ಶುಕ್ರವಾರ, ಅಕ್ಟೋಬರ್ 18, 2019
24 °C
ಅವಕಾಶಗಳ ಮೆಟ್ಟಿಲೇರುತ್ತ ಹೋದರು. ಅಧಿಕಾರವನ್ನು ವಿವೇಚನೆಯಿಂದ ಬಳಸಿದರು

ಷರೀಫರು ಉಳಿಸಿ ಹೋದ ಪಾಠ...

Published:
Updated:

ಶೃಂಗೇರಿಯ ದಕ್ಷಿಣಾಮ್ನಾಯ ಶಾರದಾ ಪೀಠದ ಹಿರಿಯ ಶ್ರೀಗಳು ಬೆಂಗಳೂರಿನ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ಆಗ ಅಲ್ಲಿಗೆ ಬಂದಿದ್ದ ಸಿ.ಕೆ. ಜಾಫರ್ ಷರೀಫ್‌, ಶ್ರೀಗಳಿಗೆ ದೀರ್ಘ ದಂಡ ನಮಸ್ಕಾರ ಮಾಡಿ, ಎದುರಿನ ಚಾಪೆಯ ಮೇಲೆ ಕುಳಿತು ಫಲ ಮಂತ್ರಾಕ್ಷತೆ ಪಡೆದರು. ಕೆಲಹೊತ್ತು ಶ್ರೀಗಳ ಜತೆ ಸಮಾಲೋಚಿಸಿದ ಷರೀಫರು ಅಲ್ಲಿಂದ ಹೊರಟರು.

1978ರಿಂದಲೂ ಶೃಂಗೇರಿ ಮಠದ ಜತೆಗೆ ಇದೇ ಮಾದರಿಯ ನಂಟು ಹೊಂದಿದ್ದ ಷರೀಫರು, ಕೆಲವೊಮ್ಮೆ ಶೃಂಗೇರಿಗೆ ಅಥವಾ ಶ್ರೀಗಳು ಬೆಂಗಳೂರಿನಲ್ಲಿ ಮೊಕ್ಕಾಂ ಮಾಡಿದ ಹೊತ್ತಿನಲ್ಲಿ ಆಶೀರ್ವಾದ ಪಡೆಯುವ ಪರಿಪಾಟ ಇಟ್ಟುಕೊಂಡವರು. ಇಡೀ ದೇಶದೊಳಗೆ ಅಸಹಿಷ್ಣುತೆ ತಾಂಡವವಾಡುತ್ತಿರುವ ಹೊತ್ತಿನಲ್ಲಿ ಇಂತಹ ಸಾಮರಸ್ಯ ವಿರಳವಾಗುತ್ತಿದೆ. ಈ ಮೇಲಿನ ಸಾದೃಶ್ಯವು ಗುರು ಗೋವಿಂದ ಭಟ್ಟರು ಹಾಗೂ ತತ್ವಪದಕಾರ ಶಿಶುನಾಳ ಷರೀಫರ ಸಂಬಂಧಕ್ಕೆ ಸ್ವಲ್ಪಮಟ್ಟಿಗೆ ಹೋಲುವಂತಿದೆ.

ಗೋವಿಂದ ಭಟ್ಟರ ಶಿಷ್ಯತ್ವ ಸ್ವೀಕರಿಸಿದ ಶಿಶುನಾಳ ಷರೀಫರನ್ನು ಯಾರೊಬ್ಬರೂ ಇಸ್ಲಾಂಗೆ ಸೀಮಿತಗೊಳಿಸಿಲ್ಲ. ಜಾಫರ್ ಷರೀಫ್‌ ಕೂಡ ಎಂದೂ ಕಟ್ಟರ್‌ ಕೋಮುವಾದಿಯಾಗಿ ತೋರಿರಲಿಲ್ಲ. ನಾಲ್ಕಾರು ದಶಕಗಳಿಂದೀಚೆಗೆ ಪೈಜಾಮ, ತಲೆ ಮೇಲೆ ಟೋಪಿ ಹಾಕಿಕೊಂಡು ಮುಸ್ಲಿಂ ಶ್ರದ್ಧಾಳುವಿನಂತೆ ಕಾಣಿಸುತ್ತಿದ್ದರು. ಇಂದು ಠೇಂಕರಿಸುತ್ತಿರುವ ಅನ್ಯಮತ ದ್ವೇಷ ಭಾವನೆಯ ಕುರುಹುಗಳನ್ನು ಕಾಣಲು ಅವರಲ್ಲಿ ಸಾಧ್ಯವಿರಲಿಲ್ಲ.

ಚಳ್ಳಕೆರೆಯ ಹಳ್ಳಿಯೊಂದರ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ದೆಹಲಿಯ ಅಧಿಕಾರದ ಶಿಖರದಲ್ಲಿ ಏರಿ ಕುಳಿತ ಪರಿ ಬೆರಗು ಹುಟ್ಟಿಸುವಂತಹದು. ಜಮೀನ್ದಾರಿ ಕುಟುಂಬದಲ್ಲಿ ಹುಟ್ಟಿ, ವಿದೇಶದಲ್ಲಿ ಓದಿದ ತಮ್ಮ ಸಮಕಾಲೀನ ರಾಜಕಾರಣಿಗಳಿಗೂ ರಾಷ್ಟ್ರ ರಾಜಕಾರಣದಲ್ಲಿ ಬೆಳಗಲು ಶಕ್ಯವಾಗಲಿಲ್ಲ. ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿಯವರ ‘ನಂಬುಗೆ– ವಿಶ್ವಾಸ’ ಉಳಿಸಿಕೊಂಡಿದ್ದ ಷರೀಫರು, ಸಿಕ್ಕಿದ ಅವಕಾಶಗಳ ಮೆಟ್ಟಿಲು ಏರುತ್ತಲೇ ಹೋದರು. ಒದಗಿದ ಅಧಿಕಾರವನ್ನು ವಿವೇಚನೆಯಿಂದ ಬಳಸಿದರು.

ಷರೀಫರಷ್ಟು ಹಿರಿತನ ಹೊಂದಿದ್ದವರ ಪೈಕಿ ಎಸ್‌.ಎಂ. ಕೃಷ್ಣ, ಎಚ್‌.ಡಿ. ದೇವೇಗೌಡ, ರಾಮಕೃಷ್ಣ ಹೆಗಡೆ, ಎಸ್‌. ಬಂಗಾರಪ್ಪ, ವೀರೇಂದ್ರ ಪಾಟೀಲ, ಜೆ.ಎಚ್‌. ಪಟೇಲ್ ಈ ನಾಡಿನ ಮುಖ್ಯಮಂತ್ರಿಯಾದರು. ಬಹುಸಂಖ್ಯಾತರಲ್ಲದೇ ಇದ್ದರೂ ಜಾತಿಯ ಪ್ರಭಾವದಿಂದ ಸಿಕ್ಕಿದ ಪ‍್ರಾಧಾನ್ಯ, ಕಾಲಕಾಲಕ್ಕೆ ಬೆಳೆಸಿಕೊಂಡು ಬಂದ ವರ್ಚಸ್ಸು, ಸಮೂಹ ನಾಯಕತ್ವ ಗುಣವೇ ಇದಕ್ಕೆ ಕಾರಣವಿದ್ದೀತು. ಅಷ್ಟೇ ಹಿರೀಕರಾಗಿದ್ದರೂ ಷರೀಫ್‌, ಆರ್.ಎಲ್. ಜಾಲಪ್ಪ, ಜನಾರ್ದನ ಪೂಜಾರಿ, ಡಿ.ಬಿ. ಚಂದ್ರೇಗೌಡ, ಕಾಗೋಡು ತಿಮ್ಮಪ್ಪ ಅವರು ಮುಖ್ಯಮಂತ್ರಿ ಹುದ್ದೆಯವರೆಗೆ ಏರಲಿಲ್ಲ.

ಸಾಮಾನ್ಯ ಕಾರ್ಯಕರ್ತನಾಗಿ ಸೇರಿ ಕಾಂಗ್ರೆಸ್‌ ಕಚೇರಿಯಲ್ಲಿ ಕಸ ಗುಡಿಸುವುದು, ಕಾರು ಚಾಲಕನ ಚಾಕರಿ ಮಾಡಿಕೊಂಡಿದ್ದ ಷರೀಫರು, ರೈಲ್ವೆ ಖಾತೆಯಂಥ ಉನ್ನತ ಸ್ಥಾನವನ್ನು ಆ ಕಾಲದಲ್ಲೇ ನಿಭಾಯಿಸಿದವರು. ಮೀಟರ್‌ಗೇಜ್‌–ನ್ಯಾರೋ ಗೇಜ್‌ಗಳು ಜನಸಂಪರ್ಕಕ್ಕೆ ಅಡ್ಡಿಯಾಗಿವೆ, ಭಾರತದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ತಲುಪಲು ‘ಬ್ರಾಡ್‌ ಗೇಜ್‌’ನಂತಹ ಸುಧಾರಿತ ‘ಹಳಿ’ಗಳು ಬೇಕು ಎಂದು ಆಲೋಚಿಸಿದವರು. ಅದಕ್ಕೊಂದು ಯೋಜನೆಯನ್ನೂ ರೂಪಿಸಿದ ಕನಸುಗಾರ.

ತಮ್ಮ ಸಮುದಾಯದಲ್ಲಿ ಎರಡನೇ ತಲೆಮಾರಿನ ನಾಯಕತ್ವವನ್ನು ಬೆಳೆಯಲು ಬಿಡದ ‘ಆಲದ ಮರ’ ಎಂದು ಷರೀಫರನ್ನು ಅನೇಕರು ಜರೆಯುವುದುಂಟು. ಅದು ನಿಜವೂ ಇದ್ದೀತು. ಹಾಗಾಗಿಯೇ ಅವರು ನಾಡಿನ ಸಮಸ್ತ ಮುಸ್ಲಿಂ ಸಮುದಾಯದ ನಾಯಕನೆಂದು ಗುರುತಿಸುವ ಮಟ್ಟಿಗೆ ಬೆಳೆಯಲೂ ಇಲ್ಲ. ಹಾಗೆ ರೂಪುಗೊಳ್ಳುವ ಅವಕಾಶವನ್ನು ರಾಜ್ಯದ ಪ್ರಬಲ ಜಾತಿಗಳ ನಾಯಕರು ಅವರಿಗೆ ನೀಡಲಿಲ್ಲ. ಅವರನ್ನು ದೆಹಲಿ ಮಟ್ಟಕ್ಕೆ ಸೀಮಿತಗೊಳಿಸಿಬಿಟ್ಟರು. ದೆಹಲಿ ವರಿಷ್ಠರು ಕೂಡ ಕರ್ನಾಟಕ ರಾಜಕಾರಣದಲ್ಲಿ ತಮ್ಮ ‘ಕಿವಿ’ಯಾಗಿ, ಇಲ್ಲಿನ ಬೆಳವಣಿಗೆಗಳ ಮಾಹಿತಿ ಪಡೆಯಲು ಷರೀಫರನ್ನು ಬಳಸಿಕೊಂಡರು. ಅದೇ ಕಾರಣಕ್ಕಾಗಿ ಎಐಸಿಸಿಯ ಅನೇಕ ಅಧ್ಯಕ್ಷರ ಜತೆಗೆ ನಿಕಟ ಬಾಂಧವ್ಯವನ್ನೂ ಷರೀಫರು ಹೊಂದಿದ್ದರು.

ಇದರ ಫಲವಾಗಿ ಮಹತ್ವದ ರೈಲು ಖಾತೆ ಹುಡುಕಿಕೊಂಡು ಬಂತು. ಖಾತೆ ಸಿಕ್ಕಿದ ಕೂಡಲೇ ‘ರೈಲ್ವೆ ಭವನ’ದಲ್ಲಿ ಹೊದ್ದು ಮಲಗಲಿಲ್ಲ. ರಾಜ್ಯದ ಒಳಿತಿಗಾಗಿ ಅಧಿಕಾರವನ್ನು ಉಪಯೋಗಿಸಿದರು. ಕರ್ನಾಟಕಕ್ಕೆ ಮಾತ್ರವಲ್ಲದೇ ದಕ್ಷಿಣದ ರೈಲ್ವೆ ಸಂಪರ್ಕವನ್ನು ವಿಸ್ತರಿಸಲು ಕಾರಣವೂ ಆದರು. ಇದರಿಂದಾಗಿ ಅನೇಕ ಹೊಸ ರೈಲು ಮಾರ್ಗಗಳು, ಕಾರ್ಖಾನೆಗಳು ಕರ್ನಾಟಕಕ್ಕೆ ಒದಗಿಬಂದವು. ಇದು ಷರೀಫರ ಹೆಚ್ಚುಗಾರಿಕೆಯೂ ಹೌದು.

2011ರ ಜನಗಣತಿಯಂತೆ ಕರ್ನಾಟಕದಲ್ಲಿ ಮುಸ್ಲಿಮರ ಜನಸಂಖ್ಯೆ ಪ್ರಮಾಣ ಶೇ 12.9ರಷ್ಟಿದೆ. ಕಾಂಗ್ರೆಸ್ ಹಾಗೂ ಜನತಾದಳ ನಾಯಕರು ಈ ಸಮುದಾಯವನ್ನು ತಮ್ಮ ಮತ ಬ್ಯಾಂಕ್‌ ಆಗಿ ಬಳಸುತ್ತಲೇ ಬಂದಿದ್ದಾರೆ. ಈಗಿನ ಹೊತ್ತಿನಲ್ಲಿ ಒಕ್ಕಲಿಗರಿಗೆ ದೇವೇಗೌಡರು, ಲಿಂಗಾಯತರಿಗೆ ಬಿ.ಎಸ್‌. ಯಡಿಯೂರಪ್ಪ ಹಾಗೂ ಕುರುಬರಿಗೆ ಸಿದ್ದರಾಮಯ್ಯ ನಾಯಕರಾಗಿರುವಂತೆ ಸಂಖ್ಯಾ ಬಾಹುಳ್ಯದ ಅನುಸಾರ ನಿರ್ಣಾಯಕವೇ ಆಗಿರುವ ಮುಸ್ಲಿಮರಿಗೆ ಸಮರ್ಥ ನಾಯಕ ಇಲ್ಲ. ಅಂತಹದೊಂದು ಅವಕಾಶ ಇದ್ದಿದ್ದು, ಅಜೀಜ್ ಸೇಠ್‌, ನಜೀರ್ ಸಾಬ್ ಹಾಗೂ ಜಾಫರ್ ಷರೀಫರಿಗೆ ಮಾತ್ರ. ಅಲ್ಪ ಕಾಲ ಮಿಂಚಿ ಮರೆಯಾದ ನಜೀರ್ ಸಾಬರಿಗೆ ‘ಕಾಲ’ ಅವಕಾಶ ನೀಡಲಿಲ್ಲ. ಅಜೀಜ್ ಸೇಠ್‌ ನಿಧನದ ತರುವಾಯದ ನಿರ್ವಾತವನ್ನು ಜಾಫರ್ ಷರೀಫ್ ಬಳಸಿಕೊಳ್ಳಲಿಲ್ಲ.

ಒಂದು ತಲೆಮಾರಿನ ಮುಸ್ಲಿಂ ನಾಯಕತ್ವ ಹೋರಾಟದ ಹಿನ್ನೆಲೆಯಿಂದಲೇ ಮೂಡಿಬಂದಿತ್ತು. ಸಜ್ಜನಿಕೆ ಅವರ ವ್ಯಕ್ತಿದ್ರವ್ಯವಾಗಿತ್ತು. ಅಜೀಜ್ ಸೇಠ್‌ ಇಂತಹ ಅಪ‍ರೂಪದ ನಾಯಕರಲ್ಲಿ ಒಬ್ಬರು. ಖಮರುಲ್ ಇಸ್ಲಾಂ, ಮೆರಾಜುದ್ದೀನ್ ಪಟೇಲ್ ಹೈದರಾಬಾದ್ ಕರ್ನಾಟಕದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದರು. ಕರಾವಳಿಯಲ್ಲಿ ಬಿ.ಎಂ.ಇದಿನಬ್ಬ, ಬಿ.ಎ. ಮೊಯಿದ್ದೀನ್‌, ಬೆಂಗಳೂರಿನಲ್ಲಿ ಜಾಫರ್‌ ಷರೀಫ್ ಇದ್ದರು. ಇಡೀ ರಾಜ್ಯದಲ್ಲಿ ಸಮುದಾಯದ ನೇತಾರರು ಎಂದೆನಿಸುವಷ್ಟು ವರ್ಚಸ್ಸಿನ ಧುರೀಣರು ಇರಲಿಲ್ಲ. ಆದರೆ,
ತಮ್ಮಷ್ಟಕ್ಕೆ ಪ್ರಭಾವಿಗಳಾಗಿದ್ದರು. ಜಾಫರ್ ಷರೀಫ್‌ ನಿಧನದೊಂದಿಗೆ ಈ ವಾರಗೆಯ ಕೊಂಡಿ ಕಳಚಿದೆ.

ಸಿ.ಎಂ. ಇಬ್ರಾಹಿಂ, ಆರ್. ರೋಷನ್ ಬೇಗ್‌, ಯು.ಟಿ. ಖಾದರ್‌, ತನ್ವೀರ್ ಸೇಠ್‌, ನಜೀರ್ ಅಹಮದ್‌, ಸಲೀಂ ಅಹಮದ್‌, ಜಮೀರ್ ಅಹಮದ್‌ ಖಾನ್‌, ಎನ್.ಎ. ಹ್ಯಾರಿಸ್‌, ರಿಜ್ವಾನ್ ಅರ್ಷದ್‌, ಸೈಯದ್ ನಾಸಿರ್ ಹುಸೇನ್‌ ಹೀಗೆ ಸಮುದಾಯ ಪ್ರತಿನಿಧಿಗಳ ಪಟ್ಟಿ ಉದ್ದ ಬೆಳೆಯುತ್ತದೆ. ಇವರ ಪೈಕಿ ಬಹುತೇಕರು ತಮ್ಮ ಕ್ಷೇತ್ರಕ್ಕೆ ಸೀಮಿತರು. ತಮ್ಮದೇ ಪ್ರಭಾವ ಬೆಳೆಸಿಕೊಂಡು ರಾಜ್ಯ ನಾಯಕರಾಗುವ ಮಟ್ಟಕ್ಕೆ ಬೆಳೆಯಲೇ ಇಲ್ಲ. ರೋಷನ್‌ ಬೇಗ್‌ ಶಿವಾಜಿನಗರದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ. ಆದರೆ, ಮಗ್ಗುಲಿಗೆ ಇರುವ ಹೆಬ್ಬಾಳ, ಶಾಂತಿನಗರದಲ್ಲಿ ಪ್ರಭಾವವಿಲ್ಲ. ತಮ್ಮ ತಂದೆಯ ನೆರಳಿನಲ್ಲಿ ಬೆಳೆದ ತನ್ವೀರ್ ಸೇಠ್, ಯು.ಟಿ. ಖಾದರ್‌  ಮೈಸೂರು–ಮಂಗಳೂರುಗಳಲ್ಲಿ ತಮ್ಮ ಹಿಡಿತ ಸಾಧಿಸುವ ಮಟ್ಟಿಗೆ ಬೆಳೆದಿಲ್ಲ.

ಉದ್ಯಮ ನೆಲೆಯಿಂದ ಬಂದ ಜಮೀರ್‌, ಹ್ಯಾರಿಸ್‌, ಬಿ.ಎ.ಮೊಯಿದ್ದೀನ್ ಬಾವ, ಬಿ.ಎಂ. ಫಾರೂಕ್‌ ಅದನ್ನೇ ಅಸ್ತ್ರವಾಗಿ ಮಾಡಿಕೊಂಡವರು. ರಾಜ್ಯವ್ಯಾಪಿ ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಜಮೀರ್ ಯತ್ನಿಸುತ್ತಿದ್ದಾರೆ. ಆದರೆ, ದುಡ್ಡಿನ ಬಲವೊಂದಿದ್ದರೆ ಸಾಕು ಎಂದು ನಂಬಿಕೊಂಡ ಅವರಿಗೆ ಮಾತು–ನಡೆಯ ಮೇಲೆ ನಿಯಂತ್ರಣವೇ ಇಲ್ಲ. ತಮ್ಮ ಮಗನ ಬೀದಿ ಕಾದಾಟ, ವ್ಯಾವಹಾರಿಕ ಕಾರಣಕ್ಕೆ ಹ್ಯಾರಿಸ್‌ ಹೆಸರು ಉಳಿಸಿಕೊಂಡಿಲ್ಲ.

ತಳಸ್ತರದಿಂದ ಬಂದು ಸಾಧನೆಯ ಶಿಖರ ಮುಟ್ಟಿದ ಷರೀಫರ ಹಾದಿ–ವೈಫಲ್ಯಗಳು ಠವಾದರೆ ಹೊಸಬಗೆಯ ನಾಯಕತ್ವ ಉದಯವಾದೀತು.

Post Comments (+)