ಬಿಳಿಗಿರಿರಂಗನಬೆಟ್ಟ: ಮೂರು ಕಡೆ ಕಾಳ್ಗಿಚ್ಚು

ಗುರುವಾರ , ಏಪ್ರಿಲ್ 25, 2019
31 °C

ಬಿಳಿಗಿರಿರಂಗನಬೆಟ್ಟ: ಮೂರು ಕಡೆ ಕಾಳ್ಗಿಚ್ಚು

Published:
Updated:
Prajavani

ಯಳಂದೂರು/ಚಾಮರಾಜನಗರ: ತಾಲ್ಲೂಕಿನ ಹುಲಿ ಸಂರಕ್ಷಿತ ತಾಣ ಬಿಳಿಗಿರಿರಂಗನಬೆಟ್ಟದಲ್ಲಿ ಗುರುವಾರ ಮೂರು ಕಡೆಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ. ಹತ್ತಾರು ಎಕರೆ ಕಾಡು ಸುಟ್ಟಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಸ್ಥಳೀಯರ ಕೃತ್ಯವೇ ಆಗಿರಬಹುದು ಎಂದು ಅವರು ಶಂಕಿಸಿದ್ದಾರೆ. 

ಕೊಳ್ಳೇಗಾಲ ಅರಣ್ಯ ವಲಯದ ಕೆರೆದಿಂಬ ಪೋಡು, ಕೆ.ಗುಡಿ ಮತ್ತು ಯಳಂದೂರು ಅರಣ್ಯ ವಲಯ ಸೇರಿ ಮೂರು ಭಾಗಗಳಲ್ಲಿ ಕಾಣಿಸಿಕೊಂಡ ಬೆಂಕಿಯು ಅಲ್ಲಲ್ಲಿ ದಟ್ಟ ಹೊಗೆಯಿಂದ ತುಂಬಿತ್ತು. ಆದರೂ, ಕೆ. ಗುಡಿ ಬಳಿ ಸಂಜೆ ವೇಳೆಗೆ ಬೆಂಕಿಯ ಕೆನ್ನಾಲಿಗೆ ವಿಸ್ತಾರವಾಗುತ್ತಲೇ ಸಾಗಿತ್ತು. ಇದರಿಂದ ನೂರಾರು ಅರಣ್ಯ ರಕ್ಷಕರು ಮತ್ತು ಅಧಿಕಾರಿಗಳ ತಂಡ ವಿವಿಧ ಬೀಟ್‌ಗಳಲ್ಲಿದ್ದ ಸಿಬ್ಬಂದಿಯನ್ನು ಒಟ್ಟುಗೂಡಿಸಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಸಂಜೆ ವೇಳೆಗೆ ಕಾಳ್ಗಿಚ್ಚು ಗುಂಬಳ್ಳಿ ಗ್ರಾಮದ ತನಕ ವ್ಯಾಪಿಸಿತ್ತು.

ಮಧ್ಯಾಹ್ನದ ನಂತರ ಗಂಗಾಧರೇಶ್ವರ ದೇಗುಲದಿಂದ ಚಾಮರಾಜನಗರಕ್ಕೆ ತೆರಳುವ ಕಲ್ಲರೆ ಸುತ್ತಮುತ್ತ ಬೆಂಕಿ ಕಾಣಿಸಿಕೊಂಡಿತ್ತು.

‘ನೂರಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರ ಸಹಕಾರದಿಂದ ಯಳಂದೂರು ವಲಯದ ಕಾಳ್ಗಿಚ್ಚನ್ನು ತಹಬಂದಿಗೆ ತರಲಾಗಿದೆ. ಸ್ಥಳದಲ್ಲೇ ನೀರಿನ ಟ್ಯಾಂಕ್‌ ನೆರವಿನಿಂದ ಸಿಬ್ಬಂದಿ ಬೆಂಕಿ ವ್ಯಾಪಿಸದಂತೆ ನಿಯಂತ್ರಿಸಲಾಯಿತು’ ಎಂದು ವಲಯ ಅರಣ್ಯಾಧಿಕಾರಿ ಮಹದೇವಯ್ಯ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹೊರಬಂದ ಆನೆ: ಹೊಗೆ ಹೆಚ್ಚಾಗುತ್ತಿದ್ದಂತೆ ಆಹಾರ ಅರಸಿ ಅಡವಿಯಲ್ಲಿದ್ದ  ಆನೆ ಸೇರಿದಂತೆ ಇತರೆ ಪ್ರಾಣಿಗಳು ಕೆರೆಗಳ ಅಕ್ಕಪಕ್ಕ ತೆರಳಿದವು.

ಸ್ಥಳೀಯರ ಕೃತ್ಯ: ‘ಹೊರಗಡೆಯಿಂದ ಬಂದವರು ಕಾಡಿನ ಒಳಭಾಗದಲ್ಲಿ ಬೆಂಕಿ ಹಚ್ಚಲು ಸಾಧ್ಯವಿಲ್ಲ. ಆ ಪ್ರದೇಶದ  ಪರಿಚಯ ಇರುವವರೇ ಈ ಕೃತ್ಯವನ್ನು ಎಸಗುತ್ತಾರೆ. ಸ್ಥಳೀಯರಲ್ಲದೆ ಬೇರೆ ಯಾರು ಕೂಡ ಬೆಂಕಿ ಹಾಕುವುದಿಲ್ಲ’ ಎಂದು ಬಿಆರ್‌ಟಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ಶಂಕರ್‌ ಅವರು ’ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳೀಯರು ಏನು ಹೇಳುತ್ತಾರೆ?

ಬಿಳಿಗಿರಿರಂಗನಬೆಟ್ಟದಲ್ಲಿ ವಾಸಿಸುತ್ತಿರುವವರ ಪ್ರಕಾರ, ಕಾನನದಲ್ಲಿ ಅಕ್ರಮವಾಗಿ ಬೆಳೆಯಲಾಗುವ ಭಂಗಿಸೊಪ್ಪು ಸಂಗ್ರಹಿಸುವವರು ಕಾಳ್ಗಿಚ್ಚು ಹಬ್ಬಲು ಕಾರಣ.

‘ದಟ್ಟಾರಣ್ಯದ ನಡುವೆ ತೆರಳಿ ಕಾಡು ಸುಡುವ ಜನರು ಹೊರಗಿನಿಂದ ಬರುವುದಿಲ್ಲ. ಅರಣ್ಯ ಇಲಾಖೆಯ ಕಣ್ಣು ತಪ್ಪಿಸಲು ಇಲ್ಲವೇ ಏಕ ಕಾಲದಲ್ಲಿ ಹಲವಾರು ಕಡೆ ಬೆಂಕಿ ಇಟ್ಟರೆ ಸಿಬ್ಬಂದಿ ಕಾಡಿನ ಬೆಂಕಿ ನಂದಿಸಲು ಚದುರಿ ಹೋಗುವುದರಿಂದ ಭಂಗಿ ಸೊಪ್ಪು ಸಂಗ್ರಹ ಮಾಡಬಹುದು. ಈ ಕರಾಳ ದಂಧೆ ನಡೆಸುವವರ ಮೇಲೆ  ಅಧಿಕಾರಿಗಳು ಕೇಸು ದಾಖಲಿಸುವುದನ್ನು ತಪ್ಪಿಸಲು ಇಂತಹ ಕೃತ್ಯ ಎಸಗುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !