ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನೂ ಬಿಡದ ಮೃಗೀಯ ವರ್ತನೆಯ ಅತ್ಯಾಚಾರಿಗಳಿಗೆ ಗಲ್ಲು ವಿಧಿಸಿ: ಹೇಮಾ ಮಾಲಿನಿ

Last Updated 14 ಏಪ್ರಿಲ್ 2018, 13:36 IST
ಅಕ್ಷರ ಗಾತ್ರ

ನವದೆಹಲಿ: ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರತಿಪಾದಿಸಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರ ಹೇಳಿಕೆಗೆ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಶನಿವಾರ ಸಹಮತ ವ್ಯಕ್ತಪಡಿಸಿದ್ದಾರೆ.

‘ಕಠುವಾ ಹಾಗೂ ಉನ್ನಾವ್‌ ಅತ್ಯಾಚಾರ ಪ್ರಕರಣ ಮತ್ತು ಈಚೆಗೆ ದೇಶದ ಹಲವೆಡೆ ನಡೆದ ಅತ್ಯಾಚಾರಗಳಲ್ಲಿ ಮಕ್ಕಳೇ ಬಲಿಪಶುಗಳಾಗಿದ್ದಾರೆ. ಹೀಗಾಗಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ ಕಾನೂನಿಗೆ ಅಗತ್ಯ ಬದಲಾವಣೆ ತರಬೇಕು. ಅದಕ್ಕಾಗಿ ಪೋಸ್ಕೊ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಮೇನಕಾ ಶುಕ್ರವಾರ ಹೇಳಿದ್ದರು.

ಮಕ್ಕಳ ಮೇಲಿನ ಅತ್ಯಾಚಾರಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಹೇಮಾ ಮಾಲಿನಿ ಅವರು ಈ ಬಗ್ಗೆ ಟ್ವೀಟ್‌ ಮಾಡಿ, ‘ಮಕ್ಕಳನ್ನೂ ಉಳಿಸದ ಪ್ರಾಣಿಗಳ’ ವಿರುದ್ಧ ರಾಷ್ಟ್ರೀಯ ಆಂದೋಲನಕ್ಕೆ ಕರೆ ನೀಡಿದ್ದು, ಮಾಧ್ಯಮಗಳು ಈ ವಿಷಯವನ್ನು ಬೆಂಬಲಿಸಬೇಕು ಎಂದು ಕೋರಿದ್ದಾರೆ.

‘ನಮ್ಮ ದೇಶದ ಎಲ್ಲೆಡೆ ಅತ್ಯಾಚಾರ ನಡೆಯುತ್ತಿರುವ ಬಗ್ಗೆ ದೈನಂದಿನ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ. ಅತ್ಯಾಚಾರದಂತಹ ಹೀನ, ನಾಚಿಕೆಗೇಡಿನ ಸಂಗತಿಗಳಲ್ಲಿ ಕಠುವಾ, ಉನ್ನಾವ್‌ ಎರಡು ಘಟನೆಗಳು. ಆದರೆ, ಈ ಬುದ್ದಿಹೀನ ಅತ್ಯಾಚಾರಿಗಳನ್ನು ಮನುಷ್ಯರು ಎಂದು ಪರಿಗಣಿಸಬಹುದೇ? ಅವರ ಈ ಮೃಗೀಯ ವರ್ತನೆಯ ಘೋರ ಅಪರಾಧಗಳಿಗೆ ಮರಣದಂಡನೆ ವಿಧಿಸಿ ಗಲ್ಲಿಗೇರಿಸಬೇಕು’ ಎಂದು ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ.

‘ಅಂಬೆಗಾಲಿಡುವ ಮಕ್ಕಳನ್ನೂ ಉಳಿಸದ ಪ್ರಾಣಿಗಳ’ ವಿರುದ್ಧ ರಾಷ್ಟ್ರಮಟ್ಟದಲ್ಲಿ ಚಳವಳಿ, ಆಂದೋಲಗಳು ಮಾಧ್ಯಮ ಸಹಕಾರದೊಂದಿಗೆ ರೂಪಗೊಳ್ಳಬೇಕು. ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಕಾನೂನಿಗೆ ಅಗತ್ಯ ಬದಲಾವಣೆ ತರಬೇಕು. ಅದಕ್ಕಾಗಿ ಪೋಸ್ಕೊ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದಿರುವ ಮೇನಕಾ ಗಾಂಧಿ ಅವರ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ’ ಎಂದು ಅವರು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ಪ್ರಸ್ತುತ ಪೋಸ್ಕೊ ಕಾಯ್ದೆಯಲ್ಲಿ ಮರಣದಂಡನೆಗೆ ಯಾವುದೇ ಅವಕಾಶವಿಲ್ಲ. ಅತ್ಯಾಚಾರ ಎಸಗಿದ ತಪ್ಪಿತಸ್ಥರಿಗೆ ಗರಿಷ್ಠಮಟ್ಟದ ಜೀವಾವಧಿ ಶಿಕ್ಷೆ ಇದೆ. ಇದು ಲೈಂಗಿಕ ದೌರ್ಜನ್ಯದಂತ ಪ್ರಕರಣ ಹೆಚ್ಚಲು ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT