ಸಂವಿಧಾನದ ಪ್ರಾಮಾಣಿಕ ರಕ್ಷಣೆ ಅಗತ್ಯ: ಅನ್ಸಾರಿ

7

ಸಂವಿಧಾನದ ಪ್ರಾಮಾಣಿಕ ರಕ್ಷಣೆ ಅಗತ್ಯ: ಅನ್ಸಾರಿ

Published:
Updated:

ಬೆಂಗಳೂರು: ಒಕ್ಕೂಟ ವ್ಯವಸ್ಥೆಯ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆ ದೃಷ್ಟಿಯಿಂದ ರೂಪಿಸಲಾದ ಸಂವಿಧಾನವನ್ನು ಪ್ರಾಮಾಣಿಕವಾಗಿ ರಕ್ಷಿಸಿ ಪೋಷಿಸಬೇಕು ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಹೇಳಿದರು. 

ಸಮಾಜ ಕಲ್ಯಾಣ ಇಲಾಖೆ, ಸಮೃದ್ಧ ಭಾರತ ಮತ್ತು ಎನ್‌ಡಿಟಿವಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಸಂವಿಧಾನದ ಸಂಭಾಷಣೆಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು.

ಒಕ್ಕೂಟ ವ್ಯವಸ್ಥೆಯು ಪ್ರಜಾಪ್ರಭುತ್ವ, ನ್ಯಾಯ, ಪ್ರಾಮಾಣಿಕತೆ ಮತ್ತು ದಕ್ಷತೆಯ ಸಿದ್ಧಾಂತಗಳ ಆಧಾರದಲ್ಲಿ ಕೆಲಸ ಮಾಡಬೇಕು. 

‘ ‘ಪ್ರಜಾಪ್ರಭುತ್ವ’ ಎಂಬ ಸಿದ್ಧಾಂತವು ಕೇಂದ್ರ– ರಾಜ್ಯಗಳು ಪರಸ್ಪರ ಒಪ್ಪಿತ ಕಾರ್ಯಸೂಚಿಯಡಿಯಲ್ಲಿ ನಡೆದುಕೊಳ್ಳುವುದಾಗಿದೆ. ‘ನ್ಯಾಯ ಮತ್ತು ಪ್ರಾಮಾಣಿಕತೆ’ ಎಂಬುದು ಉಭಯ ವ್ಯವಸ್ಥೆಗಳ ನಡುವಿನ ಆರ್ಥಿಕ ಹಾಗೂ ಇತರ ಸಂಪನ್ಮೂಲ ಹಂಚಿಕೆಗೆ ಸಂಬಂಧಪಟ್ಟಿದೆ. ಸದ್ಯ ಅಸ್ತಿತ್ವಕ್ಕೆ ಬಂದಿರುವ ಸರಕು ಮತ್ತು ಸೇವಾ ತೆರಿಗೆಯ ಆದಾಯ ಹಂಚಿಕೆಯ ಬಗೆಗೂ ಇದು ಅನ್ವಯಿಸುತ್ತದೆ’ ಎಂದರು. 

‘ಇದೇ ತತ್ವದ ಅಡಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಆದಾಯ ಹಂಚಿಕೆ, ನದಿ ನೀರಿನ ಹಂಚಿಕೆ ಸಂಬಂಧಪಟ್ಟ ವಿಷಯಗಳೂ ಬರುತ್ತವೆ. ಆದರೆ, ಇಂದು ಈ ಎರಡೂ ವಿಷಯಗಳು ಪರಸ್ಪರ ಬೇಸರ, ಆಕ್ರೋಶಗಳ ಸ್ಫೋಟಕ್ಕೆ ಕಾರಣವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.     

‘ಸಹಕಾರ ಮಾದರಿಯ ಒಕ್ಕೂಟ ವ್ಯವಸ್ಥೆ ದಶಕಗಳ ಹಿಂದೆಯೇ ಅಸ್ತಿತ್ವದಲ್ಲಿತ್ತು. ಕೇಂದ್ರ– ರಾಜ್ಯಗಳ ನಡುವೆ ಪರಸ್ಪರ ಸೌಹಾರ್ದಯುತ ಸಂಬಂಧ ಇರಬೇಕು. ನೀತಿ ನಿರೂ‍ಪಣೆ, ಆರ್ಥಿಕ ಹಂಚಿಕೆ ಇತ್ಯಾದಿ ಹಲವಾರು ವಿಷಯಗಳ ಮೇಲೆ ಈ ಸಂಬಂಧ ಮಹತ್ವ ಹೊಂದಿದೆ. ಒಕ್ಕೂಟ ರಾಷ್ಟ್ರದ ಅಪೂರ್ವವಾದ ಬೇಡಿಕೆಗಳನ್ನು ಈಡೇರಿಸುವ ರೀತಿ ನಮ್ಮ ಸಂವಿಧಾನವನ್ನು ವಿನ್ಯಾಸಗೊಳಿಸಲಾಗಿದೆ’ ಎಂದು ಅವರು ಹೇಳಿದರು. 

‘ಮೇಲೆ ಹೇಳಿದ ಯಾವುದೇ ಕೆಲಸಗಳಿರಲಿ ಬಲಿಷ್ಠವಾದ ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ದಕ್ಷತೆಯಿಂದ ನಡೆಯಲು ಸಾಧ್ಯ’ ಎಂದು ಅವರು ವಿಶ್ಲೇಷಿಸಿದರು.

‘ಒಟ್ಟಿನಲ್ಲಿ ಪ್ರಜಾಪ್ರಭುತ್ವದ ಪರಿಣಾಮಕಾರಿ ಕಾರ್ಯನಿರ್ವಹಣೆ ಮತ್ತು ಸಂವಿಧಾನದ ಪೋಷಣೆಯಲ್ಲಿ ವಿವೇಚನಾಶೀಲ ಮತದಾರನ ಪಾತ್ರವೂ ಇದೆ. ಪ್ರಜ್ಞಾವಂತ ಮತದಾರ ಇದ್ದಲ್ಲಿ ಏಕ ಸಂಸ್ಕೃತಿಯನ್ನು ಹೇರುವ, ಅದನ್ನು ರಾಜಕೀಯವಾಗಿ ಪ್ರಚೋದಿಸಿ ಉದ್ವಿಗ್ನಗೊಳಿಸುವ ಪ್ರವೃತ್ತಿಯನ್ನು ತಡೆಗಟ್ಟಬಲ್ಲ’ ಎಂದರು.

‘ಏಕಸಂಸ್ಕೃತಿಯನ್ನು ಹೇರುವ ಅಥವಾ ಬಹುತ್ವದ ಸಮಾಜವನ್ನು ಒಂದೇ ರೀತಿ ಮಾಡುವುದು ಈ ಎರಡೂ ಕೆಲಸಗಳು ಸಮಾಜದ ಸಮತೋಲನ ತಪ್ಪಿಸಬಹುದು. ಅದಕ್ಕಾಗಿ ಬಹುತ್ವದ ಸಮಾಜದಲ್ಲಿ ಎಲ್ಲ ಏರುಪೇರುಗಳನ್ನು ಸರಿದೂಗಿಸಿಕೊಂಡು ಹೋಗುವ ಮೂಲಕ ಭಾರತದ ಚಿಂತನೆಯನ್ನು ಎತ್ತಿ ಹಿಡಿಯಬಹುದು’ ಎಂದು ಅವರು ಹೇಳಿದರು.

ಸವಾಲುಗಳೆಡೆ ಸಂವಿಧಾನ

ಬೌದ್ಧಿಕ ವರ್ಗ ಮತ್ತು ಜನಸಾಮಾನ್ಯರ ಮಧ್ಯೆ ಅಂತರವಿದೆ ಎಂದು ನನಗನಿಸುತ್ತಿಲ್ಲ. ಆದರೆ, ಜನರಿಗೆ ಕನಿಷ್ಠ ಮೂಲಭೂತ ಹಕ್ಕುಗಳು ಸಿಗಬೇಕು. ಅದೇ ದೊಡ್ಡ ಸವಾಲು. ದೇಶದಲ್ಲಿ ಹಿಂದುಳಿದವರ, ಆದಿವಾಸಿಗಳ, ತುಳಿತಕ್ಕೊಳಗಾದವರ ‍ಪರಿಸ್ಥಿತಿ ಏನಿದೆ ಎಂಬ ಬಗ್ಗೆ ಹೇಳಬೇಕಾಗಿಲ್ಲ. ಮಹಿಳಾ ಸಬಲೀಕರಣದ ಕಥೆಯೂ ಅಷ್ಟೇ. ಪ್ರಜಾಪ್ರಭುತ್ವ ಜಾತ್ಯತೀತ ತಳಹದಿಯ ಮೇಲೆ ಗಟ್ಟಿಗೊಳ್ಳಬೇಕೇ ವಿನಃ ಜಾತಿ, ಅಂತಸ್ತಿನ ಆಧಾರದಲ್ಲಿ ಅಲ್ಲ. ಪ್ರತ್ಯೇಕತೆ ಮತ್ತು ವಿಭಜನೆಗಳ ಈ ದಿನಗಳಲ್ಲಿ ಸಮಾನತೆಯ ಆಧಾರದಲ್ಲಿ ದೇಶವನ್ನು ಒಂದಾಗಿಸಲು ಹಾಗೂ ಹಾಗೆಯೆ ಸಂವಿಧಾನದ ಯಶಸ್ಸಿಗೆ ಸವಾಲುಗಳು ಎದುರಾಗಿವೆ ಎಂದು ಸಿಪಿಐ (ಎಂ) ನಾಯಕಿ ಬೃಂದಾ ಕಾರಟ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 10

  Angry

Comments:

0 comments

Write the first review for this !