶ್ನಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಮಂಜುನಾಥ ಗೊಪ್ಪೆ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ವಸತಿ ವಂಚಿತ ಅರ್ಹ ಫಲಾನುಭವಿ ನಿಯಮಾನುಸಾರ ಮನೆ ಕಟ್ಟಿಕೊಂಡರೆ ಖಂಡಿತ ತಪ್ಪಲ್ಲ. ಆದರೆ, ಒಬ್ಬ ಫಲಾನುಭವಿ ಅಗತ್ಯಕ್ಕಿಂತ ಹೆಚ್ಚು ಮನೆ ನಿರ್ಮಿಸಿಕೊಳ್ಳುವುದು ತಪ್ಪು. ಅಂಥವರ ವಿರುದ್ಧ ಬೇಕಾದರೆ ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಸರಿಯಾದ ಮಾಹಿತಿಯನ್ನೇ ಪಡೆಯದೇ ನಿರ್ಗತಿಕರಿಗೆ ಅನ್ಯಾಯ ಮಾಡಬೇಡಿ’ ಎಂದು ನಗರಸಭೆಯ ಅಧಿಕಾರಿಗಳಿಗೆ ಹೇಳಿದರು.

‘ನಿವೇಶನ, ವಸತಿ ಸೌಲಭ್ಯ ಇಲ್ಲದವರಿಗಾಗಿಯೇ ಸರ್ಕಾರಗಳು ಮನೆಗಳನ್ನು ನಿರ್ಮಿಸಿಕೊಳ್ಳಲು ಈ ಯೋಜನೆ ಜಾರಿಗೆ ತಂದಿದೆ. ಅದರ ಮಾನದಂಡಗಳೇನು ಎಂಬುದನ್ನು ತಿಳಿದುಕೊಂಡು ಅರ್ಹರ ಆಯ್ಕೆ ಮಾಡುವ ಮೂಲಕ ನಿರ್ಗತಿಕರಿಗೆ ಸೂರು ಕಲ್ಪಿಸಿ. ಅದನ್ನು ಬಿಟ್ಟು ಏಕಾಏಕಿ ಶಿಸ್ತು ಕ್ರಮಕ್ಕೆ ಮುಂದಾಗುವುದು ಖಂಡಿತ ಸರಿಯಲ್ಲ. ಯಾರಿಗೂ ಅನ್ಯಾಯವಾಗದಂತೆ ಎಚ್ಚರವಹಿಸಿ’ ಎಂದು ಸಲಹೆ ನೀಡಿದರು.

ಯಾವುದೇ ಒಂದು ಯೋಜನೆ ಪ್ರಗತಿಯಲ್ಲಿ ಕುಂಠಿತವಾಗಿರುವ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ಉತ್ತಮ ನಿರ್ಣಯಕ್ಕೆ ಬರಬೇಕು. ಅದನ್ನು ಬಿಟ್ಟು ಇಲ್ಲಸಲ್ಲದ ಚರ್ಚೆ ಮಾಡುತ್ತ ಸಮಯ ವ್ಯರ್ಥ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷ ಮಂಜುನಾಥ ಗೊಪ್ಪೆ ಮಾತನಾಡಿ, ‘ಪ್ರಗತಿ ಕುಂಠಿತವಾಗಿರುವ ಬಗ್ಗೆ ಪ್ರಶ್ನಿಸುವ ಅಧಿಕಾರ ಅಧ್ಯಕ್ಷರಿಗೆ ಇದೆ. ಲೋಪದೋಷಗಳಾಗಿದ್ದರೆ ಅಧಿಕಾರಿಗಳನ್ನು ಕೇಳುವ ಅಧಿಕಾರವೂ ಇದೆ. ಅದಕ್ಕಾಗಿ ಸಭೆ ಕರೆದಿದ್ದೇನೆ’ ಎಂದರು.

ಉಪಾಧ್ಯಕ್ಷೆ ಶಾಂತಕುಮಾರಿ, ಹೆಚ್ಚುವರಿ ಪೌರಾಯುಕ್ತ ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT