ಅರಣ್ಯ ಇಲಾಖೆ ಸಿಬ್ಬಂದಿಗೆ ಶಸ್ತ್ರಗಳ ಅಗತ್ಯವಿದೆ: ನ್ಯಾಯಾಧೀಶ ಜಿ.ಬಸವರಾಜ ಅಭಿಮತ

7
ಅರಣ್ಯ ಹುತಾತ್ಮರ ದಿನಾಚರಣೆ

ಅರಣ್ಯ ಇಲಾಖೆ ಸಿಬ್ಬಂದಿಗೆ ಶಸ್ತ್ರಗಳ ಅಗತ್ಯವಿದೆ: ನ್ಯಾಯಾಧೀಶ ಜಿ.ಬಸವರಾಜ ಅಭಿಮತ

Published:
Updated:
Deccan Herald

ಚಾಮರಾಜನಗರ: ಅರಣ್ಯ ರಕ್ಷಣೆಗಾಗಿ ಜೀವವನ್ನೇ ಮುಡುಪಾಗಿಟ್ಟಿರುವ ಅರಣ್ಯ ಇಲಾಖೆಯ ಸಿಬ್ಬಂದಿಗೆ ಸ್ವಯಂ ರಕ್ಷಣೆಗಾಗಿ ಅಗತ್ಯ ಶಸ್ತ್ರಾಸಗಳನ್ನು ಒದಗಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಮಂಗಳವಾರ ಅಭಿಪ್ರಾಯಪಟ್ಟರು.

ಅರಣ್ಯ ಇಲಾಖೆಯ ಬಿಳಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ (ಬಿಆರ್‌ಟಿ) ವಿಭಾಗವು ಪಟ್ಟಣದ ಸಸ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚ‌ರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ತವ್ಯನಿರತ ಅರಣ್ಯ ಸಿಬ್ಬಂದಿ ಮೇಲೆ ಮಾರಣಾಂತಿಕ ದಾಳಿ, ಹಲ್ಲೆಗಳು ನಡೆಯುತ್ತಿರುತ್ತವೆ. ಅಂತಹ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗುವುದಕ್ಕೆ ಬಾಕಿ ಇವೆ. ಕಾಡುಗಳ್ಳರು, ಕಳ್ಳಬೇಟೆಗಾರರು, ಅಕ್ರಮ ಗಣಿಗಾರಿಕೆ ನಡೆಸುವವರಿಗೆ ಪ್ರತಿರೋಧ ವ್ಯಕ್ತಪಡಿಸಬೇಕಾದರೆ ಸಿಬ್ಬಂದಿ ಬಳಿ ಆಯುಧಗಳಿರಬೇಕು ಎಂದು ಪ್ರತಿಪಾದಿಸಿದರು.

‘ಚಾಮರಾಜನಗರ ಜಿಲ್ಲೆಯಲ್ಲಿ ಬಹಳಷ್ಟು ಅರಣ್ಯ ಪ್ರದೇಶ ಇದೆ. ಆದರೆ, ನನ್ನ ಅನುಭವದ ಪ್ರಕಾರ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ನೋಡಿ ಹೇಳುವುದಾದರೆ ಇಲ್ಲಿ ಸಿಬ್ಬಂದಿಯ ಕೊರತೆ ಇದೆ’ ಎಂದರು.

ಸಾಕಷ್ಟು ಸಿಬ್ಬಂದಿ ಹಾಗೂ ಶಸ್ತ್ರಗಳು ಇಲ್ಲದೇ ಇದ್ದರೆ ಪ್ರತಿರೋಧ ಒಡ್ಡಲು ಸಾಧ್ಯವಾಗುವುದಿಲ್ಲ. ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಗತ್ಯ ಸೌಲಭ್ಯ, ಭದ್ರತೆ ನೀಡಿದರೆ ಅರಣ್ಯದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ತಡೆಯಬಹುದು ಎಂದು ಹೇಳಿದರು.

ನೈಸರ್ಗಿಕ ಸಂಪತ್ತನ್ನು ರಕ್ಷಿಸುವ ಸಂದರ್ಭದಲ್ಲಿ ಮೃತಪಟ್ಟ ಅರಣ್ಯ ಇಲಾಖೆಯ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕಾಗಿ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ದಂತಚೋರ ವೀರಪ್ಪನ್‌ನಿಂದ ಹತ್ಯೆಗೀಡಾದ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್‌ ಅವರನ್ನು ಸ್ಮರಿಸಿದರು.

ಪುಷ್ಪನಮನ: ಇದಕ್ಕೂ ಮೊದಲು ಜಿ.ಬಸವರಾಜ ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಇಡುವುದರ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಬಿಆರ್‌ಟಿ ಯೋಜನಾ ನಿರ್ದೇಶಕ ಡಾ. ಪಿ.ಶಂಕರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ, ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಾಗರಾಜು, ರುಥ್ರನ್‌, ವಲಯ ಅರಣ್ಯಾಧಿಕಾರಿಗಳಾದ ಮಹದೇವಯ್ಯ, ರತನ್‌ ಕುಮಾರ್‌ ಸೇರಿದಂತೆ ಹಲವರು ಸ್ಮಾರಕಕ್ಕೆ ಪುಷ್ಪಗುಚ್ಛವಿಟ್ಟು ನಮನ ಸಲ್ಲಿಸಿದರು.

1966ರಿಂದ ಇಲ್ಲಿಯವರೆಗೆ ರಾಜ್ಯದಾದ್ಯಂತ ಕರ್ತವ್ಯದಲ್ಲಿದ್ದಾಗ ಮೃತಪಟ್ಟ 52 ಸಿಬ್ಬಂದಿಯ ಹೆಸರುಗಳನ್ನು ಡಾ.ಪಿ.ಶಂಕರ್‌ ಅವರು ಓದಿದರು.

ಗೌರವ: ಹುತಾತ್ಮರಾದವರ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !