ಹರಕುಬಾಯಿ ಶೂರರೇ ಬಿಜೆಪಿಗೆ ಹೊರೆ

7
ಚುನಾವಣೆ ಹೊತ್ತಿಗೆ ಬಿಜೆಪಿ ನಾಯಕರು ಆಡುವ ಮಾತುಗಳು ಕರ್ಣಕಠೋರವಾಗಿವೆ

ಹರಕುಬಾಯಿ ಶೂರರೇ ಬಿಜೆಪಿಗೆ ಹೊರೆ

Published:
Updated:

ಸ್ವಂತ ನಾಲಿಗೆ ಮೇಲೆ ನಿಯಂತ್ರಣವಿಲ್ಲದ ಕೂಗುಮಾರಿಗಳು, ಭ್ರಷ್ಟಾಚಾರ, ಮದೋನ್ಮತ್ತ ಲಾಲಸೆಯ ಕಸುಬುದಾರರನ್ನು ತುಂಬಿಸಿಕೊಂಡಿರುವ ಕರ್ನಾಟಕದ ಬಿಜೆಪಿ ಸದ್ಯದ ಹೊತ್ತಿನಲ್ಲಿ ಸೋಲಿನ ಬೆನ್ನೇರಿ ಸವಾರಿ ಹೊರಟಿದೆ.

ಸಂಸ್ಕಾರವಂತರು, ಸಜ್ಜನಿಕೆ, ಸರಳತೆಯಿಂದ ಬೆಳಗುವ ನಾಯಕರು ಈಗ ಬಿಜೆಪಿಗೆ ಬೇಕಿಲ್ಲ. ಅಧಿಕಾರದ ದಡ ಹತ್ತಿಸುವ ಕೋಟಿವೀರರು, ಖರೀದಿದಾರರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಪಕ್ಷದ ಹಿರೀಕರು, ನಿಷ್ಠಾವಂತ ಕಾರ್ಯಕರ್ತರ ಆಂತರ್ಯದಲ್ಲಿರುವ ಅಸಹನೆಯ ಕುದಿ.

‘ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?

ತನುವಿನಲಿ ಹುಸಿ ತುಂಬಿ ಮನದಲಿ ವಿಷಯ ತುಂಬಿ

ಮನೆಯೊಳಗೆ ಮನೆಯೊಡೆಯನಿಲ್ಲ’

ಎಂಬ ಬಸವಣ್ಣನವರ ವಚನ ಬಿಜೆಪಿಯ ಈಗಣ ಸ್ಥಿತಿಗೆ ಸೂಕ್ತ ವ್ಯಾಖ್ಯಾನದಂತಿದೆ. ರಾಜ್ಯ ಬಿಜೆಪಿಯ ಮೂರು ದಶಕಗಳ ಚರಿತ್ರೆಯ ಮೇಲೆ ಕಣ್ಣು ಹಾಯಿಸಿದರೆ ಅಧೋಗತಿಯ ಕಡೆಗೆ ವಾಯುವೇಗದಲ್ಲಿ ಸಾಗುತ್ತಿರುವುದು ಗೋಚರವಾಗುತ್ತದೆ. ನಾಯಕರ ನಿಯಂತ್ರಣ ತಪ್ಪಿದ ‘ಕಮಲ’ ಪಕ್ಷವೀಗ ಅರ್ಧಂಬರ್ಧ ಕೆಸರಿನಲ್ಲಿ ಮುಳುಗಿದೆ. ಅರಳುವಿಕೆ ಎಂಬುದು ಮರೆತು ಹೋಗಿ ಕೆಸರಿನ ಗಲೀಜು ಹೂವಿನ ಪಕಳೆಗಳಿಗೆ ಅಂಟಿಕೊಳ್ಳಲಾರಂಭಿಸಿದೆ.

ಮುಸ್ಲಿಮರು, ಕ್ರೈಸ್ತರು, ಕಮ್ಯುನಿಸ್ಟರನ್ನು ದ್ವೇಷಿಸುವ, ಅವರನ್ನೆಲ್ಲ ದೇಶದಿಂದ ಹೊರಗಟ್ಟುವ ಸಂಘಪ್ರಣೀತ ಸಿದ್ಧಾಂತವು ಅಂದೂ ಇತ್ತು; ಇಂದೂ ಇದೆ. ಹೀಗಾಗಿ ಎ.ಕೆ. ಸುಬ್ಬಯ್ಯ ಅವರಂತಹವರು ಜನಸಂಘವನ್ನು ತೊರೆದುಹೊರಬಂದರು. ಹಾಗಂತ ಆರ್‌ಎಸ್ಎಸ್‌ನ ರಾಜಕೀಯ ಮುಖವಾದ ಬಿಜೆಪಿಯಲ್ಲಿದ್ದ ನಾಯಕರು ಸಂಘದ ಕಠೋರ ನಿಲುವನ್ನು ಮಾತು ಮತ್ತು ಕ್ರಿಯೆಯಲ್ಲಿ ಅನುಸರಿಸಿದ್ದು ಕಡಿಮೆ. ಕರ್ನಾಟಕದಲ್ಲಿ ಜನಸಂಘ ಅಥವಾ ಬಿಜೆಪಿಯ ಮುಂಚೂಣಿ ನಾಯಕರೆನಿಸಿದ್ದ ಜಗನ್ನಾಥರಾವ್ ಜೋಷಿ, ಬಾವೂರಾವ ದೇಶಪಾಂಡೆ, ಎಂ.ಆರ್. ತಂಗಾ, ವಿ.ಎಸ್. ಆಚಾರ್ಯ, ಬಿ.ಬಿ. ಶಿವಪ್ಪ, ಎಚ್.ಎನ್‌.ಅನಂತಕುಮಾರ್, ಡಿ.ಎಚ್. ಶಂಕರಮೂರ್ತಿ, ಬಸವರಾಜ
ಪಾಟೀಲ ಸೇಡಂ, ರಾಮಚಂದ್ರಗೌಡ ಹೀಗೆ ಯಾರೊಬ್ಬರೂ ಹದ್ದು ಮೀರಿ ಮಾತನಾಡಿದವರಲ್ಲ. ಪರನಿಂದೆಯನ್ನು ಅಸ್ತ್ರವಾಗಿ ಝಳಪಿಸಿದವರಲ್ಲ. ನಾಲಿಗೆಯ ಮೇಲೆ ಸ್ವನಿಯಂತ್ರಣ ಇಟ್ಟುಕೊಂಡೇ ರಾಜಕೀಯದಲ್ಲಿ ಬೆಳೆದವರು; ಪಕ್ಷವನ್ನು ಬೆಳೆಸಿದವರು. ಈ ಗರ್ಭಗುಡಿಯಲ್ಲಿದ್ದವರ ಪೈಕಿ ಕೆಲವರ ನಿಧನ, ಕೆಲವರ ನಿರ್ಲಿಪ್ತತೆಯೇ ಮಾರಕವಾಗಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಚರ್ಚೆಗೆ ಒಳಗಾಗುತ್ತಿವೆ.

ಮನೆಯ ಯಜಮಾನ ನೆಟ್ಟಗಿದ್ದರೆ ಸದಸ್ಯರು ಸರಿದಾರಿಯಲ್ಲಿರುತ್ತಾರೆ. ಮೇಷ್ಟ್ರು ರಸ್ತೆ ಪಕ್ಕ ನಿಂತು ಉಚ್ಚೆ ಹೊಯ್ದರೆ ಶಾಲಾ ಮಕ್ಕಳು ಶೌಚಾಲಯದ ಕಡೆ ಮುಖ ಮಾಡಲಾರರು. ಇದು ಸದ್ಯದ ಬಿಜೆಪಿಯ ದುಸ್ಥಿತಿ. ಹಿಂದೆಲ್ಲ ನಾಯಕರಾದವರಿಗೆ ಪಕ್ಷವನ್ನು ಬೆಳೆಸಬೇಕು ಎಂಬ ಹಂಬಲವಿತ್ತೇ ವಿನಾ ಕುಟುಂಬವನ್ನು ಬೆಳೆಸಿ, ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಸಂಪಾದಿಸುವ ದುರಾಸೆ ಇರಲಿಲ್ಲ. ಅಧಿಕಾರದ ಅಮಲು ಯಾವಾಗ ಬಿಜೆಪಿ ನಾಯಕರ ನೆತ್ತಿಗೇರಿತೋ ಅಂದೇ ಅಧಃಪತನದ ದಿನಗಳು ಆರಂಭವಾದವು ಎಂಬುದು ಪಕ್ಷದೊಳಗಿನ ಸಜ್ಜನರ ವಿಮರ್ಶೆ.

2018ರ ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಮುನ್ನ ಟಿಕೆಟ್‌ಗಾಗಿ ಹಣಾಹಣಿ ಆರಂಭವಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಸಚಿವ ಸ್ಥಾನ ಕಳೆದುಕೊಂಡವರು, ಜೈಲಿಗೆ ಹೋಗಿದ್ದವರು ಟಿಕೆಟ್ ಬಯಸಿದ್ದರು.

ಅಟಲ್‌ ಬಿಹಾರಿ ವಾಜಪೇಯಿ ಪರಂಪರೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಶಾಸಕರೊಬ್ಬರು ಬೆಂಗಳೂರಿನಲ್ಲಿದ್ದರು. ಚುನಾವಣಾ ಉಸ್ತುವಾರಿಯಾಗಿದ್ದ ಪ್ರಕಾಶ್ ಜಾವಡೇಕರ್ ಎದುರು ನಿಂತ ಅವರು, ‘ವಾಜಪೇಯಿ, ಅಡ್ವಾಣಿ ಅವರನ್ನು ಕರ್ನಾಟಕಕ್ಕೆ ಆದರ್ಶವಾಗಿ ಕೊಡುತ್ತಿದ್ದೀರೋ ಅಥವಾ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಮಾಲೂರು ಕೃಷ್ಣಯ್ಯ ಶೆಟ್ಟಿ, ಜನಾರ್ದನರೆಡ್ಡಿ... ಇಂತಹವರನ್ನು ಆದರ್ಶ ಎಂದು ತೋರಿಸುತ್ತಿದ್ದೀರೋ. ಪಕ್ಷದ ನಿಲುವು ಸ್ಪಷ್ಟಪಡಿಸಿ’ ಎಂದು ಖಾರವಾಗಿ ಪ್ರಶ್ನಿಸಿದ್ದರು. ‘ಅಮಿತ್ ಶಾ ಅವರನ್ನೇ ಕೇಳಿ’ ಎಂದು ಜಾವಡೇಕರ್ ಕೈತೊಳೆದು ಕೊಂಡಿದ್ದರು.

ಆರೋಪ ಹೊತ್ತವರ ಗೆಲ್ಲುವಿಕೆ ‘ಸಾಮರ್ಥ್ಯ’ ನೋಡಿ ಚುನಾವಣೆಯಲ್ಲಿ ಮಣೆ ಹಾಕಲಾಯಿತು. ಆದರೂ ಬಿಜೆಪಿ 104 ಬಲ ದಾಟಲಿಲ್ಲ. ಅದಾದ ನಂತರ ಸರ್ಕಾರ ರಚಿಸುವ ವಿಫಲ ಯತ್ನ, ಮೈತ್ರಿ ಸರ್ಕಾರ ಬೀಳಿಸುವ ನಿರಂತರ ಪ್ರಯತ್ನವನ್ನು ಕಮಲ ಪಡೆ ನಡೆಸಿತು.

ಅಧಿಕಾರದ ಹಪಾಹಪಿ, ಸಿಕ್ಕದೇ ಇದ್ದಾಗ ಆಗುವ ನಿರಾಶೆ ಪರಿಣಾಮ ಪಕ್ಷದಲ್ಲಿ ಅರಾಜಕತೆ ಮೂಡಿದೆ. ಭ್ರಷ್ಟಾಚಾರದ ಆರೋಪ ಹೊತ್ತವರು, ಸ್ವಾರ್ಥಿಗಳು, ಅಧಿಕಾರದ ಆಸೆಗೆ ಹೊಂದಾಣಿಕೆ ರಾಜಕಾರಣ ಮಾಡುವವರನ್ನು ನಾಯಕತ್ವದಿಂದ ಹೊರಗಿಟ್ಟು, ಹೊಸಬರನ್ನು ಕರೆತನ್ನಿ ಎಂಬ ಕೂಗು ಆಂತರ್ಯದಲ್ಲಿ ಬೆಳೆಯುತ್ತಿದೆ. ಇದು ಪಕ್ಷದ ವೇದಿಕೆಯೊಳಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದ ಸದ್ದು ಮಾಡಲಾರಂಭಿಸಿದೆ.

ಬಿಜೆಪಿ ಭದ್ರಕೋಟೆಯಂತಿದ್ದ ಶಿವಮೊಗ್ಗ- ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಫಲಿತಾಂಶವು ನಾಯಕತ್ವ ದುರ್ಬಲಗೊಂಡಿರುವ, ಪಕ್ಷದ ಬೇರುಗಳು ಸಡಿಲಗೊಳ್ಳುತ್ತಿರುವ ಕುರುಹುಗಳನ್ನು ನೀಡಿವೆ ಎಂಬ ಚರ್ಚೆಗೂ ದಾರಿ ಮಾಡಿಕೊಟ್ಟಿದೆ. 2014ರ ಲೋಕಸಭೆ ಚುನಾವಣೆಯಲ್ಲಿ 3.60 ಲಕ್ಷ ಮತಗಳ ಅಂತರದಿಂದ ಯಡಿಯೂರಪ್ಪ ಗೆದ್ದಿದ್ದರು. ಬಿ.ವೈ.ರಾಘವೇಂದ್ರ ಎದುರು ಕೊನೆಗಳಿಗೆಯಲ್ಲಿ ಕಣಕ್ಕೆ ಇಳಿದ ಮಧು ಬಂಗಾರಪ್ಪ ಪೈಪೋಟಿ ನೀಡಿ, ಕೇವಲ 52 ಸಾವಿರ ಮತಗಳ ಅಂತರದಿಂದ ಸೋತರು. ಇದು ಯಡಿಯೂರಪ್ಪನವರ ಸೋಲು ಎಂಬ ವ್ಯಾಖ್ಯಾನ ಪಕ್ಷದಲ್ಲಿ ಶುರುವಾಗಿದೆ.

ಬಳ್ಳಾರಿಯಲ್ಲಿ ಅನಿರೀಕ್ಷಿತವಾಗಿ ಅಖಾಡಕ್ಕೆ ಇಳಿದ ವಿ.ಎಸ್. ಉಗ್ರಪ್ಪ, ಶ್ರೀರಾಮುಲು ಸೋದರಿ ಜೆ. ಶಾಂತಾ ಅವರನ್ನು 2.43 ಲಕ್ಷ ಮತಗಳ ಅಂತರದಿಂದ ಸೋಲಿಸಿದರು. ಈ ಎರಡೂ ಫಲಿತಾಂಶಗಳು ಬಿಜೆಪಿಯ ಆತ್ಮಬಲವನ್ನು ಕುಸಿಯುವಂತೆ ಮಾಡಿವೆ. ಹೀಗೆ ಮುಂದುವರಿದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬ ಮಾತುಗಳು ಹರಿದಾಡಲಾರಂಭಿಸಿವೆ. ನಾಯಕತ್ವದ ವೈಫಲ್ಯದ ಜತೆಗೆ ಪಕ್ಷಕ್ಕೆ ಮರ್ಮಾಘಾತ ನೀಡಿದ್ದು ನಾಯಕರ ಹರಕುಬಾಯಿ ಎಂಬ ಚರ್ಚೆಮುನ್ನೆಲೆಗೆ ಬಂದಿದೆ. ಚುನಾವಣೆ ಹೊತ್ತಿಗೆ, ಬಳಿಕ ಕಮಲ ಪಕ್ಷದ ನಾಯಕರ ಬಾಯಿಂದ ಉದುರುತ್ತಿರುವ ಮಾತುಗಳು ಕರ್ಣಕಠೋರವಾಗಿವೆ. ಇದು ಪಕ್ಷದೊಳಗೆ ಆಕ್ರೋಶವನ್ನೂ ಹುಟ್ಟುಹಾಕಿದೆ. ‘ನನ್ನನ್ನು ಜೈಲಿಗೆ ಕಳುಹಿಸಿ ಮಕ್ಕಳಿಂದ ದೂರ ಇಟ್ಟಿದ್ದಕ್ಕೆ ಸಿದ್ದರಾಮಯ್ಯ ಮಗನನ್ನು ಕಳೆದುಕೊಂಡರು’ ಎಂಬ ಜನಾರ್ದನ ರೆಡ್ಡಿ ಹೇಳಿಕೆ, ‘ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧವೂ ಮೀ ಟೂ ನಡೆಯುತ್ತಿದೆ, ಅವರಿಗೆ ಎಷ್ಟು ಮನೆಗಳಿವೆ, ಎಲ್ಲಿ ಇರುತ್ತಾರೆ ಎಂಬುದು ಗೊತ್ತಿದೆ’ ಎಂದು ಕುಮಾರ ಬಂಗಾರಪ್ಪ ಅವರ ಕೀಳು ನುಡಿಗಳು ಮೈತ್ರಿ ಪಕ್ಷಕ್ಕೆ ವರವಾಯಿತು ಎಂಬುದು ಆರ್‌ಎಸ್ಎಸ್‌ ಪಡಸಾಲೆಯ ತರ್ಕ.

ಮಾತಿನಲ್ಲಿ ಬೆಂಕಿಯುಗುಳುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಂಸದ ನಳಿನ್‌ ಕುಮಾರ ಕಟೀಲು ಅವರು ಬಳಸಿರುವ, ಬಳಸುತ್ತಿರುವ ಕೀಳು ಅಭಿರುಚಿಯ ಪದಗಳು, ಅದಕ್ಕೆ ಕೆ.ಎಸ್. ಈಶ್ವರಪ್ಪ, ಎಂ.‍ಪಿ. ರೇಣುಕಾಚಾರ್ಯ, ಬಸವನಗೌಡ ಪಾಟೀಲ ಯತ್ನಾಳ, ಪ್ರತಾಪ ಸಿಂಹ ನೀಡುತ್ತಿರುವ ವಕಾಲತ್ತುಗಳು ಬಿಜೆಪಿಯವರ ಮನಸ್ಥಿತಿಯ ದರ್ಶನ ಮಾಡಿಸಿವೆ. ಒಂದು ಕಾಲದಲ್ಲಿ ಸಂಸ್ಕಾರ, ಸಜ್ಜನಿಕೆಗೆ ಹೆಸರಾಗಿದ್ದ ಬಿಜೆಪಿ ಈಗ ಬಾಯಿ ಬಡುಕರ, ಸಂಸ್ಕೃತಿಹೀನರ ಆಡುಂಬೊಲವಾಗುತ್ತಿರುವುದಕ್ಕೆ ಸಂಘದಲ್ಲೇ ಅಪಸ್ವರ ಎದ್ದಿದೆ. ಇಂತಹ ಧೋರಣೆಗಳು ಪಕ್ಷದ ವರ್ಚಸ್ಸಿಗೆ ಮಸಿ ಬಳಿದಿದ್ದು, ಬುಡವನ್ನೇ ಅಲುಗಾಡಿಸುತ್ತಿವೆ ಎಂಬ ಟೀಕೆಗಳು ಮೆಲುದನಿಯಲ್ಲಿ ಕೇಳಿಸುತ್ತಿವೆ. ಇಂತಹ ಹೊತ್ತಿನಲ್ಲಿ ಅಕ್ಕಮಹಾದೇವಿಯ,

‘ನಿಮ್ಮ ನಿಲುವಿಂಗೆ ನೀವು ನಾಚಬೇಡವೇ?/ ಅನ್ಯರ ಕೈಯಲ್ಲಿ ಅಲ್ಲ ಎನಿಸಿಕೊಂಬ/ನಡೆನುಡಿ ಏಕೆ?/
ಅಲ್ಲ ಎನಿಸಿಕೊಂಬುದರಿಂದ ಆ/ಕ್ಷಣವೇ ಸಾವುದು ಲೇಸು
ಕಾಣಾ ಚೆನ್ನಮಲ್ಲಿಕಾರ್ಜುನ’
ಎಂಬ ವಚನ ಬಿಜೆಪಿಯವರಿಗೆ ಪಠ್ಯ– ಪಥ್ಯವಾಗಲಿ.

ಬರಹ ಇಷ್ಟವಾಯಿತೆ?

 • 33

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !