ಜರ್ಮನ್‌ ಸ್ಟೈಲ್‌ನ ನಾರಾವಿ ನಿಲ್ದಾಣ

ಬುಧವಾರ, ಜೂನ್ 19, 2019
25 °C

ಜರ್ಮನ್‌ ಸ್ಟೈಲ್‌ನ ನಾರಾವಿ ನಿಲ್ದಾಣ

Published:
Updated:
Prajavani

ಅದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಮತ್ತು ಉಜಿರೆ ಮಾರ್ಗ. ಬೆಂಗಳೂರಿನ ಗೆಳೆಯರು ಅದೇ ದಾರಿಯಲ್ಲಿ ಕಾರಿನಲ್ಲಿ ಸಾಗುತ್ತಿದ್ದೆವು. ಪುಟ್ಟ ದರ್ಬೆ ಫಾರಂನಲ್ಲಿರುವ ಮದುವೆ ಮನೆ ಹುಡುಕಾಟದಲ್ಲಿದ್ದೆವು. ಪ್ರತಿ ಹಳ್ಳಿಗಳ ಬಸ್‌ ನಿಲ್ದಾಣಗಳ ಬಳಿ ನಿಂತು ವಿಳಾಸ ವಿಚಾರಿಸಬೇಕಿತ್ತು. ಹಾಗೆ ವಿಚಾರಿಸುತ್ತ ಹೋಗುತ್ತಿದ್ದಾಗ, ನಮ್ಮ ಕಾರು ನಿಂತಿದ್ದು ಅಪರೂಪದ ವಿನ್ಯಾಸವುಳ್ಳ ಪುಟ್ಟ ಕಟ್ಟಡದ ಎದುರು. ಅಶ್ವತ್ಥಮರದ ಎಲೆಯಾಕಾರದ ಚಾವಣಿಯ ಕಟ್ಟಡ ಒಂದು ಕೋನದಿಂದ ಯಕ್ಷಗಾನದ ಮುಂದಲೆಯಂತೆ(ತಲೆಗೆ ಕಟ್ಟಿದ ಪೇಟ) ಕಾಣಿಸುತ್ತಿತ್ತು. ಮೇಲೊಂದು ‘ರಾಮೇರ ಗುತ್ತು ಬಸ್‌ ಸ್ಟಾಪ್‌, ನಾರಾವಿ’ ಎನ್ನುವ ದೊಡ್ಡ ಬೋರ್ಡ್‌.

ಅದು ನಾರಾವಿ ಎಂಬ ಪುಟ್ಟ ಊರಿನ ಬಸ್‌ ನಿಲ್ದಾಣ. ಅದರ ವಿನ್ಯಾಸವೇ ವಿಶಿಷ್ಟವಾಗಿತ್ತು. ಸೌಲಭ್ಯಗಳೂ ಅತ್ಯಾಧುನಿಕವಾಗಿದ್ದವು. ಪುಟ್ಟ ಜಾಗದಲ್ಲಿ ನಿರ್ಮಾಣವಾಗಿದ್ದರೂ, ಕೂರಲು ಅಚ್ಚುಕಟ್ಟು ಮತ್ತು ಮಜಬೂತಾದ ಸ್ಟೈನ್‌ಲೆಸ್‌ ಸ್ಟೀಲ್‌ ಬೆಂಚ್‌ಗಳು, ಬಸ್‌ ವೇಳಾಪಟ್ಟಿ, ರೂಟ್‌ ಮ್ಯಾಪ್‌, ಡ್ರೆಸ್‌ ಚೆನ್ನಾಗಿದೆಯಾ, ಕ್ರಾಪು ಸರಿಯಾಗಿದೆಯಾ, ಲಿಪ್‌ಸ್ಟಿಕ್‌ ಲಿಪ್ಸ್‌ ಮೇಲೇ ಬಿದ್ದಿದಿಯಾ ಎಂದು ನೋಡಿಕೊಳ್ಳಲು ದೊಡ್ಡ ಕನ್ನಡಿ. ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳಲು ವ್ಯವಸ್ಥೆ, ಸ್ಪೀಕರ್‌ಗಳ ಅಳವಡಿಕೆ (ಆಗಾಗ ಸಂಗೀತವೂ ಹೊರಹೊಮ್ಮುತ್ತದೆ), ಸಿಸಿಟಿವಿ ಕ್ಯಾಮೆರಾ. ಜೊತೆಗೆ ಬಾಯಾರಿ ಬಂದವರಿಗೆ ಶುದ್ಧೀಕರಿಸಿದ ನೀರಿನ ವ್ಯವಸ್ಥೆ (ಕೋಲ್ಡ್‌ ಮತ್ತು ನಾರ್ಮಲ್‌ ) ಕೂಡ ಇದೆ. ಎಸ್‌ಕೆಎಫ್‌ ಉದ್ಯಮ ಕಂಪನಿ ಫ್ರಿಜ್‌ ಅಳವಡಿಸಿದೆ.

ಕಟ್ಟಡದ ಹಿತ್ತಲಲ್ಲಿ ಹಸಿರು ಲಾನ್‌, ಅದಕ್ಕೊಪ್ಪುವ ಪುಟ್ಟ ಬೇಲಿ. ಸುತ್ತ ರಾಜಧಾನಿಯಲ್ಲಿನ ಟೆಂಡರ್‌ಶ್ಯೂರ್‌ ಪಾದಚಾರಿ ಮಾರ್ಗದ ಹಾಗೆ ಐನೂರು ಚದರ ಅಡಿ ಜಾಗದಲ್ಲಿ ಇಂಟರ್‌ಲಾಕಿಂಗ್‌ ಟೈಲ್ಸ್‌ ಸಿಸ್ಟಂ ಅಳವಡಿಸಿದ ನೆಲಹಾಸು ಇದೆ.

ಇಂಥ ನಿಲ್ದಾಣ ಇಲ್ಲಿಗೆ ಹೇಗೆ ಬಂತು?

ನಾನು ಇಂಥದ್ದೇ ಕುತೂಹಲದ ಪ್ರಶ್ನೆಯೊಂದಿಗೆ ಹುಡುಕುತ್ತಿದ್ದಾಗ, ಗೋಡೆಯ ಮೇಲೆ ಬರೆದಿದ್ದ ಸಂಕ್ಷಿಪ್ತ ಮಾಹಿತಿಯೊಂದು ನನ್ನ ಕುತೂಹಲದ ಪ್ರಶ್ನೆಗೆ ದಾರಿ ತೋರಿತು. ಆ ಮಾಹಿತಿಯ ತುದಿಯಲ್ಲಿ ನಿರಂಜನ ಅಜ್ರಿ ಎನ್ನುವವರ ಮೊಬೈಲ್‌ ನಂಬರ್‌ ಸಿಕ್ಕಿತು. ಮಾಹಿತಿಗಾಗಿ ಕರೆ ಮಾಡಿದೆ, ಅವರು ಮಾತಿಗೂ ಸಿಕ್ಕರು. ಈ ಪುಣ್ಯಾತ್ಮರ ಮನೆತನವೇ ತಂಗುದಾಣದ ರೂವಾರಿ. ಇವರ ತಂದೆ ರಾಮೇರ ಗುತ್ತುವಿನ ಪಟೇಲರು ಎನ್. ಮಂಜಪ್ಪ ಮತ್ತು ತಾಯಿ ಬಿ. ಮಿತ್ರಾವತಿ. ಈ ದಂಪತಿಯ ಮಕ್ಕಳೆಲ್ಲ ಸೇರಿ ಇವರ ಹೆಸರಲ್ಲಿ ನಿಲ್ದಾಣ ನಿರ್ಮಾಣ ಮಾಡಿದ್ದಾರೆ. ₹12 ಲಕ್ಷದಿಂದ ₹14 ಲಕ್ಷ ವೆಚ್ಚವಾಗಿದೆ. ಎಲ್ಲ ಮಕ್ಕಳು ಸೇರಿ ಈ ವೆಚ್ಚವನ್ನು ಭರಿಸಿದ್ದಾರೆ. ಇದೊಂದು ಅಪರೂಪದ ಜನೋಪಕಾರಿ ಕೆಲಸ.

ಜರ್ಮನಿಯಲ್ಲಿ ಐಡಿಯಾ ಬಂತು

ಇವರ ಕುಟುಂಬದ ಒಬ್ಬ ಹೆಣ್ಣುಮಗಳು ಪ್ರತಿಕ್ಷಾ ಜರ್ಮನಿಯಲ್ಲಿ ಎಂಜಿನಿಯರ್‌. ಮಗಳನ್ನು ಕಾಣಲು ಜರ್ಮನಿಗೆ ಹೋದ ನಿರಂಜನ ಅಜ್ರಿ ಅವರನ್ನು ತುಂಬ ಸೆಳೆದಿದ್ದು ಅಲ್ಲಿನ ಸಾರ್ವಜನಿಕ ಬಸ್‌ ತಂಗುದಾಣಗಳು. ‘ಇಂಥದ್ದೊಂದು ನಮ್ಮೂರಲ್ಲೂ ಯಾಕಾಗಬಾರದು’ ನಿರಂಜನ ಆಲೋಚಿಸಿದರು. ಊರಿಗೆ ವಾಪಾಸಾದ ಕೂಡಲೇ ಕುಟುಂಬದವರೊಂದಿಗೆ ಈ ವಿಷಯ ಚರ್ಚಿಸಿದರು. ಕಾರ್ಯ ಪ್ರವೃತ್ತರಾದರು.

‘ನಮ್ಮ ಈ ಬಸ್‌ ನಿಲ್ದಾಣದ (18X18 ವಿಸ್ತೀರ್ಣದಲ್ಲಿ ನಿರ್ಮಾಣ) ಜಾಗಕ್ಕೆ ಹೊಂದುವಂಥ ನಿಲ್ದಾಣದ ವಿನ್ಯಾಸ ನೀಡಿದವರು ಕಾರ್ಕಳದ ಎಂಜಿನಿಯರ್‌ ಪ್ರಮಾಲ್‌. ಇದರ ಫಲವಾಗಿಯೇ ವಿಶೇಷ ವಿನ್ಯಾಸದ ಅತ್ಯಾಧುನಿಕ ತಂಗುದಾಣ ನಿರ್ಮಿಸಲು ಸಾಧ್ಯವಾಯಿತು’ – ನೆನಪಿಸಿಕೊಳ್ಳುತ್ತಾರೆ ನಿರಂಜನ್. ‘ರಾಮೇರ ಗುತ್ತುವಿಗೆ ನಮ್ಮ ತಂದೆಯೇ ಪಟೇಲರು. ಅವರು ಜನೋಪಕಾರಿಯಾಗಿದ್ದರು. ಅಗಲಿದ ತಂದೆ ಮತ್ತು ತಾಯಿಯವರ ನೆನಪು ಚಿರಸ್ಮರಣೀಯಗೊಳಿಸುವ ಆಲೋಚನೆ ಇತ್ತು. ಅದು ಈ ಮೂಲಕ ನೆರವೇರಿತು’ – ಕನಸು ಸಾಕಾರಗೊಂಡ ಸಂತೃಪ್ತ ಭಾವದಲ್ಲಿ ನಿರಂಜನ ಉತ್ಸಾಹದಿಂದಲೇ ವಿವರಿಸಿದರು.

ಹೈಟೆಕ್ ಸೌಲಭ್ಯಗಳು

‘ತಂಗುದಾಣಕ್ಕೆ ಸೋಲಾರ್ ವಿದ್ಯುತ್ ಅಳವಡಿಸಿದ್ದೇವೆ. ಸ್ಥಳೀಯ ಪಂಚಾಯಿತಿ ಇದೀಗ ವಿದ್ಯುತ್‌ ಸಂಪರ್ಕದ ವ್ಯವಸ್ಥೆ ಕಲ್ಪಿಸಿದೆ. ಇಲ್ಲಿ ರೂಟ್‌ ಮ್ಯಾಪ್‌,  ಬಸ್‌ ವೇಳಾಪಟ್ಟಿ, ಜತೆಗೆ ಆಧುನಿಕ ಸೌಲಭ್ಯಗಳಿವೆ. ಮೇಲ್ಛಾವಣಿ ಹೊರದೇಶದ್ದು. ಇದರ ವಿಶೇಷವೆಂದರೆ ಅದು ಒಳಾವರಣವನ್ನು ಸದಾ ತಂಪಾಗಿಡುತ್ತದೆ. ಪ್ರತಿ ದಿನ ನೂರಾರು ಶಾಲಾ ಮಕ್ಕಳು ಬಂದು ನೀರು ಕುಡಿದು ಸಂತೃಪ್ತಗೊಳ್ಳುತ್ತಾರೆ’ ಎಂದು ವಿವರಣೆ ನೀಡಿದರು ನಿರಂಜನ.

ಈ ನಿಲ್ದಾಣದಲ್ಲಿ ಬಹುತೇಕ ಬಸ್‌ಗಳು ನಿಲ್ಲುತ್ತವೆ. ನೀರಿನ ವ್ಯವಸ್ಥೆ ಇರುವುದರಿಂದ ಪ್ರಯಾಣಿಕರು ನೀರು ಕುಡಿದು ಬಾಟಲಿಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ದಿನಕ್ಕೆ ಕನಿಷ್ಠ ನಾಲ್ಕು ಸಾವಿರ ಲೀಟರ್‌ ನೀರು ಬೇಕಾಗುತ್ತದೆಯಂತೆ.

‘ಸಮೀಪದಲ್ಲಿ ಎಲ್ಲೂ ನೀರಿಲ್ಲ. ಬಾಯಾರಿದವರು ನೀರಿಗೆ ಇಲ್ಲೇ ಬರುತ್ತಾರೆ. ನಮಗೆ ತುಂಬ ಖುಷಿ ಮರ‍್ರೆ. ಅಪ್ಪ– ಅಮ್ಮನ ಹೆಸರಲ್ಲಿ ಇದೊಂದು ಒಳ್ಳೆಯ ಕೆಲಸ ನಮ್ಮ ಕುಟುಂಬದಿಂದ ಆಯ್ತಲ್ಲ ಎನ್ನುವ ಸಾರ್ಥಕತೆ ಇದೆ ಮರ‍್ರೆ..’ ಎಂದು ನಿರಂಜನ ತುಂಬ ಭಾವುಕವಾಗಿ ಹೇಳಿದರು.

ನಿಜ ಹೇಳಬೇಕು ಅಂದ್ರೆ ಇಂಥದೊಂದು ಅತ್ಯಾಧುನಿಕ ಬಸ್‌ ತಂಗುದಾಣ ಐಟಿ ಸಿಟಿ ಎಂದು ಬೀಗುವ ಬೆಂಗಳೂರು ನಗರದಲ್ಲೂ ಇಲ್ಲವಲ್ಲ ಮರ‍್ರೆ..

(ಚಿತ್ರಗಳು: ಲೇಖಕರವು)

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !