ನಿಮ್ಮ ಮನದ ಮಾತು ಕೇಳುವೆ: ದುಬೈನಲ್ಲಿ ನರೇಂದ್ರ ಮೋದಿಗೆ ಕುಟುಕಿದ ರಾಹುಲ್‌

7

ನಿಮ್ಮ ಮನದ ಮಾತು ಕೇಳುವೆ: ದುಬೈನಲ್ಲಿ ನರೇಂದ್ರ ಮೋದಿಗೆ ಕುಟುಕಿದ ರಾಹುಲ್‌

Published:
Updated:
Prajavani

ದುಬೈ: ‘ನಾನು ನನ್ನ ಮನದ ಮಾತು (ಮನ್‌ ಕಿ ಬಾತ್‌) ಹೇಳುವ ಬದಲಾಗಿ, ನಿಮ್ಮ ಮನದ ಮಾತನ್ನು ಕೇಳಲು ಬಂದಿದ್ದೇನೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಕುಟುಕಿದರು.  

ಪ್ರತಿ ತಿಂಗಳು ರೇಡಿಯೊದಲ್ಲಿ ಪ್ರಸಾರವಾಗುವ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್‌ ಕಿ ಬಾತ್‌’ ಪ್ರಸ್ತಾಪಿಸಿ ಅವರು ಮಾತನಾಡಿದರು.

ಇದೇ ಮೊದಲ ಬಾರಿಗೆ ದುಬೈ ಪ್ರವಾಸ ಕೈಗೊಂಡಿರುವ ರಾಹುಲ್‌ ಗಾಂಧಿ ಅವರಿಗೆ, ವಿಮಾನ ನಿಲ್ದಾಣದಲ್ಲಿ ಅಲ್ಲಿ ನೆಲೆಸಿರುವ ಭಾರತೀಯರಿಂದ ಭವ್ಯ ಸ್ವಾಗತ ದೊರಕಿತು. ಜಬೇಲ್‌ ಅಲಿ ಕಾರ್ಮಿಕ ಕಾಲೊನಿಗೆ ತೆರಳಿದ ಅವರು, ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು. 

ಯುಎಇ ಅಭಿವೃದ್ಧಿಯಲ್ಲಿ ಕಾರ್ಮಿಕರ ಪರಿಶ್ರಮವನ್ನು ಶ್ಲಾಘಿಸಿದ ರಾಹುಲ್‌, ‘ಈ ದೇಶದಲ್ಲಿ ನಿರ್ಮಾಣವಾಗಿರುವ ಬೃಹತ್‌ ಕಟ್ಟಡಗಳು, ಮೆಟ್ರೊ, ವಿಮಾನ ನಿಲ್ದಾಣದ ನಿರ್ಮಾಣದಲ್ಲಿ ನಿಮ್ಮ ಕೊಡುಗೆ ಅಪಾರವಾಗಿದೆ. ಈ ದೇಶದ ಅಭಿವೃದ್ಧಿಗಾಗಿ ನಿಮ್ಮ ರಕ್ತ ಮತ್ತು ಬೆವರನ್ನು ಹರಿಸಿದ್ದೀರಿ’ ಎಂದರು.

‘ದಿನಪೂರ್ತಿ ಕೆಲಸ ಮಾಡಿ, ನಿಮ್ಮ ಕುಟುಂಬಗಳಿಗೆ ಹಣ ಕಳುಹಿಸುತ್ತೀರಿ. ಇಲ್ಲಿಯ ಕಾರ್ಮಿಕರ ಸಮಸ್ಯೆಗಳ ಕುರಿತು ಕಾಂಗ್ರೆಸ್‌ ಪಕ್ಷಕ್ಕೆ ಅರಿವಿದೆ.  ನಿಮಗೆ ಸಹಾಯ ಮಾಡಲು ಬಯಸುತ್ತೇವೆ. ನಾನು ನಿಮ್ಮಂತೆ ಸಾಮಾನ್ಯ ವ್ಯಕ್ತಿ. ನಿಮ್ಮ ಸಹಾಯಕ್ಕಾಗಿ ಸದಾ ಸಿದ್ಧನಿರುತ್ತೇನೆ’ ಎಂದು ಭರವಸೆ ನೀಡಿದರು. 

ಕೇರಳ ಕಾಂಗ್ರೆಸ್ ಅಧ್ಯಕ್ಷ ಉಮ್ಮನ್‌ ಚಾಂಡಿ, ಐಒಸಿ ಅಧ್ಯಕ್ಷ ಸ್ಯಾಮ್‌ ಪಿತ್ರೋಡ ಇದ್ದರು.

ಈ ಕಾರ್ಯಕ್ರಮಕ್ಕೂ ಮೊದಲು ರಾಹುಲ್‌ ಉದ್ಯಮಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಎರಡು ದಿನಗಳ ದುಬೈ ಪ್ರವಾಸದಲ್ಲಿ ರಾಹುಲ್‌ ಯುಎಇ ಸಚಿವರನ್ನು ಭೇಟಿಯಾಗಲಿದ್ದಾರೆ. 

*
ಯುದ್ಧ ಪ್ರಾರಂಭವಾಗಿದೆ. ನಮ್ಮ ಗೆಲುವು ಖಚಿತ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುತ್ತೇವೆ
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 29

  Happy
 • 1

  Amused
 • 0

  Sad
 • 0

  Frustrated
 • 12

  Angry

Comments:

0 comments

Write the first review for this !