ಬಲೆಗೆ ಬಿದ್ದ ಬಾಲಕರ ‘ನೈಸ್‌’ ಗ್ಯಾಂಗ್!

7

ಬಲೆಗೆ ಬಿದ್ದ ಬಾಲಕರ ‘ನೈಸ್‌’ ಗ್ಯಾಂಗ್!

Published:
Updated:

ಬೆಂಗಳೂರು: ನೈಸ್ ರಸ್ತೆಯಲ್ಲಿ ವಾಹನ ಸವಾರರಿಂದ ಸುಲಿಗೆ ಮಾಡುತ್ತಿದ್ದ ಬಾಲಕರ ಗ್ಯಾಂಗ್‌ವೊಂದು, ತಮ್ಮನ್ನು ಹಿಡಿಯಲು ಮಫ್ತಿಯಲ್ಲಿ ಬಂದಿದ್ದ ಕಾನ್‌ಸ್ಟೆಬಲ್‌ವೊಬ್ಬರನ್ನೇ ಅಡ್ಡಗಟ್ಟಿ ತಲಘಟ್ಟಪುರ ಪೊಲೀಸರ ಬಲೆಗೆ ಬಿದ್ದಿದೆ.

ಗಾರ್ವೇಬಾವಿಪಾಳ್ಯದ ಲಕ್ಷ್ಮಿಲೇಔಟ್ ನಿವಾಸಿ ಜಿ.ಉದಯ್ ಅಲಿಯಾಸ್ ಕಲಾಕರ್ (18) ಎಂಬಾತ, 14ರಿಂದ 15 ವರ್ಷ ವಯಸ್ಸಿನ ನಾಲ್ವರು ಬಾಲಕರನ್ನು ‌ಸೇರಿಸಿಕೊಂಡು ಗ್ಯಾಂಗ್ ಕಟ್ಟಿದ್ದ. ಐದೂ ಮಂದಿಯನ್ನು ಬಂಧಿಸಿ ₹ 46 ಸಾವಿರ ಮೌಲ್ಯದ ಚಿನ್ನಾಭರಣ, ₹ 10 ಸಾವಿರ ನಗದು, 7 ಬೈಕ್‌ಗಳು ಹಾಗೂ ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿ ವೇಳೆ ಮಾರಕಾಸ್ತ್ರಗಳೊಂದಿಗೆ ನೈಸ್ ರಸ್ತೆ ಹಾಗೂ ನಗರದ ಹೊರವಲಯದ ರಸ್ತೆಗಳಿಗೆ ತೆರಳುತ್ತಿದ್ದ ಆರೋಪಿಗಳು, ಬೈಕ್‌ನಲ್ಲಿ ಒಂಟಿಯಾಗಿ ಬರುತ್ತಿದ್ದವರನ್ನು ಡ್ರಾಪ್ ಕೇಳುವ ನೆಪದಲ್ಲಿ ಅಡ್ಡಗಟ್ಟುತ್ತಿದ್ದರು. ಬಳಿಕ ಮಾರಕಾಸ್ತ್ರಗಳಿಂದ ಬೆದರಿಸಿ ಹಣ, ಚಿನ್ನಾಭರಣ, ಮೊಬೈಲನ್ನು ಕಿತ್ತುಕೊಂಡು ಆ ಬೈಕ್ ಸಮೇತ ಪರಾರಿಯಾಗುತ್ತಿದ್ದರು.

ಇವರ ಬಂಧನಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ಅವರು ಎಸಿಪಿ ಕಾಂತರಾಜ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ‘ಸುಲಿಗೆಕೋರರನ್ನು ಹಿಡಿಯಲು 20ಕ್ಕೂ ಹೆಚ್ಚು ಕಾನ್‌ಸ್ಟೆಬಲ್‌ಗಳು ಕೆಲ ದಿನಗಳಿಂದ ಪ್ರತಿ ರಾತ್ರಿ ಮಫ್ತಿಯಲ್ಲಿ ನೈಸ್ ರಸ್ತೆಯಲ್ಲಿ ಒಬ್ಬೊಬ್ಬರೇ ಸಂಚರಿಸುತ್ತಿದ್ದರು. ಮಂಗಳವಾರ ರಾತ್ರಿ ನಮ್ಮ ಯೋಜನೆ ಫಲ ನೀಡಿತು. ಆ ಗ್ಯಾಂಗ್ ನಮ್ಮ ಕಾನ್‌ಸ್ಟೆಬಲ್‌ನನ್ನೇ ಅಡ್ಡಗಟ್ಟಿತು. ಕೂಡಲೇ ಇತರ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗ್ಯಾಂಗನ್ನು ವಶಕ್ಕೆ ಪಡೆದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ದೇವಾಲಯಗಳಿಗೂ ಕನ್ನ: ನೈಸ್‌ ರಸ್ತೆಯಲ್ಲಿ ಐದು ಮಂದಿಯಿಂದ ಸುಲಿಗೆ ಮಾಡಿರುವ ಈ ಗ್ಯಾಂಗ್, ಬೆಂಗಳೂರು ಹಾಗೂ ಹಾಸನದಲ್ಲಿ ಏಳು ವಾಹನಗಳವು ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಬೇಗೂರಿನ ಎರಡು ದೇವಾಲಯಗಳಿಗೆ ಕನ್ನ ಹಾಕಿ, ಹುಂಡಿ ಹಣ ಹಾಗೂ ಬೆಳ್ಳಿ ವಸ್ತುಗಳನ್ನೂ ದೋಚಿತ್ತು. ಇವರ ಬಂಧನದಿಂದ 14 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಪೆಟ್ರೋಲ್ ಇರೋವರೆಗೆ ಬೈಕ್ ಓಡಿಸ್ತಾರೆ

‘220 ಸಿ.ಸಿಯ ಪಲ್ಸರ್ ಬೈಕ್‌ಗಳೇ ಇವರ ಟಾರ್ಗೆಟ್. ವ್ಹೀಲಿಂಗ್ ಮಾಡುವುದಕ್ಕೆ ಹಾಗೂ ರಾತ್ರಿ ವೇಳೆ ಸುತ್ತಾಟ ಹೋಗುವುದಕ್ಕಾಗಿಯೇ ವಾಹನಗಳನ್ನು ಕದಿಯುತ್ತಿದ್ದರು. ಮಾರ್ಗಮಧ್ಯೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರೆ, ಅಲ್ಲೇ ವಾಹನ ಬಿಟ್ಟು ಪರಾರಿಯಾಗುತ್ತಿದ್ದರು. ಹಾಗೆಯೇ, ಸುತ್ತಾಟಕ್ಕೆ ಹೋದಾಗ ಪೆಟ್ರೋಲ್ ಖಾಲಿಯಾದರೆ ಆ ಬೈಕನ್ನು ರಸ್ತೆ ಬದಿ ನಿಲ್ಲಿಸಿ, ಬೇರೊಂದು ಬೈಕ್ ಕದ್ದೊಯ್ಯುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !