ಕಾಡು ಹಣ್ಣುಗಳಿಗೆ ಮನಸೋತ ಜನರು

7
ಈಚಲ ಹಣ್ಣು, ಮಜ್ಜಿಗೆ ಹಣ್ಣುಗಳಿಗೆ ಹೆಚ್ಚಿದ ಬೇಡಿಕೆ

ಕಾಡು ಹಣ್ಣುಗಳಿಗೆ ಮನಸೋತ ಜನರು

Published:
Updated:
ಶಿಡ್ಲಘಟ್ಟಕ್ಕೆ ಮಜ್ಜಿಗೆ ಹಣ್ಣು ಮತ್ತು ಈಚಲ ಹಣ್ಣುಗಳನ್ನು ಮಾರಾಟಕ್ಕೆ ತಂದ ವೃದ್ಧೆ

ಶಿಡ್ಲಘಟ್ಟ: ಕಾಡುಹಣ್ಣುಗಳ ರುಚಿಗೆ ಮನಸೋಲದವರಿಲ್ಲ. ಅವು ಬೇರೆ ಬೇರೆ ಋತುವಿನಲ್ಲಿ ಕಂಡುಬರುತ್ತವೆ. ಇತ್ತೀಚೆಗೆ ಅವು ಕಡಿಮೆಯೂ ಆಗಿವೆ. ಅವುಗಳನ್ನು ತಂದು ಮಾರುವವರೂ ವಿರಳವಾಗಿದ್ದಾರೆ. ಈ ಬಾರಿ ತಡವಾದರೂ ಈಚಲ ಹಣ್ಣು ಹಾಗೂ ಮಜ್ಜಿಗೆ ಹಣ್ಣು ನಗರಕ್ಕೆ ಹಳ್ಳಿಗಳಿಂದ ಮಾರಾಟಕ್ಕೆ ಬಂದಿದ್ದು ಜನರ ಬಾಲ್ಯವನ್ನು ನೆನಪಿಗೆ ತರುತ್ತಿವೆ.

ತಾಲ್ಲೂಕಿನ ಬೈರಗಾನಹಳ್ಳಿಯ ಹನುಮಕ್ಕ ದ್ಯಾವಪ್ಪನಗುಡಿ ಬಳಿಯಿಂದ ಈಚಲಮರಗಳಲ್ಲಿ ಹಣ್ಣುಗಳನ್ನು ಸಂಗ್ರಹಿಸಿ ಮಾಗಿಸಿ ಬುಟ್ಟಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಜೊತೆಯಲ್ಲಿ ದೊಗರನಾಯಕನಹಳ್ಳಿಯ ದೊಂಗರಗಳಲ್ಲಿ ಬೆಳೆಯುವ ಮಜ್ಜಿಗೆ ಹಣ್ಣುಗಳನ್ನು ಸಹ ತಂದಿದ್ದಾರೆ.

ಬೇಸಿಗೆಯಲ್ಲಿ ಬಿಡುವ ಕಾಡುಹಣ್ಣುಗಳು ಹಕ್ಕಿ ಹಾಗೂ ಜನರ ಹೊಟ್ಟೆ ತುಂಬಿಸುತ್ತವೆ. ತಾಲ್ಲೂಕಿನಲ್ಲಿ ಹಲವೆಡೆ ಹಳದಿ ಬಣ್ಣದ ಈಚಲು ಹಣ್ಣುಗಳು ಗೊಂಚಲುಗಳಲ್ಲಿ ಬಿಟ್ಟಿದ್ದವು. ಆದರೆ ಅವುಗಳನ್ನು ಸಂಗ್ರಹಿಸಿ ಮಾಗಿಸಿ ತರುವವರು ಇಲ್ಲ. ಆದರೆ ಅವುಗಳನ್ನು ಮಾರುಕಟ್ಟೆಗೆ ತಂದಾಗ ಬೇಡಿಕೆ ಕುದುರುತ್ತದೆ.

ಈಚಲು ಹಣ್ಣಿನ ಅರಿಸಿನ ಬಣ್ಣದ ಕಾಯಿ ಹಣ್ಣಾದಾಗ ಕಡುಗಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರ ಸಿಪ್ಪೆ ತೆಳುವಾಗಿದ್ದು ಖರ್ಜೂರ ಹೋಲುತ್ತದೆ. ಇದ್ದು ರಕ್ತ ವೃದ್ಧಿ ಹಾಗೂ ಶುದ್ಧಿಗೆ ಸಹಕಾರಿ. ಇದರಲ್ಲಿ ಬಹುತೇಕ ಖರ್ಜೂರದ ಗುಣಗಳೇ ಇವೆ ಎಂಬುದು ನಾಟಿ ವೈದ್ಯರ ವಿವರಣೆ.

ಈಚಲು ಹಣ್ಣನ್ನು ಬಯಲು ಸೀಮೆಯ ಖರ್ಜೂರ, ಬಡವರ ಖರ್ಜೂರ ಎಂದೂ ಹೆಸರುವಾಸಿಯಾಗಿದೆ. ಇವು ಕೋತಿಗಳಿಗೂ ಪ್ರಿಯ. ಆದರೆ ಮುಳ್ಳು ಗರಿ ದಾಟಿ ಹೋಗಲಾಗದೆ ಉದುರಿ ಕೆಳಗೆ ಬಿದ್ದಾಗ ಆರಿಸಿ ತಿನ್ನುತ್ತವಡೆ. ಉಳಿದಂತೆ ಅಳಿಲು ಮತ್ತು ಕೆಲವು ಹಕ್ಕಿಗಳಿಗೆ ಇದು ಆಹಾರ.

ಕಾಡು ಹಣ್ಣುಗಳಲ್ಲಿ ಹೆಸರಾದದ್ದು ಮಜ್ಜಿಗೆ ಹಣ್ಣು. ಎಳೆಯರ ಆಕರ್ಷಣೆಯ ತಿನಿಸುಗಳಲ್ಲೊಂದು. ಕುರುಚಲು ಕಾಡುಗಳಲ್ಲಿ ಕಂಡು ಬರುವ ಮಜ್ಜಿಗೆ ಹಣ್ಣುಗಳ ಗಿಡದ ಎಲೆಗಳು ಸಣ್ಣವು. ಗಿಡ ಸರಾಸರಿ ಎತ್ತರವಿರುತ್ತದೆ. ಕೊಂಬೆಗಳಲ್ಲೆಲ್ಲಾ ಸಣ್ಣ ಮಣಿಯಂತೆ ಹಣ್ಣಿನ ಗೊಂಚಲು ಕಾಣಿಸಿಕೊಳ್ಳುತ್ತವೆ. ಬಲಿತ  ಹಸಿರು ಕಾಯಿ ಹಣ್ಣಾಗುತ್ತಿದ್ದಂತೆ ಬಣ್ಣ ಬಿಳಿಯಾಗಿ ಮಾರ್ಪಡುತ್ತದೆ. ಹಣ್ಣನ್ನು ಬಾಯೊಳಗೆ ಹಿಸುಕಿ ರಸ ಹೀರಿ ಬೀಜ ಹಾಗೂ ಸಿಪ್ಪೆ ಉಗಿಯುತ್ತಾರೆ. ಕೆಲವರು ಸಿಪ್ಪೆಯನ್ನೂ ಜಗಿದು ತಿನ್ನುವುದುಂಟು. ಇದು ಸುಲಭವಾಗಿ ಜೀರ್ಣ ಆಗಬಲ್ಲದು. ಈ ರೀತಿಯ ಕಾಡಿನ ಹಣ್ಣುಗಳಲ್ಲಿ ಔಷಧಿಯ ಗುಣ ವಿಶೇಷತೆಯಿದೆ ಎಂದು ಹಿರಿಯರು ಹೇಳುತ್ತಾರೆ.

‘ಕುರುಡೇ ಹಣ್ಣು, ಕಾರೆ ಹಣ್ಣು, ಮಜ್ಜಿಗೆ ಹಣ್ಣು, ಮಿರಿಡೆ ಹಣ್ಣು, ಬಿಕ್ಕೆ ಹಣ್ಣು.. ಮೊದಲಾದವು ಕುರುಚಲು ಕಾಡುಗಳಲ್ಲಿ ಸಿಗುವಂತಹವು. ಕಣ್ಮರೆಯಾಗುತ್ತಿರುವ ಕುರುಚಲು ಕಾಡುಗಳು, ಮಳೆ ಅಭಾವ ಮತ್ತು ಬದಲಾದ ಮಕ್ಕಳ ಆಹಾರ ಅಭ್ಯಾಸ, ಅಭಿರುಚಿಗಳ ನಡುವೆ ಅರಿವಿಗೆ ಬಾರದಂತೆ ಈ ಹಣ್ಣುಗಳು ಮರೆಯಾಗುತ್ತಿವೆ. ಈ ಹಣ್ಣುಗಳಿಂದ ಅನೇಕ ಪೌಷ್ಟಿಕಾಂಶಗಳು ಮಕ್ಕಳಿಗೆ ಸಿಗುತ್ತವೆ. ದೇಶಿಯ ಹಣ್ಣಿನ ತಳಿಗಳ ಬಗ್ಗೆಯೂ ಮಕ್ಕಳಿಗೆ ಜ್ಞಾನ ಸಿಗುತ್ತದೆ’ ಎನ್ನುತ್ತಾರೆ ರೈತ ಸಿದ್ದಪ್ಪ.

‘ಬೈರಗಾನಹಳ್ಳಿ ಕಾಡಿನಲ್ಲಿ ಅನೇಕ ಕಾಡುಹಣ್ಣುಗಳು ಸಿಗುತ್ತವೆ. ಆಯಾ ಕಾಲಕ್ಕೆ ತಕ್ಕಂತೆ ಹಣ್ಣುಗಳನ್ನು ಕಿತ್ತು ಮಕ್ಕರಿಗೆ ತುಂಬಿಕೊಂಡು ಶಿಡ್ಲಘಟ್ಟಕ್ಕೆ ತಂದು ಮಾರುತ್ತೇನೆ. ವಯಸ್ಸಾಗಿದೆಯೆಂದು ಮನೆಯಲ್ಲಿ ಕೂರಲು ಆಗದು. ನಾಲ್ಕು ಕಾಸು ದುಡಿದರೇನೇ ತಿಂದದ್ದು ಮೈಗಂಟುವುದು. ಪೇಟೆ ಬೀದಿಯಲ್ಲಿ ಈ ಹಣ್ಣು ತೆಗೆದುಕೊಂಡು ಹೋದರೆ ಅಂಗಡಿಗಳವರು ಕರೆದು ಕೊಳ್ಳುತ್ತಾರೆ. ಖುಷಿಯಿಂದ ತಿನ್ನುತ್ತಾರೆ’ ಎಂದು ಹಣ್ಣು ಮಾರುತ್ತಿದ್ದ ವೃದ್ಧೆ ಬೈರಗಾನಹಳ್ಳಿ ಹನುಮಕ್ಕ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !