ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಗಣೇಶ..!

7
ಹುಟ್ಟಿದಾಗಿನಿಂದ ಗುದದ್ವಾರದ ಸಮಸ್ಯೆ ಎದುರಿಸುತ್ತಿರುವ ಬಾಲಕ; ನೆರವಿಗಾಗಿ ಮೊರೆಯಿಟ್ಟ ಪಾಲಕ

ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಗಣೇಶ..!

Published:
Updated:
ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿರುವ ಗಣೇಶ

ವಿಜಯಪುರ: ತಾಯಿ ಗರ್ಭದಿಂದಲೇ ಸಮಸ್ಯೆಯನ್ನು ಹೊತ್ತು ಜಗತ್ತು ಪ್ರವೇಶಿಸಿದ ‘ಗಣೇಶ’ನ ವೈದ್ಯಕೀಯ ಚಿಕಿತ್ಸೆಗೆ ಪೋಷಕರು ಇದೀಗ ಸಹೃದಯಿಗಳ ನೆರವಿಗಾಗಿ ಮೊರೆಯಿಟ್ಟಿದ್ದಾರೆ.

‘ಹನ್ನೊಂದರ ಪೋರನಾಗಿರುವ ಗಣೇಶ ಜನಿಸಿದ್ದು 2007ರಲ್ಲಿ. ಹುಟ್ಟಿದಾಗಲೇ ಗುದದ್ವಾರ ಮುಚ್ಚಿದ ಸ್ಥಿತಿಯಲ್ಲಿತ್ತು. ವೈದ್ಯರ ಸೂಚನೆಯಂತೆ ಜನಿಸಿದ ಆರನೇ ದಿನಕ್ಕೆ ವಿಧಿಯಿಲ್ಲದೆ ಶಸ್ತ್ರಚಿಕಿತ್ಸೆ ಮಾಡಿಸಿದೆವು. ಶಿಶುವಿನ ಎಡಭಾಗದ ಹೊಟ್ಟೆ ಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮಲ ವಿಸರ್ಜನೆಗೆ ದಾರಿ ಮಾಡಿಕೊಟ್ಟರು.

ನಾಲ್ಕು ವರ್ಷಗಳ ಬಳಿಕ 2011ರಲ್ಲಿ ವಿಜಯಪುರದ ಅದೇ ಆಸ್ಪತ್ರೆಯಲ್ಲಿ ಗುದದ್ವಾರ ತೆರೆಯಲು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರು. ಅಲ್ಲಿಯವರೆಗೂ ಮೂತ್ರದ ಸಮಸ್ಯೆಯಿರಲಿಲ್ಲ. ಶಸ್ತ್ರಚಿಕಿತ್ಸೆ ಬಳಿಕ ಗುದದ್ವಾರದಲ್ಲಿ ಮೂತ್ರ ಸೋರಲಾರಂಭಿಸಿತು. ಭಯದಿಂದ ತತ್ತರಿಸಿದೆವು. ಆಸ್ಪತ್ರೆ ಬದಲಿಸಿದೆವು’ ಎಂದು ಮಗುವಿನ ತಂದೆ ರಮೇಶ ಸಾತಪ್ಪ ಸರಸಂಬಿ ತಿಳಿಸಿದರು.

‘ದಿಕ್ಕು ತೋಚದಂತಾದ ಸ್ಥಿತಿ. ಏನು ಮಾಡಬೇಕು ಎಂಬುದೇ ಅರಿಯಲಿಲ್ಲ. ಕೊನೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಮಗನನ್ನು ಚಿಕಿತ್ಸೆಗೆ ದಾಖಲಿಸಿದೆವು. 2012ರಲ್ಲಿ ಅಲ್ಲಿನ ವೈದ್ಯರು ಹೊಟ್ಟೆ ಭಾಗದಲ್ಲಿ ಮಲ ವಿಸರ್ಜನೆಗಾಗಿ ಬಿಟ್ಟಿದ್ದ ರಂಧ್ರವನ್ನು ಮುಚ್ಚಿ, ಗುದದ್ವಾರವನ್ನು ಸಂಪೂರ್ಣವಾಗಿ ತೆರೆದರು. ಆದರೆ ಮೂತ್ರ ಸೋರಿಕೆ ಮಾತ್ರ ನಿಲ್ಲಲ್ಲಿಲ್ಲ.

2017ರಲ್ಲಿ ಅನ್ಯ ಮಾರ್ಗವಿಲ್ಲದೇ ಮೂತ್ರ ಸೋರಿಕೆ ತಡೆಗಟ್ಟಲು ಮತ್ತೊಂದು ಶಸ್ತ್ರಚಿಕಿತ್ಸೆಯನ್ನು ಮಗನಿಗೆ ಮಾಡಿಸಿದೆವು. ಆದರೂ ಸಮಸ್ಯೆ ಪರಿಹಾರವಾಗಲಿಲ್ಲ. ಇದೀಗ ತುರ್ತಾಗಿ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಿಸಲೇ ಬೇಕು ಎಂದು ವೈದ್ಯರು ಹೇಳಿದ್ದಾರೆ. ಆದರೆ ಪ್ರಸ್ತುತ ನನ್ನ ಬಳಿ ಶಕ್ತಿಯೇ ಇಲ್ಲವಾಗಿದೆ. ಮಗ ದಿನದಿಂದ ದಿನಕ್ಕೆ ಬಡವಾಗುತ್ತಿದ್ದಾನೆ. ಏನು ಮಾಡಬೇಕು ಎಂಬುದೇ ತೋಚದಾಗಿದೆ’ ಎಂದು ರಮೇಶ ‘ಪ್ರಜಾವಾಣಿ’ ಬಳಿ ತಾವು ಎದುರಿಸುತ್ತಿರುವ ಅಸಹಾಯಕ ಸ್ಥಿತಿ ಬಿಚ್ಚಿಟ್ಟರು.

ಕೆಲಸವಿಲ್ಲ...

‘ಹದಿನೆಂಟು ವರ್ಷಗಳಿಂದ ಮೈಸೂರಿನಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದೆ. ಪತ್ನಿ, ಇಬ್ಬರೂ ಮಕ್ಕಳು ನನ್ನೊಂದಿಗೆ ಇದ್ದರು. ಕೂಲಿಯಲ್ಲೇ ಮಗನ ಸಮಸ್ಯೆ ಪರಿಹಾರಕ್ಕಾಗಿ ಚಿಕಿತ್ಸೆಯನ್ನು ಕೊಡಿಸಿದ್ದೇ. ಆದರೆ ಈಚೆಗೆ ನನಗೆ ಬೆನ್ನು ನೋವಿನ ಸಮಸ್ಯೆ ವಿಪರೀತ ಕಾಡಲಾರಂಭಿಸಿದೆ.

ಅರ್ಧ ತಾಸು ಕೂರಲು ಆಗದ ಸ್ಥಿತಿ. ಸ್ವಲ್ಪ ದೂರ ನಡೆಯಲು ಆಗಲ್ಲ. ವಿಧಿಯಿಲ್ಲದೇ ಕೆಲಸ ಬಿಟ್ಟೆ. ಪತ್ನಿ ಎಂದೂ ಹೊರ ಹೋದವಳಲ್ಲ. ಅಲ್ಲಿ ಕೆಲಸ ಗಿಟ್ಟಲಿಲ್ಲ. ಅನಿವಾರ್ಯವಾಗಿ ವಿಜಯಪುರಕ್ಕೆ ಮರಳಿದೆವು. ಇಲ್ಲಿಯೂ ನಾನು ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ’ ಎಂದು ರಮೇಶ ನೋವಿನಿಂದ ನುಡಿದರು.

‘ದೊಡ್ಡ ಮಗ ಗುರುಶಾಂತನನ್ನು ಶಹಾಪೇಟೆಯಲ್ಲಿರುವ ಅವರಜ್ಜಿಯ ಮನೆಯಲ್ಲಿ ಬಿಟ್ಟಿದ್ದೇನೆ. 7ನೇ ತರಗತಿ ಓದುತ್ತಿದ್ದಾನೆ. ಗಣೇಶನನ್ನು ಜತೆಯಲ್ಲೇ ಇಟ್ಟುಕೊಂಡು ನೋಡಿಕೊಳ್ಳುತ್ತಿದ್ದೇವೆ. ನಾಲ್ಕನೇ ತರಗತಿ. ಇದೀಗ ಶಾಲೆಗೆ ಹೋಗ್ತೀಲ್ಲ. ಕಾಸಗೇರಿ ಸಮೀಪದ ನಿಸಾರ ಮಡ್ಡಿಯಲ್ಲಿ ₨ 1000ದ ಬಾಡಿಗೆ ಮನೆ ಹಿಡಿದಿದ್ದೇವೆ.

ಪತ್ನಿ ಲಕ್ಷ್ಮೀ ಬದುಕಿನ ಅನಿವಾರ್ಯತೆಗಾಗಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದಕ್ಕೆ ದಿನಗೂಲಿ ₹ 140ರಂತೆ ಕೂಲಿ ಕೆಲಸಕ್ಕೆ ಹೋಗ್ತಾಳೆ. ಈ ದುಡಿಮೆಯಲ್ಲೇ ನಮ್ಮ ಬದುಕು ಸಾಗಬೇಕಿದೆ. ಇಂತಹ ಸ್ಥಿತಿಯಲ್ಲಿ ಮಗನಿಗೆ ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸಲಾಗುತ್ತಿಲ್ಲ. ನನ್ನ ಸಮಸ್ಯೆ ಬೇಕಿಲ್ಲ. ಮಗನ ಸಮಸ್ಯೆ ಬಗೆಹರಿದರೆ ಸಾಕಾಗಿದೆ’ ಎಂದು ರಮೇಶ ತಿಳಿಸಿದರು.

ರಮೇಶ ಸಾತಪ್ಪ ಸರಸಂಬಿ
ಉಳಿತಾಯ ಖಾತೆ ಸಂಖ್ಯೆ: 9352500100042901
ಐಎಫ್‌ಎಸ್‌ಸಿ ಕೋಡ್‌: ಕೆಎಆರ್‌ಬಿ0000935
ಕರ್ನಾಟಕ ಬ್ಯಾಂಕ್‌, ಜಲನಗರ ಹುಡ್ಕೋ ಶಾಖೆ
ಸಂಪರ್ಕ ಸಂಖ್ಯೆ: 9482261459

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !