ಶನಿವಾರ, ಸೆಪ್ಟೆಂಬರ್ 18, 2021
30 °C
ಐತಿಹಾಸಿಕ ಗ್ಯಾಂಗ್ ಬಾವಡಿ ಒಳಗೊಂಡಿರುವ ವಿಜಯಪುರ ಮಹಾನಗರ ಪಾಲಿಕೆಯ ಮೂರನೇ ವಾರ್ಡಿದು...

ಉದ್ಯಾನ, ಸಾರ್ವಜನಿಕ ಮೂತ್ರಿಯ ತುರ್ತಿದೆ..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಐತಿಹಾಸಿಕ ಗ್ಯಾಂಗ್‌ ಬಾವಡಿ ಹೊಂದಿರುವ ವಿಜಯಪುರ ಮಹಾನಗರ ಪಾಲಿಕೆಯ ಮೂರನೇ ವಾರ್ಡ್‌ನ ಬಹುತೇಕ ರಸ್ತೆಗಳಿಗೆ ಕಾಂಕ್ರೀಟ್‌, ಡಾಂಬರಿನ ಭಾಗ್ಯ ಸಿಕ್ಕಿದೆ. ಗಲ್ಲಿ ಗಲ್ಲಿಗೂ ಕಾಂಕ್ರೀಟ್‌ ರಸ್ತೆಗಳಿರುವುದು ಇಲ್ಲಿನ ಹೆಗ್ಗಳಿಕೆ.

ಮೂರು ತಿಂಗಳ ಹಿಂದೆಯೇ ವಾರ್ಡ್‌ ವ್ಯಾಪ್ತಿಯಲ್ಲಿ 24X7 ಕುಡಿಯುವ ನೀರಿನ ಪೂರೈಕೆ ಆರಂಭಗೊಂಡಿದೆ. ಇದಕ್ಕೂ ಮುನ್ನ 10 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಕಡು ಬೇಸಿಗೆ ಆರಂಭಗೊಂಡ ಬೆನ್ನಿಗೆ 24X7 ಸ್ಥಗಿತಗೊಂಡಿದ್ದು, ಇದೀಗ ವಾರಕ್ಕೊಮ್ಮೆ ಯಥಾಪ್ರಕಾರ ನೀರು ಪೂರೈಕೆಯಾಗುತ್ತಿದೆ. ಆದರೂ ಅಷ್ಟೇನು ತ್ರಾಸಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಹೇಳಿಕೆ.

ವಾರ್ಡ್‌ನ ವ್ಯಾಪ್ತಿಯಲ್ಲೇ ದರ್ಗಾ ಜೈಲ್‌ ರೋಡ್‌ ಬದಿ ನಿತ್ಯವೂ ಕಾಯಿಪಲ್ಲೆ ಬಜಾರ್ ನಡೆಯಲಿದೆ. ಪಾಲಿಕೆಯ ಪೌರ ಕಾರ್ಮಿಕರು ಮುಂಜಾನೆ ಸ್ವಚ್ಛಗೊಳಿಸುತ್ತಾರೆ. ಮತ್ತೆ ಇತ್ತ ಸುಳಿಯಲ್ಲ. ಆದರೆ ಬಜಾರ್ ಮಧ್ಯಾಹ್ನದವರೆಗೂ ನಡೆಯುತ್ತೆ. ಸಂತಿ ಮುಗಿದ ಬಳಿಕ ವ್ಯಾಪಾರಿಗಳು ಕಸವನ್ನು ಅಲ್ಲೇ ಬಿಟ್ಟು ತೆರಳುತ್ತಾರೆ. ಗಾಳಿ ಹೆಚ್ಚಿದಂತೆ ಈ ಕಸ ವಾರ್ಡ್‌ನ ಓಣಿಯೊಳಗೆಲ್ಲಾ ಹಾರಿ ಬರುತ್ತದೆ. ಸ್ವಚ್ಛತೆಗೆ ತೊಡಕಾಗಿದೆ. ಈ ಸಂಬಂಧ ಹಲವು ಬಾರಿ ಮನವಿ, ಸೂಚನೆ ನೀಡಿದರೂ ಪರಿಹಾರ ಸಿಕ್ಕಿಲ್ಲ. ಮನೆಗಳ ಬಾಗಿಲಿಗೆ ಕಸ ಹಾರಿ ಬರುವುದು ನಿಂತಿಲ್ಲ ಎಂಬ ದೂರು ಭಾವಸಾರ ನಗರದ ಗೃಹಿಣಿಯರದ್ದು.

‘ನಮ್ಮ ಮನೆ–ಓಣಿ–ರಸ್ತೆ’ ಕಲ್ಪನೆಯಲ್ಲಿ ಸ್ವಚ್ಛತೆ ವಾರ್ಡ್‌ನ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಕಸ ಸಂಗ್ರಹಿಸುವವರು ಮಾತ್ರ ನಿರಂತರವಾಗಿ ಬಂದು, ಕಸ ಕೊಂಡೊಯ್ಯದೆ ಇರುವುದು ಕೆಲವೊಮ್ಮೆ ಸಮಸ್ಯೆಯ ಮೂಲವಾಗಿದೆ ಎಂಬ ಆರೋಪ ಸ್ಥಳೀಯರದ್ದು.

‘ಬೀದಿ ದೀಪದ್ದೇ ಸಮಸ್ಯೆ. ಕೆಟ್ಟರೆ ತಕ್ಷಣವೇ ಸ್ಪಂದಿಸಿ ದುರಸ್ತಿಗೊಳಿಸಲ್ಲ. ಹಾಳಾದ ಬಲ್ಬ್‌ ಬದಲಿಸಲ್ಲ. ಒಳ ರಸ್ತೆಗಳಲ್ಲಿ ಸೋಡಿಯಂ, ಮರ್ಕ್ಯೂರಿ ಲೈಟ್‌ಗಳಿಲ್ಲ. ಭಾವಸಾರ ನಗರದ ಸಿ ಬ್ಲಾಕ್‌ನಲ್ಲಿ ಟ್ಯೂಬ್‌ಲೈಟ್‌ಗಳಿವೆ. ಇವುಗಳಿಂದ ಬೆಳಕು ಅಷ್ಟಾಗಿ ಹೊರಹೊಮ್ಮಲ್ಲ’ ಎನ್ನುತ್ತಾರೆ ಎನ್‌.ಎಸ್‌.ಕೇಶೆಟ್ಟಿ.

‘ವಾರ್ಡ್ ವ್ಯಾಪ್ತಿಯಲ್ಲಿ ಉದ್ಯಾನಗಳಿದ್ದರೂ; ಹೇಳಿಕೊಳ್ಳುವಂತಿಲ್ಲ. ಇದ್ದುದರಲ್ಲಿ ಅಂಬಾಭವಾನಿ ಗುಡಿ ಬಳಿಯ ಉದ್ಯಾನ ಈಗಷ್ಟೇ ಅಭಿವೃದ್ಧಿಗೊಂಡಿದೆ. ಬಿ ಬ್ಲಾಕ್‌, ಸಿ ಬ್ಲಾಕ್‌ನಲ್ಲಿ ಒಂದೇ ಒಂದು ಉದ್ಯಾನವಿಲ್ಲ. ದರ್ಗಾ ಜೈಲ್‌ ರೋಡ್‌ನಲ್ಲಿನ ಉದ್ಯಾನ ಅಭಿವೃದ್ಧಿಗೊಳಿಸಿದರೆ ಸಾಕಷ್ಟು ಮಂದಿಗೆ ಅನುಕೂಲವಾಗಲಿದೆ’ ಎಂದು ಹೇಳುತ್ತಾರೆ ಎಂ.ಎಸ್.ಸಕ್ರಿ.

ಮುಖ್ಯ ರಸ್ತೆ ದುರಸ್ತಿಗೊಳ್ಳಲಿ

‘ವಿಜಯಪುರ–ಜತ್ತ ಮಾರ್ಗದ ರಸ್ತೆ ಈ ವಾರ್ಡ್‌ನಲ್ಲೇ ಹಾದುಹೋಗಿದೆ. ಇದು ಈ ಭಾಗದ ಮುಖ್ಯ ರಸ್ತೆಯಾಗಿದೆ. ಎಂಟು ವರ್ಷಗಳಿಂದ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರೂ ಪ್ರಯೋಜನ ಸಿಗದಾಗಿದೆ. ಸಂಬಂಧಿಸಿದವರ ಸ್ಪಂದನೆ ಶೂನ್ಯವಾಗಿದೆ. ಜರೂರಾಗಿ ಈ ರಸ್ತೆ ದುರಸ್ತಿಗೊಳಿಸಲಿ’ ಎಂಬ ಆಗ್ರಹ ಸ್ಥಳೀಯರದ್ದು.

‘ಇಲ್ಲಿಗೆ ಸಮೀಪದ ಶಕ್ತಿ ನಗರದಲ್ಲಿನ ರವೀಂದ್ರನಾಥ ಟ್ಯಾಗೋರ್‌ ಶಾಲೆ ಹಿಂದಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಈ ಭಾಗದ ಜನರೆಲ್ಲರೂ ಹೋಗ್ತೀವಿ. ₹ 10 ಕೊಟ್ಟು ಒಂದು ಕ್ಯಾನ್ ನೀರು ತರ್ತೀವಿ. ನಮ್ಮಲ್ಲಿರುವ 32ನೇ ನಂಬರ್‌ನ ಕನ್ನಡ ಸರ್ಕಾರಿ ಶಾಲೆ ಆವರಣದಲ್ಲೇ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದರೆ, ಇಲ್ಲಿನ ಎಲ್ಲರಿಗೂ ಸಾಕಷ್ಟು ಅನುಕೂಲವಾಗಲಿದೆ’ ಎನ್ನುತ್ತಾರೆ ನಂದೀಶ.

‘ಮುಖ್ಯ ರಸ್ತೆಯಿಂದ ಜೈನ ಮಂದಿರದವರೆಗೂ ಒಂದೇ ಒಂದು ಸಾರ್ವಜನಿಕ ಶೌಚಾಲಯ–ಮೂತ್ರಾಲಯವಿಲ್ಲ. ರಸ್ತೆಯ ಎರಡು ಬದಿಯಿರುವ ಅಂಗಡಿಗಳ ವ್ಯಾಪಾರಿಗಳಿಗೆ ನಿಸರ್ಗ ಕರೆ ಪೂರೈಸಿಕೊಳ್ಳುವುದು ಸಹ ತ್ರಾಸಿನ ಕೆಲಸವಾಗಿದೆ.

ಮೂತ್ರ ಬರುತ್ತಿದ್ದಂತೆ ವಿಧಿಯಿಲ್ಲದೆ ಅಂಗಡಿ ಬಿಟ್ಟು, ಬೈಕ್‌ಗಳಲ್ಲಿ 12 ಕಾಲಿನ ಮಸೀದಿಯಿಂದ ಆಚೆ ಹೋಗಿ, ಬಾಧೆ ತೀರಿಸಿಕೊಂಡು ಬರಬೇಕಿದೆ. ಇದಕ್ಕೆ ಇತಿಶ್ರೀ ಹಾಕಲು ಸಾರ್ವಜನಿಕ ಮೂತ್ರಿಯೊಂದನ್ನು ತುರ್ತಾಗಿ ಪಾಲಿಕೆ ಆಡಳಿ ನಿರ್ಮಿಸಬೇಕು’ ಎಂಬ ಆಗ್ರಹ ಮಹಾದೇವ ಅವರದ್ದು.

ಗ್ಯಾಂಗ್‌ ಬಾವಡಿ ಪುನಶ್ಚೇತನಕ್ಕೆ ಅನುದಾನ: ವಂದಾಲ

‘ಐತಿಹಾಸಿಕ ಗ್ಯಾಂಗ್ ಬಾವಡಿಯ ಪುನಶ್ಚೇತನಕ್ಕಾಗಿ ನಗರ ಶಾಸಕರಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದೇನೆ. ಶೀಘ್ರದಲ್ಲೇ ಪುನಶ್ಚೇತನ ನಡೆಸಲಾಗುವುದು’ ಎನ್ನುತ್ತಾರೆ ವಾರ್ಡ್‌ ಸದಸ್ಯ ಬಿಜೆಪಿಯ ಉಮೇಶ ವಂದಾಲ.

‘ಹೊಸ ಕುಂಬಾರಗಲ್ಲಿ, ಜಯನಗರ ಕಾಲೊನಿ, ಅಂಬೇಡ್ಕರ್ ಕಾಲೊನಿ, ಗ್ಯಾಂಗ್ ಬಾವಡಿ, ಸಂಗಮೇಶ್ವರ ಕಾಲೊನಿ, ಭಾವಸಾರ ನಗರ, ಶಾಂತಿ ನಗರ ವಾರ್ಡ್‌ ವ್ಯಾಪ್ತಿಯಲ್ಲಿದ್ದು, ಎರಡನೇ ಬಾರಿಗೆ ಸದಸ್ಯನಾಗಿರುವೆ. ಮೊದಲ ಬಾರಿ ಪೂರೈಸಲಾಗದ ಕೆಲಸಗಳನ್ನು ಎರಡನೇ ಬಾರಿಗೆ ಮುಗಿಸಿರುವೆ. ಇನ್ನೇನಿದ್ದರೂ ನಿರಂತರ ಕೆಲಸಗಳು ಹಾಗೂ ₹ 20 ಲಕ್ಷ ವೆಚ್ಚದ ಯುಜಿಡಿ ಕಾಮಗಾರಿ ಉಳಿದಿದೆಯಷ್ಟೇ’ ಎಂದು ಉಮೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಲಂ ಬೋರ್ಡ್‌ ವತಿಯಿಂದ ತಲಾ ₹ 4 ಲಕ್ಷ ವೆಚ್ಚದ 135 ಮನೆ ನಿರ್ಮಿಸಲಾಗುತ್ತಿದೆ. ವಾರ್ಡ್‌ ವ್ಯಾಪ್ತಿಯ ಎಲ್ಲ ರಸ್ತೆಗಳಿಗೂ ಡಾಂಬರು, ಕಾಂಕ್ರೀಟ್‌ ಹಾಕಿಸಲಾಗಿದೆ. ಬೀದಿ ದೀಪ, ಚರಂಡಿ, ಉದ್ಯಾನದ ಕೆಲಸ ಮುಗಿದಿವೆ. ನಗರದಲ್ಲಿ ಮೊದಲು ಘೋಷಣೆಯಾದ ಬಯಲು ಶೌಚ ಮುಕ್ತ ವಾರ್ಡ್‌ ನಮ್ಮದೇ’ ಎಂದು ಹೆಮ್ಮೆಯಿಂದ ಬೀಗಿದರು ವಂದಾಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು