ಜಾಗತಿಕ ಗಿಟಾರ್ ಹಬ್ಬ

7

ಜಾಗತಿಕ ಗಿಟಾರ್ ಹಬ್ಬ

Published:
Updated:

ಜಾಗತಿಕ ಮಟ್ಟದ ಗಿಟಾರ್‌ ಕಲಾವಿದರು ಒಂದೆಡೆ ಸೇರಿದರೆಂದರೆ ಅಲ್ಲಿ ನಾದದ ಹೊಳೆ ಹರಿಯುವುದು ದಿಟ. ಕಳೆದ ಹನ್ನೊಂದು ವರ್ಷಗಳಿಂದ ‘ವರ್ಲ್ಡ್‌ ಗಿಟಾರ್‌ ನೈಟ್ಸ್‌’ ಹೆಸರಿನಲ್ಲಿ ವಿಶ್ವದ ಖ್ಯಾತ ಕಲಾವಿದರನ್ನು ಕರೆತಂದು ನಗರದ ಸಂಗೀತ ಪ್ರೇಮಿಗಳಿಗೆ ಗಿಟಾರ್‌ ಮಾಧುರ್ಯವನ್ನು ಉಣಬಡಿಸುತ್ತಿರುವವರು ‘ಇನ್‌ಫಿನಿಟ್‌ ಸೋಲ್ಸ್‌’ ಸಂಸ್ಥಾಪಕ, ಹಿರಿಯ ಗಿಟಾರ್‌ ಕಲಾವಿದ ಕೊನಾರ್ಕ್‌ ರೆಡ್ಡಿ. ಇವರು ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಪಕ ದಿವಂಗತ ಪಟ್ಟಾಭಿರಾಮ ರೆಡ್ಡಿ ಅವರ ಪುತ್ರ.

2007ರಿಂದ ರೆಡ್ಡಿ ಅವರು ಗಿಟಾರ್‌ ಸಂಗೀತದ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದಾರೆ. ಜಗತ್ತಿನ ಖ್ಯಾತ ಗಿಟಾರ್‌ ಕಲಾವಿದರನ್ನು ನಗರಕ್ಕೆ ಕರೆತಂದ ಹೆಮ್ಮೆ ಇವರದು. ಇದೇ 19ರಿಂದ 21ರವರೆಗೆ ಗೋಥೆ ಇನ್‌ಸ್ಟಿಟ್ಯೂಟ್‌ ಸಹಯೋಗದಲ್ಲಿ ‘ಗ್ಲೋಬಲ್‌ ಗಿಟಾರ್‌ ಗೀತಾ ಫೆಸ್ಟಿವಲ್‌’ ಆಯೋಜಿಸಿದ್ದಾರೆ. ಈ ಬಾರಿ ಗಿಟಾರ್‌ ಕಛೇರಿ, ಸ್ಪರ್ಧೆಯ ಜೊತೆಗೆ ಕಾರ್ಯಾಗಾರವೂ ನಡೆಯಲಿದೆ.

19 ಮತ್ತು 20ರಂದು ರಾತ್ರಿ ನಡೆಯುವ ಗಿಟಾರ್‌ ನೈಟ್ಸ್‌ನಲ್ಲಿ ಜರ್ಮನಿಯ ಹಿಕೊ ಪ್ಲಾಂಕ್‌, ಇಂಗ್ಲೆಂಡ್‌ನ ಜಾನ್‌ ಅನ್ಸ್‌ವರ್ಥ್‌, ಹಂಗೇರಿಯ ಸಾಂಡೊರ್ ಸಬೊ, ಸೆಚ್‌ ರಿಪಬ್ಲಿಕ್‌ನ ಆಡಂ ಟಿಡಿ ಮತ್ತು ಬೆಂಗಳೂರಿನ ಕೊನಾರ್ಕ್‌ ರೆಡ್ಡಿ ಗಿಟಾರ್‌ ಕಛೇರಿ ನೀಡಲಿದ್ದಾರೆ. ಈ ಕಲಾವಿದರು 21ರಂದು ಬೆಳಿಗ್ಗೆ 10ರಿಂದ ‘ಗಿಟಾರ್‌ ಕ್ಲಿನಿಕ್‌’ ಹೆಸರಿನಲ್ಲಿ ಗಿಟಾರ್‌ ಕಾರ್ಯಾಗಾರವನ್ನೂ ನಡೆಸಿಕೊಡಲಿದ್ದಾರೆ.

2014ರಿಂದ ರಾಷ್ಟ್ರೀಯ ಮಟ್ಟದಲ್ಲಿ ಯುವ ಕಲಾವಿದರಿಗೆ ಸ್ಪರ್ಧೆ ನಡೆಸಲಾಗುತ್ತಿದೆ. ಈ ವರ್ಷ ಅದು ಅಂತರರಾಷ್ಟ್ರೀಯ ಸ್ಪರ್ಧೆಯಾಗಿ ಬಡ್ತಿ ಪಡೆದಿದೆ.  21ರಂದು ರಾತ್ರಿ ಈ ಸ್ಪರ್ಧೆ ನಡೆಯಲಿದೆ. ದೇಶದ ಬೇರೆ ಬೇರೆ ಭಾಗಗಳಿಂದ 15 ಯುವ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 

‘ಸ್ಪರ್ಧೆಯ ಕುರಿತು ಆರು ತಿಂಗಳ ಹಿಂದೆಯೇ ಆನ್‌ಲೈನ್‌ನಲ್ಲಿ ಪ್ರಕಟಣೆ ಹೊರಡಿಸಲಾಗಿತ್ತು. ಅದರಲ್ಲಿ 15 ಕಲಾವಿದರನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ. ವಿದೇಶದಿಂದಲೂ ಪ್ರವೇಶಗಳು ಬಂದಿವೆ. ಬಲ್ಗೇರಿಯಾ ಮತ್ತು ಜರ್ಮನಿಯಿಂದ ಇಬ್ಬರು ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸುವ ಕುರಿತು ಆಸಕ್ತಿ ತೋರಿದ್ದರು. ಅವರು ನೇರವಾಗಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿಲ್ಲ. ತಮ್ಮ ಕಛೇರಿಯ ವಿಡಿಯೊಗಳನ್ನು ಕಳುಹಿಸಿದ್ದಾರೆ. ಹಾಗಾಗಿ ರಾಷ್ಟ್ರೀಯ ಮಟ್ಟದ ಸ್ಪರ್ಧೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿ ಪರಿಣಮಿಸಿದೆ’ ಎಂದು ಸಂಘಟಕರಲ್ಲಿ ಒಬ್ಬರಾದ ಕೀರ್ತನಾ ಕುಮಾರ್‌ ಮಾಹಿತಿ ನೀಡಿದ್ದಾರೆ.

ಟಿಕೆಟ್‌ ದರ ₹250. ಸಂಗೀತದ ವಿದ್ಯಾರ್ಥಿಗಳಿಗೆ ಶೇ 10ರಷ್ಟು ರಿಯಾಯ್ತಿ ಇದೆ.

***

ಕಾರ್ಯಕ್ರಮ ವಿವರ

ವರ್ಲ್ಡ್‌ ಗಿಟಾರ್‌ ನೈಟ್ಸ್‌: ಅ. 19,20 ರಾತ್ರಿ 8.

ಗ್ಲೋಬಲ್‌ ಗಿಟಾರ್‌ ಗೀತಾ ಸ್ಪರ್ಧೆ: 21, ರಾತ್ರಿ 8

ಗಿಟಾರ್‌ ಕ್ಲಿನಿಕ್‌(ಕಾರ್ಯಾಗಾರ): 21, ಬೆಳಿಗ್ಗೆ 10ರಿಂದ ಮಧ್ಯಾಹ್ನ 2

ಸ್ಥಳ: ಗೋಥೆ ಇನ್‌ಸ್ಟಿಟ್ಯೂಟ್‌, ಮ್ಯಾಕ್ಸ್‌ಮುಲ್ಲರ್ ಭವನ, ಚಿನ್ಮಯ ಮಿಷನ್‌ ಆಸ್ಪತ್ರೆ ರಸ್ತೆ, ಇಂದಿರಾನಗರ

ಟಿಕೆಟ್‌ಗಾಗಿ: www.instamojo.com

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !