ಬುಧವಾರ, ನವೆಂಬರ್ 13, 2019
22 °C

ಗಾಂಜಾ ಬೆಳೆದ ವ್ಯಕ್ತಿ ಬಂಧನ: ಬಂದೂಕು ವಶ

Published:
Updated:
Prajavani

ಚಾಮರಾಜನಗರ: ಮುಸುಕಿನಜೋಳದೊಂದಿಗೆ ಗಾಂಜಾ ಗಿಡ ಬೆಳೆದಿದ್ದ ಚಿನ್ನಸ್ವಾಮಿ ನಾಯ್ಕನನ್ನು ತಾಲ್ಲೂಕಿನ ಕೋಳಿಪಾಳ್ಯದ ಬಳಿ ಇರುವ ವೀರನಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಳಿಯಿಂದ ಕಾಲು ಕೆಜಿ ತೂಕದ ಗಾಂಜಾ ಗಿಡ, ಅಕ್ರಮವಾಗಿ ಇರಿಸಿಕೊಂಡಿದ್ದ ನಾಡಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. 

ಗ್ರಾಮದ ಹೊರವಲಯದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಕೃಷಿ ಜಮೀನಿನಲ್ಲಿ ಗಾಂಜಾ ಬೆಳೆಯಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಜೆ.ಮೋಹನ್‌ ನೇತೃತ್ವದಲ್ಲಿ ರಾಮಸಮುದ್ರ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು. 

ಗೂಡ್ಸ್‌ ಆಟೊ ಚಾಲಕರಾಗಿರುವ ಆರೋಪಿ, ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ. ಆರೋಪಿ ಬಳಿ ಪರವಾನಗಿ ಇಲ್ಲದ ನಾಡ ಬಂದೂಕು ಕೂಡ ಇತ್ತು. ಬಂದೂಕಿನೊಂದಿಗೆ 24 ಗುಂಡುಗಳು, ಗುಂಡುಗಳನ್ನು ಸಿಡಿಸಲು ಉಪಯೋಗಿಸುವ ಪುಡಿ, ಸೈಕಲ್‌ ಬಾಲ್ಸ್‌ ಮಾದರಿಯ 83 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಎಸ್‌ಐ ಪುಟ್ಟಸ್ವಾಮಿ, ಎಎಸ್‌ಐ ಮಾದೇಗೌಡ, ಹೆಡ್ ಕಾನ್‌ಸ್ಟೆಬಲ್‌ಗಳಾದ ನಾಗನಾಯ್ಕ, ಶಾಂತರಾಜು, ಮಹೇಶ, ಹಾಗೂ ಕಾನ್‌ಸ್ಟೆಬಲ್‌ಗಳಾದ ಚಂದ್ರು, ಸಂತೋಷಕುಮಾರ್, ಡಿ.ಎಸ್.ವೆಂಕಟೇಶ, ಮಾದೇಶ ಕುಮಾರ್‌ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)