ಗಾಂಧಿ ಹೇಳಿದ ಬಂಜೆ ಮತ್ತು ವೇಶ್ಯೆ ಕತೆ

7
ಗಾಂಧೀಜಿಯ ತಾಯ್ತನ, ಜನರಿಗೆ ಅವರು ಹೇಳುತ್ತಿದ್ದ ಸಾಂತ್ವನ ಕೇವಲ ರೂಪಕಗಳಾಗಬಾರದು

ಗಾಂಧಿ ಹೇಳಿದ ಬಂಜೆ ಮತ್ತು ವೇಶ್ಯೆ ಕತೆ

Published:
Updated:

‘ಸೇಡು–ಕೇಡು’ಗಳ ರಾಜಕೀಯ ನಡೆ ನಾಡನ್ನು ಒಂದೆರಡು ತಿಂಗಳಿನಿಂದ ಸುಡುತ್ತಿದೆ. ಅಧಿಕಾರದ ಹಪಾಹಪಿಗೆ ಬಿದ್ದವರ ನಡಾವಳಿಗಳು ಪ್ರಜಾಸತ್ತೆಯ ನೈಜ ಧ್ಯೇಯವನ್ನೇ ಅಣಕ ಮಾಡುತ್ತಿವೆ. ಗಾಂಧೀಜಿ ಕೊಟ್ಟ ಬೆಳಕು ಈ ಹೊತ್ತಿನಲ್ಲಿ ನಮ್ಮೊಳಗನ್ನು ಬೆಳಗಬೇಕಾಗಿದೆ.

ಇಂದು ಬಾಪುರವರ 150ನೇ ಜನ್ಮದಿನ. ಗಾಂಧಿಯ ತತ್ವ ಪ್ರಣಾಳಿಗಳ ಅರಿವಿನ ಹರಿವಿನಲ್ಲಿ ಕರ್ನಾಟಕವನ್ನು ನೋಡುವ, ಮಹಾತ್ಮನ ಕಾಣ್ಕೆಯನ್ನು ಆವಾಹಿಸಿಕೊಂಡು ನಮ್ಮನ್ನು ಶುದ್ಧೀಕರಿಸಿಕೊಳ್ಳುವತ್ತ ಪುಟ್ಟ ಹೆಜ್ಜೆಯನ್ನಿಡಲು ಇದು ಸಕಾಲ.

1909ರಲ್ಲಿ ಗಾಂಧೀಜಿ ಬರೆದ ‘ಹಿಂದ್ ಸ್ವರಾಜ್‌’ ಕೃತಿಯನ್ನು ಬ್ರಿಟಿಷರು ನಿಷೇಧಿಸಿದ್ದರು. ಗಾಂಧೀಜಿ ಚಿಂತನೆಯ ಮೂಲಸ್ರೋತ ಎಂದು ಕರೆಯುವ ಈ ಕೃತಿಯಲ್ಲಿ, ಅಂದು ಆದರ್ಶ ಎಂದು ಪರಿಭಾವಿಸಿದ್ದ ಇಂಗ್ಲೆಂಡಿನ ಪಾರ್ಲಿಮೆಂಟನ್ನು ಅವರು, ಬಂಜೆ ಮತ್ತು ವೇಶ್ಯೆ ಎಂದು ವಿಶ್ಲೇಷಿಸಿದ್ದರು. ಈ ಪ್ರಯೋಗ ಅಂದು ರಾಜಕೀಯ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿತ್ತು.

‘ತಾನಾಗಿಯೇ ಒಂದೇ ಒಂದು ಕೆಲಸ ಮಾಡದ ಪಾರ್ಲಿಮೆಂಟ್‌ ಬಂಜೆ ಇದ್ದಂತೆ. ಪದೇ ಪದೇ ಬದಲಾಗುವ ಅದರ ನಾಯಕರು ಅಥವಾ ಕಾಲದಿಂದ ಕಾಲಕ್ಕೆ ಬದಲಾಗುವ ಮಂತ್ರಿಗಳು ಪಾರ್ಲಿಮೆಂಟ್‌ನಲ್ಲಿ ಇರುತ್ತಾರೆ. ಪಾರ್ಲಿಮೆಂಟಿನಲ್ಲಿ ಪ್ರಶ್ನೋತ್ತರ ಮತ್ತು ಚರ್ಚೆಗಳು ನಡೆಯುವಾಗ ಸದಸ್ಯರು ತೂಕಡಿಸುತ್ತಾರೆ. ಒಂದೊಂದು ಸಲ ಕೇಳುಗರಿಗೂ ಬೇಸರ ತರುವಷ್ಟು ಬರೀ ಮಾತುಗಳನ್ನೇ ಆಡುತ್ತಾರೆ.
ಸದಸ್ಯರು ಏನನ್ನೂ ಯೋಚಿಸದೇ ಕಣ್ಣು ಮುಚ್ಚಿ ತಮ್ಮ ಪಕ್ಷದ ಕಡೆಗೆ ವೋಟು ಹಾಕುತ್ತಾರೆ. ಅಲ್ಲಿ ಸ್ಥಿರವಾದ ಅಧಿಕಾರದ ನೆಲೆಯೇ ಇಲ್ಲ’ ಎಂದು ಹೇಳುತ್ತಾ ವೇಶ್ಯೆ ಎಂಬ ಪದ ಬಳಕೆಗೆ ಸಮರ್ಥನೆಯನ್ನೂ ಅವರು ಕೊಡುತ್ತಾರೆ.

ಪ್ರಶ್ನೋತ್ತರ ರೂಪದಲ್ಲಿರುವ ‘ಹಿಂದ್ ಸ್ವರಾಜ್‌’ನಲ್ಲಿ ಇದಕ್ಕೆ ಪ್ರಶ್ನೆ ಹಾಕುವ ಓದುಗ, ‘ಏನೂ ಮಾಡದೇ ಇರುವ ಬಗೆಯನ್ನು ಬಂಜೆ ಎನ್ನುವುದು ಸರಿಯಲ್ಲ’ ಎಂದು ವಾದಿಸುತ್ತಾನೆ. ‘ಚುನಾಯಿತ ಪ್ರತಿನಿಧಿಗಳು (ಸಂಸದೀಯ ಪ್ರಜಾಪ್ರಭುತ್ವದಲ್ಲಿ) ಕಪಟಿಗಳು, ಸ್ವಾರ್ಥಿಗಳು. ಸಾರ್ವಜನಿಕ ಹಿತಕ್ಕಾಗಿ ಏನನ್ನೂ ಮಾಡುವುದಿಲ್ಲ. ಪ್ರತಿಯೊಬ್ಬನೂ ತನ್ನ ಹಿತವನ್ನೇ ನೋಡುತ್ತಾನೆ’ ಎಂದು ಗಾಂಧೀಜಿ ತುಸು ಕಟುವಾಗಿ ಪ್ರತಿಕ್ರಿಯಿಸುತ್ತಾರೆ.

10–12 ವರ್ಷಗಳ ಈಚೆಗಿನ ನಮ್ಮ ವಿಧಾನಸಭೆ ಮತ್ತು ವಿಧಾನಪರಿಷತ್ತುಗಳ ನಡಾವಳಿಗಳನ್ನು ನೋಡಿದರೆ 109 ವರ್ಷಗಳ ಹಿಂದೆ ಗಾಂಧೀಜಿ ಮಾಡಿದ ಟೀಕೆ ಸದ್ಯದ ಸುಡುವಾಸ್ತವಕ್ಕೂ ಕನ್ನಡಿಯಂತೆ ಕಾಣುತ್ತದೆ.

ಸ್ವರಾಜ್ಯದ ಕಲ್ಪನೆಯನ್ನು ಗಾಂಧೀಜಿ ತಮ್ಮ ‘ಯಂಗ್ ಇಂಡಿಯಾ’ದಲ್ಲಿ (1931) ಹೀಗೆ ಉಲ್ಲೇಖಿಸಿದ್ದಾರೆ. ‘ನನ್ನ ಕನಸಿನ ಸ್ವರಾಜ್ಯವು ಬಡವರ ಸ್ವರಾಜ್ಯವಾಗಿದೆ. ಅರಸರಿಗೆ, ಸಿರಿವಂತರಿಗೆ ದೊರೆಯುವ ಜೀವನದ ಎಲ್ಲ ಅನುಕೂಲತೆ ಗಳು ಸಾಮಾನ್ಯ ಜನರಾದ ನನಗೆ, ನಿಮಗೆ ದೊರೆಯಬೇಕು’. ಇವುಗಳನ್ನು ವಾಸ್ತವವಾಗಿಸುವತ್ತ ಯಾವ ರಾಜಕಾರಣಿಯೂ ಕನಿಷ್ಠ ಕನಸು ಕಂಡಿಲ್ಲ. ಗಾಂಧೀಮಾರ್ಗ ಎಂಬುದು ಅಪಥ್ಯವಾಗಿರುವುದು ಸದ್ಯ ಮತ್ತು ಶಾಶ್ವತದ ವಿಪರ್ಯಾಸ. ಈಗಲಾದರೂ ಗಾಂಧಿಯ ಸ್ವರಾಜ್ಯ ಕಲ್ಪನೆ ಕೈಮರವಾಗಬೇಕಿದೆ.

ಗಾಂಧಿಯವರ ನಿಜದ ನಡೆಯೂ ಅಷ್ಟೇ ಸ್ಫುಟವಾಗಿತ್ತು. ವಿಪುಲ ಅವಕಾಶವಿದ್ದರೂ ‘ಪ್ರಧಾನಿ’ಯಂತಹ ಉನ್ನತ ಹುದ್ದೆಯ ಬಗ್ಗೆ ನಿರ್ಮೋಹಿಯಾಗಿದ್ದ ಅವರು ಎಂದೂ ಅಧಿಕಾರದ ಗದ್ದುಗೆಯ ಕಡೆ ನೋಡಲಿಲ್ಲ. ‘ಅಖಂಡ’ ಭಾರತ ವಿಭಜನೆಯಾದ ಕಾಲಘಟ್ಟದಲ್ಲಿ ಬಂಗಾಳದ ನೌಕಾಲಿ, ಪಶ್ಚಿಮ ಪಂಜಾಬ್‌, ಲಾಹೋರ್‌ಗಳು ಅಗ್ನಿಕುಂಡಗಳಾಗಿದ್ದವು. ಕೋಲ್ಕತ್ತ ಕೋಮುಸಂಘರ್ಷದ ಭೂಮಿಯಂತಿತ್ತು. ಅಧಿಕಾರಸ್ಥರು ದೆಹಲಿಯ ಸುಪ್ಪತ್ತಿಗೆಯಲ್ಲಿದ್ದರು. ಈ ಪ್ರಕ್ಷುಬ್ಧ ವಾತಾವರಣದಲ್ಲಿ ಕೋಲ್ಕತ್ತದ ಬೀದಿಗಳಲ್ಲಿ ಪಕೀರನಂತೆ ನಿಂತ ಗಾಂಧೀಜಿ ಕೋಮುಗಲಭೆ ತಡೆಯಲು ಯತ್ನಿಸುತ್ತಿದ್ದರು. ಹಲ್ಲೆಗೆ ಒಳಗಾದವರನ್ನು ಸಂತೈಸುತ್ತಿದ್ದರು ಸಂತನಂತೆ...

ಇದೇ ನಿದರ್ಶನವೊಂದನ್ನು ಇಟ್ಟುಕೊಂಡು ಕರ್ನಾಟಕಕ್ಕೆ ಬರುವುದಾದರೆ 2009ರಲ್ಲಿ ಮಹಾಪ್ರವಾಹಕ್ಕೆ ಉತ್ತರ ಕರ್ನಾಟಕದ 15 ಜಿಲ್ಲೆಗಳು ಕೊಚ್ಚಿ ಹೋಗಿದ್ದವು. ಮೊನ್ನೆ ಮೊನ್ನೆಯ ಮಹಾಮಳೆಗೆ ಮಲೆನಾಡು, ಕರಾವಳಿಯ ನಾಲ್ಕು ಜಿಲ್ಲೆಗಳು ತತ್ತರಿಸಿದ್ದವು. ಈ ಎರಡೂ ಕಾಲಘಟ್ಟದಲ್ಲಿ ಒಂದು ಸಾಮ್ಯತೆ ಇದೆ. 2009ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಅವರ ಪಕ್ಷದ ಶಾಸಕರೇ ಬಂಡೆದ್ದು ಸರ್ಕಾರವನ್ನು ಪತನಗೊಳಿಸಲು ಹೈದರಾಬಾದ್‌, ಗೋವಾ ರೆಸಾರ್ಟ್‌ಗೆ ಹೋಗಿದ್ದರು. ಈಗ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ. ಜಲಪ್ರಳಯದ ಹೊತ್ತಿನಲ್ಲಿ ಜನರ ಜತೆ ನಿಲ್ಲಬೇಕಾದ ಅನಿವಾರ್ಯ ಅವರಿಗೆ ಇತ್ತು. ಆದರೆ, ದಶಕದ ಹಿಂದೆ ಯಡಿಯೂರಪ್ಪ ಇದ್ದ ಸಂಕಷ್ಟದಲ್ಲಿ ಕುಮಾರಸ್ವಾಮಿ ಇದ್ದರು. ಶಾಸಕರು ಗೋವೆ– ಮುಂಬೈಗೆ ಹೋಗಲಿಲ್ಲ. ಆದರೆ, ಅಂತಹ ವಾತಾವರಣವನ್ನು ಸೃಷ್ಟಿಸಿ ಸರ್ಕಾರವನ್ನು ಪತನಗೊಳಿಸುವ ಯತ್ನ ನಡೆದಿತ್ತು. ಗಾಂಧಿಯವರಿಗೆ ಅಧಿಕಾರದ ಬಗ್ಗೆ ಇದ್ದ ಜುಗುಪ್ಸೆ, ನಿರ್ಮೋಹಗಳು ಈಗಿನವರಿಗೆ ಇದ್ದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ.

ನಮ್ಮ ಮುಂದೆ ಮೂರು ಪ್ರಮುಖರಿದ್ದಾರೆ. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ (ಒಮ್ಮೆ 8 ದಿನ, ಆಮೇಲೆ 3 ವರ್ಷ, ಬಳಿಕ 2 ದಿನ) ಬಿ.ಎಸ್‌. ಯಡಿಯೂರಪ್ಪ. ದೇವರಾಜ ಅರಸು ಬಳಿಕ ಐದು ವರ್ಷ ಪೂರ್ಣಾವಧಿ ಪೂರೈಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯ ಸಿದ್ದರಾಮಯ್ಯ. ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ಎಚ್.ಡಿ. ಕುಮಾರಸ್ವಾಮಿ.

ರಾಜ್ಯದಲ್ಲಿ ಕೆಲವರಿಗೇ ಸಿಕ್ಕಿದ ಭಾಗ್ಯ ಈ ಮೂವರಿಗೆ ಲಭಿಸಿದೆ. ಆದರೆ, ಅಧಿಕಾರದ ‘ಅಮಲು’ ಮಾತ್ರ ಇಳಿದಿಲ್ಲ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಾಲ್ಕು ತಿಂಗಳಲ್ಲಿ ಅನೇಕ ಬಾರಿ ಸರ್ಕಾರ ಅಸ್ಥಿರದ ಮಾತುಗಳು ಟಿಸಿಲೊಡೆದು ಮರೆಯಾಗಿವೆ.

ವಿಧಾನಸಭೆ ಚುನಾವಣೆ ಫಲಿತಾಂಶ ಬಂದಾಗ ಯಾವ ಪಕ್ಷಕ್ಕೂ ಸರಳ ಬಹುಮತ ಸಿಗಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವ ‘ಉದ್ದೇಶ’ಕ್ಕಾಗಿ ದೆಹಲಿಯಿಂದ ಇಲ್ಲಿಗೆ ಬಂದ ಕಾಂಗ್ರೆಸ್‌ ನಾಯಕರು ಜೆಡಿಎಸ್‌ಗೆ ಬೇಷರತ್‌ ಬೆಂಬಲ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ತಮ್ಮ ಅಭ್ಯಂತರವಿಲ್ಲ ಎಂದು ಘೋಷಿಸಿದರು. ‘ಬಹುಮತ ಸಿಗದೇ ಇದ್ದರೆ ವಿರೋಧ ಪಕ್ಷದಲ್ಲಿ ಕೂರುತ್ತೇವೆ’ ಎಂದು ಹೇಳಿದ್ದ ಕುಮಾರಸ್ವಾಮಿ ಇದಕ್ಕೆ ಸಹಮತ ಸೂಚಿಸಿದರು. ಚುನಾವಣೆಯಲ್ಲಿ ಪರಸ್ಪರ ಕಿತ್ತಾಡಿಕೊಂಡಿದ್ದವರು ಒಗ್ಗಟ್ಟಾದರು.

ಅಧಿಕಾರಕ್ಕೇರಲು ಬೇಕಾದ 113 ಸಂಖ್ಯೆಯ ಬದಲು 104 ಗಳಿಸಿದ್ದ ಬಿಜೆಪಿ, 2008ರಲ್ಲಿ ನಡೆಸಿದ್ದ ‘ಆಪರೇಷನ್ ಕಮಲ’ದ ಪ್ರೇರಣೆಯಡಿ ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾಯಿತು. ರಾಜಭವನದ ಆಸರೆ ಪಡೆದ ಯಡಿಯೂರಪ್ಪ, ಹೆಚ್ಚಿನ ಸದಸ್ಯ ಬಲ ಹೊಂದಿದ ಆಧಾರದಲ್ಲಿ ಮುಖ್ಯಮಂತ್ರಿಯಾಗಿ ತರಾತುರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ತಮ್ಮ ಶಾಸಕರನ್ನು ಕಾಂಗ್ರೆಸ್‌–ಜೆಡಿಎಸ್‌ ಭದ್ರಪಡಿಸಿಕೊಂಡವು. ಬಹುಮತ ಸಾಬೀತು ಕಷ್ಟ ಎಂದರಿತ ಯಡಿಯೂರಪ್ಪ, ರಾಜೀನಾಮೆ ಕೊಟ್ಟು ಹೊರನಡೆದರು.

ಇದಾದ ಬಳಿಕ, ಜೆಡಿಎಸ್‌–ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದಿತು. ಬೇಷರತ್ ಬೆಂಬಲ ಸೂಚಿಸಿದ್ದ ಕಾಂಗ್ರೆಸ್‌, ಸರ್ಕಾರ ರಚನೆಯಾದೊಡನೆ ಒಂದೊಂದೇ ಷರತ್ತುಗಳನ್ನು ಮುಂದಿಡತೊಡಗಿತು. ಸರ್ಕಾರ ಸುಸೂತ್ರವಾಗಿ ನಡೆಯಲು ರಚಿಸಿದ್ದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಪದೇ ಪದೇ ಭಿನ್ನ ಹೇಳಿಕೆಗಳನ್ನು ನೀಡುತ್ತ ಸರ್ಕಾರಕ್ಕೆ ಮಗ್ಗುಲು ಮುಳ್ಳಾದರು. ತಮ್ಮ ಹೇಳಿಕೆಗೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ಮುಂದುವರಿಸಿದರು. 2013ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಅಧಿವೇಶನದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ‘ಇದೇ ನನ್ನ ಕೊನೆ ಚುನಾವಣೆ. ಇನ್ನೆಂದೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಘೋಷಿಸಿದ್ದರು. ಅವು ಕಡತಗಳಲ್ಲಿ ಕೇವಲ ಅಕ್ಷರಗಳಾಗಿ ಉಳಿದಿವೆ.

ಅದಾಗಿ ಎರಡೇ ವರ್ಷಗಳಲ್ಲಿ ಸಿದ್ದರಾಮಯ್ಯನವರ ವರಸೆ ಬದಲಾಯಿತು. ‘ಬಿಜೆಪಿಯವರು ಅಧಿಕಾರಕ್ಕೆ ಬರದಂತೆ ತಡೆಯಬೇಕಾದರೆ ಚುನಾವಣೆಗೆ ನಿಲ್ಲಲೇಬೇಕಾಗಿದೆ’ ಎಂದು ಹೇಳತೊಡಗಿದರು. 2018ರ ಚುನಾವಣೆ ಹೊತ್ತಿಗೆ, ಇದು ಇನ್ನಷ್ಟು ಪ್ರಖರವಾಯಿತು. ಗೆದ್ದು, ಮತ್ತೊಮ್ಮೆ ಮುಖ್ಯಮಂತ್ರಿಯಾಗಲೇಬೇಕೆಂದು ಹಟ ತೊಟ್ಟ ಅವರು ಚಾಮುಂಡೇಶ್ವರಿ, ಬಾದಾಮಿ ಹೀಗೆ ಎರಡು ಕಡೆಗಳಲ್ಲಿ ಸ್ಪರ್ಧಿಸಿದರು. ತಾವು ಪ್ರತಿನಿಧಿಸುತ್ತಿದ್ದ ವರುಣಾವನ್ನು ಪುತ್ರ ಯತೀಂದ್ರಗೆ ಬಿಟ್ಟುಕೊಟ್ಟರು. ಅಧಿಕಾರದ ಮೋಹದ ಬಲೆಯಲ್ಲಿ ಸಿದ್ದರಾಮಯ್ಯ ಸಿಕ್ಕಿಕೊಂಡರು. ಗೌಡರ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಾ ಬಂದಿದ್ದ ಅವರು, ಅದನ್ನೇ ಮಾಡಿದರು. ಅದು ಅಷ್ಟಕ್ಕೆ ನಿಲ್ಲಲಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದುಕೊಂಡು ಸರ್ಕಾರದ ಅಡಿಗಲ್ಲು ಅಲ್ಲಾಡಿಸುವಂತಹ ಮಾತುಗಳನ್ನು ಆಡತೊಡಗಿದರು. ಅದು ನಿರುದ್ದಿಶ್ಯವಂತೂ ಆಗಿರಲಿಲ್ಲ. ‘ಮತ್ತೆ ಮುಖ್ಯಮಂತ್ರಿಯಾಗುವೆ’ ಎಂದೂ ಹೇಳಿದರು.

ಇಷ್ಟೆಲ್ಲದರ ಮಧ್ಯೆ ಅಧಿಕಾರದ ಆಸೆ ಕಮರದ ಯಡಿಯೂರಪ್ಪ ಮತ್ತೆ ಎದ್ದುನಿಂತರು. ಲೋಕಸಭೆ ಚುನಾವಣೆಗೆ ಮುನ್ನವೇ ಮುಖ್ಯಮಂತ್ರಿಯಾಗುವ ಸಂಕಲ್ಪ ತೊಟ್ಟ ಅವರು ಆಪರೇಷನ್ ಕಮಲಕ್ಕೆ ಕೈಹಾಕಿದರು. ಒಂದು ತಿಂಗಳ ವಿದ್ಯಮಾನ ಹೇಗಿತ್ತೆಂದರೆ...

‘ಸರಕಾರ ಹರಿಗೋಲು, ತೆರೆಸುಳಿಗತ್ತಿತ್ತ/ ಸುರೆ ಕುಡಿದವರು ಕೆಲರು ಹುಟ್ಟುಹಾಕುವರು/ ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು / ಉರುಳದಿಹುದಚ್ಚರಿಯೊ! ಮಂಕುತಿಮ್ಮ’ (ಡಿ.ವಿ.ಗುಂಡಪ್ಪ).

ಪ್ರಯತ್ನಗಳೆಲ್ಲ ಕೂಡಿ–ಕಳೆದು ಅಗತ್ಯ ಸಂಖ್ಯಾಬಲ ತಲುಪದೇ ಇದ್ದುದರಿಂದ ಸದ್ಯಕ್ಕೆ ಯಡಿಯೂರ‍ಪ್ಪ ತಮ್ಮ ಶ್ರಮಕ್ಕೆ ತಾತ್ಕಾಲಿಕ ವಿರಾಮ ಹಾಕಿದ್ದಾರೆ.

ಗಾಂಧಿಯವರನ್ನು ನಿತ್ಯ ಜಪಿಸುವವರು ಅವರ ಚಿಂತನೆಯನ್ನು ಅಳವಡಿಸಿಕೊಳ್ಳದೇ ಇರುವುದು ಇಂದಿನ ಸ್ಥಿತಿಗೆ ಕಾರಣ. ಕುರ್ಚಿಯ ಗರ ಬಡಿದಿರುವ ರಾಜಕಾರಣಿಗಳು ಕುರ್ಚಿ ಸಿಕ್ಕಾಗಲೂ ಗಾಂಧೀಜಿಯ ಆದರ್ಶವನ್ನು ಅನುಷ್ಠಾನ ಮಾಡಲಿಲ್ಲ. ಗಾಂಧಿಯ ಸರಳತೆ, ನಿಸ್ಪೃಹತೆ, ಸತ್ಯದ ನಡೆಗಳು ನಮ್ಮವರಿಗೆ ಪಾಠವಾದರೆ ಅವರು ಕನಸು ಕಂಡ ಗ್ರಾಮರಾಜ್ಯ ಉದಯವಾದೀತು. ಗಾಂಧೀಜಿಯ ತಾಯ್ತನ, ಜನರಿಗೆ ಅವರು ಹೇಳುತ್ತಿದ್ದ ಸಾಂತ್ವನ ಕೇವಲ ರೂಪಕಗಳಾಗಬಾರದು. ಅದು ಅನುಕರಣೀಯ ಆದರ್ಶವಾಗಬೇಕಿದೆ.

ನಮ್ಮೆದುರಿಗೆ ಇರುವ ಹಾಲಿ–ಮಾಜಿ ಮುಖ್ಯಮಂತ್ರಿಗಳು ಇನ್ನಾದರೂ ಈ ದಿಕ್ಕಿನಲ್ಲಿ ಯೋಚಿಸಬೇಕಾಗಿದೆ. ಸಮ್ಮಿಶ್ರ ಸರ್ಕಾರವೇನೋ ಬಂದಿದೆ. ಅದು ಒಳಜಗಳದಿಂದ ಬಿದ್ದು ಹೋದರೆ ಲಾಭವೂ ಇಲ್ಲ; ನಷ್ಟವೂ ಇಲ್ಲ. ಯಡಿಯೂರಪ್ಪ, ಸಿದ್ದರಾಮಯ್ಯನವರ ಧೋರಣೆಯಿಂ
ದಾಗಿ ರಾಜ್ಯದಲ್ಲಿ ಒಂದು ರೀತಿಯ ಅರಾಜಕತೆ ಸೃಷ್ಟಿಯಾಗಿದೆ. ಸರ್ಕಾರ ಉಳಿಯಲೇಬೇಕು ಎಂಬ ಹಂಬಲ ಕುಮಾರಸ್ವಾಮಿ ಅವರಿಗೆ ಇದ್ದಂತಿಲ್ಲ; ಸಿಕ್ಕಿದ ಅವಕಾಶವನ್ನು ಬಿಟ್ಟು ಹೋಗಲು ಅವರು ಸನ್ಯಾಸಿ ಅಲ್ಲ. ಆದರೆ, ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡುವ ಔದಾರ್ಯವನ್ನು ತೋರಬೇಕಾಗಿರುವುದು ಉಳಿದಿಬ್ಬರು ಮಾಜಿ ಮುಖ್ಯಮಂತ್ರಿಗಳ ಕರ್ತವ್ಯ.

ಈ ಮೂವರು ನಾಯಕರನ್ನು ಗಮನಿಸಿದರೆ ಕುಮಾರಸ್ವಾಮಿಯವರೇ ಗಾಂಧೀಜಿ ಚಿಂತನೆಗೆ ತುಸು ಹತ್ತಿರವಾಗುತ್ತಾರೆ. ಏಡ್ಸ್ ಪೀಡಿತರನ್ನು, ಅಂಗವಿಕಲರನ್ನು ತಬ್ಬಿ ಮಾತನಾಡಿಸುವ ಸಹೃದಯ, ಬೆಳಿಗ್ಗೆ 11ರಿಂದ ರಾತ್ರಿ 11 ರವರೆಗೆ ಕುಳಿತು ಜನರ ನೋವು ಆಲಿಸುವ ತಾಯ್ತನವನ್ನು ಕುಮಾರಸ್ವಾಮಿ ತೋರಿದ್ದಾರೆ. ಅದು ನಾಟಕವೆಂದೇ ಅವರ ವಿರೋಧಿಗಳು ಟೀಕಿಸುವುದುಂಟು. ಆದರೆ, ಒಡಲ ತುಡಿತವಿಲ್ಲದಿದ್ದರೆ ನಾಟಕ ಮಾಡುವುದೂ ಕಷ್ಟ ಎಂಬುದು ಅವರಿಗೆ ಗೊತ್ತಿದ್ದಂತಿಲ್ಲ.

ಗಾಂಧೀಜಿ ನೀಡಿದ ಮೂರು ಮಂಗಗಳ ಪ್ರತಿಮೆ ಎಲ್ಲರಿಗೂ ಗೊತ್ತಿದೆ. ಅದು ನಮ್ಮ ಮಧ್ಯದ ಆದರ್ಶ ಕೂಡ. ಕುಮಾರಸ್ವಾಮಿಯವರು ಬಾಯಿಗೆ ಬೀಗ ಹಾಕಿಕೊಂಡು ಕೆಲಸದಲ್ಲಿ ತಲ್ಲೀನರಾಗಬೇಕು. ಸಿದ್ದರಾಮಯ್ಯ ತಮ್ಮ ಕಿವಿ ಮುಚ್ಚಿಕೊಳ್ಳಬೇಕು; ಹಿಂಬಾಲಕರ ಮಾತು ಕೇಳುವುದನ್ನು ಬಿಡಬೇಕು. ಆಗಿದ್ದು ಆಗಿ ಹೋಯಿತು, ಮುಂದೆ ನೋಡೋಣ ಎಂದುಕೊಂಡು ಯಡಿಯೂರಪ್ಪನವರು ಕಣ್ಣು ಮುಚ್ಚಿ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಆಗ ಮಾತ್ರ ಈ ಅರಾಜಕ ವಾತಾವರಣ ಬದಲಾಗಿ, ಅಭಿವೃದ್ಧಿ ಪಥದತ್ತ ರಾಜ್ಯ ಹೊರಳೀತು.

ಕೊನೆಯದಾಗಿ, ನಾಡ ಜನರ ಮುಂದಿರುವ ಪ್ರಶ್ನೆಯಂತಿರುವ ಕಗ್ಗವೊಂದನ್ನು ಉಲ್ಲೇಖಿಸುವುದು ಸೂಕ್ತ.

ಅಪ್ಪಾಲೆ ತಿಪ್ಪಾಲೆ ತಿರುಗಿ ಬಿದ್ದವನೊಬ್ಬ/ ಸ್ವಪ್ನಲೋಕದಿ ತಿರೆಯ ಮರೆತಾತನೊಬ್ಬ/ ತಪ್ಪುಸರಿಗಳ ತೂಕವಳೆಯೆ ಕುಳಿತವನೊಬ್ಬ/ ಬೆಪ್ಪನಾರ್‌ ಮೂವರಲಿ? ಮಂಕುತಿಮ್ಮ...

 

ಬರಹ ಇಷ್ಟವಾಯಿತೆ?

 • 21

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !