ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ರುಚಿಮೊಗ್ಗು ಅರಳಿಸುವ ಕಡುಬಿನ ಕವಲುಗಳು

Last Updated 12 ಡಿಸೆಂಬರ್ 2020, 8:13 IST
ಅಕ್ಷರ ಗಾತ್ರ
ADVERTISEMENT
""
"ಸಿಹಿ ಕಡುಬು"

ಗಣೇಶನಿಗೂ ಮಕ್ಕಳಿಗೂ ಇಷ್ಟವಾದ ಕಡುಬು ಹಳೆಯ ಸಿಹಿತಿನಿಸು. ನಮ್ಮತನದ ಸಂಸ್ಕೃತಿಯ ಜತೆಗೆ ಬೆಸೆದುಕೊಂಡ ಈ ಸಿಹಿ ಇವತ್ತಿನ ಮಕ್ಕಳ ಬಾಯಲ್ಲಿಯೂ ನೀರೂರುವಂತೆ ಮಾಡಬಹುದು. ಕಡುಬಿನ ಕವಲುಗಳು, ಅದರ ಆಹಾರ ಸಂಸ್ಕೃತಿ ಎರಡರ ಮೇಲೂ ಬೆಳಕು ಚೆಲ್ಲುವ ಲೇಖನವಿದು.

***

‘ನೀರಿಳಿಯದ ಗಂಟಲೊಳ್‌ ಕಡುಬಂ ತುರುಕಿದಂತಾಯಿತು’ 19ನೇ ಶತಮಾನದ ಅಂತ್ಯದಲ್ಲಿ ಜೀವಿಸಿದ್ದ ಕವಿ ಮುದ್ದಣ ಬರೆದ ‘ರಾಮಾಶ್ವಮೇಧ’ ಕೃತಿಯಲ್ಲಿ ಈ ಸಾಲು ಇದೆ. ಮುದ್ದಣ ತನ್ನ ಸತಿ ಮನೋರಮೆಗೆ ಶ್ರೀರಾಮಚಂದ್ರನ ಕತೆಯನ್ನು ಸಂಸ್ಕೃತದಲ್ಲಿ ಹೇಳಲು ಶುರುವಿಟ್ಟಾಗ ಮನೋರಮೆ ಅದನ್ನು ತಡೆದು, ‘ಕನ್ನಡವೇ ಸರಿಯಾಗಿ ಗೊತ್ತಿಲ್ಲದ ನನಗೆ ಸಂಸ್ಕೃತದಲ್ಲಿ ಕತೆಯ ಸೊಗಸನ್ನು ಹೇಳುವುದೇ’ ಎನ್ನುವಾಗ ಈ ಮೇಲಿನ ಸಾಲುಗಳನ್ನು ಉಲ್ಲೇಖಿಸುತ್ತಾಳೆ. ಹಳೆಗನ್ನಡದ ಈ ಗದ್ಯದ ಸಾಲುಗಳನ್ನು ಇಂದಿಗೂ ಹಲವರು ಉಲ್ಲೇಖಿಸುವುದುಂಟು.

ಈ ಕಥೆ ಈಗೇಕೆ ಎಂದಿರಾ...? ಕಡುಬಿನ ಬಗ್ಗೆ ಹೇಳಬೇಕೆಂದು ಹೊರಟಾಗ ಎಂದೋ ಕೇಳಿದ್ದ ಈ ಸಾಲುಗಳು ನೆನಪಿನ ಪಟಲದಲ್ಲಿ ಸುಳಿದವು. ಅಂದರೆ ಕಡುಬು ಇಂದು – ನಿನ್ನೆ ಜನಿಸಿದ್ದಲ್ಲ. ತಲೆಮಾರುಗಳ ಇತಿಹಾಸ ಹೊಂದಿದೆ ಎಂಬುದನ್ನೂ ಈ ಸಾಲು ಪುಷ್ಟೀಕರಿಸುತ್ತದೆ.

‘ಕಡುಬು’ ಎಂದಾಕ್ಷಣ ಒಂದೊಂದು ಭಾಗದವರಿಗೆ ಒಂದೊಂದು ನೆನಪು. ಕಡುಬಿನ ಕವಲುಗಳು ಸಾಕಷ್ಟಿರುವುದೇ ಇದಕ್ಕೆ ಕಾರಣ. ಕರಿಗಡುಬು, ಖಾರದ ಕಡುಬು, ಸಿಹಿ ಕಡುಬು, ಶಾಯಿ ಕಡುಬು, ಕುಚ್ಚಿದ ಕಡುಬು, ಅಕ್ಕಿ ಕಡುಬು, ಉದ್ದಿನ ಕಡುಬು, ರವೆ ಕಡುಬು, ಕೊಬ್ಬರಿ ಕಡುಬು, ಕೊಟ್ಟೆ ಕಡುಬು, ಮೂಡೆ ಕಡುಬು... ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ಎಣ್ಣೆಯಲ್ಲಿ ಕರಿದೂ ಕಡುಬು ತಯಾರಿಸಬಹುದು. ಎಣ್ಣೆ ಪದಾರ್ಥ ವರ್ಜ್ಯ ಎನ್ನುವವರು ಹಬೆಯಲ್ಲಿ ಬೇಯಿಸಿಯೂ ಸವಿಯಬಹುದು. ಆದರೆ ಕರಿಗಡುಬಿಗೂ ರವೆ ಕಡುಬಿಗೂ ವ್ಯತ್ಯಾಸ ಉಂಟು.

ಸಿಹಿ ಕಡುಬು

ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸುವ ಕರಿಗಡುಬು ಎಂದರೆ ಬಹುತೇಕರ ಬಾಯಲ್ಲಿ ನೀರೂರುತ್ತದೆ. ಗರಿಗರಿಯಾದ, ತಿನ್ನುತ್ತಾ ಹೋದಂತೆ ಬಾಯಿಗೆ ಮೃದು ಅನುಭವ ನೀಡುವ ಕರಿಗಡುಬು ಜಿಹ್ವಾ ಚಾಪಲ್ಯವನ್ನು ಹೆಚ್ಚಿಸುತ್ತದೆ. ಅಷ್ಟೇ ಏಕೆ, ಎಲ್ಲರ ಮುದ್ದಿನ ದೇವರು ಗಣಪತಿ ಬಪ್ಪನಿಗೂ ಕಡುಬು ಎಂದರೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ, ಗಣಪತಿ ಹಬ್ಬದಲ್ಲಿ ಈ ಖಾದ್ಯದ ಹಾಜರಿ ಇರಲೇಬೇಕು. ಇಲ್ಲದಿದ್ದರೆ ಗಣೇಶ ಮುನಿಸಿಕೊಳ್ಳುತ್ತಾನೆ ಎನ್ನುವ ಭಯ ಭಕ್ತರಲ್ಲಿ. ಈ ಭಯದಿಂದಲೋ ಏನೋ ಹಲವರು ಕಡುಬಿನ ಹಾರವನ್ನೇ ತಯಾರಿಸಿ ಗಣೇಶನಿಗೆ ಅರ್ಪಿಸುತ್ತಾರೆ. ಗಣೇಶನ ಇನ್ನೊಂದು ಅಚ್ಚು ಮೆಚ್ಚಿನ ಖಾದ್ಯ ಮೋದಕವೂ ಕಡುಬಿನ ರೂಪಾಂತರವೇ. ಇಷ್ಟಕ್ಕೂ ಮೋದಕ ಅಥವಾ ಕಡುಬು ಗಣೇಶನಿಗೆ ಏಕಿಷ್ಟ ಎಂಬ ಪ್ರಶ್ನೆ ಹಲವರನ್ನು ಕಾಡಿರಬಹುದು.

ಪುರಾಣಗಳಲ್ಲಿ ಇದಕ್ಕೆ ಹಲವು ಕತೆಗಳು ಇವೆ. ಪಾರ್ವತಿ ಮಗನಿಗೆ (ಗಣೇಶ) ಜನ್ಮದಿನದಂದು ಮೋದಕ, ಕಾಯಿ ಕಡುಬು ಮಾಡಿ ಬಡಿಸುತ್ತಿದ್ದಳು ಎಂಬ ನಂಬಿಕೆ ಹಲವರಲ್ಲಿದೆ. ಗಣಪತಿಗೆ ಮೋದಕ ಏಕೆ ಪ್ರಿಯ ಎಂಬುದನ್ನು ‘ಪದ್ಮ ಪುರಾಣ’ದಲ್ಲಿ ವರ್ಣಿಸಲಾಗಿದೆ.

ದೇವಾನುದೇವತೆಗಳು ಒಮ್ಮೆ ಶಿವ– ಪಾರ್ವತಿಯ ಮನೆಗೆ ಬರುತ್ತಾರೆ. ಹಾಗೆ ಬಂದಾಗ ವಿಶಿಷ್ಟ ಪರಿಮಳ, ರುಚಿ ಹೊಂದಿರುವ ಮೋದಕವೊಂದನ್ನು ತರುತ್ತಾರೆ. ಅದನ್ನು ಸೇವಿಸಿದವರು ಬುದ್ಧಿಶಾಲಿಯೂ, ಶಕ್ತಿವಂತರೂ ಆಗುತ್ತಾರೆ ಎಂಬುದು ಪಾರ್ವತಿಯ ನಂಬಿಕೆ. ಮೋದಕ ಒಂದೇ ಇದ್ದುದರಿಂದ ಗಣೇಶ ಮತ್ತು ಷಣ್ಮುಖ ಇಬ್ಬರಲ್ಲಿ ಯಾರಿಗೆ ಕೊಡಬೇಕು ಎಂದು ಪಾರ್ವತಿ ಗೊಂದಲಕ್ಕೊಳಗಾಗುತ್ತಾಳೆ. ಆಗ ಇಬ್ಬರನ್ನೂ ಕರೆದು ‘ನಿಜವಾದ ಶ್ರದ್ಧೆ ಮತ್ತು ಭಕ್ತಿ ಇದೆ ಎಂಬುದನ್ನು ಯಾರು ಸಾಧಿಸಿ ತೋರುವಿರೊ ಅವರಿಗೆ ಈ ಮೋದಕ ಸಿಗುತ್ತದೆ’ ಎಂದು ಹೇಳುವಳು. ಆಗ ಷಣ್ಮುಖ ಶ್ರದ್ಧೆ ಮತ್ತು ಭಕ್ತಿಯ ಹುಡುಕಾಟಕ್ಕೆ ತನ್ನ ವಾಹನ ಏರಿ ಹೊರಡುವನು. ಆದರೆ, ಗಣೇಶ ತನ್ನ ತಂದೆ– ತಾಯಿಯ ಬಳಿಯಲ್ಲೇ ಉಳಿಯುವನು. ತಂದೆ– ತಾಯಿಯನ್ನು ಪ್ರೀತಿಯಿಂದ ಕಾಣುವುದಕ್ಕಿಂತ ಹೆಚ್ಚಿನ ಶ್ರದ್ಧೆ– ಭಕ್ತಿ ಯಾವುದಿದೆ ಎಂದು ಹೇಳುವನು. ಆ ಮಾತುಗಳಿಗೆ ಮನಸೋತ ಪಾರ್ವತಿ ಮೋದಕವನ್ನು ಗಣೇಶನಿಗೆ ನೀಡುವಳು ಎಂಬ ಕತೆ ಜನಜನಿತವಾಗಿದೆ. ಹೀಗಾಗಿ ಗಣೇಶನ ಹಬ್ಬಕ್ಕೆ ಮೋದಕ ನೈವೇದ್ಯ ಮಾಡುವುದು ಅನೂಚಾನವಾಗಿ ನಡೆದುಕೊಂಡುಬಂದಿದೆ.

ಅದೇನೆ ಇರಲಿ, ಗಣೇಶನ ನೆಪದಲ್ಲಿ ಭೂಲೋಕದ ಕಡುಬು ಪ್ರಿಯರಿಗೂ ಆ ದಿನ ಹಬ್ಬವೇ. ಎಲೆಯ ಒಳಗೆ ಬೇಳೆ ಹೂರಣ, ಸಕ್ಕರೆ ಕೊಬ್ಬರಿಯ ಮಿಶ್ರಣ, ಖೋವಾ ಸಕ್ಕರೆಯ ಮಿಶ್ರಣ ಹೀಗೆ ತರಹೇವಾರಿಯಾಗಿ ತುಂಬಿ ಕಡುಬು ತಯಾರಿಸಬಹುದು. ಒಂದೊಂದು ಮಿಶ್ರಣವೂ ಒಂದೊಂದು ಸ್ವಾದ ನೀಡುತ್ತವೆ. ಇದನ್ನು ಮಕ್ಕಳೂ ಹೆಚ್ಚು ಇಷ್ಟಪಟ್ಟು ಸವಿಯುವರು. ಇನ್ನು ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರವನ್ನೇ ಕೊಡಬೇಕು ಎಂದು ಜಪ ಮಾಡುವ ಆಧುನಿಕ ಅಮ್ಮಂದಿರು ಸಕ್ಕರೆ, ಖೋವಾ ಜತೆಗೆ ಡ್ರೈಫ್ರೂಟ್ಸ್‌ ಹುಡಿಯನ್ನು ಬೆರೆಸಿ ಕಡುಬು ತಯಾರಿಸುವುದುಂಟು. ಚಿಕ್ಕ ಮಕ್ಕಳಿಗೆ ಕಡುಬು ಒಂದು ರೀತಿ ಕುತೂಹಲದ ಮೂಟೆಯಾಗಿಯೂ ಕಾಣುತ್ತದೆ. ಒಳಭಾಗದಲ್ಲಿ ರುಚಿಯಾದುದನ್ನು ಅಡಗಿಸಿಟ್ಟು ಮೇಲ್ಭಾಗ ಮುಚ್ಚುವ ಈ ಖಾದ್ಯ ಮಕ್ಕಳಿಗೆ ಅಚ್ಚುಮೆಚ್ಚು. ಇನ್ನೂ ಹಲ್ಲು ಮೂಡಿರದ, ಹಾಲು ಹಲ್ಲಿನ ಕಂದಮ್ಮಗಳ ಕೈಯಲ್ಲಿ ಕಡುಬು ಕೊಟ್ಟು ನೋಡಿ. ಸುಮಾರು ಒಂದು ತಾಸು ಒಂದು ಕಡುಬಿನಲ್ಲೇ ಕಾಲ ಕಳೆಯುತ್ತವೆ. ಬಾಯಿಯ ಜೊಲ್ಲಿನಿಂದ ಕಡುಬನ್ನು ಮೆತ್ತಗೆ ಮಾಡಿಕೊಳ್ಳುತ್ತಾ ಚೂರು ಚೂರೇ ಅದರ ಸ್ವಾದವನ್ನು ಸವಿಯುತ್ತಾ ಹೋಗುತ್ತದೆ. ಹೀಗಾಗಿ ಕಡುಬು ಮಕ್ಕಳ ಪಾಲಿಗೆ ಟೈಮ್‌ಪಾಸ್‌ ರೀತಿಯೂ ಒದಗಿಬರುತ್ತದೆ.

ಕರಿಗಡುಬು ಒಮ್ಮೊಮ್ಮೆ ಒಬ್ಬಟ್ಟಿನ ಸಹೋದರನ ಪಾತ್ರ ನಿರ್ವಹಿಸುತ್ತದೆ. ಹಬ್ಬದ ವೇಳೆ ಒಬ್ಬಟ್ಟು ತಯಾರಿಸುವುದು ಸಾಮಾನ್ಯ. ಬೇಳೆ ಹೂರಣ ಜಾಸ್ತಿ ಉಳಿದಿತ್ತು ಎಂದರೆ ಅದರಲ್ಲೇ ಮರುದಿನ ಬಿಸಿ ಬಿಸಿ ಕರಿಗಡುಬು ತಯಾರಾಗುತ್ತವೆ. ಈ ಕರಿಗಡುಬು ಬಿಸಿ ಬಿಸಿಯಾಗಿ ಇದ್ದಾಗಲೂ ಚೆನ್ನ, ಆರಿದರೂ ಬಲು ರುಚಿ. ಬೆಲ್ಲ ಮಿಶ್ರಿತ ಬೇಳೆ ಹೂರಣವನ್ನು ಎಣ್ಣೆಯಲ್ಲಿ ಕರಿಯುವುದರಿಂದ ಮತ್ತೆ ಹೂರಣ ಬೇಯಿಸಿದ ಹಾಗಾಗುತ್ತದೆ. ಹಾಗಾಗಿ ಎರಡರಿಂದ ಮೂರು ದಿನ ಇಟ್ಟೂ ಕರಿಗಡುಬನ್ನು ಸವಿಯಬಹುದು. ಆದರೆ, ಈ ಕಡುಬು ತಯಾರಿಸಲು ಎರಡು ಕೈಗಳಿಗಿಂತ ಹೆಚ್ಚು ಕೈಗಳು ಬೇಕು. ಎಲೆ ಉದ್ದಲು, ಹೂರಣ ತುಂಬಲು, ಬಳಿಕ ಕರಿಯಲು ಇಬ್ಬರಿಂದ ಮೂವರು ಸೇರಿದರೆ ಬಹುಬೇಗ ತಯಾರಾಗುತ್ತವೆ. ಈಗೆಲ್ಲ ವಿಭಕ್ತ ಕುಟುಂಬಗಳೇ ಹೆಚ್ಚು. ಮೇಲಾಗಿ ಇವನ್ನೆಲ್ಲ ಮಾಡುತ್ತ ಕೂರಲು ಬಹುತೇಕರಿಗೆ ಸಮಯವೂ ಇರುವುದಿಲ್ಲ. ಹಾಗಾಗಿ ಈ ಕುಡುಬುಗಳೂ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಬ್ಬದ ಸಮಯದಲ್ಲಿ ಕೆಲ ಸ್ವೀಟ್‌ ಅಂಗಡಿಗಳಲ್ಲಿ ಕಡುಬು ಮಾರಾಟಕ್ಕಿಡಲಾಗುತ್ತದೆ.

ಇನ್ನು ಹಬೆ ಕಡುಬಿಗೆ ಬರೋಣ. ಹಬೆಯಲ್ಲಿ ಸಿಹಿ ಕಡುಬು, ಖಾರದ ಕಡುಬು ಎರಡನ್ನೂ ತಯಾರಿಸಬಹುದು. ಅಕ್ಕಿ ಹಿಟ್ಟಿನ ಪೇಸ್ಟ್‌ ತಯಾರಿಸಿಕೊಂಡು ಬೇಳೆ, ಕಾಯಿ ಮಿಶ್ರಿತ ಹೂರಣ ತುಂಬಿ ಹಬೆಯಲ್ಲಿ ಬೇಯಿಸಿದರೆ ಸಿಹಿ ಕಡುಬು ಸವಿಯಲು ಸಿದ್ಧವಾಗುತ್ತದೆ.

ಸಿಹಿ ಕಡುಬು

ಇನ್ನು ಫಿಟ್‌ನೆಸ್‌ ಪ್ರಿಯರಿಗೆ ಕಡಿಮೆ ಕ್ಯಾಲೊರಿಯ, ಕೊಬ್ಬು, ಕೊಲೆಸ್ಟ್ರಾಲ್‌ ಇಲ್ಲದ ಹಬೆ ಕಡುಬು ಆಪ್ತಮಿತ್ರನಂತೆ ಒದಗಿಬರುತ್ತದೆ. ಮಧುಮೇಹಿಗಳು ಸಿಹಿ ಕಡುಬಿನ ಬದಲು ಖಾರದ ಕಡುಬು ಸವಿದು ತೃಪ್ತಿಗೊಳ್ಳಬಹುದು. ಎಣ್ಣೆಯ ಪಸೆ ಇಲ್ಲದ, ತಯಾರಿಕೆಗೆ ಹೆಚ್ಚು ಸಾಮಗ್ರಿ ಬೇಡದ, ಆರೋಗ್ಯಪೂರ್ಣ ಕಡುಬು ಬಹುತೇಕರಿಗೆ ಇಷ್ಟದ ಬ್ರೇಕ್‌ಫಾಸ್ಟ್‌. ಅಕ್ಕಿ ರವೆ ಅಥವಾ ಅಕ್ಕಿ ಹಿಟ್ಟು ಮನೆಯಲ್ಲಿದ್ದರೆ ಧಾರಾಳವಾಗಿ ಹಬೆ ಕಡುಬನ್ನು ತಯಾರಿಸಬಹುದು. ಮಲೆನಾಡಿನ ಭಾಗದ ಮನೆಗಳಲ್ಲಿ ಹಸು ಕರು ಹಾಕಿತೆಂದರೆ ಮರುದಿನ ಗಿಣ್ಣದ ಜತೆ ಅಕ್ಕಿ ಕಡುಬು ಜತೆಯಾಗುತ್ತದೆ. ಅಣಬೆ ಸಾರು, ಚಿಕನ್‌ ಸಂಬಾರ್‌ ಜತೆ ಕಡುಬು ಹೆಚ್ಚು ರುಚಿ ನೀಡುತ್ತದೆ. ಕರಾವಳಿ ಭಾಗದಲ್ಲಿ ಕೊಟ್ಟೆ ಕಡುಬು, ಮೂಡೆ ಕಡುಬು ಹೆಚ್ಚು ಜನಪ್ರಿಯ. ಕುಡುಬಿಗೆ ವಿವಿಧ ಆಕಾರಗಳೂ ಉಂಟು. ಬಟ್ಟಲ ಕಡುಬು, ದುಂಡನೆ ಕಡುಬು, ಬಟ್‌ ಕಡುಬು, ಉದ್ದನೆ ಕಡುಬು ಹೀಗೆ ವಿವಿಧ ಆಕಾರಗಳನ್ನೂ ಮೈಗಂಟಿಸಿಕೊಂಡಿದೆ. ಅಲ್ಲದೆ ಹಲವರು ಮಕ್ಕಳನ್ನು ಆಕರ್ಷಿಸಲು ವಿವಿಧ ಆಕಾರಗಳಲ್ಲಿ ಕಡುಬು ತಯಾರಿಸುವರು.

ಮೋಡ ಕವಿದ ವಾತಾವರಣ, ಧಾರಾಕಾರ ಸುರಿಯುವ ಮಳೆ ಜತೆ ಹಬೆಯಲ್ಲಿ ಬೆಂದ ಬಿಸಿ ಬಿಸಿ ಕಡುಬನ್ನು ಕಾಯಿ ಚಟ್ನಿ, ಜೋನಿ ಬೆಲ್ಲದೊಂದಿಗೆ ಸವಿಯುತ್ತಿದ್ದರೆ ಉದರ ಇನ್ನಷ್ಟು ಹಿಗ್ಗುತ್ತದೆ.

ಬೇಳೆ ಕಾಳುಗಳನ್ನು ನೆನೆಸಿ ತಯಾರಿಸುವ ಆರೋಗ್ಯ ಪೂರ್ಣ ಉದ್ದಿನಕಡುಬು ಮಲೆನಾಡಿನ ಕೆಲ ಮನೆಗಳಲ್ಲಷ್ಟೇ ತಯಾರಾಗುತ್ತವೆ. ಆರೋಗ್ಯಪೂರ್ಣ ಉದ್ದಿನ ಕಡುಬು ಹೀಗೆ ಮಾಡಿ…

ಬೇಕಾಗುವ ಸಾಮಗ್ರಿಗಳು:

ಉದ್ದಿನ ಬೇಳೆ– 1/4 ಕಪ್‌

ಹೆಸರು ಬೇಳೆ– 1/4 ಕಪ್‌

ಕಡ್ಲೆ ಬೇಳೆ – 1/4 ಕಪ್‌

ಕೊತ್ತಂಬರಿ ಬೀಜ– 1 ಟೀ ಚಮಚ

ಜೀರಿಗೆ– 1 ಟೀ ಚಮಚ

ಬೆಳ್ಳುಳ್ಳಿ– ನಾಲ್ಕೈದು ಎಸಳು

ಹಸಿ ಮೆಣಸಿನ ಕಾಯಿ– ನಾಲ್ಕೈದು

ಅಕ್ಕಿ ಹಿಟ್ಟು– 2 ಕಪ್

ಉಪ್ಪು

ನೀರು

ಹಿಂದಿನ ದಿನ ರಾತ್ರಿ ಮೂರೂ ಬೇಳೆಗಳನ್ನು ಸಮ ಪ್ರಮಾಣದಲ್ಲಿ ಹಾಕಿ ನೆನೆಸಿ ಇಡಬೇಕು. (ರಾತ್ರಿ ನೆನಪಾಗದಿದ್ದರೆ ಬೆಳಿಗ್ಗೆ ಬಿಸಿನೀರಿನಲ್ಲಿ ಒಂದು ಗಂಟೆ ನೆನೆಸಿಡಬಹುದು). ಬೆಳಿಗ್ಗೆ ನೆನೆದ ಬೇಳೆಯನ್ನು ಮಿಕ್ಸಿಯಲ್ಲಿ ಹಾಕಿ ಅದಕ್ಕೆ ಕೊತ್ತಂಬರಿ, ಜೀರಿಗೆ, ಬೆಳ್ಳುಳ್ಳಿ, ಹಸಿ ಮೆಣಸು, ಉಪ್ಪು ಹಾಕಿ ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಬೇಕು. (ಅಗತ್ಯವಿದ್ದರೆ ಸ್ವಲ್ಪ ನೀರು ಬಳಸಬಹುದು).

ಇತ್ತ ಒಂದು ಪಾತ್ರೆಯಲ್ಲಿ ಮೂರು ಲೋಟ ನೀರು ಇಟ್ಟು, ಸ್ವಲ್ಪ ಉಪ್ಪು ಹಾಕಿ ಕುದಿಯಲು ಬಿಡಬೇಕು. ನೀರು ಕುದಿ ಬಂದ ಬಳಿಕ ಅಕ್ಕಿ ಹಿಟ್ಟು ಹಾಕಿ ಕೂಡಿಸಬೇಕು. ಹಿಟ್ಟು ನೀರಿನೊಂದಿಗೆ ಚೆನ್ನಾಗಿ ಬೆರೆತು ಗಟ್ಟಿಯಾದ ಬಳಿಕ 2 ನಿಮಿಷ ಬಿಟ್ಟು ಒಲೆಯಿಂದ ಕೆಳಗಿಸಬೇಕು. ಹಿಟ್ಟು ಆರಿದ ಬಳಿಕ ಚೆನ್ನಾಗಿ ರೊಟ್ಟಿ ಹಿಟ್ಟಿನ ಹದಕ್ಕೆ ನಾದಿಕೊಂಡು ಬಟ್ಟಲ ರೀತಿ ಮಾಡಿಕೊಂಡು ಅದರ ಒಳಗೆ ರುಬ್ಬಿಕೊಂಡ ಮಿಶ್ರಣ ಹಾಕಿ ಎರಡು ಬದಿಯನ್ನು ಮುಚ್ಚಬೇಕು. ಹೀಗೆ ಎಲ್ಲವನ್ನೂ ಮಾಡಿಟ್ಟುಕೊಂಡು ಬಳಿಕ ಹಬೆಯಲ್ಲಿ ಬೇಯಿಸಬೇಕು. ಒಂದು ಪಾತ್ರೆಗೆ ತಳಭಾಗದಲ್ಲಿ ನೀರು ಹಾಕಿ ತೂತು ಇರುವ ಇನ್ನೊಂದು ಪಾತ್ರೆಯನ್ನು ಮೇಲ್ಭಾಗದಲ್ಲಿ ಇಡಬೇಕು. ಆ ಪಾತ್ರೆಯಲ್ಲಿ ಮಾಡಿಟ್ಟುಕೊಂಡ ಕಡುಬುಗಳನ್ನು ಇಟ್ಟು 20 ನಿಮಿಷ ಮಧ್ಯಮ ಉರಿಯಲ್ಲಿ ಬೇಹಿಸಬೇಕು. ಕಾಯಿ ಚಟ್ನಿ ಜತೆ ಬಿಸಿ ಇರುವಾಗಲೇ ಸವಿಯಿರಿ.

ಕಡುಬು, ಅಣಬೆಯ ಸಾರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT