ಶನಿವಾರ, ಡಿಸೆಂಬರ್ 7, 2019
22 °C

ಮದುವೆನಾ? ಈಗ್ಲೇ ಬೇಡಪ್ಪ..! ಇದು ಇಂದಿನ ಯುವತಿಯರ ಟ್ರೆಂಡ್

Published:
Updated:

‘ಮದುವೆಯೇ? ನೌಕರಿಯಲ್ಲಿ ಉನ್ನತ ಸ್ಥಾನ ಗಿಟ್ಟಿಸಬೇಕು. ಇಡೀ ಜಗತ್ತನ್ನೇ ಸುತ್ತಬೇಕು. ನಂತರ ನೋಡೋಣ ಈ ಮದುವೆ ವಿಷಯವನ್ನ’ ಎನ್ನುವ ಜಾಹೀರಾತು ಕಂಪನಿಯಲ್ಲಿ ಮಾರ್ಕೆಟಿಂಗ್‌ ಎಕ್ಸಿಕ್ಯುಟಿವ್‌ ಆಗಿರುವ ಪ್ರಣತಿ ನಾಯಕ್‌, ‘ಅಷ್ಟಕ್ಕೂ ಮದುವೆಯನ್ನೇಕೆ ಆಗಬೇಕು, ಬದ್ಧತೆಯಿಲ್ಲದ ಸಂಬಂಧಗಳ ಆಯ್ಕೆ ನನ್ನ ಮುಂದಿರುವಾಗ?’ ಎಂದು ಪ್ರಶ್ನಿಸುವಾಗ ಈ ವಿವಾಹವೆಂಬ ಸಾಮಾಜಿಕ ವ್ಯವಸ್ಥೆ, ಬದ್ಧತೆ ಯಾವ ತಿರುವು ಪಡೆಯುತ್ತಿದೆ ಎಂಬುದು ಅರಿವಾಗದೇ ಇರದು.

ಇದು ಕೇವಲ ಒಬ್ಬಳು ಪ್ರಣತಿಯ ಪ್ರಶ್ನೆಯಲ್ಲ, ನವ ತಲೆಮಾರಿನ ಬಹುತೇಕ ಯುವತಿಯರ ದಿಟ್ಟ ನಿಲುವಿದು. ನಗರದಲ್ಲೇ ಹುಟ್ಟಿ ಬೆಳೆದ ತರುಣಿಯರು ಮಾತ್ರವಲ್ಲ, ಶಿಕ್ಷಣಕ್ಕೆ, ಉದ್ಯೋಗಕ್ಕೆಂದು ನಗರಗಳಿಗೆ ವಲಸೆ ಬಂದ ಗ್ರಾಮೀಣ ಭಾಗದ ಹೆಣ್ಣುಮಕ್ಕಳಲ್ಲಿ ಕೂಡ ಮದುವೆಯೆಂಬ ಸಾಂಸ್ಥಿಕ ವ್ಯವಸ್ಥೆಗೆ ಸಡ್ಡು ಹೊಡೆಯುವ ಮನೋಭಾವ ಕಾಣುತ್ತಿದೆ. ಇದೇಕೆ ಹೀಗೆ ಎಂದು ಕಾರಣಗಳ ಹಿಂದೆ ಹೊರಟಾಗ ಢಾಳಾಗಿ ಕಾಣುವ ಅಂಶವೆಂದರೆ ‘ಮೊದಲು ನಾನು.. ಕೊನೆಗೂ ನಾನೇ’ ಎಂಬ ಸ್ವಾರ್ಥದ ಸುತ್ತ ಗಿರಕಿ ಹೊಡೆಯುವ ಮನೋಭಾವ. ವೈಯಕ್ತಿಕ ಸ್ವಾತಂತ್ರ್ಯ, ವೈಯಕ್ತಿಕ ಸಾಧನೆಯ ಬೆನ್ನು ಹತ್ತಿದ ಮಿಲೇನಿಯಲ್‌ ತಲೆಮಾರಿನ ಯುವತಿಯರಿಗೆ ಮದುವೆ ಎನ್ನುವುದು ಕೂಡ ವೈಯಕ್ತಿಕ. ಅದಕ್ಕೆ ಕುಟುಂಬ, ಸಮಾಜದ ಬದ್ಧತೆಯ ಹಂಗಿಲ್ಲ.

ವೈಯಕ್ತಿಕ ಆಯ್ಕೆ

‘ಹಿಂದೆ ಮದುವೆಯೆಂದರೆ ಎರಡು ಕುಟುಂಬಗಳ ಸದಸ್ಯರು, ಬಂಧುಗಳು, ಸ್ನೇಹಿತರು ಎಂದೆಲ್ಲ ಒಂದು ಸುರಕ್ಷಿತ ವಲಯದಲ್ಲಿ ನಡೆಯುವ ಸಾಂಪ್ರದಾಯಕ ಪದ್ಧತಿಯಾಗಿತ್ತು. ಮಕ್ಕಳು, ಅವರ ಯೋಗಕ್ಷೇಮ, ಕರ್ತವ್ಯ, ನಂತರ ವೃದ್ಧಾಪ್ಯದ ದಿನಗಳಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿರುವುದು... ಹೀಗೆ ಅದಕ್ಕೆ ಹಲವು ಆಯಾಮಗಳಿದ್ದವು. ಆದರೆ ಈಗೇನಿದ್ದರೂ ಸಮಾಜ, ಕುಟುಂಬ ಎಂಬ ಪದ ಹಿಂದೆ ಸರಿದು, ವೈಯಕ್ತಿಕ ಎಂಬುದು ಮುನ್ನೆಲೆಗೆ ಬಂದು ಬಿಟ್ಟಿದೆ’ ಎನ್ನುವ ನಿವೃತ್ತ ಸೋಶಿಯಾಲಜಿ ಪ್ರಾಧ್ಯಾಪಕ ಪ್ರೊ.ವಿಷ್ಣು ಎಸ್‌. ಸಹಸ್ರಬುದ್ಧೆ, ‘ಅವರ ಬದುಕು, ಅವರ ಸ್ವಾತಂತ್ರ್ಯ. ಬಹುಶಃ ಲೈಂಗಿಕತೆಯೂ ಮದುವೆಯೆಂಬ ಚೌಕಟ್ಟಿನಿಂದ ಆಚೆ ನಿಂತಿರುವುದರಿಂದ ಸಂಬಂಧಗಳು ಬೇರೆ ರೀತಿಯಲ್ಲೇ ನಿಭಾಯಿಸಲ್ಪಡುತ್ತವೆ’ ಎಂದು ವಿಶ್ಲೇಷಿಸುತ್ತಾರೆ.

ಮಹಾರಾಷ್ಟ್ರದ ಮಂಗಲ್‌ ಮುಹೂರತ್‌ ಎಂಬ ವಧು– ವರರ ಹೊಂದಾಣಿಕೆ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ಯುವತಿಯರ ಮದುವೆಯ ಸರಾಸರಿ ವಯಸ್ಸು 28ನ್ನೂ ದಾಟಿ ಹೋಗುತ್ತಿದೆ. ಉನ್ನತ ಶಿಕ್ಷಣ, ಸಾಧ್ಯವಾದರೆ ವಿದೇಶದಲ್ಲಿ ಸ್ನಾತಕೋತ್ತರ, ಪಿಎಚ್‌.ಡಿ. ಮಾಡಬೇಕು, ಒಳ್ಳೆಯ ಉದ್ಯೋಗ, ಅದರಲ್ಲಿ ಉನ್ನತ ಸ್ಥಾನ, ಒಂದಿಷ್ಟು ತಾಣಗಳ ಸುತ್ತಾಟ, ಹಣ, ಆಸ್ತಿ ಖರೀದಿ... ಇವೆಲ್ಲವುಗಳ ಮಧ್ಯೆ ಮನಸ್ಸಿಗೆ ಒಪ್ಪಿದವನ ಜೊತೆ ಲಿವ್‌ ಇನ್‌ ರಿಲೇಶನ್‌ಶಿಪ್‌.

ಒತ್ತಡಕ್ಕೆ ಬಾಗದ ಮನಸ್ಸು

ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು ಉದ್ಯೋಗ ಕ್ಷೇತ್ರಕ್ಕೆ ಕಾಲಿಡುತ್ತಿದ್ದು, ಪುರುಷ ಸಹೋದ್ಯೋಗಿಗಳಿಂದ ಪೈಪೋಟಿ ಎದುರಿಸಬೇಕಾಗಿದೆ. ಇಲ್ಲಿ ಅಸ್ಮಿತೆಗೆ ಸಹ ಹೋರಾಟ ನಡೆಸುವಂತಹ ಪರಿಸ್ಥಿತಿ ಇದೆ. ಇದೇ ಅಂಶಗಳು ವೈವಾಹಿಕ ವಿಷಯದಲ್ಲೂ ಮುಂಚೂಣಿಗೆ ಬಂದಿವೆ. ಗಟ್ಟಿ ಮನಸ್ಸಿನ, ಸ್ವತಂತ್ರ ಮನೋಭಾವದ ಹೆಣ್ಣು ಮದುವೆ ವಿಷಯದಲ್ಲಿ ತನ್ನದೇ ಆದ ನಿಲುವನ್ನು ಹೊಂದಿ ಅದನ್ನೇ ಪ್ರತಿಪಾದಿಸುವುದರಿಂದ ಕುಟುಂಬದ, ಸಮಾಜದ ಒತ್ತಡಕ್ಕೆ ಬಾಗುವ ಸಂಭವ ಕಡಿಮೆ.

‘ಆರ್ಥಿಕ ಸ್ವಾತಂತ್ರ್ಯ ಹೊಂದಿರುವ ತರುಣಿ ಮದುವೆಯಾಗಿ ಉದ್ಯೋಗ ತ್ಯಜಿಸಲು ಸಿದ್ಧಳಿರುವುದಿಲ್ಲ. ಹಾಗಂತ ಉದ್ಯೋಗ, ಮನೆಕೆಲಸ ಎರಡನ್ನೂ ಚಿಕ್ಕ ವಯಸ್ಸಿನಲ್ಲೇ ನಿಭಾಯಿಸುವ ಹೊಣೆ ಹೊರಲೂ ಮನಸ್ಸು ಒಪ್ಪುವುದಿಲ್ಲ. ಹೀಗಾಗಿ ಮದುವೆಗಿಂತ ಉದ್ಯೋಗದ ಕಡೆ ಒಲವು ಜಾಸ್ತಿಯಾಗಿದೆ’ ಎನ್ನುತ್ತಾರೆ ಪ್ರೊ. ಸಹಸ್ರಬುದ್ಧೆ.

ಮದುವೆ ಮುಂದೂಡಲು ಇನ್ನೂ ಒಂದು ಕಾರಣವನ್ನು ವಿಶ್ಲೇಷಕರು ಮುಂದಿಡುತ್ತಾರೆ. ಸಮಾಜ ಹೆಚ್ಚು ಮುಕ್ತವಾಗಿದೆ. ವೈವಾಹಿಕ ಚೌಕಟ್ಟಿನಲ್ಲಿ ಲೈಂಗಿಕ ಅನುಭವ ಪಡೆಯಬೇಕೆಂಬ ಸಾಂಪ್ರದಾಯಕ ಸಮಾಜ ಈಗಿಲ್ಲ. ಮಿಲೇನಿಯಲ್‌ ತಲೆಮಾರಿನ ಯುವತಿ ಸ್ನೇಹಿತನನ್ನು ಹುಡುಕಿಕೊಳ್ಳುವುದು ಸಹಜ ಎಂಬಂತಾಗಿದೆ. ಪ್ರೀತಿ– ಪ್ರೇಮದ ಬದ್ಧತೆಯೂ ಬೇಡ. ಇದಕ್ಕೆ ಡೇಟಿಂಗ್‌ ಆ್ಯಪ್‌ಗಳೂ ಕೈಜೋಡಿಸಿವೆ. ಸಮಯ, ಹಣ, ಹೊಣೆಗಾರಿಕೆಯನ್ನು ಪಣಕ್ಕೊಡ್ಡುವ ವೈವಾಹಿಕ ವ್ಯವಸ್ಥೆಗಿಂತ ಕ್ಯಾಶುವಲ್‌ ಸಂಬಂಧವನ್ನೇ ಆಯ್ಕೆ ಮಾಡಿಕೊಳ್ಳುವ ಟ್ರೆಂಡ್‌ ಜಾಸ್ತಿಯಾಗಿದೆ. ಮದುವೆಗಿಂತ ಒಬ್ಬನ ಜೊತೆ ಮನಸ್ಸಿಗೆ ಬಂದಷ್ಟು ಸಮಯ ಬದುಕುವುದೇ (ಲಿವ್‌–ಇನ್‌ ರಿಲೇಶನ್‌ಶಿಪ್‌) ಹಲವರಿಗೆ ಹೆಚ್ಚು ಅನುಕೂಲಕರ ಎನಿಸಿಬಿಟ್ಟಿದೆ. ಹೀಗಾಗಿ ಬದುಕಿನ ಪ್ರಮುಖ ಘಟ್ಟ ಎನಿಸಿಕೊಂಡಿದ್ದ ಮದುವೆ ನಗರದ ಮಿಲೇನಿಯಲ್‌ ನಿವಾಸಿಗಳಿಗೆ ಅಷ್ಟೊಂದು ಯೋಚಿಸಿ ತಲೆಕೆಡಿಸಿಕೊಳ್ಳುವ ವಿಷಯವಲ್ಲ.

ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳು ಅಳವಡಿಕೆಯಾಗಿದ್ದು, ವಯಸ್ಸಾದ ಮೇಲೆ ಮಕ್ಕಳನ್ನು ಹೆರುವ ಬಗ್ಗೆಯೂ ಚಿಂತಿಸುವ ಪರಿಸ್ಥಿತಿ ಈಗಿಲ್ಲ. ಹೀಗಾಗಿ ಈಗಿನ ಯುವತಿಯರು ಮೊದಲು ತಮ್ಮ ಜೀವನದಲ್ಲಿ ಭದ್ರತೆ ಕಂಡುಕೊಂಡು ನಂತರ ಮದುವೆ, ಮಕ್ಕಳ ಬಗ್ಗೆ ಯೋಚಿಸುವ ಟ್ರೆಂಡ್‌ ಶುರುವಾಗಿದೆ.

ಆದರೆ ಈ ಬದಲಾವಣೆಗಳು ಕೆಲವು ಅಹಿತಕರ ತಿರುವುಗಳಿಗೂ ಕಾರಣವಾಗಿವೆ. ಮದುವೆ ಮುಂದೂಡಿದಾಗ ಕಾಡುವ ಒಂಟಿತನ, ಯಾವುದೋ ಡೇಟಿಂಗ್‌ ಆ್ಯಪ್‌ನಲ್ಲಿ ಸಿಗುವ ಸ್ನೇಹಿತನಿಂದಾಗುವ ವಂಚನೆಗಳು, ಹೆಚ್ಚು ಕಾಲ ಬಾಳದ ಲಿವ್‌–ಇನ್‌ ಬದುಕು ಒಂದು ರೀತಿಯ ಅನಿಶ್ಚಿತತೆಯನ್ನೂ ಸೃಷ್ಟಿಸುತ್ತವೆ.

ಗಟ್ಟಿ ಸಂಬಂಧದ ಹುಡುಕಾಟ

ಹಾಗಂತ ಮದುವೆ ಎಂಬ ವ್ಯವಸ್ಥೆಯೇ ನಿಧಾನವಾಗಿ ಮಾಯವಾಗುತ್ತಿದೆ ಎಂದರ್ಥವಲ್ಲ. ಆ ರೀತಿ ಇದ್ದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಒಮ್ಮಿಂದೊಮ್ಮೆಲೇ ಸ್ಥಿತ್ಯಂತರ ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ವಿಷಯದಲ್ಲಿ ಬದಲಾವಣೆಗಳು ಕಾಣಿಸಿಕೊಂಡಿರುವುದಂತೂ ನಿಶ್ಚಿತ. ಮದುವೆ ಎರಡು ಮನಸ್ಸುಗಳನ್ನು ಬೆಸೆಯುವಂತೆಯೇ, ಅವುಗಳಲ್ಲಿ ಬಿರುಕನ್ನೂ ಮೂಡಿಸಬಹುದು. ಆ ಬಿರುಕಿಗೆ ತೇಪೆ ಹಚ್ಚುತ್ತ ಕೂರುವ ಬದಲು ಮೊದಲೇ ಪ್ರಯೋಗಕ್ಕೆ ಒಡ್ಡಿಕೊಂಡು ಒಂದು ಗಟ್ಟಿ ಸಂಬಂಧದ ಹುಡುಕಾಟ ಇಂದಿನ ಯುವ ಮನಸ್ಸುಗಳಲ್ಲಿ ನೆಟ್ಟಿದೆ ಎನ್ನಬಹುದು. ಅದು ಅಸ್ತಿತ್ವ, ಆರ್ಥಿಕ ಸ್ವಾವಲಂಬನೆಯನ್ನು ಕಳೆದುಕೊಳ್ಳದೇ ಮದುವೆಯೆಂಬ ವ್ಯವಸ್ಥೆಯಲ್ಲಿ ಒಳಗೊಳ್ಳುವ ಹುಡುಕಾಟ.

ಹೀಗಾಗಿ ಸಮಾಜದಲ್ಲಾಗುತ್ತಿರುವ ಬದಲಾವಣೆ ಮದುವೆಯೆಂಬ ವ್ಯವಸ್ಥೆಯನ್ನು ಮೂಲೆಗೆ ತಳ್ಳಿದೆ ಎನ್ನುವುದಕ್ಕಿಂತ ಅದನ್ನು ಇನ್ನಷ್ಟು ವ್ಯವಸ್ಥಿತವಾಗಿ ಗಟ್ಟಿಗೊಳಿಸುತ್ತಿದೆ ಎನ್ನಬಹುದು. ವಯಸ್ಸಾದಂತೆ ಹೆಚ್ಚು ಪಕ್ವಗೊಳ್ಳುವ ಮನಸ್ಸು ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಲು ಸನ್ನದ್ಧಗೊಳಿಸುತ್ತದೆ. ಆದರೆ ಅವಿವಾಹಿತೆಯ ವಯಸ್ಸು ಮಾತ್ರ ಯಾವ ಬಿಡುಬೀಸೂ ಇಲ್ಲದೇ ಏರುತ್ತಿರುವುದಂತೂ ನಿಜ. 

***

ಪಾವನಿ ಕಾಮತ್‌ಳ ಮದುವೆ ಕಥೆ ಕೇಳಿ. ಓದಿ, ತನ್ನಿಷ್ಟದಂತೆ ನೌಕರಿಯನ್ನು ಹೊಂದಬೇಕೆಂಬ ಹಟ ಪಾವನಿಯದ್ದು. ಕೆಲಸವೂ ಸಿಕ್ಕಿತು. ಅದರಲ್ಲೇ ದೇಶವನ್ನೆಲ್ಲ ಓಡಾಡಿದಳು. ಆದರೆ ಮನೆಯಲ್ಲಿ ಮದುವೆ ಮಾತು ಬಂದರೆ ಸಿಡಿಮಿಡಿಯಾಗುತ್ತಿದ್ದಳು. ಅಂತೂ ಮದುವೆಗೆ ಒಪ್ಪಿಗೆ ನೀಡುವಾಗ ಆಕೆಯ ವಯಸ್ಸು 35 ಆಗಿತ್ತು. ‘ಆಯ್ತು ನೀವು ಹೇಳಿದಂತೆ ಮದುವೆ ಆಗ್ತೇನೆ. ಆದರೆ ನನಗೆ ಮಕ್ಕಳು ಬೇಡ’ ಎಂಬ ಷರತ್ತು ಪಾವನಿಯದ್ದಾಗಿತ್ತು. ಮದುವೆಯಾಗಿ ವಿದೇಶದಲ್ಲಿ ನೆಲೆಗೊಂಡಿದ್ದೂ ಆಯಿತು. ಅವಳಿಚ್ಛೆಯಂತೆ ಮಕ್ಕಳಿಲ್ಲದ ಜೀವನ ನಡೆಸುತ್ತಿದ್ದಾಳೆ.

***

ಅಂಕಿತಾ ತ್ರಿವೇದಿಯ ನಿಲುವು ನೋಡಿ. ಆಕೆ ಸ್ನಾತಕೋತ್ತರ ಪದವಿ ಓದುತ್ತಿದ್ದಾಳೆ. ಮುಂದೆ ಪಿಎಚ್‌.ಡಿ. ಮಾಡಬೇಕೆಂಬ ಬಯಕೆ. ಆದರೆ ಮದುವೆ ಮಾಡುವ ಯೋಚನೆ ಹೆತ್ತವರದ್ದು. ಅಂಕಿತಾಳ ಈ ನಿಲುವಿಗೆ ಕಾರಣ ಅವರ ಸಂಬಂಧಿಯೊಬ್ಬರ ಮದುವೆ ಪ್ರಸಂಗ. ಕಟ್ಟಿಕೊಂಡ ಗಂಡ ಅವಳ ಆಸೆ, ಆಕಾಂಕ್ಷೆಗಳಿಗೆ ಮುಳುವಾಗಿದ್ದ. ಇದನ್ನೆಲ್ಲ ಕಣ್ಣಾರೆ ಕಂಡಿದ್ದ ಅಂಕಿತಾ ತಾನು ನೌಕರಿ ಹಿಡಿದ ನಂತರವೇ ಮದುವೆ ಎಂಬ ತೀರ್ಮಾನಕ್ಕೆ ಬಂದಿದ್ದಾಳೆ.

ಎಂಜಿನಿಯರಿಂಗ್‌ ಓದಿದ್ದ ಲಾವಣ್ಯ ತೇಜಸ್‌ ಎಂ.ಟೆಕ್‌. ಮಾಡುವ ಆಸೆ ಹೊತ್ತಿದ್ದಳು. ಅದೂ ವಿದೇಶದಲ್ಲಿ ಓದಬೇಕು ಎಂಬ ಬಯಕೆ ಬೇರೆ. ಆದರೆ ಹೆತ್ತವರು ವಿದೇಶದಲ್ಲಿ ಒಬ್ಬಳನ್ನೇ ಬಿಡಲು ಸಿದ್ಧರಿರಲಿಲ್ಲ. ಮದುವೆ ಮಾಡಿ ಗಂಡನ ಜೊತೆಗಿದ್ದು ಓದಲಿ ಎಂಬ ತೀರ್ಮಾನಕ್ಕೆ ಬಂದರು. ಆದರೆ ಮಗಳ ಇಚ್ಛೆ ನೆರವೇರಿಸುವ ಗಂಡು ಹುಡುಕುವಲ್ಲಿ ಸುಸ್ತಾಗಿ ಅಂತೂ ಕೊನೆಗೆ ಅಂದುಕೊಂಡಂಥ ವರ ಸಿಕ್ಕಾಗ ವಯಸ್ಸು ಇಪ್ಪತ್ತೆಂಟಾಗಿತ್ತು. 

***

ಬಡತನವಿದ್ದರೂ ಓದಿನಲ್ಲಿ ಮುಂದಿದ್ದ ನೀಲಾ ಸರ್ವೇಶ್‌ಗೆ ಕೆಪಿಎಸ್‌ಸಿ ಪರೀಕ್ಷೆ ಆಫೀಸರ್‌ ಆಗುವ ಕನಸು. ಹೆತ್ತವರು ಮದುವೆ ವಿಚಾರ ಎತ್ತಿದರೆ, ‘ಈಗಲೇ ಬೇಡ. ಸಿವಿಲ್‌ ಸರ್ವಿಸ್‌ ಪರೀಕ್ಷೆ ಬರೆದು ಪಾಸಾಗಿ, ನೌಕರಿ ಹಿಡಿದ ಮೇಲೆ ಮದುವೆ’ ಎನ್ನುತ್ತ ಬಂದಳು. ಕನಸು ನನಸಾಗಿಸಲು ಪರೀಕ್ಷೆ ಬರೆಯುತ್ತಲೇ ಇದ್ದಳು. ನಂತರ ಕೆಪಿಎಸ್‌ಸಿ ನೀಲಾಳ ಕನಸನ್ನು ಸಾಕಾರಗೊಳಿಸಿತು. ಅಷ್ಟರವರೆಗೆ ಅವಳ ವಯಸ್ಸು 30 ದಾಟಿತ್ತು.  

 – ಕೃಷ್ಣಿ ಶಿರೂರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು