ಪವರ್‌ಗ್ರಿಡ್‌ ಕಂಪನಿಯಿಂದ ರೈತರಿಗೆ ವಂಚನೆ– ಕೋಡಿಹಳ್ಳಿ ಆರೋಪ

7

ಪವರ್‌ಗ್ರಿಡ್‌ ಕಂಪನಿಯಿಂದ ರೈತರಿಗೆ ವಂಚನೆ– ಕೋಡಿಹಳ್ಳಿ ಆರೋಪ

Published:
Updated:
ರೈತರಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕು ಹಾಗೂ ಮೂಲ ನಕಾಶೆಯಂತೆ ಪವರ್‌ಗ್ರಿಡ್‌ ಲೈನ್ ಹಾಕಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು

ಆನೇಕಲ್: ಕೃಷಿ ಜಮೀನಿನ ಮೇಲೆ ಸಾಗುವಂತೆ ವಿದ್ಯುತ್‌ ಲೈನ್‌ಗಳನ್ನು ಅಳವಡಿಸಿ ರೈತರಿಗೆ ಪವರ್‌ಗ್ರಿಡ್‌ ಕಾರ್ಪೊರೇಷನ್‌ ಇಂಡಿಯ ಲಿಮಿಟೆಟ್‌ ಕಂಪನಿ ವಂಚಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಆರೋಪಿಸಿದರು.

ತಾಲ್ಲೂಕಿನ ಬನ್ನೇರುಘಟ್ಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಪವರ್‌ ಗ್ರಿಡ್‌ ಕಾರ್ಪೊರೇಷನ್‌ ಮಾರ್ಗ ಹಾದು ಹೋಗುವ ಭೂಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಾರ್ಗ ಬದಲಾವಣೆ ವಿಷಯವಾಗಿ ರೈತರು ಮತ್ತು ಪವರ್ ಗ್ರಿಡ್‌ ಕಂಪನಿಯವರಿಗೂ ಇದ್ದ ವಿವಾದ ಬಗೆಹರಿಸಲು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗೆ ವರದಿ ನೀಡಲು ಸೂಚಿಸಿದ್ದರು ಎಂದು ಮಾಹಿತಿ ನೀಡಿದರು.

ಈ ಸೂಚನೆಯಂತೆ ಉಪವಿಭಾಗಾಧಿಕಾರಿ ನಾಗರಾಜ್ ಸರ್ವೇ ಮಾಡಿ ಮೂಲ ನಕಾಶೆಯಂತೆ ಲೈನ್ ಹಾಕುವುದು ಸೂಕ್ತ ಎಂದು ವರದಿಯನ್ನು ನೀಡಿದ್ದರು ಎಂದರು.

ಈ ಹಿಂದೆ ನಡೆದ ಸಭೆಯಲ್ಲಿ ರೈತರಿಗೆ ಮಾರುಕಟ್ಟೆ ದರ ನೀಡಲು ಒಪ್ಪಿಕೊಂಡಿದ್ದರು. ಕಂಬ ಹಾಕುವ ಜಾಗದಲ್ಲಿ ಮಾರುಕಟ್ಟೆ ದರದಲ್ಲಿ ಹಣ ನೀಡಬೇಕು ಎಂದು ತೀರ್ಮಾನವಾಗಿತ್ತು ಎಂದರು.

ಆದರೆ ಕಂಪನಿಯವರು ಒಪ್ಪಂದವನ್ನು ಉಲ್ಲಂಘಿಸಿ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಬೇಕು. ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ ಎಂದರು.

ಜುಲೈವರೆಗೂ ಕಾಯುತ್ತೇವೆ. ರೈತರ ಸಾಲ ಮನ್ನಾ ಆಗದಿದ್ದರೆ ಸಾಲ ಮರುಪಾವತಿ ನಿಲ್ಲಿಸುವಂತೆ ತಿಳಿಸಲಾಗುವುದು ಎಂದರು.

ಭೂತೇನಹಳ್ಳಿಯಲ್ಲಿ ಹಲವಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರ ಜಮೀನು ಅರಣ್ಯ ಇಲಾಖೆ ಆಕ್ರಮಿಸಿಕೊಂಡಿರುವುದು ಸೂಕ್ತ ಕ್ರಮವಲ್ಲ, ಕೂಡಲೆ ಅರಣ್ಯ ಇಲಾಖೆ ಸಾಗುವಳಿ ಮಾಡಿಕೊಂಡಿರುವ ರೈತರಿಗೆ ಪೋಡಿ ಮಾಡಿ ಕೊಡಲು ನಿಯಮಗಳನ್ನು ಜಾರಿಗೆ ತರ ಬೇಕೆಂದು ಅವರು ಆಗ್ರಹ ಪಡಿಸಿದರು.

ಮಂಟಪ, ಆನೇಕಲ್, ರಾಗಿಹಳ್ಳಿ, ವಣಕನಹಳ್ಳಿ ಸೇರಿದಂತೆ ಪವರ್‌ಗ್ರಿಡ್‌ ಲೈನ್ ಹಾದು ಹೋಗುವ ವಿವಿಧ ಭಾಗಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !