ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟರಾಜನ ಬ್ರೆಡ್‌ರೋಸ್ಟ್‌ ಪುರಾಣ!

ಸೆಲೆಬ್ರಿಟಿ ಅಡುಗೆ
Last Updated 15 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಅಡುಗೆ ಮಾಡುವುದು ನನ್ನ ಜೀವನದ ಪಾಠವಾಗಿ ಬಾಲ್ಯದಿಂದಲೂ ಕಲಿಯುತ್ತಿರುವ ವಿದ್ಯೆ. ನಮ್ಮ ಮನೆಯಲ್ಲಿ ಅಮ್ಮ ತಿಂಗಳಲ್ಲಿ ಮೂರ್ನಾಲ್ಕು ದಿನ ಅಡುಗೆ ಮನೆಗೆ ಬರುತ್ತಿರಲಿಲ್ಲ. ಆಗೆಲ್ಲಾಅಪ್ಪ ಅಡುಗೆ ಮಾಡ್ತಿದ್ರು. ಅವರು ಮಾಡ್ತಿದ್ದ ಅಡುಗೆ ಅಂದ್ರೆ, ಬ್ರೆಡ್‌ ರೋಸ್ಟ್‌ ಮಾಡಿ, ಅದಕ್ಕೆ ಈರುಳ್ಳಿ ಪಲ್ಯ ಹಾಕಿ ತಿನ್ನಲು ಕೊಡುತ್ತಿದ್ದರು. ನಂಗೆ ಮತ್ತು ಅಣ್ಣನಿಗೆ ಈ ಬ್ರೆಡ್‌ ರೋಸ್ಟ್‌ ಸಖತ್‌ ಇಷ್ಟ ಆಗ್ತಿತ್ತು. ಉಳಿದಂತೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವಸ್ಥಾನಕ್ಕಾಗಿ ಪೊಂಗಲ್‌ ಮತ್ತು ಮೊಸರನ್ನ ಮಾಡುತ್ತಿದ್ದರು. ಹಾಗಾಗಿ ನಾನು ಅಡುಗೆ ಮಾಡುವುದನ್ನು ಕಲಿತೆ. ಚಿತ್ರಾನ್ನ, ಮೊಸರನ್ನ ಮತ್ತು ಪೊಂಗಲ್‌ ಚೆನ್ನಾಗಿ ಮಾಡುತ್ತೇನೆ.

ಒಂದಿನ ಅಪ್ಪ ಅಮ್ಮ ಇಲ್ಲದಿದ್ದಾಗ ಅ‌ಣ್ಣ ನಾನು ಇಬ್ಬರೂ ಬ್ರೆಡ್‌ ರೋಸ್ಟ್‌ ಮಾಡಬೇಕು ಅಂತ ಅಡುಗೆ ಮನೆಗೆ ಹೋಗಿದ್ವಿ. ಈಗಿರುವ ಹಾಗೆ ಗ್ಯಾಸ್‌ ಸ್ವವ್‌ ಇರಲಿಲ್ಲ. ಸೀಮೆಎಣ್ಣೆ ಪಂಪ್‌ಸ್ಟವ್‌ ಇತ್ತು. ನನಗೂ ಅವನಿಗೂ ಇಬ್ಬರಿಗೂ ಸ್ಟವ್‌ ಹಚ್ಚೋದು ಹೇಗೆ ಅನ್ನೋದು ತಿಳಿದಿರಲಿಲ್ಲ. ಪಂಪ್‌ ಮಾಡೋದು ಗೊತ್ತಿತ್ತು. ಪಂಪ್‌ ಮಾಡಿದ್ವಿ, ಸೀಮೆಎಣ್ಣೆ ಬರ್ತಾನೆ ಇದೆ. ಆದ್ರೆ ಹೇಗೆ ಒಲೆ ಹಚ್ಚೋದು ಗೊತ್ತಾಗಲೇ ಇಲ್ಲ. ನಮಗೂ ಬ್ರೆಡ್‌ ರೋಸ್ಟ್‌ ತಿನ್ನುವ ಆಸೆ ಇಂಗಿ ಹೋಗಿತ್ತು. ಆಗ್ಲೆ ಅಪ್ಪ ಅಮ್ಮ ಮನೆಗೆ ಬಂದ್ರು. ಬ್ರೆಡ್‌ ರೋಸ್ಟ್‌ ಮಾಡ್ಕಂಡು ತಿನ್ಬೇಕಿದ್ದ ನಾವು ಬೆತ್ತದ ಏಟು ತಿಂದ್ವಿ.

ನಾವು ಒಂಥರಾ ಮೊಂಡರು. ಒದೆ ತಿಂದ ಮಾತ್ರಕ್ಕೆ ಅಡುಗೆ ಮನೆ ಕಡೆ ಹೋಗುವುದನ್ನು ನಿಲ್ಲಿಸಲಿಲ್ಲ. ಸ್ವಲ್ಪ ತಿಂಗಳ ನಂತರ ಮತ್ತೆ ಅದೇ ಬ್ರೆಡ್‌ ರೋಸ್ಟ್‌ ಮಾಡೋಕೆ ತಯಾರಿ ನಡೆಸಿದ್ವಿ. ಪಂಪ್‌ಸ್ಟವ್‌ ಬದಲಿಗೆ ಸ್ಟೀಲ್‌ ಸ್ಟವ್‌ ಬಂದಿತ್ತು. ಅದನ್ನು ಹಚ್ಚುವುದು ಹೇಗೆ ಎಂದು ತಿಳಿದಿತ್ತು. ಹಾಗಾಗಿ ಧೈರ್ಯ ಮಾಡಿ ಅಡುಗೆ ಮಾಡಿದ್ವಿ. ತವಾ ಬದಲಿಗೆ ಬಾಣಲೆಯಲ್ಲಿ ಬ್ರೆಡ್‌ ರೋಸ್ಟ್‌ ಮಾಡಿದ್ವಿ. ಅಂದು ಕೆಂಪುಗಾಗೋ ಬದಲು ಕಪ್ಪಗಾಗಿತ್ತಷ್ಟೆ. ಇನ್ನು ಈರುಳ್ಳಿ ಪಲ್ಯ ಏನಾಗಿತ್ತು ಅಂತ ಹೇಳೋಕೆ ಕಷ್ಟ. ಹಾಗಾಗಿ ಕೇಳ್ಬೇಡಿ...

ಹಬ್ಬಗಳು ಬಂದ್ರೆ ನಮ್ಮ ಮನೆಯಲ್ಲಿ ಸಡಗರವೋ ಸಡಗರ. ಗಣೇಶ ಹಬ್ಬದ ಹಿಂದಿನ ದಿನ ಅಮ್ಮ ದೇವರ ನೈವೇದ್ಯಕ್ಕಾಗಿ 21 ರೀತಿಯ ಬಗೆ ಬಗೆ ಖಾದ್ಯಗಳನ್ನು ತಯಾರಿಸುತ್ತಿದ್ದರು. ಎಡೆ ಆಗುವವರೆಗೂ ನಾವು ತಿನ್ನುವಂತಿರಲಿಲ್ಲ. ಆಗ ನಮ್ಮ ಹೊಟ್ಟೆಯಲ್ಲಿ ಉಂಟಾಗುತ್ತಿದ್ದ ಚಡಪಡಿಕೆ... ನಿಮಗೂ ಈ ಅನುಭವ ಆಗಿರುತ್ತೆ ಮತ್ಯಾಕೆ ಹೇಳೋದು ಅಲ್ವಾ!

ಜೀ ವಾಹಿನಿಯ ಖಾನಾ–ಖಜಾನಾ ಮತ್ತು ಡಿಸ್ಕವರಿ ಚಾನಲ್‌ನ ಮನರಂಜನಾ ಚಾನಲ್‌ಗಳು ನೋಡುತ್ತ ಹಲವಾರು ವ್ಯಂಜನಗಳನ್ನು ತಯಾರಿಸುವುದು ಕಲಿತೆ. ಚಪಾತಿ ಅಂದ್ರೆ ಬಹಳ ಇಷ್ಟ. ದಾಲ್‌ ಇದ್ರೆ ಈಗಲೂ 15 ಚಪಾತಿ ತಿನ್ನಬಲ್ಲೆ.ಅಮ್ಮ ಮಾಡುವ ಅಕ್ಕಿರೊಟ್ಟಿ, ಕಲ್ಲಿನಲ್ಲಿ ರುಬ್ಬಿದ ಕಾಯಿ ಚಟ್ನಿ ಅಂದ್ರೆ ಚಪ್ಪರಿಸಿಕೊಂಡು ತಿನ್ನುವೆ. ನಮ್ಮ ಅಜ್ಜಿಗೆ ನಾನೂ ಸೇರಿ 20 ಜನ ಮೊಮ್ಮಕ್ಕಳು. ವರ್ಷಕ್ಕೆ ಒಂದೆರಡು ಸಲ ನಾವೆಲ್ಲರೂ ನಮ್ಮ ಅಜ್ಜಿ ಮನೆಗೆ ಹೋಗ್ತಿದ್ವಿ. ಅಜ್ಜಿ ನಮ್ಮೆಲ್ಲರಿಗೂ ಕೈತುತ್ತು ಕೊಡೋರು. ಅವರೆಷ್ಟು ಕೊಟ್ರೂ ತಿಂತಾನೆ ಇರ್ತಿದ್ವಿ. ಆ ದಿನಗಳು ಈಗಲೂ ಹಚ್ಚ ಹಸಿರಾಗಿವೆ.

ಈಗ ಸ್ನೇಹಿತರೊಟ್ಟಿಗೆ ಬೆಂಗಳೂರಲ್ಲಿ ಇದ್ದೇನೆ. ಇಲ್ಲಿಗೆ ಬಂದ ಹೊಸದರಲ್ಲಿ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದೆ. ಒಂದೆರಡು ವರ್ಷಕ್ಕೆ ಹೋಟೆಲ್‌ ಊಟ ಬೇಸರ ತಂದಿತು. ಹಾಗಾಗಿ ಮನೆಯಲ್ಲೇ ಅಡುಗೆ ಮಾಡಲು ಆರಂಭಿಸಿದ್ದೇವೆ. ಏನಾದ್ರು ರುಚಿರುಚಿಯಾಗಿ ತಿನ್ನಬೇಕು ಎಂದ ತಕ್ಷಣ ಬಜ್ಜಿ, ಬೋಂಡಾ ಮಾಡ್ಕೊಂಡು ತಿನ್ನುತ್ತೇವೆ.

ನಾನು ಹಲವಾರು ಊರುಗಳಿಗೆ ಪಯಣಿಸುತ್ತಿರುತ್ತೇನೆ. ಅಲ್ಲಿನ ವಿಶೇಷ ತಿಂಡಿಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ತಿನ್ನುವುದು ನನ್ನ ಹವ್ಯಾಸ. ಅಲ್ಲಿನ ತಿಂಡಿಗಳ ಪ್ರಯೋಗವೂ ನನ್ನ ರೂಮಿನಲ್ಲಿ ನಡೆಯುತ್ತದೆ. ಈ ಹೊಸ ಪ್ರಯೋಗಗಳಿಗೆ ನನ್ನ ಸ್ನೇಹಿತರ ಹೊಟ್ಟೆಗಳೇ ತೀರ್ಪು ನೀಡುತ್ತವೆ.

ಸಿನಿಮಾಗಳಿಗೆ ತಕ್ಕಂತೆ ನನ್ನ ಊಟದ ಪಥ್ಯ ನಡೆಯುತ್ತದೆ. ‘ರಾಮಾ ರಾಮಾ ರೇ’ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಇಷ್ಟವಾದದ್ದನ್ನು ತಿನ್ನುತ್ತಿರಲಿಲ್ಲ. ಈಗ ಮೂರು ತಿಂಗಳಿನಿಂದ ಮತ್ತೆ ಅದೇ ಡಯಟ್‌ ಶುರು ಮಾಡಿದ್ದೇನೆ. ಆದ್ರೆ ಡಯಟ್‌ ಅಂತ್ಯವಾದ ನಂತರ ಇಷ್ಟಪಟ್ಟದ್ದನ್ನು ಹುಡುಕಿಕೊಂಡು ಹೋಗಿ ತಿನ್ನುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT