ಕರ್ನಾಟಕ–ಗೋವಾ ಮತ್ಸ್ಯ ಸಂಘರ್ಷ

7

ಕರ್ನಾಟಕ–ಗೋವಾ ಮತ್ಸ್ಯ ಸಂಘರ್ಷ

Published:
Updated:
Deccan Herald

ಕೆಲವು ತಿಂಗಳ ಹಿಂದಿನವರೆಗೂ ಕರ್ನಾಟಕ ಮತ್ತು ಗೋವಾ ನಡುವೆ ಮೀನು ಸಾಗಣೆ ದೈನಂದಿನ, ಸಲೀಸಾದ ಚಟುವಟಿಕೆಯಾಗಿತ್ತು. ಆದರೆ, ಈ ಜೂನ್‌ನಿಂದ ಇದೇ ಮೊದಲ ಬಾರಿಗೆ ದೊಡ್ಡ ವಿವಾದದ ರೂಪ ಪಡೆದುಕೊಂಡಿದೆ. ಹೊರ ರಾಜ್ಯಗಳಿಂದ ಮೀನು ಸಾಗಣೆಯ ಮೇಲೆ ಆ ರಾಜ್ಯ ಹೇರಿರುವ ನಿರ್ಬಂಧಗಳೇ ಇದಕ್ಕೆ ಕಾರಣ.

ವಿಷಕಾರಿ ಫಾರ್ಮಲಿನ್‌ನ ನೆಪದಲ್ಲಿ ಪ್ರಾಮಾಣಿಕವಾಗಿ ದುಡಿಯುವ ಮೀನುಗಾರರು ಹಾಗೂ ವ್ಯಾಪಾರಿಗಳ ಮೇಲೂ ಅಲ್ಲಿನ ಸರ್ಕಾರ ಸವಾರಿ ಮಾಡುತ್ತಿದೆ ಎಂಬ ಭಾವನೆ ಈಗ ಬೆಳೆಯಲಾರಂಭಿಸಿದೆ.

ಫಾರ್ಮಲಿನ್ ಪೆಡಂಭೂತ!
ಹೆಣಗಳು ಕೊಳೆಯದಂತೆ ಬಳಸುವ ವಿಷಕಾರಿ ರಾಸಾಯನಿಕ ಫಾರ್ಮಲಿನ್ ಅನ್ನು ಮೀನಿಗೆ ಲೇಪಿಸಲಾಗುತ್ತಿದೆ, ಆ ಮೂಲಕ ಅವುಗಳನ್ನು ಸಂಸ್ಕರಿಸಿ ತಾಜಾತನ ಕಾಪಾಡಲಾಗುತ್ತದೆ ಎಂಬ ವದಂತಿಯೇ ಇದಕ್ಕೆ ಕಾರಣ. ನೆರೆಯ ಗೋವಾದ ಉತ್ತರ ಭಾಗದ ಮಾರುಕಟ್ಟೆಗಳಲ್ಲಿ ಹಾಗೂ ದಕ್ಷಿಣದ ಸಾಲ್ಸೆಟ್ ಪಟ್ಟಣದ ಮೀನು ಮಾರುಕಟ್ಟೆಗಳಲ್ಲಿ ಮೂರು ತಿಂಗಳ ಹಿಂದೆ ಫಾರ್ಮಲಿನ್ ಅಂಶ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಇದು ಆ ರಾಜ್ಯದಲ್ಲಿ ಆತಂಕದ ಅಲೆ ಹಬ್ಬಿಸಿತ್ತು.

ಜನರ ಆಕ್ರೋಶಕ್ಕೆ ಗುರಿಯಾಗುವ ಹಂತದಲ್ಲಿದ್ದ ಅಲ್ಲಿನ ಸರ್ಕಾರ, ಅಕ್ಟೋಬರ್ 27ರಂದು ಏಕಾಏಕಿ ಸುತ್ತೋಲೆ ಹೊರಡಿಸಿತು. ಗೋವಾದಲ್ಲಿ ಮೀನು ವ್ಯಾಪಾರ ಮಾಡಬೇಕಾದರೆ ಕೆಲವೊಂದು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅದರಲ್ಲಿ ಸೂಚಿಸಲಾಗಿತ್ತು. ಆದರೆ, ಈ ಬಗ್ಗೆ ಮೀನು ವ್ಯಾಪಾರಿಗಳಿಗೆ ಯಾವುದೇ ಮುನ್ಸೂಚನೆ ಇರಲಿಲ್ಲ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಿಂದ ಗೋವಾದತ್ತ ಹೊರಟಿದ್ದ 50ಕ್ಕೂ ಹೆಚ್ಚು ಲಾರಿಗಳನ್ನು ಗಡಿ ಭಾಗವಾದ ಪೋಳೆಂ ಚೆಕ್‌ಪೋಸ್ಟ್‌ನಲ್ಲಿ ರಾತ್ರಿ 8ರ ಸುಮಾರಿಗೆ ತಡೆದ ಗೋವಾ ಪೊಲೀಸರು ವಾಪಸ್ ಕಳುಹಿಸಿದರು.

ಗೋವಾದ ಷರತ್ತುಗಳೇನು?
ಮೀನು ವ್ಯಾಪಾರಿಗಳು ಗೋವಾದಲ್ಲಿ ಆಹಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ನಿರ್ದೇಶನಾಲಯದ ಅಡಿಯಲ್ಲಿ ನೋಂದಣಿ ಮಾಡಿಸಿರಬೇಕು. ಮೀನು ಸಾಗಣೆ ಲಾರಿಗಳಿಗೆ ಅವು ಹೊರಡುವ ರಾಜ್ಯದ ಆಹಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ನಿರ್ದೇಶನಾಲಯದಿಂದ ಪ್ರಮಾಣ ಪತ್ರ ಪಡೆದಿರಬೇಕು. ಮುಚ್ಚಿದ ಲಾರಿಗಳಲ್ಲೇ ಮೀನು ಸಾಗಣೆ ಮಾಡಬೇಕು. ಇದಕ್ಕೆ ಬದ್ಧರಾಗಿಲ್ಲದವರು ರಾಜ್ಯ ಪ್ರವೇಶಿಸಬಾರದು ಎಂಬವು ಗೋವಾದ ಷರತ್ತುಗಳಾಗಿವೆ.

ಗೋವಾ ನಮ್ಮ ಜಿಲ್ಲೆಗಳಿಂದ ಕೆಲವೇ ಗಂಟೆಗಳ ದೂರದಲ್ಲಿ ಇದೆ. ಅಲ್ಲದೇ ಮೀನಿಗೆ ಈ ಭಾಗದಲ್ಲಿ ಫಾರ್ಮಲಿನ್ ಬಳಸುವ ಪದ್ಧತಿ ಇಲ್ಲದ ಕಾರಣ ಸಮಸ್ಯೆ ಒಂದೆರಡು ದಿನಗಳಲ್ಲಿ ಸರಿಯಾಗಬಹುದು ಎಂದು ಮೀನುಗಾರರು ಭಾವಿಸಿದ್ದರು. ಆದರೆ, ಗೋವಾ ತನ್ನ ಪಟ್ಟನ್ನು ಸಡಿಲಿಸದೇ ಕರ್ನಾಟಕದ ಮೀನು ಸಾಗಣೆ ಲಾರಿಗಳನ್ನು ಚೆಕ್‌ಪೋಸ್ಟ್‌ಗಳಲ್ಲಿ ಬಿಡಲಿಲ್ಲ. ಇದಕ್ಕೆ ಪ್ರತಿಯಾಗಿ ಗೋವಾದಿಂದ ಮೀನು ಹೊತ್ತು ಕಾರವಾರದ ಮೂಲಕ ಸಾಗುವ ಲಾರಿಗಳನ್ನು ನ.17ರಂದು ಸ್ಥಳೀಯ ಮೀನು ವ್ಯಾಪಾರಿಗಳು ತಡೆದರು.

ಈ ನಡುವೆ ನ.27ರಂದು ಕರಾವಳಿಯ ಮೂರೂ ಜಿಲ್ಲೆಗಳ ಜನಪ್ರತಿನಿಧಿಗಳ ನಿಯೋಗ ಪಣಜಿಗೆ ತೆರಳಿತು. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅದರ ನೇತೃತ್ವ ವಹಿಸಿದ್ದರು. ಮೀನು ಸಾಗಣೆಗೆ ಮುಕ್ತ ಅವಕಾಶ ಕೊಡುವಂತೆ ಗೋವಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಧರ್ಮೇಂದ್ರ ಶರ್ಮಾ ಅವರಿಗೆ ಮನವಿ ಸಲ್ಲಿಸಲಾಯಿತು. ಆದರೆ, ಇದಕ್ಕೆ ಸ್ಪಷ್ಟವಾದ ಉತ್ತರ ಗೋವಾ ಸರ್ಕಾರದಿಂದ ಸಿಗಲಿಲ್ಲ. ಹೀಗಾಗಿ ಈ ನಿರ್ಬಂಧ ಇನ್ನೆಷ್ಟು ದಿನ ಎಂಬ ಗೊಂದಲ ಮುಂದುವರಿದಿದೆ.

ಪರಿಣಾಮವೇನಾಯ್ತು?
ಫಾರ್ಮಲಿನ್ ಆತಂಕ ಕಾಡಲು ಆರಂಭಿಸಿದಂತೆ ಗೋವಾದಲ್ಲಿ ಮೀನಿಗೆ ಬೇಡಿಕೆ ತುಸು ಇಳಿಮುಖವಾಯಿತು. ಆದರೆ, ನಮ್ಮ ರಾಜ್ಯದ ಮಾರುಕಟ್ಟೆಗಳಿಗೆ ಭರಪೂರ ಆವಕವಾಗಿ ದರ ಕುಸಿಯಿತು. ಹೆಚ್ಚುವರಿ ಮೀನನ್ನು ಮೀನುಗಾರರು ಮರಳಿನಲ್ಲಿ ಹೂತು ಹಾಕಿದ ಸನ್ನಿವೇಶವೂ ಕಂಡುಬಂತು.

ಗೋವಾದಲ್ಲಿ ಹೆಚ್ಚಾಗಿ ಬಲೆಗೆ ಬೀಳುವ ಬಾಂಗ್ಡೆ ಮತ್ತು ತಾರ್ಲೆ ಮೀನುಗಳು ಹೆಚ್ಚಾಗಿ ಸಿಗುತ್ತವೆ. ಹಾಗಾಗಿ ಅಲ್ಲಿನ ಮಾರುಕಟ್ಟೆಗೆ ನಮ್ಮ ಕರಾವಳಿಯಲ್ಲಿ ಸಿಗುವ ಪಾಂಫ್ರೆಟ್ (ಮಾಂಜಿ), ತಾಂಬೂಸ್, ಇಶೋಣ, ಸೆಟ್ಲೆ ತಳಿಯ ಮೀನುಗಳನ್ನು ಮೊದಲಿನಿಂದಲೂ ರವಾನೆ ಮಾಡಲಾಗುತ್ತಿತ್ತು. ಆದರೆ, ನಿರ್ಬಂಧದಿಂದಾಗಿ ಈಗ ಅವುಗಳು ಲಭಿಸದೇ ಗ್ರಾಹಕರಿಗೆ ಬೇಸರವಾಗಿದೆ. ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.

ಈಗ ಪ್ರವಾಸಿಗರಂತೆ ಕಾರವಾರಕ್ಕೆ ಕಾರಿನಲ್ಲಿ ಬರುವ ಗೋವಾದ ಕೆಲವು ಮೀನು ವ್ಯಾಪಾರಿಗಳು, ಕಾರಿನಲ್ಲೇ ಕದ್ದುಮುಚ್ಚಿ ಸಾಗಿಸುತ್ತಿದ್ದಾರೆ. ಅಂತಹ ಒಂದು ಕಾರನ್ನು ಕಾರವಾರದ ಮಾಜಾಳಿ ಬಳಿ ಸ್ಥಳೀಯರು ಪತ್ತೆ ಹಚ್ಚಿ ಮುಂದೆ ಹೋಗದಂತೆ ತಡೆದು ಎಚ್ಚರಿಕೆ ನೀಡಿದ್ದರು. ಇದಕ್ಕೂ ಮೊದಲು ಹತ್ತಾರು ಲಾರಿಗಳನ್ನು ಕಾರವಾರದ ಬೈತಖೋಲ್ ಮೀನುಗಾರಿಕಾ ಬಂದರಿನ ಸಮೀಪ ತಡೆದು ನಿಲ್ಲಿಸಿ ವಾಪಸ್ ಕಳುಹಿಸಲಾಗಿದೆ.

‘ಕಾರವಾರ, ಅಂಕೋಲಾ, ಹೊನ್ನಾವರ, ಭಟ್ಕಳ ತಾಲ್ಲೂಕುಗಳು, ಉಡುಪಿ ಮತ್ತು ಮಂಗಳೂರಿನ ಮೀನುಗಾರರಿಗೆ ಗೋವಾ ತಲುಪಲು ದಿನಗಟ್ಟಲೆ ಪ್ರಯಾಣದ ಅಗತ್ಯವಿಲ್ಲ. ಬೇಟೆಯಾಡಿದ ಕೆಲವೇ ಗಂಟೆಗಳ ಅವಧಿಯಲ್ಲಿ ಗ್ರಾಹಕರಿಗೆ ತಲುಪುವ ಮೀನನ್ನು ಫಾರ್ಮಲಿನ್ ಹಾಕಿ ಸಂಸ್ಕರಿಸುವ ಅಗತ್ಯವೇ ಇಲ್ಲ’ ಎನ್ನುತ್ತಾರೆ ಜಿಲ್ಲಾ ಮೀನುಗಾರರ ಒಕ್ಕೂಟದ ಅಧ್ಯಕ್ಷ ಗಣಪತಿ ಮಾಂಗ್ರೆ.

‘ಸಂಪೂರ್ಣ ಮುಚ್ಚಿದ ವಾಹನಗಳಲ್ಲೇ ಮೀನು ಸಾಗಣೆ ಮಾಡಬೇಕು ಎಂಬುದು ಗೋವಾ ಹೇರಿರುವ ಷರತ್ತುಗಳಲ್ಲಿ ಒಂದು. ಆದರೆ, ಮೀನುಗಾರರು ಇದನ್ನು ಮಾಡಿಕೊಂಡರೆ ಮೀನು ವ್ಯಾಪಾರದಿಂದ ಸಿಗುವ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಅಷ್ಟಕ್ಕೂ ಕಾರವಾರ ಮತ್ತು ಅಂಕೋಲಾ ಗೋವಾದಿಂದ ಕೂಗಳತೆಯ ದೂರದಲ್ಲಿರುವ ಮೀನುಗಾರಿಕಾ ಕೇಂದ್ರಗಳು. ಇಲ್ಲಿಂದ ಅವರಿಗೆ ಸಿಗವಷ್ಟು ತಾಜಾ ಮೀನು ಮತ್ತೆಲ್ಲಿಂದಲೂ ಸಿಗಲು ಸಾಧ್ಯವೇ ಇಲ್ಲ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಗೋವಾ ಆದೇಶ ಏಕಪಕ್ಷೀಯ ಎಂಬುದು ಉತ್ತರ ಕನ್ನಡ ಜಿಲ್ಲಾ ಮೀನು ವ್ಯಾಪಾರಸ್ಥರ ಅಭಿವೃದ್ಧಿ ಸಂಘದ ಆರೋಪ. ನಿರ್ಬಂಧ ತೆರವುಗೊಳಿಸುವ ಸಲುವಾಗಿ ಹೋರಾಟದ ಮುಂದಾಳತ್ವ ವಹಿಸಿಕೊಳ್ಳಲು ಸಂಘದ ಮುಖಂಡರು ಮುಂದಾಗಿದ್ದಾರೆ. ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರದ ಮೀನುಗಾರರನ್ನು ಒಗ್ಗೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

‘ನೋಡಿದ ಕೂಡಲೇ ತಿಳಿಯುತ್ತದೆ’
‘ಫಾರ್ಮಲಿನ್ ಬಳಸಿದ ಮೀನು ನೋಡಲು ಕೃತಕವಾದ ತಾಜಾತನದಿಂದ ಕೂಡಿರುತ್ತದೆ. ಗಿಡದಲ್ಲಿರುವ ಸೇಬನ್ನು ಕಿತ್ತು ಮೇಣ (ವ್ಯಾಕ್ಸ್) ಲೇಪಿಸಿ ಮಾರಾಟಕ್ಕಿಟ್ಟಂತೆ ಇರುತ್ತದೆ. ಮೀನಿನ ಕಿವಿರು ಬೆಳ್ಳಿಯಂತೆ ಹೊಳೆಯುತ್ತದೆ. ತಾಜಾ ಮೀನು ಹೊಳೆಯುವುದಿಲ್ಲ. ರಾಸಾಯನಿಕ ಬಳಸಿದ ಮೀನಿನ ರುಚಿಯಲ್ಲೂ ಬದಲಾವಣೆ ಇರುತ್ತದೆ. ಕಾರವಾರದಲ್ಲಿ ಈವರೆಗೆ ಅಂತಹ ಸಮಸ್ಯೆ ಎದುರಾಗಿಲ್ಲ’ ಎನ್ನುತ್ತಾರೆ ಮಾರುಕಟ್ಟೆಯಲ್ಲಿ ಮೀನು ಖರೀದಿಗೆ ಬಂದಿದ್ದ ಜ್ಯೋತಿ ರೇವಣಕರ್.

ಮುಂದೇನು?
ಇತ್ತ ಮೀನುಗಾರರೂ ತಮ್ಮ ಸರಕು ಮಾರಾಟವಾಗದೇ, ದೋಣಿಗಳಿಗೆ, ಕಾರ್ಮಿಕರಿಗೆ ಹೂಡಿದ ಬಂಡವಾಳ ವಾಪಸಾಗದೇ ಕೈಸುಟ್ಟುಕೊಳ್ಳುತ್ತಿದ್ದಾರೆ. ಅತ್ತ ಗೋವಾದಲ್ಲಿ ಅಗತ್ಯವಿರುವಷ್ಟು ಮೀನು ಸಿಗದೇ ಕೊರತೆಯುಂಟಾಗಿದೆ. ಯಾವಾಗ ಈ ಗೊಂದಲಕ್ಕೆ ತೆರೆ ಬಿದ್ದು ಎರಡೂ ರಾಜ್ಯಗಳ ನಡುವೆ ಎಂದಿನಂತೆ ಮೀನು ವ್ಯಾಪಾರ ಸಂಬಂಧ ಸರಾಗವಾಗಿ ಮುಂದುವರಿಯುತ್ತದೆ ಎಂದು ಎರಡೂ ಕಡೆಗಳಲ್ಲಿ ಕಾಯುವಂತಾಗಿದೆ.

ರಾಜ್ಯದಲ್ಲಿ ಪತ್ತೆಯಾಗದ ಫಾರ್ಮಲಿನ್
‘ಕಾರವಾರ ಸೇರಿದಂತೆ ಜಿಲ್ಲೆಯ ವಿವಿಧ ಮೀನು ಮಾರುಕಟ್ಟೆಗಳಲ್ಲಿ ಮೀನು ಸಂಸ್ಕರಣೆಗೆ ಫಾರ್ಮಲಿನ್ ಬಳಕೆ ಮಾಡಿರುವುದು ಪತ್ತೆಯಾಗಿಲ್ಲ. ಆದ್ದರಿಂದ ಆತಂಕದ ಅಗತ್ಯವಿಲ್ಲ’ ಎಂದು ಆಹಾರ ಸುರಕ್ಷತೆ ಅಧಿಕಾರಿ ಅರುಣ್ ಕಾಶಿ ಭಟ್ ಸ್ಪಷ್ಟಪಡಿಸುತ್ತಾರೆ.

‘ಮಾರುಕಟ್ಟೆಗಳ ಮೇಲೆ ಸದಾ ನಿಗಾ ಇಡಲಾಗಿದೆ. ಮೀನು ಸಾಗಿಸುವವರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಆಹಾರ ಮತ್ತು ಔಷಧ ಗುಣಮಟ್ಟ ನಿಯಂತ್ರಣ ನಿರ್ದೇಶನಾಲಯದಿಂದ ಪ್ರಮಾಣಪತ್ರ ಪಡೆದುಕೊಳ್ಳುವುದು ಸೂಕ್ತ. ಇದರಿಂದ ನಿರಾತಂಕವಾಗಿ ವ್ಯವಹಾರ ನಡೆಸಬಹುದಾಗಿದೆ’ ಎಂದೂ ಅವರು ಸಲಹೆ ನೀಡುತ್ತಾರೆ.


ಕಾರವಾರದ ಮೀನು ಮಾರುಕಟ್ಟೆ

‘ಆಹಾರಕ್ಕೆ ವಿಷ ಹಾಕುವ ಮಂದಿ ನಾವಲ್ಲ’
‘ನಾವು ಆಹಾರಕ್ಕೆ ವಿಷ ಸೇರಿಸಿ ದುಡ್ಡು ಮಾಡುವ ಮಂದಿಯಲ್ಲ. ಅಂತಹ ಪಾಪದ ಕೆಲಸ ನಮಗೆ ಬೇಕಿಲ್ಲ. ಯಾರೋ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ?’ ಎನ್ನುತ್ತಾರೆ ಕಾರವಾರ ಮೀನು ವ್ಯಾಪಾರಸ್ಥರ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಪ್ರವೀಣ್ ಜಾವ್ಕರ್.

‘ನಮ್ಮ ಮೀನುಗಾರರು ಅತ್ಯಂತ ಜತನದಿಂದ ಮೀನನ್ನು ಮಂಜುಗಡ್ಡೆಯಲ್ಲಿಟ್ಟು ಕೆಡದಂತೆ ಸಂರಕ್ಷಿಸುತ್ತಾರೆ. ಆದರೆ, ಹೊರ ರಾಜ್ಯಗಳಲ್ಲಿ ಫಾರ್ಮಲಿನ್ ಬಳಸಿ ಸಂಸ್ಕರಣೆ ಮಾಡಲಾಗುತ್ತದೆ ಎಂದು ಗೋವಾ ಸರ್ಕಾರವು ಉತ್ತರ ಕನ್ನಡದಿಂದ ಮೀನು ಸಾಗಣೆ ಮೇಲೆ ನಿಷೇಧ ಹೇರಿರುವುದು ಹಾಸ್ಯಾಸ್ಪದ’ ಎನ್ನುತ್ತಾರೆ ಅವರು.

‘ಗೋವಾ ಸರ್ಕಾರವು ನಮ್ಮ ರಾಜ್ಯದ ಮೀನನ್ನು ತನ್ನ ಮಾರುಕಟ್ಟೆಗೆ ಸೇರಿಸಿಕೊಳ್ಳುವ ತನಕವೂ ನಾವು ಆ ರಾಜ್ಯದ ಮೀನು ಸಾಗಣೆ ಲಾರಿಗಳನ್ನು ನಮ್ಮ ರಾಜ್ಯದಲ್ಲಿ ಸಂಚರಿಸಲು ಅವಕಾಶ ನೀಡುವುದಿಲ್ಲ’ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !