6

ಮಾವಿನ ಹಣ್ಣು, ಅದು ಬರಿ ಹಣ್ಣಷ್ಟೆ ಅಲ್ಲವೋ ಅಣ್ಣಾ!

Published:
Updated:

ಮಾವಿನಹಣ್ಣನ್ನು ಇಷ್ಟಪಡದವರು ಕಡಿಮೆ. ಮಲ್ಲಿಕಾ, ಬಾದಾಮಿ, ಬೈಗಂಪಲ್ಲಿ, ರಸಪುರಿ, ಆಮ್ರಪಾಲಿ – ಹೀಗೆ ನಾನಾ ರೀತಿಯ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಿ ಮರೆಯಾಗುವ ಕಾಲ ಹತ್ತಿರ ಬಂದಿದೆ. ಬರಿ ಹಣ್ಣನ್ನು ತಿಂದು ಸಾಕಾಗಿದೆಯೆ? ಯೋಚಿಸಬೇಡಿ, ಮಾವಿನ ಹಣ್ಣಿನಿಂದ ಹಲವು ಖಾದ್ಯಗಳನ್ನೂ ತಯಾರಿಸಬಹುದು. ಮಾವಿನ ಹಣ್ಣಿನ ರುಚಿಯ ಹಲವು ಪದಾರ್ಥಗಳ ಸಿಹಿಯ ಸವಿಯನ್ನು ಇಲ್ಲಿ ನಿರೂಪಿಸಿದ್ದಾರೆ ಸವಿತಾ.

ಮಾವಿನ ಹಣ್ಣಿನ ಹಲ್ವಾ

ಬೇಕಾಗುವ ಸಾಮಗ್ರಿಗಳು: ಸಿಹಿ ಮಾವಿನಹಣ್ಣು – 4, ಸಕ್ಕರೆ – 1/2ಬಟ್ಟಲು, ತುಪ್ಪ – 1/2ಬಟ್ಟಲು, ಬಾದಾಮಿ – 10, ಏಲಕ್ಕಿ – 2

ತಯಾರಿಸುವ ವಿಧಾನ:

ಮಾವಿನ ಹಣ್ಣು ಕತ್ತರಿಸಿ, ಸಿಪ್ಪೆ ಬೀಜ ಬೇರೆ ಮಾಡಿ ರಸ ಹಿಂಡಿ ತೆಗೆದಿಡಿ. ನಂತರ ಒಂದು ಬಾಣಲೆಗೆ ಸಕ್ಕರೆ ಹಾಕಿ ಒಲೆಯ ಮೇಲಿಟ್ಟು ಹಣ್ಣಿನ ರಸ, ಹೋಳು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಕಾಲು ಬಟ್ಟಲು ತುಪ್ಪ ಹಾಕಿ ಗಟ್ಟಿ ಆಗುವವರೆಗೆ ತಿರುವುತ್ತಿರಿ. ಮತ್ತೆ ತುಪ್ಪ ಹಾಕಿ ಚೆನ್ನಾಗಿ ಕುದಿಸಿ ನಂತರ ಕೆಳಗಿಳಿಸಿ ಆರಲು ಬಿಡಿ. ಏಲಕ್ಕಿ ಪುಡಿ ಮಾಡಿ ಕೈಯಾಡಿಸಿ. ನಂತರ ಕೈಯಿಂದ ಪೇಡಾ ಅಳತೆ ದುಂಡಾಗಿ ಮಾಡಿ. ಒಂದೊಂದೇ ಹಲ್ವಾ ಮೇಲೆ ಗೋಡಂಬಿ, ಬಾದಾಮಿ ಪುಡಿ ಹಾಕಿ ಅಲಂಕರಿಸಿ.

**

ಮಾವಿನ ಹಣ್ಣಿನ ಕೇಸರಿಬಾತ್

ಬೇಕಾಗುವ ಸಾಮಗ್ರಿಗಳು: ಮಾವಿನ ಹಣ್ಣು – 1, ಬಾಂಬೆರವೆ – 1ಲೋಟ, ತುಪ್ಪ – 1/2ಲೋಟ, ಸಕ್ಕರೆ – 3/4ಲೋಟ, ನೀರು – 1, ಗೋಡಂಬಿ – 10, ಒಣದ್ರಾಕ್ಷಿ – 10, ಏಲಕ್ಕಿ – 2

ತಯಾರಿಸುವ ವಿಧಾನ:

ಒಂದು ಪಾತ್ರೆಯಲ್ಲಿ ಕಾಲು ಲೋಟ ತುಪ್ಪ ಹಾಕಿ ರವೆ ಸೇರಿಸಿ ಚೆನ್ನಾಗಿ ಹುರಿದಿಡಿ. ಒಂದು ಪಾತ್ರೆಯಲ್ಲಿ ನೀರು ಹಾಕಿ ಒಂದು ಕುದಿ ಕುದಿಸಿ ನಂತರ ತುಪ್ಪ, ಹುರಿದ ರವೆ ಮತ್ತು ಮಾವಿನ ಹಣ್ಣಿನ ತಿರುಳು, ಸಕ್ಕರೆ ಸೇರಿಸಿ ಚೆನ್ನಾಗಿ ತಿರುವುತ್ತಿರಿ. ಅದನ್ನು ಗಂಟುಗಳಾಗದಂತೆ ಚೆನ್ನಾಗಿ ಕಲಕಿ. ಸಕ್ಕರೆ ಕರಗಿ ನೀರಾಗಿ ಈ ಮೊದಲು ತಿಳಿಸಿದ ಎಲ್ಲವೂ ಬೆಂದು ಉಂಡೆಯಂತೆ ಬರುವಾಗ ಒಲೆ ಆರಿಸಿ. ಏಲಕ್ಕಿಪುಡಿ ಸೇರಿಸಿ ಇನ್ನೊಮ್ಮೆ ಚೆನ್ನಾಗಿ ಕೈಯಾಡಿಸಿ. ಎರಡು ಚಮಚ ತುಪ್ಪದಲ್ಲಿ ಗೋಡಂಬಿ ದ್ರಾಕ್ಷಿ ಹುರಿದು ಅಲಂಕರಿಸಿ.

**

ಮಾವಿನ ಹಣ್ಣಿನ ಐಸ್‌ಕ್ರೀಮ್‌

ಬೇಕಾಗುವ ಸಾಮಗ್ರಿಗಳು: ಮಾವಿನ ಹಣ್ಣು – 1, ಹಾಲಿನಕೆನೆ – 1ಬಟ್ಟಲು, ಹಾಲು – 1/2ಲೀಟರ್, ಸಕ್ಕರೆಪುಡಿ – 3/4ಬಟ್ಟಲು, ಬೇಕಾದಲ್ಲಿ ಒಂದು ಚಮಚ ಕಸ್ಟರ್ಡ್ ಪುಡಿ ಮತ್ತು ಅರ್ಧ ಚಮಚ ವೆನಿಲ್ಲಾ ಎಸೆನ್ಸ್ ಹಾಕಬಹುದು.

ತಯಾರಿಸುವ ವಿಧಾನ:

ಒಂದು ಪಾತ್ರೆಯಲ್ಲಿ ಹಾಲು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ. ಹಾಲು ಕಾಲು ಭಾಗ ಆಗುವಷ್ಟು ಕುದಿಸಬೇಕು (ಇದು ಬೇಡವಾದಲ್ಲಿ ಮಿಲ್ಕಮೇಡ್ ಬಳಸಬಹುದು). ಕೆನೆಭರಿತ ಗಟ್ಟಿ ಹಾಲನ್ನು ಕಾಯಿಸಿಕೊಂಡು ಆರಿಸಿ. ನಂತರ ಹಾಲಿನ ಕೆನೆ, ಹಾಲು ಮತ್ತು ಕತ್ತರಿಸಿದ ಮಾವಿನ ಹಣ್ಣಿನ ಹೋಳುಗಳು, ಪುಡಿ ಮಾಡಿದ ಸಕ್ಕರೆ ಈ ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಒಂದು ಪಾತ್ರೆಗೆ ಹಾಕಿ 8ಗಂಟೆಗಳ ಕಾಲ ಫ್ರಿಜ್‌ನಲ್ಲಿಡಬೇಕು. ಫ್ರೀಜರ್‌ನಿಂದ ತೆಗೆದು ಮತ್ತೆ ಮಿಕ್ಸರ್‌ನಲ್ಲಿ ರುಬ್ಬಿ ಮತ್ತೆ 6 ಗಂಟೆಗಳ ಕಾಲ ಫ್ರಿಜ್‌ನಲ್ಲಿಡಬೇಕು. ಆಮೇಲೆ ಫ್ರಿಜ್‌ನಿಂದ ತೆಗೆದರೆ ರುಚಿಕರವಾದ ಮಾವಿನ ಹಣ್ಣಿನ ಐಸ್‌ಕ್ರೀಮ್‌ ಸವಿಯಲು ಸಿದ್ಧ.

**

ಮಾವಿನ ಹಣ್ಣಿನ ಮಿಲ್ಕ್‌ಶೇಕ್‌

ಬೇಕಾಗುವ ಸಾಮಗ್ರಿಗಳು: ಮಾವಿನ ಹಣ್ಣು – 1, ಹಾಲು – 1ಲೋಟ, ಬಾದಾಮಿ – 3, ಗೋಡಂಬಿ – 3, ಏಲಕ್ಕಿ – 1, ಸಕ್ಕರೆ – 1ಚಮಚ

ತಯಾರಿಸುವ ವಿಧಾನ: ಬಾದಾಮಿ ಮತ್ತು ಗೋಡಂಬಿಯನ್ನು ಸೇರಿಸಿ ಹತ್ತು ನಿಮಿಷ ನೀರಿನಲ್ಲಿ ನೆನೆಯಲು ಬಿಡಿ. ಏಲಕ್ಕಿಯನ್ನು ಪುಡಿಮಾಡಿ ಇಟ್ಟುಕೊಳ್ಳಿ. ಕಾಯಿಸಿ ಆರಿಸಿದ ಹಾಲು ಮತ್ತು ಮಾವಿನ ಹಣ್ಣಿನ ಹೋಳುಗಳು, ಸಕ್ಕರೆ, ಸಿಪ್ಪೆ ತೆಗೆದ ಬಾದಾಮಿ, ಗೋಡಂಬಿ ಸೇರಿಸಿ ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ. ನಂತರ ಏಲಕ್ಕಿ ಪುಡಿ ಸೇರಿಸಿ ಕಲಕಿ. ಈಗ ಐಸ್‌ಕ್ಯೂಬ್‌ ಸೇರಿಸಿ ಗ್ಲಾಸ್‌ಗೆ ಸುರಿದು ತಣ್ಣನೆಯ ಮಾವಿನ ಹಣ್ಣಿನ ಮಿಲ್ಕ್ ಶೇಕ್ ಸವಿಯಿರಿ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !