ವಿಜಯಪುರ: ಆನಂದ ನಗರದಲ್ಲಿ ‘ಅಮೃತ್’ ಕಲರವ..!

7
₹ 50 ಲಕ್ಷ ವೆಚ್ಚದಲ್ಲಿ ಸೌಂದರ್ಯೀಕರಣಗೊಂಡಿದೆ ಉದ್ಯಾನ

ವಿಜಯಪುರ: ಆನಂದ ನಗರದಲ್ಲಿ ‘ಅಮೃತ್’ ಕಲರವ..!

Published:
Updated:
Prajavani

ವಿಜಯಪುರ: ಕೇಂದ್ರ ಸರ್ಕಾರದ ‘ಅಮೃತ್’ ಯೋಜನೆಯಡಿ ಇಲ್ಲಿನ ಆನಂದ ನಗರದಲ್ಲಿನ ಉದ್ಯಾನವೊಂದರ ಸೌಂದರ್ಯೀಕರಣ ಕಾಮಗಾರಿ ಭರದಿಂದ ನಡೆದಿದೆ.

ಉದ್ಯಾನ ಹಂತ ಹಂತವಾಗಿ ಸೌಂದರ್ಯೀಕರಣಗೊಂಡಿದ್ದು, ಮಕ್ಕಳ ಆಟೋಟ ಸಾಮಗ್ರಿ, ವ್ಯಾಯಾಮ ಸಲಕರಣೆಗಳು ಅಳವಡಿಕೆಯಾಗಬೇಕಿದೆಯಷ್ಟೇ. ಫೆಬ್ರುವರಿ ಅಂತ್ಯದೊಳಗೆ ಸಾರ್ವಜನಿಕರ ಸೇವೆಗೆ ಉದ್ಯಾನ ತೆರೆದುಕೊಳ್ಳಲಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಆಡಳಿತದ ಮೂಲಗಳು ತಿಳಿಸಿವೆ.

‘₹ 50 ಲಕ್ಷ ವೆಚ್ಚದಲ್ಲಿ, 3600 ಚದರಡಿ ಜಾಗದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆವರಣಗೋಡೆ, ಸ್ವಚ್ಛಗೊಳಿಸುವಿಕೆ, ನೆಲ ಸಮತಟ್ಟುಗೊಳಿಸುವಿಕೆ, ಉದ್ಯಾನದ ಸುತ್ತಲೂ ತಂತಿಬೇಲಿ ಅಳವಡಿಸಲು ₹ 14 ಲಕ್ಷ ಮೀಸಲಿಡಲಾಗಿದೆ. ಈಗಾಗಲೇ ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿವೆ’ ಎಂದು ಯೋಜನೆ ನಿರ್ವಹಣೆಯ ಹೊಣೆ ಹೊತ್ತಿರುವ ಪಾಲಿಕೆಯ ಎಂಜಿನಿಯರ್ ಆನಂದ ಕೋಳೂರಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಉದ್ಯಾನದೊಳಗೆ 640 ಚದರಡಿ ದೂರದ ವಾಕಿಂಗ್ ಪಾಥ್‌ ನಿರ್ಮಿಸಲು ₹ 14 ಲಕ್ಷ ಮೀಸಲಿದ್ದು, ಈಗಾಗಲೇ ಪಾಥ್‌ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ₹ 3.5 ಲಕ್ಷ ವೆಚ್ಚದಲ್ಲಿ ಮಕ್ಕಳ ಆಟೋಟ ಸಾಮಗ್ರಿ ಅಳವಡಿಸಬೇಕಿದೆ.

ವಾರದ ಅವಧಿಯೊಳಗೆ ಬೆಂಗಳೂರಿನಿಂದ ಸಾಮಗ್ರಿ ಬರಲಿವೆ. ಜಾರು ಬಂಡಿ, ಜೋಕಾಲಿ, ರೈನ್‌ ಬೋ ಕ್ಲೈಂಬಿಂಗ್, ದಡಂ ದುಡಕಿ, ಕಸದ ಡಬ್ಬಿಗಳು, ಉದ್ಯಾನದಲ್ಲಿ ಕೂರುವ ಕಲ್ಲು ಹಾಸಿನ ಬೆಂಚುಗಳು ಸಹ ಈ ವೆಚ್ಚದಲ್ಲೇ ಅಡಕಗೊಂಡಿದ್ದು, ಶೀಘ್ರದಲ್ಲೇ ಅಳವಡಿಸಲಾಗುವುದು’ ಎಂದು ಹೇಳಿದರು.

‘ಉದ್ಯಾನದೊಳಗೆ ವ್ಯಾಯಾಮ ಸಲಕರಣೆ ಅಳವಡಿಸಲು ₹ 4.5 ಲಕ್ಷ ಮೀಸಲಿಡಲಾಗಿದೆ. ಕ್ರಾಸ್‌ ವಾಕರ್, ಟ್ರೈನರ್‌ ಸಿಟಪ್ ಬೆಂಚ್‌, ವೇಸ್ಟ್‌ ಟ್ರಿಪ್ಪಲ್‌, ಸೆಟಪ್‌ ಸೈಕಲ್‌ ಉಪಕರಣ ಅಳವಡಿಸಲಾಗುವುದು. ಈ ಭಾಗದ ಜನರು ಮುಂಜಾನೆ–ಮುಸ್ಸಂಜೆ ವಾಯು ವಿಹಾರ ನಡೆಸಿದ ಬಳಿಕ, ಈ ವ್ಯಾಯಾಮ ಉಪಕರಣಗಳನ್ನು ಬಳಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅನುವಾಗುವಂತೆ ಯೋಜನೆ ರೂಪಿಸಲಾಗಿದೆ’ ಎಂದು ಆನಂದ ತಿಳಿಸಿದರು.

‘ಉದ್ಯಾನದ ಅಂಗಳದಲ್ಲಿ 1700 ಚದರಡಿ ಹುಲ್ಲುಹಾಸು ಅಳವಡಿಸಲಾಗಿದ್ದು, ಈಗಾಗಲೇ ನೀರು ಹಾಕಿ ಹಸಿರು ಕಾಪಿಟ್ಟುಕೊಳ್ಳಲಾಗುತ್ತಿದೆ. ವಾಕಿಂಗ್ ಪಾಥ್‌ ಸುತ್ತಲೂ 640 ರನ್ನಿಂಗ್‌ ಮೀಟರ್ಸ್‌ ಉದ್ದ ‘ಗೋಲ್ಡನ್ ಡ್ಯುರೆಂಟಾ’ ಜಾತಿಯ 3,500 ಗಿಡಗಳನ್ನು ನೆಡಲಾಗಿದೆ.

ಇದರ ಜತೆಗೆ ಪಾಮ್‌, ಕೆಸಿಯಾ ಪಿಸ್ತೂಲಾ, ಪೇಪರ್ ರೋಸ್‌ನ 60 ಗಿಡಗಳನ್ನು ನೆಡಲಾಗಿದೆ. ನೀರು ಹರಿಸಲು ಸ್ಪ್ರಿಂಕ್ಲರ್, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಇದಕ್ಕಾಗಿಯೇ ಒಟ್ಟು ₹ 8 ಲಕ್ಷ ವಿನಿಯೋಗಿಸಲಾಗಿದೆ’ ಎಂದು ಕೋಳೂರಗಿ ಮಾಹಿತಿ ನೀಡಿದರು.

ಸಮಿತಿ ರಚನೆಯ ಚಿಂತನೆ
‘ಇಲ್ಲಿ ಉದ್ಯಾನವಿತ್ತು ಎಂಬ ಕಲ್ಪನೆಯೇ ಇರಲಿಲ್ಲ. ಬಹು ವರ್ಷಗಳ ಹಿಂದೆ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ನೆಟ್ಟಿದ್ದ ಸಸಿಗಳು ಇಂದು ಮರವಾಗಿವೆ. ಆದರೆ ಸ್ವಚ್ಛತೆ ಎಂಬುದು ಕನಸಾಗಿತ್ತು. ಹೊಲಸಿನಿಂದ ತುಂಬಿತ್ತು. ಹಂದಿ, ನಾಯಿ, ಬಿಡಾಡಿ ದನಗಳ ವಾಸ ಸ್ಥಾನವಾಗಿತ್ತು’ ಎನ್ನುತ್ತಾರೆ ಸ್ಥಳೀಯರಾದ ಬಿ.ಎನ್‌.ಕೂಡಲಗಿ.

‘ಪಾಲಿಕೆ ಆಡಳಿತ ಇದೀಗ ಚಲೋ ಕೆಲಸ ಆರಂಭಿಸಿದೆ. ಪರಿಸರವೂ ಅಂದವಾಗಿದೆ. ಇತ್ತ ಬರಲು ಮನಸ್ಸಾಗುತ್ತಿದೆ. ನಿರ್ವಹಣೆಯದ್ದೇ ಚಿಂತೆ. ಗುತ್ತಿಗೆದಾರ ವರ್ಷದವರೆಗೂ ನಿರ್ವಹಿಸಬಲ್ಲ. ನಂತರ ಉದ್ಯಾನದ ಸ್ವರೂಪ ಉಳಿಸಿಕೊಳ್ಳಲು ಸ್ಥಳೀಯರೇ ಒಟ್ಟಾಗಿ ಸಮಿತಿಯೊಂದನ್ನು ರಚಿಸುವ ಚಿಂತನೆ ನಡೆಸಿದ್ದೇವೆ’ ಎಂದು ಹೇಳಿದರು.

‘ಉದ್ಯಾನ ನಿರ್ಮಾಣದಿಂದ ಆನಂದ ನಗರ, ಶಿವಯೋಗಿ ನಗರ, ಮಲಪ್ರಭಾ ನಗರ, ಸಿದ್ಧೇಶ್ವರ ಬಡಾವಣೆ, ಗುರುರಾಜ ಕಾಲೊನಿ, ವಿದ್ಯಾನಗರ ಆಸುಪಾಸಿನ ಎಲ್ಲ ವರ್ಗದ ವಯೋಮಾನದವರಿಗೆ ಅನುಕೂಲವಾಗಲಿದೆ. ಒಂದೆಡೆ ಕೂಡಲು ವೇದಿಕೆಯಾಗಿದೆ. ಓಣಿಯ ವಾತಾವರಣವೇ ಬದಲಾಗಿದೆ’ ಎಂದು ವಿಶ್ವನಾಥ ಕತ್ತಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !