ಬಾಲಕಿ ಸಾವು; ಕೊಲೆಯ ದೂರು, ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ರಸ್ತೆ ತಡೆ

7
ಬಸವನಬಾಗೇವಾಡಿ

ಬಾಲಕಿ ಸಾವು; ಕೊಲೆಯ ದೂರು, ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ರಸ್ತೆ ತಡೆ

Published:
Updated:
Prajavani

ಬಸವನಬಾಗೇವಾಡಿ: ನಾಲ್ಕನೇ ತರಗತಿ ಓದುತ್ತಿದ್ದ ಹೂವಿನ ಹಿಪ್ಪರಗಿ ಗ್ರಾಮದ ಬಾಲಕಿಯನ್ನು ಕೊಲೆಗೈಯಲಾಗಿದೆ ಎಂದು ದೂರಿ ವಾಲ್ಮೀಕಿ ಸಮಾಜದ ಜನರು, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಶವ ಪರೀಕ್ಷಾ ಕೇಂದ್ರದ ಮುಂಭಾಗದಲ್ಲೇ ರಸ್ತೆ ತಡೆ ನಡೆಸಿ, ಶುಕ್ರವಾರ ಪ್ರತಿಭಟಿಸಿದರು.

ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಶವನನ್ನು ಗುರುವಾರ ಸಂಜೆ ನೋಡಿದ ಈಕೆಯ ತಂದೆ ಸಂಶಯ ವ್ಯಕ್ತಪಡಿಸಿ, ಬಸವನಬಾಗೇವಾಡಿ ಪೊಲೀಸ್ ಠಾಣೆಗೆ ಕೊಲೆಯಾಗಿದೆ ಎಂದು ದೂರು ನೀಡಿದ್ದಾರೆ.

ಬಾಲಕಿಯ ಶವವನ್ನು ಮರಣೋತ್ತರ ವೈದ್ಯಕೀಯ ಪರೀಕ್ಷೆಗಾಗಿ, ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. ಈ ವೇಳೆ ಸಮಾಜದ ಜನರು, ವಿವಿಧ ಸಂಘಟನೆಗಳ ಮುಖಂಡರು, ಬಾಲಕಿ ಕೊಲೆಗೈಯಲಾಗಿದೆ ಎಂದು ದೂರಿ ಕೆಲ ಹೊತ್ತು ರಸ್ತೆ ತಡೆ ನಡೆಸಿದರು.

ಸಾವಿನ ರಹಸ್ಯ ಭೇದಿಸಬೇಕು. ಬಾಲಕಿ ಕೊಲೆಗೈದ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಬೇಕು. ಗೃಹ ಸಚಿವರೇ ಸ್ಥಳಕ್ಕೆ ಬಂದು ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದರು.

ಘಟನಾ ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಪ್ರತಿಭಟನಾ ನಿರತರನ್ನು ಮನವೊಲಿಸಲು ಯತ್ನಿಸಿದಾಗ ಮಾತಿನ ಚಕಮಕಿ ನಡೆಯಿತು. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್.ಪಿ. ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ತಹಶೀಲ್ದಾರ್‌ ಎಂ.ಎನ್.ಚೋರಗಸ್ತಿ, ಸಿಪಿಐ ಮಹಾದೇವ ಶಿರಹಟ್ಟಿ, ಪಿ.ಎಸ್.ಐ ಗುರುಶಾಂತ ದಾಶ್ಯಾಳ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೊದ್ದಾರ ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ವಾಲ್ಮೀಕಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಬಿರಾದಾರ, ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ, ಡಿ.ಎಸ್.ಎಸ್. ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಮಣ್ಣೂರ, ಬಸನಗೌಡ ಪಾಟೀಲ, ಸುರೇಶ ತಳವಾರ, ಸಿದ್ದು ಮೇಟಿ, ರಾಜು, ಮಹಾಂತೇಶ ಸಾಸಾಬಾಳ, ಬಿ.ಎಸ್.ಗಸ್ತಿ, ಶರಣು ಯಾಳವಾರ, ಗಂಗಾಧರ ಇಂಗಳೇಶ್ವರ, ಸಂಗಮೇಶ ದೊಡಮನಿ, ಪ್ರಭು ನಾಟೀಕಾರ, ಅಶೋಕ ನಂದಿ, ಪರಶುರಾಮ ದಿಂಡವಾರ, ಮಲ್ಲಿಕಾರ್ಜುನ ಬಟಗಿ, ಶರಣಗೌಡ ಪಾಟೀಲ, ಮಳಸಿದ್ದ ನಾಯ್ಕೋಡಿ, ಮಹಾಂತೇಶ ಚಕ್ರವರ್ತಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !