ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿಯನು ಉಂಡು ನಿರೋಗಿಯಾಗಿ

Last Updated 6 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಈ ಭಾಗದ ಜನರ ಬಹು ಮುಖ್ಯ ಆಹಾರವಾದ ರಾಗಿಯನ್ನು ಹಳೆಯ ತಲೆಮಾರಿನವರು ಆಪ್ತತೆಯಿಂದ ಹಚ್ಚಿಕೊಂಡರೆ ಹೊಸ ತಲೆಮಾರಿನವರು ರಾಗಿಯಿಂದ ಕೊಂಚ ದೂರ ಸರಿದಿದ್ದಾರೆ. ಆಯಾ ಪ್ರದೇಶದಲ್ಲಿ ಬೆಳೆಯುವ ಧಾನ್ಯಗಳು, ಹಣ್ಣು ತರಕಾರಿಗಳು ಆಹಾರ ಸಂಸ್ಕೃತಿಯ ಭಾಗವಾಗಿರುತ್ತವೆ. ಅಷ್ಟೇ ಅಲ್ಲ ಆರೋಗ್ಯಕ್ಕೂ ಹಿತವಾಗಿರುತ್ತದೆ ಎಂಬುದನ್ನು ಉಣ್ಣುವವರೆಲ್ಲ ಅರಿಯಲೇ ಬೇಕು. ಸರ್ಕಾರದ ಅನ್ನಭಾಗ್ಯದ ಅಕ್ಕಿಯ ಭರಾಟೆಯಲ್ಲಿ ಎಲ್ಲ ಊರಿನವರ ಆಹಾರವು ‘ಅದಲೂ ಬದಲು ಕಂಚಿ ಕದಲು’ ಎನ್ನುವ ಆಟದಂತೆ ಬದಲಾದ ವಿಪರ್ಯಾಸವನ್ನು ಮೀರಿ ಎಲ್ಲರೂ ಸತ್ವಹೀನವಾದ ಬಿಳಿಯ ಅಕ್ಕಿಗೆ ಅಂಟಿಕೊಳ್ಳುವುದನ್ನು ಬಿಡುವುದೊಳಿತು.

ಅತ್ಯಂತ ಕಡಿಮೆ ನೀರಿನಲ್ಲೂ ಬೆಳೆಯುವ ಕಿರುಧಾನ್ಯ ರಾಗಿ ಕಪ್ಪು ಬಣ್ಣವನ್ನೇ ಹಳಿದು ಸತ್ವಪೂರ್ಣ ಆಹಾರಕ್ಕೆ ಮುಖ ತಿರುಗಿಸದಿರಿ. ರಾಗಿಮುದ್ದೆ, ಸೊಪ್ಪಿನ ಸಾರು, ಬಸ್ಸಾರು ನಿಮ್ಮ ದೈನಂದಿನ ಊಟದ ಭಾಗವಾಗಿರಲಿ. ಮುದ್ದೆ ತಿರುವಿ ಮುದ್ದಿನ ಮಡದಿಯಾಗಿ.. ಯಾಕೆ ಅಂದ್ರಾ? ರಾಗಿಯಲ್ಲಿ ಅತ್ಯಂತ ಸುಲಭವಾಗಿ ಜೀರ್ಣವಾಗುವ ಕ್ಯಾಲ್ಸಿಯಂ, ಮೆಗ್ನೇಷಿಯಂ, ವಿಟಮಿನ್ ಬಿ, ಕಾರ್ಬೋಹೈಡ್ರೇಟ್ ಇರುತ್ತದೆ.

ರಾಗಿ ಮುದ್ದೆ

ಏನೇನು ಬೇಕು?

ಒಂದು ಕಪ್ ರಾಗಿ ಹಿಟ್ಟು, ಒಂದೂವರೆ ಕಪ್ ನೀರು, ಕಾಲು ಚಮಚ ಉಪ್ಪು, ಕಾಲು ಚಮಚ ತುಪ್ಪ.

ವಿಧಾನ: ನೀರಿಗೆ ಒಂದು ಚಮಚ ರಾಗಿಹಿಟ್ಟು ಸೇರಿಸಿ ಕದಡಿ ಕುದಿಸಬೇಕು. ನಂತರ, ನೀರು ಚೆನ್ನಾಗಿ ಕುದಿಯಲಾರಂಭಿಸಿದಾಗ ತುಪ್ಪ, ಉಪ್ಪು ಹಾಕಿ ಹಿಟ್ಟನ್ನು ಮೆಲ್ಲಗೆ ಒಂದೇ ಕಡೆ ಗುಪ್ಪೆಯಾಗಿ ಬೀಳುವಂತೆ ಹಾಕಬೇಕು. ನಾಲ್ಕು ನಿಮಿಷ ಚೆನ್ನಾಗಿ ಹಿಟ್ಟು ಕುದಿಸಿದ ಮೇಲೆ ಮುದ್ದೆ ತಿರುಗಿಸುವ ಕೋಲಿನಿಂದ ಚೆನ್ನಾಗಿ ತಿರುವಿ ಕೊಂಚ ಬಿಸಿ ಇರುವಾಗಲೇ ಕೈಗೆ ನೀರು ಹಚ್ಚಿಕೊಂಡು ಮುದ್ದೆ ಕಟ್ಟಬೇಕು.

**

ರಾಗಿ ಲಾಡು

ಏನೇನು ಎಷ್ಟೆಷ್ಟು?

ಮೂರು ಬಟ್ಟಲು ರಾಗಿ ಹಿಟ್ಟು, ಎರಡೂವರೆ ಬಟ್ಟಲು ಸಕ್ಕರೆ, ಎರಡೂವರೆ ಬಟ್ಟಲು ತುಪ್ಪ, ಹತ್ತು ಏಲಕ್ಕಿ.

ತಯಾರಿಸೋದು ಹೀಗೆ: ದಪ್ಪನೆಯ ಪಾತ್ರೆಯಲ್ಲಿ ತುಪ್ಪ ಕರಗಿಸಿ ರಾಗಿ ಹಿಟ್ಟು ಹಾಕಿ ಘಮ್ಮೆನಿಸುವಂತೆ ಹುರಿಯಿರಿ. ಸಕ್ಕರೆಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಹುರಿದ ಹಿಟ್ಟು ಸ್ವಲ್ಪ ಬೆಚ್ಚಗಿರುವಾಗ ಸಕ್ಕರೆ ಪುಡಿಯನ್ನು ಮತ್ತು ಏಲಕ್ಕಿ ಪುಡಿಯನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಲಾಡು ಕಟ್ಟಿ. ನೋಡಲು ಕಪ್ಪಗೆ ಕಂಡರೂ ತಿನ್ನಲು ಬಲು ರುಚಿ. (ಇದೇ ವಿಧಾನದಲ್ಲಿ ರಾಗಿ ಹಿಟ್ಟಿಗೆ ಬದಲಾಗಿ ಗೋಧಿ ಹಿಟ್ಟಿನ ಲಾಡನ್ನೂ ಕೂಡಾ ಮಾಡಬಹುದು)

**

ರಾಗಿ ಮಾಲ್ಟ್‌
ಮಾಡುವ ವಿಧಾನ:
ಒಂದು ಕೆ.ಜಿ ರಾಗಿಯನ್ನು ಸ್ವಚ್ಛ (ಕಲ್ಲು ಆರಿಸಿ) ತೊಳೆಯಿರಿ. ಒಂದು ದಿನ ನೆನೆ ಹಾಕಿ. ಮರುದಿನ ತೆಳುವಾದ ಕಾಟನ್ ಬಟ್ಟೆಯಲ್ಲಿ ಕಟ್ಟಿ. ಒಂದು ದಿನ ಇಡಿ. ಪುಟ್ಟಪುಟ್ಟ ಬಿಳಿಯ ಮೊಳಕೆ ಬರುತ್ತದೆ. ಗಂಟು ಬಿಚ್ಚಿ ಒಂದು ತಾಸು ನೆರಳಿನಲ್ಲಿ ಆರಲು ಬಿಡಿ. ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಹಿಟ್ಟು ಹಾಕಿಸಿ. (ಈ ಹಿಟ್ಟನ್ನು ಮೂರು ತಿಂಗಳವರೆಗೂ ಬಳಸಬಹುದು.)

ಮಾಲ್ಟ್‌ ತಯಾರಿಸೋದು ಹೀಗೆ: ಒಂದು ಲೋಟ ನೀರನ್ನು ಕುಡಿಯಲು ಇಟ್ಟು ಅರ್ಧ ಚಮಚ ತುಪ್ಪ ಹಾಕಿ. ರಾಗಿಹಿಟ್ಟನ್ನು ಕೊಂಚ ನೀರಿನಲ್ಲಿ ಕಲಸಿ ಕುಡಿಯುವ ನೀರಿಗೆ ಹಾಕಿ ಚೆನ್ನಾಗಿ ಕುಡಿಸಿ ಸ್ವಲ್ಪ ದಪ್ಪಗಾದಾಗ ಎರಡು ಚಮಚ ಸಕ್ಕರೆ, ಚಿಟಿಕೆ ಉಪ್ಪು, ಒಂದು ಏಲಕ್ಕಿಯ ಪುಡಿಯನ್ನು ಹಾಕಿ ಮತ್ತೂ ಸ್ವಲ್ಪ ಕುದಿಸಿ. ಬಿಸಿ ಇರುವಾಗಲೂ ತಣ್ಣಗಾದ ಮೇಲೂ ಕುಡಿಯಲು ಪೌಷ್ಟಿಕ ಪಾನೀಯ. ಸಿಹಿ ಇಷ್ಟವಿಲ್ಲದವರು ಸಪ್ಪಗೆ ಬೇಯಿಸಿ ಮಜ್ಜಿಗೆಯೊಂದಿಗೆ ಕುಡಿಯಬಹುದು. ರಾಗಿ ಮಾಲ್ಟನ್ನು ಆರು ತಿಂಗಳಾದ ಮಕ್ಕಳಿಗೂ ನೀಡಬಹುದು. ತುಂಬಾ ನೆಗಡಿ, ಕೆಮ್ಮು, ಕಫದ ತೊಂದರೆ ಇರುವವರಿಗೆ ರಾಗಿ ಹಿತವಲ್ಲ. ಮಕ್ಕಳಿಗೆ ಹಲ್ಲು ಬರುವ ಸಂದರ್ಭದಲ್ಲಿ ರಾಗಿ ಮಾಲ್ಡ್‌ ನೀಡುವುದರಿಂದ ಸದೃಢವಾದ ಹಲ್ಲು ಬರುತ್ತದೆ. ಮೂಳೆ ಮುರಿತದ ಸಮಯದಲ್ಲಿ ಕೂಡಾ ರಾಗಿಯನ್ನು ಸೇವಿಸುವುದರಿಂದ ಬೇಗನೆ ಎಲುಬು ಕೂಡಿಕೊಳ್ಳುತ್ತದೆ.

ಮನೆಮದ್ದು: ಬಾಯಿ ಹುಣ್ಣಾಗುವ ಸಮಸ್ಯೆ ಇದ್ದರೆ ಕೆಲವು ದಿನಗಳ ಕಾಲ ನಿತ್ಯವೂ ಬೆಳಿಗ್ಗೆ ಐದು ಬಸಳೆಯ ಎಲೆಗಳನ್ನು ಅಗಿದು ತಿಂದರೆ ಸಮಸ್ಯೆಯಿಂದ ಪಾರಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT