ಶನಿವಾರ, ಸೆಪ್ಟೆಂಬರ್ 21, 2019
21 °C

ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕನ ಕೊಲೆ

Published:
Updated:

ಗೌರಿಬಿದನೂರು: ನಗರದ ಹೊರವಲಯದ ಗೊಟಕಾನಾಪುರದ ಬಳಿ ಶುಕ್ರವಾರ ಬೆಳಿಗ್ಗೆ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಕಾರ್ಮಿಕರ ನಡುವೆ ಜಗಳ ಸಂಭವಿಸಿದ್ದು ಒಬ್ಬ ಕಾರ್ಮಿಕರು ಮೃತಪಟ್ಟಿದ್ದಾರೆ. 

ಆಂಧ್ರಪ್ರದೇಶದ ಓರಂಗಲ್ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಕೊತ್ತಪಲ್ಲಿ ನಿವಾಸಿ ಮಲ್ಲಕೊಂಡಯ್ಯ(32) ಮೃತರು. ಕೊಂಡಾರೆಡ್ಡಿ (30) ಕೊಲೆಯ ಆರೋಪ ಹೊತ್ತವರು.

ಆಂಧ್ರದ ಇವರಿಬ್ಬರೂ ಗೊಟಕನಾಪುರದ ಬಳಿ ಕಡಲೇಪುರಿ ತಯಾರಿಕಾ ಗೋಡಾನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಕೂಡ ಸಂಬಂಧಿಕರಾಗಿದ್ದರು.

ಮಲ್ಲಕೊಂಡಯ್ಯ ದಷ್ಟಪುಷ್ಟವಾಗಿದ್ದರು. ಕೊಂಡಾರೆಡ್ಡಿ ಸಣಕಲು ದೇಹದವರಾಗಿದ್ದಾರೆ. ಮಲ್ಲಕೊಂಡಯ್ಯ, ಪದೇ ಪದೇ ಈ ವಿಚಾರವಾಗಿ ಕೊಂಡಾರೆಡ್ಡಿಯನ್ನು ರೇಗಿಸುವುದು ಮತ್ತು ತಲೆಗೆ ಹೊಡೆಯುವುದು ಮಾಡುತ್ತಿದ್ದರು. ಗುರುವಾರ ಸಹ ಇದೇ ವಿಚಾರಕ್ಕೆ ಇಬ್ಬರಿಗೂ ಗಲಾಟೆ ನಡೆದಿದೆ.

ತಡರಾತ್ರಿ 11 ಗಂಟೆ ಸಮಯದಲ್ಲಿ ಮದ್ಯ ಕುಡಿದಿದ್ದ ಇಬ್ಬರನ್ನ ಗೋಡಾನ್ ಮಾಲೀಕ ಸಮಾಧಾನಪಡಿಸಿದ್ದರು. ಆದರೂ ಮತ್ತೆ ಜಗಳ ತೆಗೆದ ಇಬ್ಬರು ಪರಸ್ಪರ ಕಿತ್ತಾಡಿಕೊಂಡು ಮಲಗಿದ್ದರು.

ಮಲಗಿದ್ದ ಮಲ್ಲಕೊಂಡಯ್ಯ ಮೇಲೆ ಕೊಂಡಾರೆಡ್ಡಿ ದೊಣ್ಣೆಯಿಂದ ಬಲವಾಗಿ ತಲೆಗೆ ಹೊಡೆದಿದ್ದಾರೆ. ತೀವ್ರ ರಕ್ತ ಸ್ರಾವವಾಗಿ ಅವರು ಮೃತಪಟ್ಟಿದ್ದಾರೆ ಎಂದು‌ ಗೌರಿಬಿದನೂರು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ಕೊಂಡಾರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.

Post Comments (+)