ಎಂದು ಮುಗಿಯುವುದೋ ಗಡಿಭವನ ಕಾಮಗಾರಿ?

7
ಯೋಜನೆ ಆರಂಭವಾಗಿ ಎಂಟು ವರ್ಷಗಳಾದರೂ ಪೂರ್ಣಗೊಳ್ಳದ ಕಟ್ಟಡ

ಎಂದು ಮುಗಿಯುವುದೋ ಗಡಿಭವನ ಕಾಮಗಾರಿ?

Published:
Updated:
Deccan Herald

ಕೊಳ್ಳೇಗಾಲ: ನಗರದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಣದಲ್ಲಿ ₹1.20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಗಡಿಭವನ ಕಟ್ಟಡ ಕಾಮಗಾರಿ 8 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ!

ಹಾಗಾಗಿ, ಸಾಂಸ್ಕೃತಿಕ ಕಲೆ, ಕನ್ನಡಕ್ಕೆ ಸಂಬಂಧಿಸಿದ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಸುಸಜ್ಜಿತ ಕನ್ನಡ ಗಡಿಭವನ ನಿರ್ಮಾಣ ಆಗಬೇಕು ಎಂಬ ಜನರ ಬಯಕೆ ಇನ್ನೂ ಈಡೇರಿಲ್ಲ. 

8 ವರ್ಷಗಳ ಹಿಂದೆ ಆರಂಭ: 2010ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್. ಮಹದೇವಪ್ರಸಾದ್, ಸಂಸದ ಆರ್.ಧುವನಾರಾಯಣ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಅನುದಾನ ತಂದು ನಗರದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕನ್ನಡ ಗಡಿಭವನದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

ಎರಡಂತಸ್ತಿನ ಗಡಿಭವನ ಕಟ್ಟಡದಲ್ಲಿ ಕಚೇರಿ, ಸಭಾಂಗಣ, ಎರಡು ಕಂಪ್ಯೂಟರ್ ಕೊಠಡಿ, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಹಾಗೂ ವಿಶ್ರಾಂತಿ ಕೊಠಡಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು ಕಟ್ಟಡ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ.

ಯೋಜನೆ ಆರಂಭಗೊಂಡ ಬಳಿಕ ಕಟ್ಟಡದ ಮಧ್ಯ ಭಾಗದಲ್ಲಿರುವ ಸಭಾಭವನದ ಮೇಲ್ಚಾವಣಿಗೆ ಶೀಟ್‌ ಹಾಕುವ ಬದಲಿಗೆ ಕಾಂಕ್ರೀಟ್‌ (ಆರ್‌ಸಿಸಿ) ಹಾಕಲು ಉದ್ದೇಶಿಸಲಾಗಿತ್ತು. ಗಡಿಭವನ ಕಟ್ಟಡ ಕಾಮಗಾರಿ ಪರಿಶೀಲಿಸಿದ್ದ ಎಚ್.ಎಸ್. ಮಹದೇವ ಪ್ರಸಾದ್ ಅವರು ಸಭಾಭವನಕ್ಕೆ ಆರ್‌ಸಿಸಿ ಚಾವಣಿ ನಿರ್ಮಿಸಲು ಮಾರ್ಪಾಡು ಮಾಡಿದ ಕ್ರಿಯಾಯೋಜನೆ ರೂಪಿಸುವಂತೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆಆರ್‌ಐಡಿಎಲ್) ‌ಅಧಿಕಾರಿಗಳಿಗೆ ಸೂಚಿಸಿದ್ದರು. 

ಆರ್‌ಸಿಸಿ ಚಾವಣಿಗೆ ಹೆಚ್ಚುವರಿಯಾಗಿ ₹61 ಲಕ್ಷ ವೆಚ್ಚವಾಗುವ ಬಗ್ಗೆ ಹೊಸ ಕ್ರಿಯಾ ಯೋಜನೆಯನ್ನು ಅಧಿಕಾರಿಗಳು ರೂಪಿಸಿದ್ದರು. 

ಆದರೆ, ₹61 ಲಕ್ಷ ಬಿಡುಗಡೆಯಾಗಿದ್ದರೂ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಸಭಾಭವನದ ಚಾವಣಿ ಹಾಗೂ ಅದರ ಕೆಳಗೆ ಪ್ಲೋರಿಂಗ್  ಕಾಮಗಾರಿ ಬಿಟ್ಟು, ಉಳಿದ ಎಲ್ಲಾ ಕೆಲಸಗಳು ಮುಗಿದಿದ್ದು, ಕಟ್ಟಡಕ್ಕೆ ಒಂದು ಹಂತದ ಬಿಳಿ ಬಣ್ಣವನ್ನೂ ಬಳಿಯಲಾಗಿದೆ. ಕೆಲಸ ಪೂರ್ಣಗೊಳ್ಳದೇ ಇರುವುದರಿಂದ ಇಡೀ ಕಟ್ಟಡ ಪಾಳು ಬಿದ್ದಂತೆ ಕಾಣುತ್ತಿದೆ.

ಅನೈತಿಕ ಚಟುವಟಿಕೆಗಳ ತಾಣ

ಕನ್ನಡ ಗಡಿಭವನ ಕಾಮಗಾರಿ ನಿಧಾನವಾಗಿ ನಡೆಯುತ್ತಿರುವುದು ಕಿಡಿಗೇಡಿಗಳಿಗೆ, ಕುಡುಕರಿಗೆ ಪಡ್ಡೆಗಳಿಗೆ ವರವಾಗಿ ಪರಿಣಮಿಸಿದೆ.

ರಾತ್ರಿಯಾದರೆ ಸಾಕು ಈ ಜಾಗ ಅನೈತಿಕ ಚಟುವಟಿಕೆ, ಜೂಜಾಡುವವರ, ಕುಡುಕರ ತಾಣವಾಗಿ ಪರಿವರ್ತನೆಯಾಗುತ್ತದೆ.

‘ಅಕ್ಕ ಪಕ್ಕ ಮನೆಯವರಿಗೆ ನೆಮ್ಮದಿಯಿಲ್ಲದಂತಾಗಿದೆ. ಕುಡುಕರು ಅಮಲಿನಲ್ಲಿ ಕೂಗಾಡುತ್ತಾರೆ. ಅನೇಕ ಬಾರಿ ಪೊಲೀಸರು ಬಂದು ಹೋಗಿದ್ದಾರೆ. ಆದರೆ ಯಾವ ಪ್ರಯೋಜನವೂ ಆಗಿಲ್ಲ’ ಎಂದು ಸ್ಥಳೀಯ ಬಡಾವಣೆಯ ನಿವಾಸಿ ಅರುಣ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !