’ವೇತನ ಕೊಡಿ ಇಲ್ಲ ತೊಟ್ಟು ವಿಷ ಕೊಡಿ’

7

’ವೇತನ ಕೊಡಿ ಇಲ್ಲ ತೊಟ್ಟು ವಿಷ ಕೊಡಿ’

Published:
Updated:

ಬೆಂಗಳೂರು: ‘ಕರ್ನಾಟಕ ಸರ್ಕಾರಿ ಗುತ್ತಿಗೆ ನೌಕರರ ಮಹಾ ಒಕ್ಕೂಟ’ದ ನೇತೃತ್ವದಲ್ಲಿ  ಗುತ್ತಿಗೆ ಕಾರ್ಮಿಕರು ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಆನಂದರಾವ್‌ ಸರ್ಕಲ್‌ ಬಳಿಯ ಗಾಂಧಿ ಪತ್ರಿಮೆಯಿಂದ ಸ್ವಾತಂತ್ಯ ಉದ್ಯಾನವನವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಹಾಒಕ್ಕೂಟದ ಸದಸ್ಯ ಡಾ.ಎಚ್‌.ವಿ.ವಾಸು, ನಮ್ಮ ಪ್ರಣಾಳಿಕೆಯನ್ನು (ಉದ್ಯೋಗಕ್ಕಾಗಿ ಯುವಜನರ ಆಂದೋಲನ) ಅವರ ಪ್ರಣಾಳಿಕೆಯ ಭಾಗವನ್ನಾಗಿ ಮಾಡಿಕೊಂಡಿದ್ದ ಪಕ್ಷವೇ ಇಂದು ಅಧಿಕಾರದಲ್ಲಿದೆ. ಆದರೂ ಸಾವಿರಾರು ಮಂದಿ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ ಎಂದು ವಿಷಾದಿಸಿದರು.

‘ಸಮಾನ ಕೆಲಸಕ್ಕೆ ಸಮಾನ ವೇತನ ಇರಲಿ; ದುಡಿಮೆಯ ವೇತನವನ್ನೇ ಕೊಡುತ್ತಿಲ್ಲ. ಸೋಮವಾರ ಇಬ್ಬರು ಗುತ್ತಿಗೆ ನೌಕರರು ಮ್ಯಾನ್‌ಹೋಲ್‌ನಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಇಷ್ಟೆಲ್ಲಾ ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಹಿಳೆಯರಿಗೆ ಹೆರಿಗೆ ರಜೆಯೂ ನೀಡುವುದಿಲ್ಲ. ಹಸುಗೂಸಿದ್ದರೂ ಕಚೇರಿಗೆ ಹೋಗಲೇಬೇಕಾದ ಅನಿರ್ವಾಯ ಇರುತ್ತದೆ. ಇಂದು ಅಥವಾ ನಾಳೆ ಕೆಲಸವನ್ನು ಪರ್ಮನೆಂಟ್ ಮಾಡ್ತಾರೆ ಎಂದು ಕಾಯುತ್ತಲೇ ದಿನದೂಡುತ್ತಿದ್ದೇವೆ’ ಎಂದು ಎಂದು ಗುತ್ತಿಗೆ ನೌಕರ ರಜಿನಿಕಾಂತ್‌ ನುಡಿದರು.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 30 ಸಾವಿರ ಗುತ್ತಿಗೆ ನೌಕರರು ದುಡಿಯುತ್ತಿದ್ದಾರೆ. ಕಳೆದ ಐದು ತಿಂಗಳುಗಳಿಂದ ವೇತನ ನೀಡಿಲ್ಲ. ವರ್ಷಗಟ್ಟಲೆ ದುಡಿದವರನ್ನು ಯಾವುದೇ ಮಾಹಿತಿ ನೀಡದೆ ಕೆಲಸದಿಂದ ತೆಗೆಯುತ್ತಿದ್ದಾರೆ ಎಂದು ಗುತ್ತಿಗೆ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಮುಖ್ಯಮಂತ್ರಿ ಭರವಸೆ

ಗುತ್ತಿಗೆ ಕಾರ್ಮಿಕರ ಸಮಸ್ಯೆ ಬಗ್ಗೆ ಮಹಾಒಕ್ಕೂಟದ ಜೊತೆಗೆ ಶೀಘ್ರ ಮಾತುಕತೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಭಟನಾನಿರತರಿಗೆ ಭರವಸೆ ನೀಡಿದ್ದಾರೆ.

‘ಬಾಕಿ ಇರುವ ವೇತನವನ್ನು ಬೇಗ ನೀಡುತ್ತೇವೆ. ವಿನಾ ಕಾರಣ ಯಾರನ್ನೂ ಕೆಲಸದಿಂದ ತೆಗೆಯದಂತೆ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಯವರ ಜೊತೆ ಮಾತಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಆಗಸ್ಟ್‌ 15ರ ಒಳಗೆ ಮುಖ್ಯಮಂತ್ರಿ ತಮ್ಮ ಭರವಸೆ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಮಹಾ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದರು.

 

 

ಬರಹ ಇಷ್ಟವಾಯಿತೆ?

 • 15

  Happy
 • 2

  Amused
 • 0

  Sad
 • 2

  Frustrated
 • 2

  Angry

Comments:

0 comments

Write the first review for this !