ಭಾನುವಾರ, ಡಿಸೆಂಬರ್ 8, 2019
21 °C

ಫ್ರಾನ್ಸ್‌ನಲ್ಲಿ ವ್ಯಾಪಕ ಹಿಂಸಾಚಾರ: ತುರ್ತು ಪರಿಸ್ಥಿತಿ ಹೇರಿಕೆ ಸಾಧ್ಯತೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Deccan Herald

ಪ್ಯಾರಿಸ್‌: ಸರ್ಕಾರದ ನೀತಿಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ವ್ಯಾಪಕ ಹಿಂಸಾಚಾರಕ್ಕೆ ತಿರುಗಿರುವುದರಿಂದ ಫ್ರಾನ್ಸ್‌ನಲ್ಲಿ ತುರ್ತು ಪರಿಸ್ಥಿತಿ ಹೇರಲು ಚಿಂತನೆ ನಡೆದಿದೆ.

ತೈಲ ಬೆಲೆ ಏರಿಕೆ ಹಾಗೂ ಹೆಚ್ಚುತ್ತಿರುವ ಜೀವನ ವೆಚ್ಚ ವಿರೋಧಿಸಿ ಹಲವು ಸಂಘಟನೆಗಳು ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸುತ್ತಿವೆ.

ಹಿಂಸಾಚಾರದಲ್ಲಿ ಇದುವರೆಗೆ ಮೂವರು ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾದ 400 ಮಂದಿಯನ್ನು ಬಂಧಿಸಲಾಗಿದೆ.

ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವವರನ್ನು ಸರ್ಕಾರ ಮಾತುಕತೆಗೆ ಆಹ್ವಾನಿಸಿದೆ.

ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಯುವಕರ ಗುಂಪೊಂದು ಪ್ಯಾರಿಸ್‌ನಲ್ಲಿ ಭಾನುವಾರ ಹಿಂಸಾಚರಕ್ಕಿಳಿದಿದೆ. ಯುವಕರು ಕಬ್ಬಿಣದ ರಾಡುಗಳು, ಮಾರಕಾಸ್ತ್ರಗಳನ್ನು ಹಿಡಿದು ಓಡಾಡಿ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ವಾಹನಗಳಿಗೆ ಮತ್ತು ಕಟ್ಟಡಗಳಿಗೆ ಈ ಗುಂಪು ಬೆಂಕಿ ಹಚ್ಚಿದೆ. ಹಿಂಸಾಚಾರ ನಿಯಂತ್ರಿಸಲು ತುರ್ತು ಪರಿಸ್ಥಿತಿ ಹೇರಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಸರ್ಕಾರದ ವಕ್ತಾರ ಬೆಂಜಮಿನ್‌ ಗ್ರಿವಾಕ್ಸ್‌ ಹೇಳಿದ್ದಾರೆ. 

‘ದೇಶದ ಅಧ್ಯಕ್ಷ, ಪ್ರಧಾನಿ ಹಾಗೂ ಒಳಾಡಳಿತ ಸಚಿವರು ಚರ್ಚಿಸಿ ತುರ್ತು ಪರಿಸ್ಥಿತಿ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ದಂಗೆಕೋರರ ಜೊತೆ ಸಂಧಾನ ಮಾತುಕತೆ ನಡೆಸುವ ಬಗ್ಗೆಯೂ ಯೋಚಿಸುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಹಿಂಸಾಚಾರ ಸಹಿಸಲಾಗದು: ಪ್ರತಿಭಟನಾಕಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್‌, ‘ಹಿಂಸಾಚಾರವನ್ನು ಸಹಿಸಲಾಗದು’ ಎಂದು ಎಚ್ಚರಿಸಿದ್ದಾರೆ. 

ಬ್ಯೂನಸ್‌ ಐರಿಸ್‌ನಲ್ಲಿ ನಡೆದ ಜಿ–20 ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಪರಿಸ್ಥಿತಿ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಮಂತ್ರಿಯೊಂದಿಗೆ ಚರ್ಚಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ. 

ನವೆಂಬರ್‌ 17ರಂದು ದೇಶದಾದ್ಯಂತ ನಡೆದ ಪ್ರತಿಭಟನೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಮುಖ್ಯವಾಗಿ  ಡೀಸೆಲ್‌ ಬೆಲೆಯನ್ನು ಕಳೆದ ಒಂದು ವರ್ಷದಲ್ಲಿ ಶೇಕಡ 23ರಷ್ಟು ಹೆಚ್ಚಿಸಿರುವುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು