ಗಡಿ ಗೊಡವೆಗಳಿಲ್ಲದ ಗಣಪ!

7

ಗಡಿ ಗೊಡವೆಗಳಿಲ್ಲದ ಗಣಪ!

Published:
Updated:
Deccan Herald

ಗಣಪತಿ ಎಷ್ಟು ಸಂಕೀರ್ಣ ದೇವನೋ, ಅಷ್ಟೇ ಸಂಕೀರ್ಣ ಆತನ ವಿವಿಧ ಕಾಲಘಟ್ಟಗಳಲ್ಲಿನ ಆತನ ಅಸ್ತಿತ್ವ. 'ಗಣ' ಹಾಗೂ 'ಪತಿ' ಎಂಬ ಶಬ್ದಗಳು ಸೇರಿ ಗಣಪತಿ ಎಂಬ ಶಬ್ದ ಹುಟ್ಟಿದೆ. 'ಗಣ' ಎಂದರೆ ಗುಂಪು; ಪತಿ ಎಂದರೇ ನಾಯಕ. ಗಣಪತಿ ಎಂದರೆ ಗುಂಪಿನ ನಾಯಕ ಎಂಬ ವ್ಯಾಖ್ಯಾನ ಉಂಟು. ಹೀಗಾಗಿ, ಗಣಪ ಗುಂಪು ಜೀವನ, ಸಹ ಜೀವನದ ಪ್ರತೀಕ.

ಪ್ರಾಚೀನ ಗ್ರಂಥಗಳಲ್ಲಿನ ಉಲ್ಲೇಖಗಳ ಪ್ರಕಾರ ಮೂಲಾಧಾರ ಚಕ್ರ ಮನುಷ್ಯನ ಎಲ್ಲಾ ಕ್ರಿಯೆಗಳಿಗೂ ಅಗತ್ಯ. ಗಣಪತಿಯನ್ನು ಪೂಜಿಸುವ ಮೂಲಕ ಮೂಲಾಧಾರ ಚಕ್ರವನ್ನು ಪ್ರಾಪ್ತಿಮಾಡಿಕೊಳ್ಳಬಹುದು. ವೇದ, ಉಪನಿಷತ್, ಪುರಾಣ, ತೈತೀರಿಯ ಅರಣ್ಯಕ ಗ್ರಂಥ, ಮೈತ್ರೇಯಿ ಸಂಹಿತೆ ಹಾಗೂ ವ್ಯಾಜಾಸನೇಯ ಗ್ರಂಥಗಳಲ್ಲಿ ಗಣಪತಿ ಹಾಗೂ ಆತನ ಪೂಜಾ ವಿಧಿಗಳ ಬಗ್ಗೆ ಉಲ್ಲೇಖಗಳಿವೆ.

ಇದು ಧಾರ್ಮಿಕ ಹಾಗೂ ನಂಬಿಕೆಯ ಮಾತಾಯಿತು. ಸ್ವಲ್ಪ ಇತಿಹಾಸದ ಪುಟಗಳತ್ತ ಗಮನ ಹರಿಸೋಣ. ಕಾರಣ ಅಲ್ಲಿ ಗಣಪನ ವಿವರಗಳು ಲಭ್ಯವಿವೆ. ಪ್ರಾಚೀನ ಚೀನಾ, ಅಫ್ಘಾನಿಸ್ತಾನ, ಶ್ರೀಲಂಕಾ, ಜಪಾನ್, ಇಂಡೋನೇಷ್ಯಾ ಹಾಗೂ ಈಜಿಪ್ಟ್‌ ದೇಶಗಳಲ್ಲಿ ಗಣಪತಿಯ ಇರುವಿಕೆಯ ಕುರಿತು ಇತಿಹಾಸಕಾರರು ಬೆಳಕು ಚೆಲ್ಲುತ್ತಾರೆ. ಒಂದು ವಾದದ ಪ್ರಕಾರ ಗಣಪತಿ ವಾಯುವ್ಯ ದಿಕ್ಕಿನಿಂದ ಆರ್ಯರ ಮೂಲಕ ಭರತ ಖಂಡಕ್ಕೆ ಪ್ರವೇಶಿಸಿದ. ನಂತರದ ದಿನಗಳಲ್ಲಿ ಆತ ಇಡೀ ಭರತ ಖಂಡದಲ್ಲೆಲ್ಲ ಜನಪ್ರಿಯ ದೇವನಾದ.

ಪ್ರಸಿದ್ಧ ಚೀನಾ ಪ್ರವಾಸಿಗ ಹ್ಯೂ ಎನ್ ತ್ಸಾಂಗ್ ಅಂದಿನ ಅಫ್ಘಾನಿಸ್ತಾನದಲ್ಲಿ ಗಣಪತಿ ಪೂಜೆ ಚಾಲ್ತಿಯಲ್ಲಿದ್ದ ಬಗೆಗೆ ಉಲ್ಲೇಖಿಸುತ್ತಾನೆ. ಪಿಲುಸಾರ ಎಂಬ ದೇವತೆಯನ್ನು 7ನೆ ಶತಮಾನದಲ್ಲಿ ಅಲ್ಲಿ ಪೂಜಿಸುತ್ತಿದ್ದರು. ಅಂದಿನ ಕಪಿಷಾನಗರದಲ್ಲಿ ಪಿಲುಸಾರ ದೇವಾಲಯ ಇತ್ತು. ಪಿಲುಸಾರ ದೇವತೆಗೆ ಆನೆಯ ಮುಖ ಇತ್ತು ಎಂಬುದಾಗಿ ತ್ಸಾಂಗ್ ದಾಖಲಿಸುತ್ತಾನೆ. ದಕ್ಷಿಣ ಭಾರತದ ಕೆಲ ಪ್ರದೇಶಗಳಲ್ಲಿ ಗಣಪನಿಗೆ ಪೆಲೈಯಾರ್ ಎಂಬ ಹೆಸರುಂಟು. ಒಂದು ವಾದದ ಪ್ರಕಾರ ಪಿಲುಸಾರ ಶಬ್ದದ ತದ್ಭವವೇ ಪೆಲೈಯಾರ್.

ಕಾಬೂಲಿನ ರಂಗಮಂದಿರವೊಂದರಲ್ಲಿ ಅತ್ಯಂತ ಪ್ರಾಚೀನ ಗಣೇಶ ಮೂರ್ತಿ ಸಿಕ್ಕ ಬಗೆಗೆ ಉಲ್ಲೇಖಗಳಿವೆ. ಅಲ್ಲಿ ಸಂಸ್ಕ್ರತ ಭಾಷೆಯಲ್ಲಿನ ಶಾಸನವೊಂದು ಸಿಕ್ಕಿದೆ. ಅದರ ಪ್ರಕಾರ ಪರಮಭಟ್ಟಾರಕ ರಾಜಾಧೀರಾಜ ಖಿಂಗಲ್ ತಾನು ಪಟ್ಟಕ್ಕೆ ಬಂದ ಎಂಟನೆಯ ವರ್ಷದ ನೆನಪಿಗಾಗಿ ಗಣೇಶ ಮೂರ್ತಿ ಸ್ಥಾಪಿಸಿದ. ಇವೆಲ್ಲ ದಾಖಲೆಗಳೂ ಖಂಡಿತವಾಗಿಯೂ ಪ್ರಾಚೀನ ಅಫ್ಘಾನಿಸ್ತಾನದ ಜನರಿಗೆ ಗಣೇಶನ ಬಗ್ಗೆ ತಿಳಿದಿತ್ತು ಎಂಬುದರ ಪ್ರತೀಕ ಎಂಬುದು ಇತಿಹಾಸಕಾರರ ಅಂಬೋಣ.

ತಜ್ಞ ವಾಂಡೇನ್ ಬರ್ಗ್ ಬರ್ರಾಸಿ-ಏ-ತಾರೀಖಿಯ ಪ್ರಕಾರ ಗಣೇಶನನ್ನು ಹೋಲುವ ಮೂರ್ತಿಯೊಂದು ಪಶ್ಚಿಮ ಇರಾನ್‍ನ ಲೋರೆಸ್ಥಾನ ಪ್ರದೇಶದಲ್ಲಿ ದೊರಕಿದೆ. ಸಂಶೋಧಕ ಜಮುನಾದಾಸ್ ಭಕ್ತರ್ ಅವರು ಎಚ್‌. ಆರ್‌. ಹೇರಾಸ್ ಅವರ 'ದಿ ಪ್ರಾಬ್ಲಮ್ ಆಫ್ ಗಣಪತಿ' ಎಂಬ ಗ್ರಂಥವನ್ನು ಉಲ್ಲೇಖಿಸಿ ಗಣೇಶ ಪೂಜೆ ಕ್ರಿ. ಪೂ. 1200ರಲ್ಲಿ ಇತ್ತು ಎಂದು ಶರಾ ಬರೆಯುತ್ತಾರೆ.

ಕುಶಾನರ ಕಾಲದಲ್ಲಿ ಕೆತ್ತಲಾಗಿತ್ತು ಎಂದು ಹೇಳಲಾಗುವ ಎರಡು ಗಣಪತಿ ವಿಗ್ರಹಗಳು ದೊರೆತಿವೆ. ಈಗ ಅವು ಮಥುರಾದ ವಸ್ತುಸಂಗ್ರಹಾಲಯದಲ್ಲಿವೆ. ಸಂಶೋಧಕ ವಾಸುದೇವ್ ಶರಣ್ ಅವರು ಹೇಳುವಂತೆ ಆ ಮೂರ್ತಿಗಳು ಕ್ರಿ.ಪೂ 2 ಅಥವಾ 3 ನೇ ಶತಮಾನದಲ್ಲಿ ಕೆತ್ತಿದವು.

ಗುಪ್ತ, ಶಾತವಾಹನ, ರಾಷ್ಟ್ರಕೂಟ, ಚಾಲುಕ್ಯ ಹಾಗೂ ಪೇಶ್ವೆಯವರ ಕಾಲಘಟ್ಟದ್ದಲ್ಲಿ ಗಣೇಶ ಪೂಜೆ ಇತ್ತೆಂಬ ಬಗೆಗೆ ವಿದ್ಟಾಂಸರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಗಣೇಶ ಮರಾಠಾ ಪೇಶ್ವೆ‌ಗಳ ಮನೆ ದೇವರಾಗಿದ್ದ ಎಂಬುದಕ್ಕೆ ದಾಖಲೆಗಳಿವೆ. ಗ್ವಾಲಿಯರ್ ರಾಜಮನೆತನದವರೂ ಗಣೇಶ ಪೂಜೆ ಪ್ರಾರಂಭ ಮಾಡಿದರೂ ಎನ್ನುತ್ತವೆ ಇತಿಹಾಸದ ಪುಟಗಳು. ಆದರೇ, ಗಣಪ 1890 ಕ್ಕೂ ಮೊದಲು ಕೇವಲ ಮನೆಯೊಳಗೆ ಪೂಜಿಸಲ್ಪಡುತ್ತಿದ್ದ. ಆತನಿಗೆ ರಾಷ್ಟ್ರೀಯ ಲಕ್ಷಣ ತಂದ ಕೀರ್ತಿ ಮಾತ್ರ ಬಾಲಗಂಗಾಧರ ತಿಲಕ್ ಅವರದ್ದು. ಅವರು 1893 ರಲ್ಲಿ ಸಾರ್ವಜನಿಕವಾಗಿ ಗಣಪನ ಪೂಜಾ ಕಾರ್ಯಕ್ರಮ ಆರಂಭಿಸಿದರು. ನಂತರದ್ದು ಇತಿಹಾಸ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !