ಮನೆ ನಿರ್ಮಿಸುವ ಆಸೆ ತೋರಿಸಿ ವಂಚನೆ: ಪ್ರತಿಭಟನೆ

7

ಮನೆ ನಿರ್ಮಿಸುವ ಆಸೆ ತೋರಿಸಿ ವಂಚನೆ: ಪ್ರತಿಭಟನೆ

Published:
Updated:

ಬೆಂಗಳೂರು: ‘ನಗರ ವ್ಯಾಪ್ತಿಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಮುಂಗಡ ಹಣ ಪಡೆದುಕೊಳ್ಳುವ ಕಟ್ಟಡ ನಿರ್ಮಾಣದ ಸಂಸ್ಥೆಗಳು ಜನರನ್ನು ವಂಚಿಸುತ್ತಿವೆ. ಆದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ. ರೇರಾ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಇಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಸಾರ್ವಜನಿಕರು ಶನಿವಾರ ಪ್ರತಿಭಟನೆ ನಡೆಸಿದರು.

ನಮ್ಮ ಬೆಂಗಳೂರು ಪ್ರತಿಷ್ಠಾನ, ಯುನೈಟೆಡ್ ಬೆಂಗಳೂರು ಸಂಘಟನೆಗಳ ನೇತೃತ್ವದಲ್ಲಿ ಪುರಭವನದ ಮುಂದೆ ಸಮಾವೇಶಗೊಂಡ ನಾಗರಿಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ನಾಲ್ಕು ದಶಕಗಳಿಂದ ರಾಜ್ಯ ಸರ್ಕಾರ, ಮಧ್ಯಮ ವರ್ಗದ ಮನೆ ಖರೀದಿದಾರರನ್ನು ನಿರ್ಲಕ್ಷಿಸಿದೆ. ಕಟ್ಟಡ ನಿರ್ಮಾಣ ಕಂಪನಿಗಳಿಂದ ನಿರಂತರ ವಂಚನೆ ಆಗುತ್ತಿದ್ದರೂ ಇದನ್ನು ತಡೆಯಲು ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ. ಕೇಂದ್ರ ಸರ್ಕಾರದ ರೇರಾ ಕಾಯ್ದೆ ಜಾರಿಯಲ್ಲಿದ್ದರೂ ರಾಜ್ಯದಲ್ಲಿ ಇದನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಎಚ್‍ಎಸ್‌ಆರ್‌ ಲೇಔಟ್‌, ಸಹಕಾರ ನಗರ, ಕೋರಮಂಗಲ ಸೇರಿದಂತೆ ನಗರದ ನಾನಾ ಭಾಗಗಳಲ್ಲಿ ಬೇರೆ ಬೇರೆ ಯೋಜನೆಗಳ ಹೆಸರಿನಲ್ಲಿ ಸಾವಿರಾರು ಜನರಿಂದ ಕೋಟಿಗಟ್ಟಲೆ ಹಣ ಸಂಗ್ರಹಿಸಲಾಗಿದೆ. ವರ್ಷಗಳು ಕಳೆದರೂ ಮನೆ ನೀಡುತ್ತಿಲ್ಲ. ಹಣವನ್ನೂ ವಾಪಸ್ ಕೊಡುತ್ತಿಲ್ಲ. ಇವರ ವಿರುದ್ಧ ಪ್ರಕರಣ ದಾಖಲಿಸಿದ ತಪ್ಪಿಗೆ ಮತ್ತಷ್ಟು ಹಣ ಖರ್ಚು ಮಾಡಿಕೊಂಡು ನ್ಯಾಯಾಲಯಕ್ಕೆ ಅಲೆಯುವಂತಾಗಿದೆ’ ಎಂದು ಗೋಳು ತೋಡಿಕೊಂಡರು.

‘ಕೆಲ ಪ್ರಕರಣಗಳಲ್ಲಿ ನ್ಯಾಯಾಲಯಗಳು ಜನರ ಪರ ತೀರ್ಪು ನೀಡಿದರೂ ಕಟ್ಟಡ ನಿರ್ಮಾಣ ಕಂಪನಿಯವರು ಪಾಲಿಸುತ್ತಿಲ್ಲ’ ಎಂದು ಆರೋಪಿಸಿದರು. 

ನಿರ್ಲಕ್ಷ್ಯವೇ ಇದಕ್ಕೆ ಕಾರಣ: ಪ್ರತಿಭಟನೆ ನೇತೃತ್ವ ವಹಿಸಿದ್ದ ನಮ್ಮ ಬೆಂಗಳೂರು ಪ್ರತಿಷ್ಠಾನದ ಸಿಇಒ ಎನ್.ಆರ್.ಸುರೇಶ್, ‘ರಾಜ್ಯ ಸರ್ಕಾರ, ರೇರಾ ಕಾಯ್ದೆಯ ನಿಯಮ
ಗಳನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಳಿಸದೆ ನಿರ್ಲಕ್ಷಿಸಿರುವುದೇ ಕಟ್ಟಡ ನಿರ್ಮಾಣ ಕಂಪನಿಗಳಿಂದ ಜನರಿಗೆ ಅನ್ಯಾಯವಾಗಲು ದಾರಿ ಮಾಡಿಕೊಟ್ಟಿದೆ. ಕನಸಿನ ಮನೆಗಾಗಿ ನೀಡಿದವರ ಪರ ಸರ್ಕಾರ ನಿಲ್ಲಬೇಕು’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !