ಸೋಮವಾರ, ಆಗಸ್ಟ್ 3, 2020
23 °C
ನುಡಿದಂತೆ ನಡೆದ – ಪರಿಸರ ಕಾಳಜಿ ಮೆರೆದ ಗಿರೀಶ ಕಾರ್ನಾಡ

ಬ್ರ್ಯಾಂಡ್‌ ಬೆಂಗಳೂರಿನ ನಿಜದನಿ: ಗಿರೀಶ ಕಾರ್ನಾಡ

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಭಾಷಣ, ಸಮಾವೇಶಗಳಿಂದ ನಿರೀಕ್ಷಿತ ಫಲಿತಾಂಶ ಬರುವುದಿಲ್ಲ. ಹೇಳುವುದರ ಬದಲು ಮಾಡಿ ತೋರಿಸಬೇಕು’ ಎಂದು ಹೇಳುತ್ತಿದ್ದ ಗಿರೀಶ ಕಾರ್ನಾಡರು ಅದರಂತೆಯೇ ಬದುಕಿದವರು, ಹಾಗೆಯೇ ‘ದಿಗಂತ’ದತ್ತ ನಡೆದು ಹೋದರು.

ನಂಬಿದ ಸಿದ್ಧಾಂತಗಳಿಗೆ ಎಂದಿಗೂ ಬೆನ್ನು ತೋರಿಸದ, ತಮಗೆ ಸೈದ್ಧಾಂತಿಕವಾಗಿ ಸರಿಯೆನಿಸದ ಸಂಗತಿಗಳ ವಿಷಯದಲ್ಲಿ ಕೆಲವರಿಗೆ ನಿಷ್ಠುರ ಎನಿಸಬಹುದಾದ ನಿಲುವು ತೆಗೆದುಕೊಳ್ಳಲು ಅವರು ಹಿಂಜರಿದವರಲ್ಲ. ಸಹಬಾಳ್ವೆಯ ನಾಡಿನಲ್ಲಿ ಕೋಮುವಾದ ವಿಜೃಂಭಿಸಲಾರಂಭಿಸಿದೆ ಎಂದು ಗೊತ್ತಾಗಿದ್ದೇ ತಡ ಅದರ ವಿರುದ್ಧ  ಗಟ್ಟಿಯಾಗಿ ಧ್ವನಿಯೆತ್ತಿದವರು. ಬಾಬಾಬುಡನ್ ಗಿರಿ ಪರವಾದ ಹೋರಾಟ ಇರಬಹುದು, ಗೋಮಾಂಸ ನಿಷೇಧ ವಿರುದ್ಧವಾದ ಚಳವಳಿ ಇರಬಹುದು ಅವರು ಕಟು ಟೀಕೆಗಳನ್ನು, ಬೆದರಿಕೆಯ ಕರೆಗಳನ್ನು ಲೆಕ್ಕಿಸದೆ ‌ಮುನ್ನುಗ್ಗಿದವರು. ಪ್ರಚಾರದ ಹುಚ್ಚು ಅವರಲ್ಲಿರಲಿಲ್ಲ. ನಂಬಿದ ತತ್ವದ ಪರ ಬದ್ಧತೆಯಷ್ಟೇ ಅವರನ್ನು ಹೋರಾಟಕ್ಕೆ ಇಳಿಸುತ್ತಿತ್ತು. 

ಎದುರಾಳಿಗಳು ಮಂಡಿಸುತ್ತಿದ್ದ ವಾದಗಳಿಗೆ ತಾತ್ವಿಕ ನೆಲೆಯಿಂದ ಸವಾಲು ಕೂಗುತ್ತಿದ್ದ ಬೌದ್ಧಿಕ ಜಟ್ಟಿಗುಣ ಅವರಲ್ಲಿ ಸದಾ ಇತ್ತು.

ಬೆಂಗಳೂರಿನ ವಿಚಾರ ಬಂದಾಗಲೂ ಅವರ ಪ್ರತಿಪಾದನೆ ಇದೇ ಆಗಿರುತ್ತಿತ್ತು. ಉಕ್ಕಿನ ಸೇತುವೆ ವಿರುದ್ಧ, ನೈಟ್‌ಲೈಫ್‌ ಪರ ಅವರು ನಡೆಸಿದ ಪ್ರತಿಭಟನೆಗಳು ಅವರಲ್ಲಿದ್ದ ಸಾಮಾಜಿಕ ಹೋರಾಟಗಾರನನ್ನು ಜನರಿಗೆ ಪರಿಚಯಿಸಿದ್ದವು. 

ಕಾಡು ಕಡಿದು, ಮರಗಳನ್ನು ಬಲಿ ತೆಗೆದುಕೊಂಡು ಮಾಡುವ ಅಭಿವೃದ್ಧಿ ನಮಗೆ ಬೇಕಿಲ್ಲ ಎನ್ನುತ್ತಿದ್ದ ಅವರು ಉಕ್ಕಿನ ಸೇತುವೆ ನಿರ್ಮಾಣವನ್ನು ವಿರೋಧಿಸಿದ್ದರು. ಬೆಂಗಳೂರಿನ ಕೆರೆಗಳು ನಮ್ಮ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿ ಇಡುತ್ತಿವೆ. ಅವುಗಳೂ ಇಲ್ಲದಿದ್ದರೆ ಇನ್ನೂ ತೀವ್ರವಾಗಿ ಜಾಗತಿಕ ತಾಪಮಾನದ ಪರಿಣಾಮವನ್ನು ನಾವು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಮಾತುಗಳನ್ನಾಡುತ್ತಿದ್ದ ಕಾರ್ನಾಡರು, ಬೇರೆ ನಗರ–ದೇಶಗಳ ಉದಾಹರಣೆ ನೀಡುತ್ತಿದ್ದರು.

ಇಂಗ್ಲೆಂಡ್‌ನಲ್ಲಿ ಓದಿದ್ದ ಅವರು, ನಗರದಲ್ಲಿ ನೈಟ್‌ಲೈಫ್‌ ಪರವಾಗಿ ಹೋರಾಟ ಮಾಡಿದ್ದರು. ಇಂಗ್ಲೆಂಡ್‌, ಅಮೆರಿಕದಂತಹ ಪಾಶ್ಚಾತ್ಯ ದೇಶಗಳಲ್ಲಿರುವ ನೈಟ್‌ಲೈಫ್‌ ಸಂಸ್ಕೃತಿ ಇಲ್ಲಿಯೂ ಇರಬೇಕು. ಅದಕ್ಕೆ ತಕ್ಕ ಬಂದೋಬಸ್ತ್ ಮಾಡುವುದು ಸರ್ಕಾರದ ಹೊಣೆ ಕೂಡ. ಆಗ ಅಪರಾಧಗಳು ಕಡಿಮೆಯಾಗುತ್ತವೆ ಎಂಬ ಅಭಿಪ್ರಾಯ ಅವರದ್ದಾಗಿತ್ತು. 

ಟೌನ್‌ಹಾಲ್‌ನಲ್ಲಿ ಧೈರ್ಯದ ಧ್ವನಿ: 

ಒಮ್ಮೆ ಒಂದು ನಿಲುವು ತೆಗೆದುಕೊಂಡರೆ ಕೊನೆಯವರೆಗೂ ಅದಕ್ಕೆ ಗಿರೀಶ ಕಾರ್ನಾಡ ಬದ್ಧರಾಗಿರುತ್ತಿದ್ದರು. ಪುರಭವನದ ಎದುರು ನಡೆಯುತ್ತಿದ್ದ ಅನೇಕ ಪ್ರತಿಭಟನೆಗಳಲ್ಲಿ ಅವರ ಈ ಘನ ವ್ಯಕ್ತಿತ್ವ ಕಾಣಸಿಗುತ್ತಿತ್ತು. ಗೋಹತ್ಯೆ ನಿಷೇಧಕ್ಕಾಗಿ ಮಸೂದೆ ತರಲು ಮುಂದಾದಾಗ, ಗೋಹತ್ಯೆ ನಿಷೇಧವಾಗಬೇಕು ಎಂಬ ಕೂಗು ಎದ್ದಾಗ ಬೀದಿಯಲ್ಲೇ ನಿಂತು ಗೋಮಾಂಸ ತಿನ್ನುವ ಮೂಲಕ, ಆಹಾರದ ಹಕ್ಕಿನ ಮೇಲೂ ನಿರ್ಬಂಧ ಸಲ್ಲ ಎಂಬ ದಿಟ್ಟ ನಿಲುವನ್ನು ಅವರು ತಾಳಿದ್ದರು.

‘ನಗರ ನಕ್ಸಲರು’ ಹೆಸರಿನಲ್ಲಿ ಜನಪರ ಹೋರಾಟಗಾರರು, ಕವಿಗಳನ್ನು ಬಂಧಿಸಿದಾಗ, ‘ನಾನೂ ನಗರ ನಕ್ಸಲ್‌’ ಎಂಬ ಫಲಕವನ್ನು ಕುತ್ತಿಗೆಗೆ ಹಾಕಿಕೊಂಡು ಪ್ರತಿಭಟಿಸುವ ಧೈರ್ಯ ತೋರಿದ್ದರು. ಅನಾರೋಗ್ಯದ ನಡುವೆಯೂ ಅವರ ಹೋರಾಟ ಮನೋಭಾವ ಕುಗ್ಗಿರಲಿಲ್ಲ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ತಮ್ಮ ನಿಲುವಿಗೆ ಅವರು ಬದ್ಧರಾಗಿದ್ದರು.

ಟಿಪ್ಪು ಪರ ಪ್ರೇಮ: 

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರು ಅಥವಾ ಟಿಪ್ಪು ಸುಲ್ತಾನ್‌ ಇಬ್ಬರಲ್ಲಿ ಯಾರ ಹೆಸರನ್ನು ಇಡಬೇಕು ಎಂಬ ಪ್ರಶ್ನೆ ಉದ್ಭವಿಸಿದ್ದಾಗ, ಟಿಪ್ಪು ಸುಲ್ತಾನ್‌ ಹೆಸರೇ ಇಡಬೇಕು ಎಂದು ಸಲಹೆ ನೀಡಿದ್ದರು ಕಾರ್ನಾಡರು. ನಮ್ಮ ಮೆಟ್ರೊಪಾಲಿಟನ್‌ ನಗರಗಳ ಮಹತ್ವ ಹೆಚ್ಚಾಗಬೇಕೆಂದರೆ, ಟಿಪ್ಪು ಸುಲ್ತಾನ್‌ ಹೆಸರಿಡಬೇಕು. ಕೆಂಪೇಗೌಡರು ಒಂದು ಪ್ರಾಂತ್ಯದ ಸಾಮಂತ. ಟಿಪ್ಪು ರಾಜ. ಅಲ್ಲದೆ, ಅವನು ದೇಶಪ್ರೇಮಿ, ಕನ್ನಡಪ್ರೇಮಿ ಎಂದು ಸಮರ್ಥಿಸಿಕೊಂಡಿದ್ದರು. 

ಕಾರ್ನಾಡರ ಈ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆದಾಗ, ‘ನನ್ನ ಸಲಹೆ ನಾನು ನೀಡಿದ್ದೇನೆ. ಹೆಸರನ್ನು ಇಡುವುದು, ಬಿಡುವುದು ನಿಮಗೆ ಬಿಟ್ಟಿದ್ದು’ ಎಂದು ನೇರವಾಗಿ ಹೇಳಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು